ಆಕೆಯನ್ನು ನಾನು ನೋಡಿದ್ದು ಕೆಂಪು ಸೀರೆ, ಬೋಳು ತಲೆಯಲ್ಲಿ ಮಾತ್ರ

123

ಜಲಜಕ್ಕ ಎಂಬುವವರಿದ್ದರು. ಆಕೆಯದು ಬಾಲ್ಯ ವಿವಾಹ ಹಾಗೂ ಆಕೆ ಬಾಲ ವಿಧವೆ. ನಾವು ಚಿಕ್ಕವರಿದ್ದಾಗ ಜಲಜಕ್ಕ ಹಣ್ಣು ಹಣ್ಣು ಮುದುಕಿ. ಆಕೆಯನ್ನು ನಾನು ನೋಡಿದ್ದು ಕೆಂಪು ಸೀರೆ, ಬೋಳು ತಲೆಯಲ್ಲಿ ಮಾತ್ರ. ಬೆಳಿಗ್ಗೆ ಎದ್ದ ತಕ್ಷಣ ವಟಗುಟ್ಟಲು ಆರಂಭಿಸುತ್ತಿದ್ದ ಆಕೆ ರಾತ್ರಿಯವರೆಗೂ ತನ್ನಷ್ಟಕ್ಕೇ ತಾನೇ ಮಾತನಾಡಿಕೊಳ್ಳುತ್ತಲೇ ಇರುತ್ತಿದ್ದಳು. ಆಕೆಯ ಮದುವೆಯಾಗಿದ್ದು 6 ವರ್ಷದ ಹುಡುಗಿಯಾಗಿದ್ದಾಗ. ಮದುವೆ ಮಾಡಿಕೊಟ್ಟದ್ದು 70 ಮೀರಿದ ವೃದ್ಧನಿಗೆ. ಅವಳ ತಂದೆ ಈ ರೀತಿಯ ನಿರ್ಧಾರ ಕೈಗೊಂಡಿದ್ದು ಬಹುಶಃ 1920 ರ ಆಸುಪಾಸಿನಲ್ಲಿ. ತುಂಬಾ ಪ್ರಗತಿಶೀಲನಾಗಿದ್ದ ಆತ ಈ ರೀತಿಯ ನಿರ್ಧಾರ ಏಕೆ ಕೈಗೊಂಡ ಎಂಬುದು ಇಂದಿಗೂ ನಿಗೂಢ. ತುಂಬಾ ಹಿರಿಯರೊಡನೆ ಈ ಕುರಿತು ವಿಚಾರಿಸಿದರೂ ಸಮರ್ಪಕ ಉತ್ತರ ಮಾತ್ರ ದೊರೆತಿಲ್ಲ.

ಜಲಜಕ್ಕನಿಗೆ 8 ವರ್ಷವಾದಾಗ ಗಂಡನ ಮನೆಗೆ ಕಳಿಸಲೆಂದು ಜೋಡೆತ್ತಿನ ಗಾಡಿ ಕಟ್ಟಿದರಂತೆ. ಚಿಕ್ಕ ಹುಡುಗಿಯಾಗಿದ್ದ ಜಲಜಕ್ಕನಿಗೆ ಎಲ್ಲಿ ಹೋಗುತ್ತಿದ್ದೇನೆ, ಯಾಕೆ ಹೋಗುತ್ತಿದ್ದೇನೆ ಎಂಬುದೂ ಏನೂ ಗೊತ್ತಿಲ್ಲ. ಗಾಡಿ ತನಗಾಗಿ ವಿಶೇಷವಾಗಿ ಕಟ್ಟಲಾಗಿದೆ ಎಂದು ಗೊತ್ತಿದ್ದ ಆಕೆ, ಪ್ರಯಾಣಕ್ಕೆ ಸಂಭ್ರಮದಿಂದಲೇ ತಯಾರಾದಳು. ಗಾಡಿ ಹೊರಟಿತು. ಬೃಹತ್ ಕಾಡಿನ ದಾರಿಯಲ್ಲಿ ಗಾಡಿ ಸಾಗುತ್ತಿರುವಾಗ ಎದುರಿನಿಂದ ಮತ್ತೊಂದು ಎತ್ತಿನ ಗಾಡಿ ಎದುರಾಯಿತು. ಅದರಿಂದ ಇಳಿದ ಜನ “ಜಲಜಳ ಗಂಡ ಹೋಗ್ಬಿಟ್ನಂತೆ” ಎಂಬ ಸುದ್ದಿ ಮುಟ್ಟಿಸಿದರು. ಜಲಜಳಿದ್ದ ಗಾಡಿ ವಾಪಸ್ ತಿರುಗಿಬಿಟ್ಟಿತು. ಆಕೆ ತನ್ನ ಮನೆಗೆ ಬಂದಾಗ ಮನೆಯಲ್ಲಿದ್ದ ಹೆಂಗಸರೆಲ್ಲ ಅಳುತ್ತಿದ್ದರು. ಯಾಕೆ ಹಾಗೆ ಅಳುತ್ತಿದ್ದಾರೆ ಎಂಬುದೇ ಈಕೆಗೆ ಗೊತ್ತಿಲ್ಲ. ಕೆಲ ದಿನಗಳ ನಂತರ ಜಲಜಳ ತಲೆ ಬೋಳಿಸಿ, ಕೆಂಪು ಸೀರೆ ಉಡಿಸಿ, ಅವಳಿದೆಂದು ತಾಮ್ರದ ಮಡಿ ಪಾತ್ರೆ ತೆಗೆದಿಟ್ಟು ಮನೆಯಲ್ಲಿಯೇ ಪ್ರತ್ಯೇಕವಾಗಿ ಕೂರಿಸಲಾಯಿತು. ಆ ಪರಿಸ್ಥಿತಿಯಿಲ್ಲಿಯೇ ಆಕೆ 70 ಕ್ಕೂ ಹೆಚ್ಚು ವರ್ಷ ಬದುಕಿಬಿಟ್ಟಳು. ಆ ಅವಧಿಯಲ್ಲಿ ಜೀವನದ ಯಾವುದೇ ಸಂತೋಷ ಆಕೆಗೆ ಸಿಗಲಿಲ್ಲ. ಸಂತೋಷ ಹೋಗಲಿ ಸದಾ ಅವಗಣನೆಗೇ ಗುರಿಯಾದಳು ಜಲಜಕ್ಕ. ಹಿಂದಿನ ಕಾಲದ ಪದ್ಧತಿಗಳು ಎಷ್ಟು ಭಯಾನಕ ಮತ್ತು ಕ್ರೂರವಲ್ಲವೆ?