ನಾನು ಮಾನಸಿಕವಾಗಿ ಸಿಸ್ಟೋಸ್ಕೋಪಿಗೆ ತಯಾರಾದೆ

ಮನುಷ್ಯ ಯಾವುದಕ್ಕೆ ಎಷ್ಟೇ ಇಲ್ಲವೆಂದರೂ ಅನಿವಾರ್ಯ ಪರಿಸ್ಥಿತಿ ಬಂದಾಗ ಅದಕ್ಕೆ ಸಿದ್ಧನಾಗಿಬಿಡುತ್ತಾನೆ. “ನನಗೆ ರಕ್ತ ಕಂಡರಾಗುವುದಿಲ್ಲ”, “ನನಗೆ ಆಕ್ಸಿಡೆಂಟ್ ನೋಡಲಾಗುವುದಿಲ್ಲ”’ “ಕಪ್ಪು ಬೋರ್ಡ್ ಮೇಲೆ ಚಾಕ್ ನಿಂದ ಬರೆಯವಾಗ ಕುಂಯ್ ಕುಂಯ್ ಅಂತ ಸೌಂಡ್ ಬರುತ್ತದಲ್ಲ, ಅದನ್ನು ನನಗೆ ಕೇಳಲಾಗುವುದಿಲ್ಲ”, “ಜೀವಹೋದರೂ ಸರಿ ನಾನು ನಾನ್ ವೆಜ್ ತಿನ್ನವುದಿಲ್ಲ”, “ಬೇಕಾದರೆ ಜೀವನಪೂರ್ತಿ ಟ್ಯಾಬ್ಲೆಟ್ ತಿನ್ನುತ್ತೇನೆ ಆದರೆ ಇಂಜಕ್ಷನ್ ಮಾಡಿಸಿಕೊಳ್ಳುವುದಿಲ್ಲ”, ಮುಂತಾದ ನಮ್ಮ ನಮ್ಮ ಮಾತುಗಳು ಅನಿವಾರ್ಯ ಪರಿಸ್ಥಿತಿ ಬಂದಾಗ ಪೂರಾ ಬದಲಾಗಿಬಿಡುತ್ತವೆ. ಹೀಗೆ ಬದಲಾದ ಹಲವು ಮಿತ್ರರನ್ನು, ಹಿತೈಷಿಗಳನ್ನು ನಾನು ನೋಡಿದ್ದೇನೆ.

ನನಗೆ ಮೊದಲಿನಿಂದಲೂ ಯಾವುದೂ ವರ್ಜ್ಯವಲ್ಲ. ಆದರೆ ಕೆಲವೊಂದು ನನಗೆ ಆಗಿಬರುವುದಿಲ್ಲ. ಡಾ. ಮಧುಸೂದನ್, “ಏನಿಲ್ಲ ಸುಘೋಷ್. ಇಟ್ ಈಸ್ ವೆರಿ ಸಿಂಪಲ್. ವಿ ವಿಲ್ ಇನ್ಸರ್ಟ್ ಎ ಸ್ಮಾಲ್ ಪೈಪ್ ಥ್ರೂ ಪೆನಿಸ್ ಎಂಡ್ ಆಪರೇಟ್ ಇಟ್. ನಿಮಗೆ ಅನಸ್ತೇಷಿಯಾ ಕೊಟ್ಟಿರುತ್ತೇವೆ. ಏನೂ ಗೊತ್ತಾಗದು. ಡೊಂಟ್ ವರಿ” ಅಂತ ಹೇಳಿದಾಗ ಆತಂಕವಾಗಿದ್ದು ನಿಜ. ದೇಹಕ್ಕಲ್ಲ ಮನಸ್ಸಿಗೆ.

ಸಿಸ್ಟೋಸ್ಕೋಪಿಗೆ ನಾನು ದೈಹಿಕಕ್ಕಿಂತಲೂ ಮಾನಸಿಕವಾಗಿ ಸಿದ್ಧನಾಗುವುದು ಅವಶ್ಯಕಗಿತ್ತು. ಡಾ. ಮಧುಸೂದನ್ ಹೇಳಿದ ಯೋಚನೆಯೇ ನನ್ನಲ್ಲಿ ಆತಂಕವುಂಟಮಾಡಿತ್ತು. ಆದರೆ ಅದು ಅನಿವಾರ್ಯವಾಗಿತ್ತು. ಹೀಗಾಗಿ ಅನಿವಾರ್ಯ ಅನ್ನಿಸಿದ ಮೇಲೆ, ವಾಯ್ ನಾಟ್ ಎಂಜಾಯ್ ಇಟ್ ಅಂತ ಅನ್ನಿಸಿತು. ಆದರೆ ಅನ್ನಿಸಿದ್ದಷ್ಟು ಸುಲಭವಾಗಿರಲಿಲ್ಲ. ಪುಟ್ಟರಾಜು, ರಮೇಶ್ ನನ್ನ ರೂಂನಿಂದ ತೆರಳಿದ್ದರು. ನಿದ್ದೆ ನನ್ನ ಹತ್ತಿರವೂ ಸುಳಿದಾಡಿರಲಿಲ್ಲ. ನನ್ನ ಮಾವ ಬಂದು ಲೈಟ್ ಆಫ್ ಮಾಡಿ ರೂಂಲ್ಲಿದ್ದ ಮತ್ತೊಂದು ಬೆಡ್ ನಲ್ಲಿ ಮಲಗಿದರು.

ರೂಂನಲ್ಲಿ ಝಿಲೋ ಬಲ್ಬ್. ಅದರ ಬೆಳಕಿನಲ್ಲಿ ಟಪ್ ಟಪ್ ಟಪ್ ಅಂತ ಸಲೈನಿಂದ ಒಂದೊಂದೇ ಹನಿ ನನ್ನ ಶರೀರವನ್ನು ಸೇರುತ್ತಿತ್ತು. ಆದಷ್ಟು ನಾರ್ಮಲ್ ಆಗಿ ಬಿಹೇವ್ ಮಾಡಬೇಕು ಎಂದುಕೊಂಡು ನಿತ್ಯ ರಾತ್ರೆಯೂ ಹೇಳುವಂತೆ

“ರಾಮಂಸ್ಕಂದಂ ಹನೋಮಂತಂ ವೈನತೇಯಂ ವೃಕೋದರಂ

ಶಯನೇಸ್ಮರೇನ್ನಿತ್ಯಂ ದುಸ್ವಪ್ನಂ ತಸ್ಯ ನಶ್ಯತಿ”

“ಅಶ್ವತ್ಥಾಮೋ ಬಲಿರ್ವ್ಯಾಸಃ ಹನೂಮಾಶ್ಚ ವಿಭೀಶಣಃ

ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವಿನಃ”

ಹೇಳಿ ಮುಗಿಸಿದೆ. ನನ್ನ ಸ್ಥಿತಿಯನ್ನು ಮೇಲಿನಿಂದ ನೋಡಿ, ಏಳೂ ಚಿರಂಜೀವಿಗಳೂ ಬಹುಶಃ ಮರುಕಪಟ್ಟರೆನಿಸುತ್ತದೆ.

ಆದಷ್ಟು ಮನಸ್ಸನ್ನು ಬ್ಲಾಂಕ್ ಮಾಡಲು ಯತ್ನಿಸಿದೆ. ದೀರ್ಘ ಉಸಿರೆದುಕೊಳ್ಳುತ್ತ ಶರೀರವನ್ನು ಅಲುಗಾಡಿಸದೆ ನಿದ್ದೆ ಮಾಡಲು ಯತ್ನಿಸಿದೆ. ಅಷ್ಟರಲ್ಲಿ ಜಿ.ಎನ್. ಮೋಹನ್ ಸರ್ ಅವರ ಎಸ್ಎಂಎಸ್ ಮೊಬೈಲ್ ನಲ್ಲಿ ಬಂದುಕುಳಿತಿತ್ತು. ಕಿಡ್ನಿ ಸ್ಟೋನ್ ತೆಗೆಯುವ ಪ್ರಕ್ರಿಯೆ ಇಂಜಕ್ಷನ್ ತೆಗೆದುಕೊಂಡಷ್ಟೇ ಸುಲಭ ಅಂತ ಎಸ್ಎಂಎಸ್ ಹೇಳಿತ್ತು. ದೇಹಕ್ಕೆ ಎಷ್ಟೋ ಸಮಾಧಾನವಾಯಿತು. ಮನಸ್ಸಿಗೂ ಕೊಂಚ.

ಆದರೆ ನಿದ್ದೆ ಮಾತ್ರ ಹತ್ತಿರ ಸುಳಿಯದು. ಅಂತೂ ಕಣ್ಣು ಭಾರವಾಗಿ ನಿದ್ದೆ ಹತ್ತಿದಂತಾಯಿತು. ಬಟ್ ಐ ವಾಸ್ ಪಾರ್ಷಿಯಲಿ ಅವೇಕ್. ಅದು ಸೌಂಡ್ ಸ್ಲೀಪ್ ಆಗಿಯೇ ಇರಲಿಲ್ಲ. ಹಾಗೆಯೇ ಕಾಲಸರಿಯಿತು. ಮತ್ತೆ ಎಚ್ಚರವಾದಾಗ ಐದುಗಂಟೆ ಹದಿನೈದು ನಿಮಿಷ. ಆರುಗಂಟೆಗೆ ಆಪರೇಷನ್ ಅಂತ ಸಿಸ್ಟರ್ ಹೇಳಿಹೋಗಿದ್ದಳು.

ಇನ್ನೂ ಮಲಗೋಣ ಎಂದುಕೊಂಡೆ. ಆದರೆ…..

(ನಾಳೆ : 5.15 ರಿಂದ 5.50 ರ ನಡುವಿನ ಅವಧಿ ನನ್ನ ಇಲ್ಲೀತನಕದ ಬದುಕಿನ ಅತೀ ದೀರ್ಘ ಅವಧಿ ಎನಿಸಿತು).

ನಾನು ಸುಘೋಷ್ ನಿಗಳೆಯೂ ಅಲ್ಲ, ದೇವಾನಂದಸ್ವಾಮಿಯೂ ಅಲ್ಲ, 202

ಸುಮಾರು ಕಳೆದ ಒಂದು ವಾರದಿಂದ ಬ್ಲಾಗ್ ಅಪ್ ಡೇಟ್ ಮಾಡಲು ಆಗಿಲ್ಲ. ಕಾರಣ ನನ್ನ ಕಿಡ್ನಿಯಲ್ಲಿ ಕಾಣಿಸಿಕೊಂಡು ಕಲ್ಲಗಳು. ಒಂದು ದಿನ ಇದ್ದಕ್ಕಿದ್ದಂತೆ ಬೆಳಿಗ್ಗೆ ಸಿಕ್ಕಾಪಟ್ಟೆ ಹೊಟ್ಟೆ ನೋವು ಬಂದು ನರಳಾಡಿಬಿಟ್ಟೆ. ರಾತ್ರಿಯ ಹೊತ್ತಿಗೆ ಆಸ್ಪತ್ರೆಗೆ ಹೋದಾಗ, ಅಬ್ಡಾಮಿನ್ ಸ್ಕಾನಿಂಗ್ ಮಾಡಿಸಿದಾಗ ಕಂಡಿದ್ದು ಮೂರು ಕಲ್ಲುಗಳು. ಅದಾದ ಬಳಿಕ ಆಗಿದ್ದು ಸಿಸ್ಟೋಸ್ಕಾಪಿ. ನಾನಿದ್ದ ರೂಂ ನಂ. 202. ಹೀಗಾಗಿ ನನಗೆ ಅಲ್ಲಿ ಚಿಕಿತ್ಸೆ ದೊರೆತಿದ್ದು 202 ಆಗಿ. ಸುಘೋಷ್ ನಿಗಳೆಯಾಗಿ ಅಥವಾ ದೇವಾನಂದ ಸ್ವಾಮಿಯಾಗಿ ಅಲ್ಲ. ಇದೀಗ ಚೇತರಿಸಿಕೊಳ್ಳುತ್ತಿದ್ದೇನೆ. ಶೀಘ್ರದಲ್ಲಿಯೇ ಮತ್ತೆ ಬ್ಲಾಗ್ ಅಪ್ಡೇಟ್ ಆರಂಭಿಸುತ್ತೇನೆ. ನೆಟ್ಟಗೆ ಕೂತಿರಬಾರದು, ಕೇವಲ ಮಲಗಿರಬೇಕು ಎಂದು ಡಾಕ್ಟರ್ ಹೇಳಿರುವುದರಿಂದ ಈ ಶಿಕ್ಷೆ.

ಶೀಘ್ರದಲ್ಲೇ ಕಾಣುವೆ,

ಸುಘೋಷ್ ಎಸ್. ನಿಗಳೆ.