ತಮ್ಮ ರಾಜೀನಾಮೆಯನ್ನು ನ್ಯೂಸ್ ಆಂಕರ್ ಗಳು ಲೈವ್ ಆಗಿ ಬ್ರೇಕ್ ಮಾಡಿದ್ದು ಹೀಗೆ…

ಇತ್ತೀಚೆಗೆ ಎಬಿಸಿ7 ಎಂಬ ಸುದ್ದಿ ವಾಹಿನಿಯ ಇಬ್ಬರು ಸುದ್ದಿ ವಾಚಕರು ತಮ್ಮ ರಾಜೀನಾಮೆಯನ್ನು ಲೈವ್ ಆಗಿ ಬ್ರೇಕ್ ಮಾಡಿದ್ದು ಹೀಗೆ…

ಎರೆಡೆರಡು ಬ್ರೇಕಿಂಗ್ ನ್ಯೂಸ್

ಸುದ್ಧಿ ಸ್ಫೋಟ

ಎರಡು ಸಂತೋಷದ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕು.

ಮೊದಲನೆಯ ಸುದ್ದಿ ಹೀಗಿದೆ.

ಸೆಪ್ಟೆಂಬರ್ 3 ರಿಂದ 5 ರವರೆಗೆ ಅಮೇರಿಕದ ನ್ಯೂಜೆರ್ಸಿಯಲ್ಲಿ ನಡೆಯಲಿರುವ ಆರನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕಾಗಿ ಯುವ ಲೇಖಕರಿಂದ ಕಿರುಕಥೆಗಳನ್ನು ಆಹ್ವಾನಿಸಲಾಗಿತ್ತು. ಸುಮಾರು 150 ಕಥೆಗಳು ಸ್ಪರ್ಧೆಗೆ ಬಂದಿದ್ದವು. ಇದರಲ್ಲಿ 20 ಕಥೆಗಳನ್ನು ಆಯ್ಕೆ ಮಾಡಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುತ್ತಿದೆ. ನಾನು ಬರೆದ ಕಥೆ ಗಾಂಧಿ ಹತ್ಯೆ’ ಈ 20 ಕಥೆಗಳಲ್ಲಿ ಒಂದಾಗಿ ಆಯ್ಕೆಯಾಗಿದೆ.

ಇನ್ನು ಎರಡನೆಯ ಸಂತೋಷದ ಸುದ್ದಿ.

ನನ್ನ ಬ್ಲಾಗ್ ಗೆ ಒಂದು ವರ್ಷ ತುಂಬಿರುವುದು ತಮಗೆಲ್ಲ ತಿಳಿದೇ ಇದೆ. ಈ ಅವಧಿಯಲ್ಲಿ ಬರೆದ ಆಯ್ದ ಲೇಖನಗಳ ಪುಸ್ತಕವನ್ನು ಸಧ್ಯದಲ್ಲೇ ಮೇಫ್ಲವರ್’ ಹೊರತರಲಿದೆ. ಪುಸ್ತಕದ ಟೈಟಲ್ ಅಂತಿಮವಾಗಿದೆ. ಕೆಲದಿನಗಳಲ್ಲೇ ಅದನ್ನು ಬಹಿಂರಗಪಡಿಸುತ್ತೇನೆ. ಪತ್ರಕರ್ತನಾಗಿ ನನ್ನ ಅನುಭವ, ಮುಕ್ತ ಮುಕ್ತದಲ್ಲಿ ನಟಿಸಿದ ಬಳಿಕದ ಘಟನೆಗಳು, ನನಗೆ ಸಿಸ್ಟೋಸ್ಕೋಪಿ ನಡೆದ ರೀತಿ ಹಾಗೂ ಇತರ ಲೇಖನಗಳು – ಹೀಗೆ ನಾಲ್ಕು ವಿಭಾಗಗಳಲ್ಲಿ ಪುಸ್ತಕ ಹೊರಬರಲಿದೆ.

ಈ ಯಶಸ್ಸಿಗಾಗಿ ತಮ್ಮನ್ನು ಸದಾ ನೆನೆಸಿಕೊಳ್ಳುವ

ವಿಶ್ವಾಸಿ

ಸುಘೋಷ್ ಎಸ್. ನಿಗಳೆ.

ಪತ್ರಕರ್ತರ ಕಷ್ಟಗಳು ಒಂದೆರಡಲ್ಲ….

ಇದು ಪ್ರತಿಯೊಬ್ಬ ಪತ್ರಕರ್ತನ ಬದುಕಿನ ಅನಿವಾರ್ಯ. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅದೇ….ಸಾವಿನ ಸುದ್ಧಿಯನ್ನು ಖಚಿತಪಡಿಸುವುದು. “ಇಂತಿಂಥವರು, ಇಂತಿಂಥ ಸಮಯಕ್ಕೆ ಹಿಂಗಿಂಗಾಗಿ, ಹೆಂಗೆಂಗ್ ಇದ್ರೋ, ಹಂಗಂಗೆ ಸಾವನ್ನಪ್ಪಿದ್ದಾರೆ” ಎಂಬ ಢಂ ಢಂ ಸುದ್ದಿ ಬಂದುಬಿಡುತ್ತದೆ. ಚೀಫ್ ಗೆ ಬಂದ ಯಾವುದೋ ಫೋನ್ ಕರೆ, ಪತ್ರಕರ್ತನ ಗೆಳೆಯ ದೂಕಿದ ಪ್ರಶ್ನಾರ್ಥಕ ಚಿಹ್ನೆಯಿರುವ ಎಸ್ಎಂಎಸ್, ಆಫೀಸಿನ ಸೆಕ್ಯುರಿಟಿ ಗಾರ್ಡ್ ಉದುರಿಸಿದ ಅಣಿಮುತ್ತು, “ಆ ಚಾನಲ್ ನಲ್ಲಿ ಈಗಾಗಲೇ ಅದನ್ನು ಬ್ರೇಕಿಂಗ್ ಹೊಡೆಯುತ್ತಿದ್ದಾರಂತೆ” ಎಂಬ ಗಾಳಿ ಸುದ್ದಿ – ಹೀಗೆ ಯಾವುದಾದರೊಂದು ರೂಪದಲ್ಲಿ ಈ ಸಾವಿನ ಸುದ್ದಿಯೆಂಬುದು ಪತ್ರಕರ್ತನ ಕೊರಳಿಗೆ ಬೀಳುತ್ತದೆ. ನಂತರ ನಡೆಯುವುದೇ ಅದನ್ನು ಖಚಿತಪಡಿಸಿಕೊಳ್ಳುವ ದೊಂಬರಾಟ. ಪ್ರಿಂಟ್ ಮೀಡಿಯಾಗಿಂತ ಟಿವಿ ಮೀಡಿಯಾ ಪತ್ರಕರ್ತನಿಗೆ ಇದು ಹೆಚ್ಚಿನ ಸವಾಲು. ಯಾಕೆಂದರೆ “ಈಗಾಗಲೇ ಆ ಚಾನಲ್ ನಲ್ಲಿ ಬ್ರೇಕಿಂಗ್ ಹೊಡೆಯುತ್ತಿದ್ದಾರೆ” ಎಂಬ ಗಾಳಿ ಸುದ್ದಿ ಬೇರೆ ಬಂದಿರುತ್ತದ್ದಲ್ಲ…ಅದನ್ನು ಖಚಿತಪಡಿಸಿಕೊಳ್ಳೋಣವೆಂದರೆ ಈತ ಯಾವುದೋ ಸಂತೆಯಲ್ಲಿದ್ದಾನೆ. ಅವರು ಬ್ರೇಕಿಂಗ್ ಹೊಡೆಯುತ್ತಿದ್ದಾರೋ ಇಲ್ಲವೋ ಅನ್ನುವುದನ್ನು ಖಚಿತಪಡಿಸುತ್ತ ಕೂರುವುದಕ್ಕಿಂತ, ಸಾವಿನ ಸುದ್ದಿಯನ್ನೇ ಖಚಿತಪಡಿಸಿಕೊಂಡರೆ ಉತ್ತಮ ಎಂಬ ಪರಿಸ್ಥಿತಿ. ಒಮ್ಮೊಮ್ಮೆಯಂತೂ ಐಶ್ವರ್ಯ ರೈ, ಸಲ್ಮಾನ್ ಖಾನ್ ಮುಂತಾದ ಅತೀ ಅತೀ ಅತೀ ಇಂಪಾರ್ಟಂಟ್ ವ್ಯಕ್ತಿಗಳ ಸುದ್ದಿಯೇ ಹೀಗೆ ಬಂದು ಬಿಡುತ್ತದೆ. ಅದು ಎಷ್ಟರಮಟ್ಟಿಗೆ ಹಬ್ಬಿರುತ್ತದೆಂದರೆ ಅದನ್ನು ಕೇಳಿ ಕೇಳಿ ಒಂದು ಹಂತದಲ್ಲಿ ಪತ್ರಕರ್ತನಾದವನು ಸುದ್ದಿಯನ್ನು ಖಚಿತಪಡಿಸಿಕೊಳ್ಳುವದರ ಬದಲಾಗಿ ಆಯಾ ವ್ಯಕ್ತಿಗಳ ಬಯೋಡೇಟಾ ಸಂಗ್ರಹದಲ್ಲಿ ತೊಡಗಿಕೊಂಡು ಬಿಡುತ್ತಾನೆ.

ಇನ್ನು ಸಾವಿನ ಸುದ್ದಿಯನ್ನು ಖಚಿತಪಡಿಸಿಕೊಳ್ಳುವಾಗಲಂತೂ ತೀರ ಕೇರ್ ಫುಲ್ ಇರಬೇಕಾಗುತ್ತದೆ. “ಇಂತಹವರು ಸತ್ತರಂತೆ, ಹೌದೆ?” ಎಂದು ಫೋನಿನಲ್ಲಿ ಪತ್ರಕರ್ತ, ತನ್ನ ಸೋರ್ಸ್ ಗೆ ಕೇಳಿದ್ದರೆ, ಆ ಸೋರ್ಸ್ ಗೆ ‘ಹೌದೆ?’ ಕೇಳಿರುವುದೇ ಇಲ್ಲ. ಕೇವಲ “ಇಂತಹವು ಸತ್ತರಂತೆ” ಎಂದಷ್ಟೇ ಕೇಳಿರುತ್ತದೆ. ಆ ಸೋರ್ಸೋ, ಈ ಮರಣವಾರ್ತೆಯನ್ನು ತಾನೇ ಮೊದಲು ತನ್ನ ಪರಿಚಯದವರಿಗೆ ತಿಳಿಸಿಸಬೇಕು ಎಂಬ ಉತ್ ಉತ್ ಉತ್ ಉತ್ಸಾಹದಲ್ಲಿ ಪತ್ರಕರ್ತನ ಫೋನ್ ಕಟ್ ಮಾಡಿದವನೇ, so and so expired. ಎಂದು ಮೇಸುಜು ಕುಟ್ಟಿ ಸೆಂಡ್ ಟು ಆಲ್ ಆಪ್ಶನ್ ಒತ್ತಿಬಿಟ್ಟಿರುತ್ತಾನೆ. ಬರಗಾಲದಲ್ಲಿ ಅಧಿಕಮಾಸ ಅಂತ ಇದಕ್ಕೇ ಹೇಳುತ್ತಾರೆ.

ಒಮ್ಮೆ ಹೀಗಾಯಿತು. ಕೆಲ ವರ್ಷಗಳ ಹಿಂದಿನ ಮಾತು. ಚಲನಚಿತ್ರ ರಂಗಕ್ಕೆ ಸಂಬಂಧಿಸಿದ ಖ್ಯಾತನಾಮರೊಬ್ಬರು ತೀರಿಕೊಂಡಂರಂತೆ ಎಂಬ ಸುದ್ಧಿ ನ್ಯಾಷನಲ್ ಮೀಡಿಯಾದ ಪತ್ರಕರ್ತೆಯೊಬ್ಬಳಿಗೆ ಬಂತು. ಈ ನ್ಯಾಷನಲ್ ಮೀಡಿಯಾದವರಿಗೆ ಯಾವಾಗಲೂ ಸುದ್ದಿಯ ಮೂಲವನ್ನೇ ಹುಡುಕುವ ಹಂಬಲ. ಹೀಗಾಗಿ ಈ ಪತ್ರಕರ್ತೆ ಸೀದಾ ಆ ಖ್ಯಾತನಾಮರ ಮನೆಯ ಲ್ಯಾಂಡ್ ಲೈನಿಗೆ ಫೋನಾಯಿಸಿ ಬಿಟ್ಟಿದ್ದಾಳೆ. ಅಲ್ಲಿ ಯಾರೋ ಒಬ್ಬರು ಫೋನ್ ರಿಸೀವ್ ಮಾಡಿದ್ದಾರೆ. ಈಕೆ ತಾನು ಹಿಂಗಿಂಗೆ, ತನ್ನ ಹೆಸರು ಹಂಗಂಗೆ, ತಾನು ಇಲ್ಲಿಲ್ಲಿ ಕೆಲಸ ಮಾಡುತ್ತಿರುವ ಜರ್ನಲಿಸ್ಟು ಅಂದ ತಕ್ಷಣ ಆ ಕಡೆಯ ಧ್ವನಿ, ಯದ್ವಾ ತದ್ವಾ ಬಯ್ಯಲು ಆರಂಭಿಸಿದೆ. “ಹೌದಮ್ಮ, ನಾನು ಬದುಕಿರುವಾಗಲೇ ನೀವೆಲ್ಲ ನನ್ನ ಕೊಂದುಬಿಡ್ತಾ ಇದೀರಲ್ಲ…ನನ್ನ ಸಾವಿನ ಸುದ್ದಿ ನನಗೂ ಬಂದಿದೆ. ಇಂತಹ ಸುದ್ದಿಗಳನ್ನು ಹರಿಯ ಬಿಡೋರು ನೀವೇ….ಮತ್ತೆ ಫೋನ್ ಮಾಡಿ ಕನ್ ಫರ್ಮಾ ಅಂತ ಕೇಳೊರೂ ನೀವೇ… ಯಾಕೆ ನಂಗೆ ಹಿಂಗೆಲ್ಲ ತೊಂದ್ರೆ ಕೊಡ್ತಾ ಇದೀರಾ?” ಎಂದು ಎಗರಾಡಿದೆ. ಈಕೆ ಸಮಾ ಉಗಿಸಿಕೊಂಡು ಫೋನ್ ಇಟ್ಟಿದ್ದಾಳೆ.

ಇನ್ನು ಬೇರೆ ರೀತಿ ಎಡವಟ್ಟುಗಳಾಗುವ ಸಂಭವವೂ ಇರುತ್ತದೆ. ಪತ್ರಕರ್ತನಿಗೆ ಶೇ. 99 ಪ್ರತಿಶತ ಗೊತ್ತಿರುತ್ತದೆ ವ್ಯಕ್ತಿ ಇಹಲೋಕ ತ್ಯಜಿಸಿದ್ದಾರೆ ಎಂದು. ಆದರೆ ಆ ಒಂದು ಪ್ರತಿಶತ ಚಾನ್ಸ್ ಆದರೂ ಯಾಕೆ ತೆಗೆದುಕೊಳ್ಳಬೇಕು ಎಂದುಕೊಂಡು ಮತ್ತಷ್ಟು ಕ್ರಾಸ್ ಚೆಕ್ ಮಾಡ್ತಾ ಕೂತುಬಿಟ್ಟಿರುತ್ತಾನೆ. ಅದರಲ್ಲಿ ಐದು ನಿಮಿಷ ಕಳೆದುಹೋಗಿಬಿಟ್ಟಿರುತ್ತದೆ. ಅಷ್ಟರಲ್ಲಿ ವೈರಿ ಚಾನಲ್ ನಲ್ಲಿದ್ದ ಹುಡುಗ ಹಿಂದೆ ಮುಂದೆ ನೋಡದೆ ಸುದ್ದಿ ಏರ್ ಮಾಡಿಬಿಟ್ಟಿರುತ್ತಾನೆ. ಈ ಪತ್ರಕರ್ತನಿಗೆ ಚೀಫ್ ನ ಕೆಂಗಣ್ಣೇ ಗತಿಯಾಗುತ್ತದೆ.

ಪತ್ರಕರ್ತರ ಕಷ್ಟಗಳು ಒಂದೆರಡಲ್ಲ….