ಟರ್ನಿಂಗ್ ಪಾಯಿಂಟ್ ಸ್ಟೋರಿ, ಟೋಪಿ ಹಾಕುವ ಹೊಸ ಪರಿ

ಚಿತ್ರರಂಗದಲ್ಲಿ ಆಗುವ ತರಲೆ, ತಾಪತ್ರಯ, ಟೋಪಿ ಹಾಕುವ ಹೊಸ ಹೊಸ ಪದ್ಧತಿಗಳ ಆವಿಷ್ಕಾರಗಳು ಒಂದೆರಡಲ್ಲ. ನನಗೆನಿಸುವ ಮಟ್ಟಿಗೆ ರಾಜಕಾರಣಕ್ಕಿಂತ ಒಂದು ಗುಲಗುಂಜಿ ಹೆಚ್ಚು ದಗಲಬಾಜಿಗಳು ಚಿತ್ರರಂಗದಲ್ಲಿದ್ದಾರೆಂದು. ಸಹಕಲಾವಿದರೊಬ್ಬರು ಮೊನ್ನೆ ನನಗೆ ಹೇಳಿದ ಘಟನೆ ಇದು.

ಪಾಪ ಆ ಹುಡುಗ ಹಿರೋ ಆಗಬೇಕೆಂದು ಬೆಂಗಳೂರಿಗೆ ಬಂದವನು. ಹೇಗ್ಹೇಗೋ ಮಾಡಿ ಒಬ್ಬ ನಿರ್ದೇಶಕನ ಕಣ್ಣಿಗೆ ಬಿದ್ದ. ಸ್ಕ್ರೀನ್ ಟೆಸ್ಟ್ ನೀಡಿದ ಬಳಿಕ ನಿರ್ದೇಶಕ ಹೇಳಿದ್ದಿಷ್ಟು, “ನೀನು ತುಂಬಾ ಚೆನ್ನಾಗಿ ಆಕ್ಟ್ ಮಾಡ್ತೀಯಾ. ನಿನ್ನಂಥವರನ್ನೇ ಗಾಂಧಿ ನಗರ ಆರಿಸಿಕೊಳ್ಳುತ್ತದೆ. ನೀನು ಸರಿಯಾದ ಟೈಮ್ ಗೆ ಬಂದಿದೀಯಾ. ನಾನೊಂದು ಹೊಸ ಚಿತ್ರ ನಿರ್ದೇಶನ ಮಾಡ್ತಾ ಇದ್ದೇನೆ. ಅದರಲ್ಲಿ ಒಂದು ಅದ್ಭುತ ಪಾತ್ರವಿದೆ. ಅದು ಟರ್ನಿಂಗ್ ಪಾಯಿಂಟ್ ನಲ್ಲಿ ಬರುವ ಪಾತ್ರ. ಆದರೆ ಅದಕ್ಕಾಗಿ ನೀನು ಸ್ವಲ್ಪ ಖರ್ಚು ಮಾಡಬೇಕಾಗುತ್ತೆ”  ಎಂದು ಹೇಳಿ ಹುಡಗನಿಂದ ಸಾಕಷ್ಟು ಹಣ ಕಕ್ಕಿಸಿಕೊಂಡಿದ್ದಾನೆ. ಹುಡುಗ ಫೋನ್ ಮಾಡಿದಾಗಲೆಲ್ಲ ಅಂದು ಶೂಟಿಂಗ್ ಇಂದು ಶೂಟಿಂಗ್ ಎಂದು ಹೇಳಿ ಮುಂದೆ ಹಾಕಿದ್ದಾನೆ ನಿರ್ದೇಶಕ ಮಹಾಶಯ. ಅಂತೂ ಕೊನೆಗೊಂದು ದಿನ ಶೂಟಿಂಗ್ ಆರಂಭವಾಗಿದೆ. ಹುಡಗನಿಗೋ ಖುಷಿಯೋ ಖುಷಿ.

ಮೊದಲ ದಿನ ತೀರ ಉತ್ಸಾಹದಿಂದಲೇ ಹೊಸ ಡ್ರೆಸ್ ಹಾಕಿಕೊಂಡು ಶೂಟಿಂಗ್ ಗೆ ಹೋಗಿದ್ದಾನೆ. ಅಂದು ಭೇಟಿಯಾದ ನಿರ್ದೇಶಕ, “ಆಕ್ಟರ್ ಗಳು ಹೇಗೆ ಪಾತ್ರ ಮಾಡುತ್ತಾರೆ ಗಮನಿಸು. ನೀನು ತುಂಬಾ ಕಲಿಯಬೇಕು. ನಿನ್ನದು ಟರ್ನಿಂಗ್ ಪಾಯಿಂಟ್ ನಲ್ಲಿ ಬರುವ ಪಾತ್ರ ಹೀಗಾಗಿ ಚೆನ್ನಾಗಿ ಬರಬೇಕು” ಎಂದಿದ್ದಾನೆ. ಗೋಣು ಆಡಿಸಿದ ಹುಡುಗ ಬೆಳಿಗ್ಗೆಯಿಂದ ಸಂಜೆಯವರೆಗೆ ಗಮನಿಸುವ ಕೆಲಸ ಮಾಡಿದ್ದಾನೆ. ಹೀಗೆ ಹತ್ತು ದಿನ ಶೂಟಿಂಗ್ ನಡೆದಿದೆ. ಹುಡುಗ ಪ್ರತಿದಿನ ಬೆಳಿಗ್ಗೆ ಸೆಟ್ ಗೆ ಬರುವುದು, ತಿಂಡಿ ತಿನ್ನವುದು, ಗಮನಿಸುವುದು, ಕಾಫಿ ಕುಡಿಯುವುದು, ಗಮನಿಸುವುದು, ಮಧ್ಯಾಹ್ನದ ಊಟ ಮಾಡುವುದು ಗಮನಿಸುವುದು, ಸಂಜೆ ತಿಂಡಿ ತಿನ್ನುವುದು ಗಮನಿಸುವುದು ಇದೇ ಕೆಲಸ ಮಾಡಿದ್ದಾನೆ. ಆದರೂ ತಾಳ್ಮೆ ಕಳೆದುಕೊಂಡಿಲ್ಲ. ಟರ್ನಿಂಗ್ ಪಾಯಿಂಟ್ ನಲ್ಲಿ ಬರುವ ಪಾತ್ರ ತಾನೆ?

ಅಂತೂ ಇಂತೂ ಹಲವು ದಿನಗಳ ಶೂಟಿಂಗ್ ಬಳಿಕ ಈತನ ಪಾತ್ರ ಬಂದಿದೆ. ಅಂದು ವಿಶೇಷವಾಗಿ ಸಿದ್ಧವಾಗಿ ಹೋಗಿದ್ದಾನೆ ಹುಡುಗ. ಶೂಟಿಂಗ್ ಲೋಕೆಷನ್ ಫೈನಲೈಸ್ ಆಗಿದ್ದು ನಾಲ್ಕು ರಸ್ತೆ ಕೂಡುವ ಸರ್ಕಲ್ ನಲ್ಲಿ. ಸರ್ಕಲ್ ಮಧ್ಯದಲ್ಲಿ ಹುಡಗನನ್ನು ನಿಲ್ಲಿಸಿದ್ದಾರೆ. ಆ ಕಡೆಯಿಂದ ಹಿರೋ ಬಂದು ಒಂದು ಅಡ್ರೆಸ್ ಕೇಳುತ್ತಾನೆ. ಈತ ಕೈ ತೋರಿಸಿ ಯಾವುದೋ ಒಂದು ರಸ್ತೆಯನ್ನು ತೋರಿಸುತ್ತಾನೆ. ಹುಡುಗ ತೋರಿಸಿದ ರಸ್ತೆಯಲ್ಲಿ ಹಿರೋ ಹೋಗುತ್ತಾನೆ. ಇಷ್ಟೇ ಶೂಟ್ ಆಗಿದ್ದು. ಅದೂ ಲಾಂಗ್ ಶಾಟ್ ನಲ್ಲಿ. ಅಲ್ಲಿಗೆ ಆ ದಿನದ ಶೂಟಿಂಗ್ ಪ್ಯಾಕ್ ಅಪ್ ಆಗಿದೆ. ಹುಡುಗನಿಗೆ ತಲೆ ಬುಡ ಅರ್ಥ ಆಗಿಲ್ಲ. ಸ್ವಲ್ಪ ಬೇಸರಿಸಿಕೊಂಡು “ಇದೇನ್ ಸಾರ್ ಮುಗೀತಾ?” ಅಂತ ನಿರ್ದೇಶಕನನ್ನು ಕೇಳಿದ್ದಾನೆ. ಅದಕ್ಕೆ ನಿರ್ದೇಶಕ “ಹುಂ…ಹೌದು ಮತ್ತೆ. ನಾನು ಹೇಳಿರ್ಲಿಲ್ವಾ ನಿನ್ನದು ಟರ್ನಿಂಗ್ ಪಾಯಿಂಟ್ ನಲ್ಲಿ ಬರುವ ಪಾತ್ರ ಅಂತ. ನೋಡು ಸರ್ಕಲ್ ನಲ್ಲಿ ನೀನು ಹಿರೋಗೆ ರಸ್ತೆ ತೋರಿಸಿದೆಯಲ್ಲ, ಅದು ಕರೆಕ್ಟಾದ ರಸ್ತೆ. ಆತ ಮುಂದೆ ಅದೇ ರಸ್ತೆಯಲ್ಲಿ ಹೋಗಿ ಹಿರೋಯಿನ್ ಳನ್ನು ಮೀಟ್ ಮಾಡುತ್ತಾನೆ. ನೀನು ಅಪ್ಪಿತಪ್ಪಿ ಏನಾದರೂ ಬೇರೆ ರಸ್ತೆ ತೋರಿಸಿದ್ದರೆ ಹಿರೋ ಅಲ್ಲಿಗೇ ಹೋಗಿಬಿಡುತ್ತಿದ್ದ. ಕಥೆ ಬೇರೆ ರೀತಿಯಲ್ಲೇ ಟರ್ನ್ ಪಡೆದುಕೊಳ್ಳುತ್ತಿತ್ತು. ನಾನು ಹೇಳಿದ್ನಲ್ವ ನಿನ್ನದು ಟರ್ನಿಂಗ್ ಪಾಯಿಂಟ್ ಪಾತ್ರ ಅಂತ….”

ನಿರ್ದೇಶಕ ಇನ್ನೂ ಏನೇನೋ ಮುಂದುವರೆಸಿದ್ದಾನೆ. ಹುಡಗನಿಗೆ ತಲೆ ತಿರುಗಿ, ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಈಗ ಹೇಳಿ ಸೈಜ್ ತೆಗೆದುಕೊಂಡು ಟೊಪ್ಪಿ ಹೊಲೆದು, ಟೊಪ್ಪಿ ಹಾಕುವುದೆಂದರೆ ಇದೇ ತಾನೆ?

ಇಂಥವರಿದ್ದರೆ, ದೇವರು ದೆವ್ವ ಇಬ್ಬರೂ ಬೇಡ!!

jyotishi

ಶ್ರೀ. ………………., ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು

ಮಾನವನ ಬದುಕು ಜನನ-ಮರಣಗಳ ನಡುವೆ ಸಾಗುವ ಸಂಕಷ್ಟಗಳ ಅಕ್ಷಯ ಪಾತ್ರೆ. ಸದಾ ಕಾಡುವ ನಮ್ಮ ಕಷ್ಟಗಳಿಗೆ ಬೆಳಕಾಗಿ ಕಾಣುವುದು ಜೋತಿಷ್ಯ ಶಾಸ್ತ್ರ. ನಿಮ್ಮ ಬದುಕಿನ ಭವ್ಯ ಭವಿಷ್ಯಯದ ಕನಸು ನನಸು ಮಾಡಲು ಬಹುಜನರ ಒತ್ತಾಯದ ಮೇರೆಗೆ ಬೆಂಗಳೂರಿನಲ್ಲೇ ವಾಸವಾಗಿದ್ದಾರೆ ಶ್ರೀ…………ಜ್ಯೋತಿಷಿ. ನಿಮ್ಮ ಸಮಸ್ಯೆಗೆ ಪರಿಹಾರ ಸಿಗದೆ ನೊಂದಿದ್ದರೆ ಯಾವುದೇ ಕಠಿಣ ಸಮಸ್ಯೆಗಳಿಗೆ ಅತೀಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯೆ, ನಿರುದ್ಯೋಗ, ವ್ಯಾಪರದಲ್ಲಿ ನಷ್ಟ, ವಿವಾಹ ವಿಳಂಬ, ಸಂತಾನ ಹೀನತೆ, ಸ್ತ್ರೀ-ಪುರುಷ ವಶೀಕರಣ, ಪ್ರೇಮ ವೈಫಲ್ಯ, ಪತಿ-ಪತ್ನಿ ಅಶಾಂತಿ, ಅನಾರೋಗ್ಯ, ಕುಟುಂಬ ಸಮಸ್ಯೆ, ಶತ್ರು ಕಾಟ, ಜಾಗದ ವ್ಯಾಜ್ಯೆ, ಬಿಜನೆಸ್, ವಿದೇಶ ಪ್ರಯಾಣ, ಸಾಲಬಾಧೆ, ಶತ್ರು ಬಾಧೆ, ದಾಂಪತ್ಯ, ಲೈಂಗಿಕ ಸುಖ, ಮನಃಶಾಂತಿ, ಕೋರ್ಟ್ ಕೇಸ್, ಮಾಟಮಂತ್ರ, ದುಷ್ಟ ಶಕ್ತಿ, ಗುಪ್ತ ಸಮಸ್ಯೆ ಸೇರಿದಂತೆ ನಿಮ್ಮ ಎಲ್ಲಾ ತೊಂದರೆಗಳಿಗೂ ಕೇರಳದ ಶಾಸ್ತ್ರೀಯ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ.

ನಿಮ್ಮ ಸಮಸ್ಯೆಗಳಿಗೆ ಕೇವಲ 7 ದಿನಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ. ಇಲ್ಲದಿದ್ದರೆ ಹಣ ವಾಪಸ್.

ಐದು ಪ್ರಶ್ನೆಗಳಿಗೆ ಉಚಿತ ಉತ್ತರ.

ವಿಳಾಸ- ರೂಮ್ ನಂ. ………, , ಡೀಲಕ್ಸ್ ಲಾಡ್ಜ್,. ಮೆಜೆಸ್ಟಿಕ್, ಗಾಂಧಿನಗರ ಬೆಂಗಳೂರು.

ನಮ್ಮ ಬಳಿ ಲಕ್ಷಾಂತರ ಜನರು ಸಮಸ್ಯೆ ಪರಿಹಾರ ಮಾಡಿಕೊಂಡು ಹೋಗಿದ್ದಾರೆ.

——————————————————-

ಈಗ ಹೇಳಿ ಇಂಥವರಿದ್ದರೆ ದೇವರು ದೆವ್ವ ಎಲ್ಲ ಬೇಕಾ?