ಪೆಟ್ರೋಲ್ ದರ ಹೆಚ್ಚಾಗಿದೆ ನಿಜ, ಆದರೆ ಬಸ್ ಸುಡೋದು ಯಾವ ನ್ಯಾಯ?

representation purpose only

ಹದಿನಾರಾಣೆ ಸತ್ಯ. ಪೆಟ್ರೋಲ್ ದರ ಏರಿಸಿರುವುದು ಖಂಡಿತ ಖಂಡನೀಯ. ಕೇಂದ್ರ ಸರ್ಕಾರದ ದರಿದ್ರ ಧೋರಣೆ, ಜನರನ್ನು ಮೂರ್ಖರನ್ನಾಗಿಸುವ ರಾಜ್ಯಸರ್ಕಾರಗಳ ತೆರಿಗೆ ನೀತಿ ಎರಡಕ್ಕೂ ವಿರೋಧವಿದೆ. ಆದರೆ, ಬಂದ್ ಹೆಸರಿನಲ್ಲಿ ಈಗಾಗಲೇ ಬೆಂಗಳೂರಿನಲ್ಲಿ ಮೂರು ಬಸ್ ಗಳನ್ನು ಸುಡಲಾಗಿದೆ. ಬಸ್ ನಲ್ಲಿ ಮಲಗಿದ್ದ ಮಹ್ಮದ್ ಹನೀಫ್ ಎಂಬ ಡ್ರೈವರ್ ಮೇಲೆ ಹಲ್ಲೆ ಮಾಡಲಾಗಿದೆ. ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ಬಸ್ ಗೆ ಕಲ್ಲು ತೂರಲಾಗಿದೆ. ಬಂದ್ ಮಾಡಿದರೇ ಸಾಕು, ಆದ್ರೆ ಬಂದ್ ಹಿಂಸಾತ್ಮಕವಾಗಿ ಏಕಿರಬೇಕು? ಹಿಂಸಾತ್ಮಕವಾಗಿ ಬಂದ್ ಆದರೆ ಮಾತ್ರ ಬಂದ್ ಸಫಲ ಎಂಬ ಮನೋಭಾವವೇಕೆ? ಬಂದ್ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅಂತಿದ್ದರೂ, ಮಧ್ಯರಾತ್ರಿಯೇ ಬಸ್ ಸುಟ್ಟಿರುವ ಮರ್ಮವಾದರೂ ಏನು? ಆಕ್ರೋಶ ಕೇಂದ್ರ ಸರ್ಕಾರದ ರಾಜಕೀಯ, ರಾಜ್ಯ ಸರ್ಕಾರಗಳ ಜಾಣ ಕುರುಡಿನ ಬಗ್ಗೆಯಿರಲಿ. ಬಸ್ ಗಳ ಮೇಲೆ ಅಲ್ಲ….

ಭಗವಂತ ಪಿನ್ ಕೊಟ್ಟ ಸೇಫ್ಟಿಗಂತ….

female

ಮಹಿಳೆಯರು ಬಸ್ ಗಳಲ್ಲಿ ಒಂಟಿಯಾಗಿ ಪ್ರಯಾಣಿಸುವಾಗ ಅಂಗಚೇಷ್ಟೇ ಮಾಡಿ ಕಾಟ ಕೊಡುವ ಸಭ್ಯ ಪುರುಷರು ಎಲ್ಲಕಡೆಗೂ ಇರುವವರೇ. ರಾತ್ರಿ ಪ್ರಯಾಣಿಸುವಾಗಲಂತೂ ಇವರ ಕೈಯಲ್ಲಿ ಸಿಕ್ಕಿಹಾಕಿಕೊಂಡರೆ ಆ ಮಹಿಳೆಗಾಗುವ ದೈಹಿಕ, ಮಾನಸಿಕ ಕಿರುಕುಳವಂತೂ ಹೇಳತೀರದಷ್ಟು. ಸಾಮಾನ್ಯವಾಗಿ ಮಧ್ಯವಯಸ್ಸು ದಾಟುತ್ತಿರುವ ಪುರುಷರು ಇಂತಹ ದುಸ್ಸಾಹಸಕ್ಕೆ ಕೈಹಾಕುವುದು ಹೆಚ್ಚು. ಇಂತಹ ಪುರುಷನೊಬ್ಬನಿಂದ ಪಾರಾದ ನನ್ನ ಸಂಬಂಧಿಕಳೊಬ್ಬಳ ಅನುಭವ ಇಲ್ಲಿದೆ.

ಓವರ್ ಟು ನನ್ನ ಸಂಬಂಧಿಕಳು…..

ಮಂಗಳೂರಿನಿಂದ ಉಡುಪಿಗೆ ಹೊರಟಿದ್ದೆ. ಹೊರಡುವಾಗ ಖಾಲಿಯೇ ಇದ್ದ ಬಸ್, ಸ್ಟಾಪ್ ಗಳು ಕಳೆದಂತೆಲ್ಲ ಜನರಿಂದ ತುಂಬತೊಡಗಿತು. ಇಬ್ಬರು ಕೂರುವ ಸೀಟ್ ನಲ್ಲಿ ನಾನು ಕುಳಿತಿದ್ದೆ. ನನ್ನ ಪಕ್ಕದಲ್ಲಿ ಸುಮಾರು 45 ವಯಸ್ಸಿನ ವ್ಯಕ್ತಿಯೊಬ್ಬ ಬಂದು ಕುಳಿತ. ಸ್ಪಲ್ಪ ಸಮಯ ಕಳೆದಿರಬೇಕು. ಆತ ನಿದ್ದೆಗೆ ಜಾರಿದ. ನಾನು ಕಿಟಕಿಯಿಂದ ಆಚೆ ನೋಡುತ್ತ ಕುಳಿತಿದ್ದೆ. ನಿಧಾನವಾಗಿ ಆತನ ತಲೆ ನನ್ನ ಭುಜದ ಮೇಲೆ ವಾಲಲಾರಂಭಿಸಿತು. ನನಗಿಂತ ತುಂಬ ಹಿರಿಯನಾದ್ದರಿಂದ ಹಾಗೂ ತುಂಬ ಸಭ್ಯನಂತೆ ಕಾಣುತ್ತಿದ್ದುದರಿಂದ ನಾನೂ ಸುಮ್ಮನಿದ್ದೆ. ಆದರೆ ನಂತರ ಈ ವಾಲಿಕೆ ತುಸು ಅತೀ ಎನ್ನಿಸುವಷ್ಟು ಹೆಚ್ಚಾಯಿತು. ಕೈಯಿಂದ ಆತನ ತಲೆಯನ್ನು ಸರಿಸಿದೆ. ಸ್ಪಲ್ಪ ಸಮಯ ಸರಿಯಾಗಿದ್ದ ಆತನ ತಲೆ ಮತ್ತೆ ನನ್ನ ಭುಜದ ಮೇಲೆ ವಾಲಿತು. ಈ ಬಾರಿ ಆತನ ದೇಹ ಕೂಡ ಸ್ವಲ್ಪ ವಾಲತೊಡಗಿತ್ತು. ನನಗೆ ಕಿರಿಕಿರಿ ಆಗಲಾರಂಭಿಸಿತು. ಎತ್ತಲೋ ನೋಡುತ್ತಿದ್ದ ನಾನು ಆತನ ಕಡೆ ಛಕ್ಕನೆ ತಿರುಗಿದಾಗ ಆಸಾಮಿ ವಾರೆಗಣ್ಣಿನಿಂದ ನನ್ನನ್ನು ನೋಡುತ್ತಿರುವುದು ಗಮನಕ್ಕೆ ಬಂತು. ಓಹೋ ಇದು ಸಾಮಾನ್ಯವಾದ ನಿದ್ದೆಯಲ್ಲ ಎಂದು ಫಕ್ಕನೆ ಹೊಳೆಯಿತು. ಈ ಬಾರಿ ಸ್ಪಲ್ಪ ರಫ್ ಆಗಿಯೇ ಆತನ ತಲೆ ಸರಿಸಿದೆ. ನಿದ್ದೆಯಿಂದ ಎದ್ದವರಂತೆ ನಟಿಸುತ್ತ ನನಗೆ ಬಸ್ ನಲ್ಲಿ ಮಲಗಿ ಪ್ರಯಾಣಿಸುವುದೇ ಅಭ್ಯಾಸ ಎಂದು ಭಾರೀ ಸಾಭ್ಯಸ್ತನಂತೆ ಪೋಸು ಕೊಡುತ್ತ ಮತ್ತೆ ತಲೆ ವಾಲಿಸಲಾರಂಭಿಸಿದ.

ಆಸಾಮಿಗೆ ಚಿಕಿತ್ಸೆ ಅನಿವಾರ್ಯವಾಗಿತ್ತು. ಬಳೆಗಳಿಗೆ ಸಿಕ್ಕಿಸಿಕೊಂಡಿದ್ದ ಸೇಫ್ಟಿ ಪಿನ್ ತೆಗೆದೆ. ನಿಧಾನವಾಗಿ ನನ್ನ ಭುಜದ ಬಳಿ ಹಿಡಿದೆ. ಇದನ್ನು ಗಮನಿಸದ ಆತ ಟರ್ನಿಂಗ್ ಒಂದರಲ್ಲಿ ತುಸು ಜೋರಾಗಿಯೇ ತಲೆ ವಾಲಿಸಿದ. ಕಿವಿಯ ಪಕ್ಕ ಕಚಕ್ ಎಂದು ಚುಚ್ಚಿತು ನೋಡಿ…ಪಿನ್ನು, ಕೈಯಿಂದ ನೀವಿಕೊಳ್ಳುತ್ತ ಸಿಟ್ಟಿನಿಂದ “ಇದೇನಮ್ಮ ಮಾಡುತ್ತೀದ್ದೀಯಾ?” ಎಂದು ಕೇಳಿದ.

“ನನಗೆ ಬಸ್ ನಲ್ಲಿ ಹೀಗೆ ಪಿನ್ ಹಿಡಿದುಕೊಂಡೇ ಪ್ರಯಾಣಿಸುವುದು ಅಭ್ಯಾಸ” ಎಂದೆ. ಮುಂದೆ ಆತನ ತಲೆ ನನ್ನ ಭುಜದ ಮೇಲೆ ವಾಲುವುದಿರಲಿ, ಆತ ನಿದ್ದೆ ಮಾಡಿದ್ದರೆ ಕೇಳಿ

ಪತ್ರಕರ್ತರನ್ನೇ ಬೇಸ್ತು ಬೀಳಿಸುವ ಮಹಾನುಭಾವರು!!

ಪತ್ರಕರ್ತರು ಸಾಮಾನ್ಯವಾಗಿ ಬುದ್ಧಿವಂತರು. (ಅಥವಾ ಹಾಗೆಂದು ಅವರು ಅಂದುಕೊಂಡಿರುತ್ತಾರೆ). ಆದರೆ ಇಂತಹ ಪತ್ರಕರ್ತರನ್ನೇ ಬೇಸ್ತು ಬೀಳಿಸುವು ಮಹಾನುಭಾವರು ಕೂಡ ಇರುತ್ತಾರೆ.

ನನ್ನ ಪತ್ರಕರ್ತ ಗೆಳತಿಯೊಬ್ಬಳು ತನ್ನ ಸ್ಪೆಷಲ್ ಸ್ಟೋರಿಗಳಿಂದಾಗಿಯೇ ಪ್ರಸಿದ್ಧಳಾಗಿದ್ದಳು. ಅವಳ ಸ್ಟೋರಿಯ ಪ್ರೋಮೋ ಬಂತೆಂದರೆ ಜರ್ನಲಿಸ್ಟುಗಳು ಕೂಡ ಕುತೂಹಲದಿಂದ ರಾತ್ರಿಯ ಬುಲೆಟಿನ್ ಗೆ ಕಾಯುತ್ತಿದ್ದರು. ಒಟ್ಟಿನಲ್ಲಿ ತಲಿಮ್ಯಾಗ್ ಹೋಡಿಯೂವಂತ ಸ್ಟೋರಿ ಮಾಡ್ತಿದ್ಲ ನೋಡ್ರೀ ಆಕಿ….ಹೀಗಿರಬೇಕಾದರೆ ಯಾರೋ ಆಕೆಯ ಮೊಬೈಲ್ ಗೆ ಕರೆ ಮಾಡಿದ್ದಾರೆ. ಆ ಕಡೆಯಿಂದ ಮಾತನಾಡಿದ ಧ್ವನಿ, “ಮೇಡಂ, ನಾವೊಂದು ಪೋಲ್ಯೂಷನ್ ಫ್ರೀ ವಾಹನವನ್ನು ಡಿಸೈನ್ ಮಾಡಿದ್ದೇವೆ. ಇದರ ವಿಶೇಷತೆಯೆಂದರೆ ಈ ಡಿಸೈನ್ ನಿಂದಾಗಿ ಯಾವುದೇ ಪರಿಸರ ಮಾಲಿನ್ಯವಾಗುವುದಿಲ್ಲ. ದೇಶದಲ್ಲಿಯೇ ಪ್ರಥಮ ಎನ್ನಬಹುದಾದ ಪ್ರಯೋಗ ಇದು. ಈ ವಾಹನದ ಬಳಕೆಯಿಂದ ನಮ್ಮ ಸುತ್ತಮುತ್ತಲಿನ ಹವೆ ಶುದ್ಧವಾಗಿದ್ದು, ಜನರ ಆರೋಗ್ಯಕ್ಕೆ ಕೂಡ ಯಾವುದೇ ತೊಂದರೆಯಾಗುವುದಿಲ್ಲ. ನೀವು ಬಂದು ಸ್ಟೋರಿ ಮಾಡಬೇಕು ಮೇಡಂ” ಎಂದಿದೆ. ಈಕೆಗೆ ಖುಷಿ ಹಾಗೂ ಆಶ್ಚರ್ಯ ಒಟ್ಟೊಟ್ಟಿಗಾಗಿ, “ಯಾವ ಇಂಧನವನ್ನು ಬಳಸುತ್ತಿದ್ದೀರಿ?” ಎಂದು ಕೇಳಿದ್ದಾಳೆ. ಆ ಧ್ವನಿ, “ಪೆಟ್ರೋಲ್ ಅಥವಾ ಡೀಸೆಲ್. ಏನಾದರೂ ಬಳಸಬಹುದು ಮೇಡಂ. ಇಂಧನ ಇಲ್ಲಿನ ಸಮಸ್ಯೆಯೇ ಅಲ್ಲ. ನಮ್ಮ ಡಿಸೈನ್ ನದ್ದೇ ವಿಶೇಷತೆ. ತಾವು ಬರಬೇಕು” ಎಂದು ಮತ್ತೊಮ್ಮೆ ರಿಕ್ವೆಸ್ಟ್ ಮಾಡಿದೆ. ಸರಿ ಒಂದೊಳ್ಳೆ ಸ್ಟೋರಿ ಸಿಕ್ಕಿತು ಎಂದು ಹಿಗ್ಗೆ ಹೀರೆಕಾಯಿಯಾದ ನನ್ನ ಗೆಳತಿ ಕ್ಯಾಮೆರಾಮನ್ ನನ್ನು ಎತ್ತಾಕಿಕೊಂಡು ಸೀದಾ ಅವರು ಹೇಳಿದ ಜಾಗಕ್ಕೆ ಹೋಗಿದ್ದಾಳೆ. ಅವಳನ್ನು ಭರಪೂರ ಆದರಿಂದ ಸ್ವಾಗತಿಸಿದ ಮೂರ್ನಾಲ್ಕು ಮಂದಿ ಪುಟ್ಟದಾದ ಆಟಿಕೆಯ ಬಸ್ಸನ್ನು ತೋರಿಸಿದ್ದಾರೆ. ಆ ಬಸ್ ನ ಡಿಸೈನ್ ಹೀಗಿತ್ತು. (ಇದು ನಾನು ಬರೆದಿರುವ ಚಿತ್ರ. ನೀವು ಕಲ್ಪಿಸಿಕೊಳ್ಳಲು ಅನುಕೂಲವಾಗಲಿ ಎಂದು).

Bus

“ನೋಡಿ ಮೇಡಂ ಈ ಬಸ್. ಇದರ ಸೈಲೆನ್ಸರ್ ಹೀಗೆ ಹಿಂದೆ ಬಂದು ಹೀಗೆ ಬಸ್ ಗಿಂತ ಮೇಲಕ್ಕೆ ಹೋಗುತ್ತದೆ. ಹೀಗಾಗಿ ಬಸ್ ಹೊರಹಾಕುವ ಹೊಗೆ ಸೀದಾ ಮೇಲಕ್ಕೆ ಹೋಗುತ್ತದೆ. ಬಸ್ ಹಿಂದೆ ಬರುವ ವಾಹನಗಳಿಗೆ, ಟೂ ವೀಲರ್ ನವರಿಗೆ ಇದರ ಹೊಗೆ ತಾಗುವುದೇ ಇಲ್ಲ. ಇದು ಕೇವಲ ಬಸ್ ನ ಪ್ರೋಟೋಟೈಪ್. ಬೇಕಾದರೆ ಇದೇ ಮೆಥೆಡ್ಡನ್ನು ಎಲ್ಲ ವಾಹನಗಳಿಗೆ ಬಳಸಬಹುದು. ಈ ಡಿಸೈನ್ ನ ಮತ್ತೊಂದು ಅನುಕೂಲ ಎಂದರೆ…..”ಎಂದೆಲ್ಲ ಕೊರೆದಿದ್ದಾರೆ.

ನನ್ನ ಪತ್ರಕರ್ತ ಗೆಳತಿ ಬೇಸ್ತು ಬಿದ್ದಿದ್ದಾಳೆ. ಹೇಗಿದ್ದಾರೆ ಪತ್ರಕರ್ತರನ್ನು ಬೇಸ್ತು ಬೀಳಿಸುವ ಮಹಾನುಭಾವರು?

ಸಾಯೊನಾರಾ…ಸಾಯೊನಾರಾ…ವಾದಾ ನಿಭಾವೋಗೆ ಸಾಯೊನಾರಾ

sayonara

ಜಪಾನ್ ನ ಟೋಕಿಯೋ ನಗರದ ಚುಮುಚುಮು ಮುಂಜಾವು. ವರ್ಷದ ಭಾಗಶಃ ಎಲ್ಲದಿನವೂ ಆಗುವಂತೆ ಅಂದೂ ಕೂಡ ಹನಿಹನಿ ಮಳೆ ಬೀಳುತ್ತಿತ್ತು. ಟೋಕಿಯೋಗೆ ಕೆಲಸದ ನಿಮಿತ್ತ ಬಂದಿದ್ದ ಭಾರತೀಯನೊಬ್ಬ ಬಸ್ ಹಿಡಿದು ಹನೇದಾ ಏರ್ ಪೋರ್ಟ್ ಗೆ ಹೋಗಬೇಕಿತ್ತು. ಸುಮಾರು 6.30 ಕ್ಕೆ ಬಸ್ ಸ್ಟಾಪಿಗೆ ಬಂದ. 6.45 ಕ್ಕೆ ಬಸ್ ಬರುವುದಿತ್ತು. ಬಸ್ ಸ್ಟಾಪಿನಲ್ಲಿ ಈತನೇ ಮೊದಲೇ ವ್ಯಕ್ತಿ. ಐದು ನಿಮಿಷ ನಿಂತುಕೊಂಡ. ಅಷ್ಟರಲ್ಲಾಗಲೇ ಐದಾರು ಜನ ಜಪಾನಿಯರು ಬಂದು ಈತನ ಹಿಂದೆ ನೀಟಾಗಿ ಕ್ಯೂನಲ್ಲಿ ನಿಂತುಕೊಂಡರು. ಬಸ್ ಬರಲು ಇನ್ನೂ 10 ನಿಮಿಷ ಇದೆಯಲ್ಲ ಎಂದುಕೊಂಡು ಈತ ಹತ್ತಿರದಲ್ಲಿಯೇ ಇದ್ದ ಅಂಗಡಿಗೆ ಕೋಕ್ ಕೊಳ್ಳಲೆಂದು ಹೋದ. ಅಂಗಡಿಗೆ ಹೊಕ್ಕ ತಕ್ಷಣ ಒಳಗಿನ ಮರ್ಚಂಟೈಸಿಂಗ್ ನೋಡಿ ವಿಸ್ಮಿತನಾದ. ಸಮಯ ಹೋಗಿದ್ದು ತಿಳಿಯಲಿಲ್ಲ. ಹಾಗೆ ನೋಡುತ್ತಿದ್ದಾಗ ತಕ್ಷಣ ತಾನು ಆಫೀಸಿಗೆ ಹೋಗಬೇಕಾಗಿರುವುದು ನೆನಪಾಯಿತು. ಛಕ್ಕನೆ ಗಡಿಯಾರ ನೋಡಿಕೊಂಡ. ಸರಿಯಾಗಿ 6.45 ತೋರಿಸುತ್ತಿತ್ತು. ಬಿಟ್ಟ ಬಾಣದಂತೆ ಅಂಗಡಿಯಿಂದ ಹೊರಬಂದು ಬಸ್ ಸ್ಪಾಪಿಗೆ ಬಂದ. ಅಲ್ಲಾಗಲೇ ಬಸ್ ಬಂದು ನಿಂತಿತ್ತು. ಆದರೆ ಏನಾಶ್ಚರ್ಯ…..ಬಸ್ ಬಾಗಿಲು ತೆರೆದಿದ್ದರೂ ಯಾರೊಬ್ಬರೂ ಬಸ್ ಹತ್ತುತ್ತಿಲ್ಲ. ಎಲ್ಲರೂ ಈತನನ್ನೇ ನೋಡುತ್ತಿದ್ದಾರೆ. ಈತನಿಗೆ ಏಕೆಂದು ತಿಳಿಯಲಿಲ್ಲ. ಹಾಗೇ ಓಡಿ ಬಂದವನೇ ಬಸ್ ಹತ್ತಿದ. ಆತ ಹತ್ತಿದ ತಕ್ಷಣ ಉಳಿದ ಜಪಾನಿಯರು ಲಗುಬಗೆಯಿಂದ ಬಸ್ ಹತ್ತಿದರು.

ನಂತರ ಆಫೀಸಿನಲ್ಲಿ ನಡೆದ ಘಟನೆಯನ್ನು ಜಪಾನಿ ಮಿತ್ರನೊಬ್ಬನಿಗ ವಿವರಿಸಿದ. ಆಗ ಮಿತ್ರ ಹೇಳಿದ, “ಹೌದು ಇಲ್ಲಿ ಹಾಗೆಯೇ. ಕ್ಯೂ ನಲ್ಲಿ ನೀನು ಮೊದಲಿದ್ದೆಯಲ್ಲೇವೆ? ಹೀಗಾಗಿ ನೀನೇ ಮೊದಲು ಬಸ್ ಹತ್ತಬೇಕು. ನೀನು ಹತ್ತುವವರೆಗೂ ಯಾರೂ ಬಸ್ ಹತ್ತುವುದಿಲ್ಲ. ಕ್ಯೂ ಮುರಿಯುವುದು ಇಲ್ಲಿನ ಶಿಷ್ಟಾಚಾರವಲ್ಲ”.

ಎಲ್ಲ ರೀತಿಯ ಯೋಗಾಸನಗಳನ್ನು ಬಲವಂತವಾಗಿ ಮಾಡಿಸುವ ಪುಣೆಯ ಸಿಟಿಬಸ್ ಗಳು ಈತನಿಗೆ ತಕ್ಷಣ ನೆನಪಾದವು.

(ಈ ಘಟನೆ ಹೇಳಿದ್ದು ನನ್ನ ಚಿಕ್ಕಮ್ಮನ ಮಗ ರೋಹನ್ ಫಣಸಳಕರ್. ಇಲ್ಲಿನ ಕಥಾನಾಯಕ ಆತನೇ)