ನಾನಿರುವುದೇ ಹೀಗೆ. ನನ್ನದು ಕೋಣದ ಚರ್ಮ.

©ಚಿತ್ರ-ನಾನು

ನಿನ್ನೆಯಷ್ಟೇ ನಡೆದ ಘಟನೆ. ಗಾಂಧಿನಗರದಲ್ಲಿದ್ದೆ. ಪಾರ್ಕಿಂಕ್ ಗಾಗಿ ಜಾಗ ಹುಡುಕುತ್ತಿದ್ದೆ. ಪಾರ್ಕಿಂಕ್ ಸ್ಥಳದಲ್ಲಿ ಒಬ್ಬರು ತಮ್ಮ ಬೈಕ್ ಹೊರತೆಗೆಯುತ್ತಿರುವುದು ನೋಡಿ ಅಲ್ಲಿಗೆ ಹೋದೆ. ಅವರಿಗೆ ಬೈಕ್ ತೆಗೆಯಲು ಅನುವಾಗಲೆಂದು ನನ್ನ ಬೈಕನ್ನು ಪಕ್ಕದಲ್ಲಿ ನಿಲ್ಲಿಸಿ, ಅವರು ಬೈಕ್ ಪೂರ್ಣವಾಗಿ ಹೊರತೆಗೆಯಲು ಕಾಯುತ್ತಿದ್ದೆ. ಇನ್ನೇನು ನಾನು ನನ್ನ ಬೈಕನ್ನು ಅಲ್ಲಿ ಸೇರಿಸಬೇಕು, ಅಷ್ಟರಲ್ಲಿ ಟೈ ಹಾಕಿಕೊಂಡು ಸಕತ್ ಸ್ಮಾರ್ಟ್ ಆಗಿ ಡ್ರೆಸ್ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಸುಯ್ಯನೇ ಬೈಕ್ ನಲ್ಲಿ ಬಂದು ಅದೇ ಜಾಗದಲ್ಲಿ ನಿಲ್ಲಿಸಿಬಿಟ್ಟ. ನಾನು ಶಾಂತವಾಗಿಯೇ ಹೇಳಿದೆ.

“Boss, I’m waiting here”

ಆತ ತೀರ ಮೊಂಡತನದಿಂದ

“So What?” ಎಂದ.

ಒಂದು ಕ್ಷಣ ನಾನು ಅವಾಕ್ಕಾದೆ. ನನಗೂ ಸಿಟ್ಟು ಬಂತು. “Are you educated?” ಕೇಳಿದೆ.

“No “ಎಂದು ಅಷ್ಟೇ ಮೊಂಡುತನದಿಂದ ಉತ್ತರಿಸಿದ. ಅದಕ್ಕೆ ಪ್ರತಿಹೇಳಲು ನನ್ನ ಬಳಿ ಏನೂ ಇರಲಿಲ್ಲ. ಸಡನ್ನಾಗಿ

“That’s why you are behaving like this…. “ಎಂದೆ.

ಅದಕ್ಕೆ ಆತ

“Yes” ಎಂದು ನನ್ನನ್ನು ಗುರಾಯಿಸಿ ನೋಡುತ್ತ ಹೊರಟು ಹೋದ.

ನಾನಿರುವುದೇ ಹೀಗೆ. ನನ್ನದು ಕೋಣದ ಚರ್ಮ. (ಕೋಣದ ಕ್ಷಮೆಯಿರಲಿ). ನನ್ನ ಅಪ್ಪ-ಅಮ್ಮ ನನಗೆ ಸಂಸ್ಕಾರ ಕಲಿಸಿಲ್ಲ, ನನ್ನ ಗುರುಗಳು ನನಗೆ ಹೇಗೆ ಮಾತನಾಡಬೇಕೆಂದು ಕಲಿಸಿಲ್ಲ. ಕರ್ಟಸಿ, ಕಾಮನ್ ಸೆನ್ಸ್, ಮೃದು ಮಾತು ನಮ್ಮ ವಂಶದಲ್ಲೇ ಇಲ್ಲ ಎಂಬಂತಿತ್ತು ಆತನ ಒಟ್ಟಾರೆ ವರ್ತನೆ ಹಾಗೂ ಮಾತು.

ಅಷ್ಟರಲ್ಲಿ ಅಲ್ಲೇ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು “ಸಾರ್ ನಾನು ಸ್ಕೂಟರ್ ತೆಗೆಯುತ್ತಿದ್ದೇನೆ. ನೀವು ಇಲ್ಲಿ ನಿಲ್ಲಿಸಿ” ಎಂದು ತಮ್ಮ ಸ್ಕೂಟರ್ ತೆಗೆದು ನನಗೆ ಬೈಕ್ ನಿಲ್ಲಿಸಲು ಜಾಗ ಮಾಡಿಕೊಟ್ಟರು. ನಾನು ಟೈ ಹಾಕಿಕೊಂಡಿದ್ದ ವ್ಯಕ್ತಿಯನ್ನು ಶಪಿಸುತ್ತ, ಬೈಕ್ ನಿಲ್ಲಿಸಿ ಟೀ ಕುಡಿಯಲೆಂದು ಹತ್ತಿರದ ಹೋಟೆಲ್ ಗೆ ಹೋದೆ. ಅಲ್ಲಿ ಟೀ ಕುಡಿಯುತ್ತಿರಬೇಕಾದರೆ, ಆಗಷ್ಟೇ ನನ್ನೊಂದಿಗೆ ಜಗಳವಾಡಿದ್ದ ವ್ಯಕ್ತಿ ಮೂರ್ನಾಲ್ಕು ಟೈ-ಬೂಟು ನವರೊಂದಿಗೆ ಮಾತನಾಡುತ್ತಿರುವುದು ಕಂಡುಬಂತು. ಆತನನ್ನು ನೋಡುತ್ತಲೇ ನನ್ನ ಪಿತ್ತ ನೆತ್ತಿಯಿಂದ ಜ್ವಾಲಾಮುಖಿಯಂತೆ ಚಿಮ್ಮಿತು. ಈತನಿಗೆ ಈಗಲೇ ಸರಿಯಾಗಿ ಪಾಠ ಕಲಿಸಬೇಕು ಬಾಸ್ಟರ್ಡ್….ಎಂದುಕೊಂಡವನೇ ನೇರವಾಗಿ ಆತನ ಹತ್ತಿರ ಹೋದೆ. ಗುಂಪಿನಲ್ಲಿ ನಿಂತಿದ್ದ ಆತನ ಬೆನ್ನುತಟ್ಟಿ ನನ್ನೆಡೆಗೆ ಗಮನ ಸೆಳೆದವನೆ..

“Hi…I’m sorry. I was harsh on you” ಎಂದೆ.

ಆತನ ಮುಖ ನೋಡುವಂತಿತ್ತು.

Advertisements

ಮನುಷ್ಯರ ಜೊತೆ ನಾಯಿ ಇದ್ರೆ ಅಷ್ಟೇ ಗೇಟಿನ ಮುಂದೆ ಇಸ್ಸಿ ಮಾಡೋದು….

©sughosh s. nigale

ನಮ್ಮ ಮನೆಯ ಓನರ್ ಆಂಟಿ ಸದಾ ಬೇಸರ ಮಾಡಿಕೊಳ್ಳುತ್ತಲೇ ಇದ್ದರು “ನೋಡಿ ಸುಘೋಷ್. ಈ ಜನಕ್ಕೆ ಎಷ್ಟು ಹೇಳಿದರೂ ಬುದ್ಧಿನೇ ಬರಲ್ಲ. ಕಾಮನ್ ಸೆನ್ಸೇ ಇಲ್ಲ ಅಂತೀನಿ. ಅಲ್ಲ ಎಷ್ಟು ಜನರಿಗೇಂತ ಹೇಳುತ್ತ ಕೂತ್ಕೋಳಗಾತ್ತೆ ಹೇಳಿ? ನನಗಂತೂ ಹೇಳಿ ಹೇಳಿ ಸಾಕಾಗಿ ಹೋಗಿದೆ. ಬೆಳಿಗ್ಗೆ ಎದ್ದು ಗೇಟಿನ ಮುಂದೆ ನೋಡಿದರೆ ನಾಯಿ ಇಸ್ಸಿ ಮಾಡಿರುತ್ತೆ. ಕ್ಲೀನ್ ಮಾಡಿ ಮಾಡಿ ಸಾಕಾಗಿ ಹೋಗುತ್ತೆ”

ಅಷ್ಟರಲ್ಲಿ ಯಾವುದೋ ಬೀದಿ ನಾಯಿ ನಮ್ಮ ಗೇಟಿನ ಮುಂದೆ ಬಂದು ನಿಂತುಕೊಳ್ಳಲು ಸರಿಹೋಯಿತು. ಅಲ್ಲೇ ನಿಂತಿದ್ದ ಅಂಕಲ್ ಹಚಾ ಹಚಾ ಎಂದು ನಾಯಿಯನ್ನು ಓಡಿಸಲು ಮುಂದಾದರು. ಅದನ್ನು ನೋಡಿದ ಆಂಟಿ, ಅಯ್ಯೋ ಬರೇ ನಾಯಿಯನ್ನು ಓಡಿಸಬೇಡ್ರಿ. ನನಗೂ ನಾಯಿ ಅಂದ್ರೇ ಇಷ್ಟಾನೇ…ಬರೇ ನಾಯಿ ಬಂದ್ರೆ ಅದು ಗೇಟಿನ ಮುಂದೆ ಇಸ್ಸಿ ಮಾಡೋದೇ ಇಲ್ಲ. ಆದ್ರೆ ಬೆಳಿಗ್ಗೆ ಬೆಳಿಗ್ಗೆ ವಾಕಿಂಗ್ ಗೆ ಅಂತ ಈ ನಾಯಿಗಳನ್ನು ಕರೆದುಕೊಂಡು ಬರುತ್ತಾರಲ್ಲ ಜನ. ಆಗಷ್ಟೇ ನಾಯಿಗಳು ಗೇಟಿನ ಮುಂದೆ ಇಸ್ಸಿ ಮಾಡುತ್ವೆ

ನನಗೂ ಹೌದು ಎನಿಸಿತು. ನಾನು ಹಲವು ಬಾರಿ ನೋಡಿದ್ದೇನೆ. ಸಾವಿರಾರು ರೂಪಾಯಿಗಳ ನಾಯಿಯನ್ನು ಕೊಂಡು, ಅದಕ್ಕೆ ಸಾವಿರಾರು ರೂಪಾಯಿ ಪಿಡಿಗ್ರಿ ಫುಡ್ ಹಾಕಿ, ಬೆಲೆಬಾಳುವ ಚೈನ್ ಕಟ್ಟುವ ಜನ, ನಾಯಿಗಳ ಇಸ್ಸಿ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳುವುದೇ ಇಲ್ಲ. ಇತರರ ಮನೆಯೆ ಗೇಟೇ ತಮ್ಮ ನಾಯಿಯ ಪಾಯಿಖಾನೆ ಎಂದುಕೊಂಡು ಬಿಟ್ಟಿರುತ್ತಾರೆ. ಬೇಕಂತಲೆ ಮಾಡುತ್ತಾರೋ, ಕಾಮನ್ ಸೆನ್ಸ್ ಇರುವುದಿಲ್ಲವೋ ಒಂದೂ ಗೊತ್ತಾಗುವುದಿಲ್ಲ. ಹೇಳಲು ಹೋದರೆ ತಲೆ ತಗ್ಗಿಸಿಕೊಂಡು ಹೋಗುವ ಈ ಜನ ಮಾರನೇ ದಿನ ಅಲ್ಲೇ ಬಂದು ಮತ್ತೆ ನಾಯಿ ಇಸ್ಸಿ ಮಾಡಿಸುತ್ತಾರೆ. ಹಾಗಂತ ಈ ಜನರಿಗೆ ಬೇರೆಯವರ ಮೇಲೆ ದ್ವೇಷವಾಗಲಿ, ಶತ್ರುತ್ವವಾಗಲಿ ಇರುವುದಿಲ್ಲ. ಮತ್ತೆ ಏಕೆ ಹೀಗೆ ಮಾಡುತ್ತಾರೆ ಗೊತ್ತಿಲ್ಲ. ಅಂತೂ ನಾಯಿಗಳ ಮಾಲೀಕರನ್ನು ಓಡಿಸುವ ಕೆಲಸವಂತೂ ಮುಂದುವರೆದೇ ಇದೇ.