ನಾನೀಗ ಈ ಟಿವಿಯ ತೆಕ್ಕೆಯಲ್ಲಿ…..

ಹೌದು, ನಾನೀಗ ಮತ್ತೆ ಈ ಟಿವಿಯ ತೆಕ್ಕೆಯಲ್ಲಿದ್ದೇನೆ. ವಿವರಗಳು ಶೀಘ್ರದಲ್ಲಿ.. . . .

.....
…..

ಇಲೆಕ್ಟ್ರಾನಿಕ್ ಮೀಡಿಯಾದ ಸಂವೇದನೆಗಳು ಬದಲಾಗತೊಡಗಿವೆ

….

ಕೆಲ ವರ್ಷಗಳ ಹಿಂದೆ ನಡೆದ ಘಟನೆ. ಓರಿಸ್ಸಾದ ಪೋಲಿಸ್ ಮಹಾನಿರ್ದೇಶಕನೊಬ್ಬ ನ್ಯಾಯ ಒದಗಿಸುವ ನಾಟವನ್ನಾಡಿ ಆದಿವಾಸಿ ಹುಡುಗಿಯೊಬ್ಬಳನ್ನು ತನ್ನ ತೆವಲಿಗೆ ಬಳಸಿಕೊಂಡಿದ್ದ. ಆಕೆಯನ್ನು ಮತ್ತೆ ಮತ್ತೆ ಬಳಸಿಕೊಂಡೂ, ಆಕೆಗೆ ಯಾವುದೇ ರೀತಿಯ ಸಹಾಯವನ್ನು ಮಾಡಲಿಲ್ಲ. ಕೊನೆಗೆ ರೋಸಿ ಹೋದ ಹುಡುಗಿ, ಸ್ಥಳೀಯ ಇಲೆಕ್ಟ್ರಾನಿಕ್ ಮಾಧ್ಯಮದ ಪತ್ರಕರ್ತನೊಬ್ಬನನ್ನು ಸಂಪರ್ಕಿಸಿದಳು. ಆ ಪತ್ರಕರ್ತ ಹುಡುಗಿಯೊಂದಿಗೆ ಉಪಾಯವಾಗಿ ಹಿಡನ್ ಕ್ಯಾಮೆರಾ ಕಳಿಸಿ ಡಿಜಿಯ ಕಾಮಕೇಳಿಯ ದೃಶ್ಯಗಳನ್ನು ಸೆರೆಹಿಡಿದ. ಆ ದೃಶ್ಯಗಳು ತೀರ ಹಸಿಹಸಿಯಾಗಿದ್ದವು. ಆ ವಿಶುವಲ್ಸ್ ಗಳನ್ನು ಹೆಡ್ ಆಫೀಸ್ ಗೆ ಕಳಿಸಲಾ ಎಂದು ಕೇಳಿದ್ದಕ್ಕೆ, ವಿಶುವಲ್ಸ್ ನ ತೀವ್ರತೆ ಅರಿಯದ ಹೆಡ್ ಆಫೀಸ್ ನವರು, ಕಳಿಸು, ಅಂದಿದ್ದಾರೆ. ಆದರೆ ಯಾವಾಗ ವಿಶುವಲ್ಸ್ ಗಳು ಎಲ್ಲರೂ ಆಕ್ಸೆಸ್ ಮಾಡಬಹುದಾದ ಫೋಲ್ಡರ್ ಗೆ ಬಂದು ಬಿತ್ತೊ, ಇಡೀ ಆಫೀಸಿನವರು ಆ ವಿಶುವಲ್ಸ್ ಗಳನ್ನು ಕದ್ದು ಮುಚ್ಚಿ ನೋಡತೊಡಗಿದ್ದಾರೆ. ತಕ್ಷಣ ಜಾಗೃತಗೊಂಡ ಐಟಿ ತಂಡ, ಆ ವಿಶುವಲ್ಸ್ ಗಳನ್ನು ಸೀಕ್ರೇಟ್ ಫೋಲ್ಡರ್ ಗೆ ಹಾಕಿ ನಿಟ್ಟುಸಿರು ಬಿಟ್ಟಿದೆ. ಆಫೀಸಿನಲ್ಲಿದ್ದ ಮಹಿಳಾ ಉದ್ಯೋಗಿಗಳಿಗೆ ಈ ಘಟನೆ ತೀರ ಮುಜುಗರ ತಂದಿದೆ.

ಕೆಲ ವರ್ಷಗಳ ಬಳಿಕ, ಅಂದರೆ ಇತ್ತಿತ್ತಲಾಗಿ, ಇದೇ ತರಹದ ಘಟನೆಯೊಂದು ಬಾಗಲಕೋಟೆಯಿಂದ ವರದಿಯಾಗಿದೆ. ಎಂದಿನಂತೆ ವಿಶುವಲ್ಸ್ ಗಳು ಹೆಡ್ ಆಫೀಸಿಗೆ ಬಂದಿವೆ. ವಿಶುವಲ್ಸ್ ಗಳು ಬಹಿರಂಗವಾಗಿ ನೋಡಲಾಗದ ಮಟ್ಟಿಗಿವೆ. ಆದರೆ ಆಫೀಸಿನಲ್ಲಿ ಎಲ್ಲರೂ ರಾಜಾರೋಷವಾಗಿ ಅವನ್ನು ನೋಡಿದ್ದಾರೆ.

ಈ ಎರಡೂ ಘಟನೆಗಳನ್ನು ಇಟ್ಟು ನೋಡಿದಾಗ, ಇವುಗಳ ವಿಶ್ಲೇಷಣೆ ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಮಾಧ್ಯಮದ ಸಿಬ್ಬಂದಿ ಪ್ರಾಕ್ಟಿಕಲ್ ಆಗುತ್ತಿದ್ದಾರೆಯೆ ಅಥವಾ ಸಂವೇದನೆಯನ್ನು ಕಳೆದುಕೊಳ್ಳುತ್ತಿದ್ದಾರೆಯೆ? ನೀವೇನನ್ನುತ್ತೀರಿ?

ಸುದ್ದಿ ವಿಭಾಗಕ್ಕೆ ಹೋಗಿ ಆವೇಶದಿಂದ ಅಬ್ಬರಿಸಿದೆ…

-ಎಚ್. ಆನಂದರಾಮ ಶಾಸ್ತ್ರೀ

ಡಾ.ನಾ.ಮೊಗಸಾಲೆ ಅವರಿಗೆ ಬೆಂಗಳೂರಿನಲ್ಲಿ ’ಸೂರ್ಯನಾರಾಯಣ ಚಡಗ ಪ್ರಶಸ್ತಿ’ ಪ್ರದಾನ. ಸಂತೋಷದ ವಿಷಯ.

ಸೂರ್ಯನಾರಾಯಣ ಚಡಗರ ನಿಕಟವರ್ತಿಯಾಗಿದ್ದವನು ನಾನು. ಬೆಂಗಳೂರಿನಲ್ಲಿ ಅವರು ವಿಧಿವಶರಾದಾಗ ಕೂಡಲೇ ಎಲ್ಲ ಕನ್ನಡ ದಿನಪತ್ರಿಕೆಗಳ ಬೆಂಗಳೂರು ಕಚೇರಿಗಳಿಗೆ ನಾನು ದೂರವಾಣಿ ಕರೆಮಾಡಿ ಸುದ್ದಿ ಮುಟ್ಟಿಸಿದೆ. ಲಿಖಿತ ಸುದ್ದಿಯನ್ನೂ ಅದೇ ದಿನ ಪತ್ರಿಕಾಲಯಗಳಿಗೆ ತಲುಪಿಸಲಾಯಿತು. ಆ ದಿನಗಳಲ್ಲಿ ’ಈ ಟಿವಿ’ಯಲ್ಲಿದ್ದ ಸುಘೋಷ್ ನಿಗಳೆ ಅವರ ಪರಿಚಯ ನನಗಿದ್ದುದರಿಂದ ಅವರಿಗೆ ದೂರವಾಣಿ ಕರೆಮಾಡಿ ವಿಷಯ ತಿಳಿಸಿದೆನಲ್ಲದೆ ಚಡಗರ ಪಾರ್ಥಿವ ಶರೀರದ ಚಿತ್ರೀಕರಣ ಮಾಡಿಕೊಂಡು ಟಿವಿಯಲ್ಲಿ ಬಿತ್ತರಿಸುವಂತೆ ವಿನಂತಿಸಿದೆ. ಸಂಬಂಧಿಸಿದವರಿಗೆ ಕೂಡಲೇ ತಿಳಿಸುವುದಾಗಿ ಸುಘೋಷ್ ಹೇಳಿದರು.

ಹೆಬ್ಬಾಳದ ಚಿತಾಗಾರದಲ್ಲಿ ಚಡಗರ ಪಾರ್ಥಿವ ಶರೀರವನ್ನು ಚಿತೆಗೆ ಸಮರ್ಪಿಸುವ ಕ್ಷಣ ಸಮೀಪಿಸಿದರೂ ’ಈ ಟಿವಿ’ಯವರು ಪತ್ತೆ ಇಲ್ಲ. ಚಿತೆಯೆದುರು ಪಾರ್ಥಿವ ಶರೀರ ಬಂದಾಗ ಮತ್ತೆ ಸುಘೋಷ್‌ಗೆ ಕರೆಮಾಡಿದೆ. ತಾನೀಗ ಬೇರೆ ಕಡೆ ಇರುವುದಾಗಿಯೂ, ಸಂಬಂಧಿಸಿದವರಿಗೆ ಆಗಲೇ ತಿಳಿಸಿರುವುದಾಗಿಯೂ ಹೇಳಿದರಲ್ಲದೆ ಯಾರೂ ಬರದಿದ್ದುದಕ್ಕೆ ಆಶ್ಚರ್ಯವನ್ನೂ ವ್ಯಕ್ತಪಡಿಸಿದರು. ಇನ್ನು ನಾವು ಕಾಯುವಂತಿರಲಿಲ್ಲ. ಸುಘೋಷ್ ತನ್ನ ಪಾಲಿನ ಕರ್ತವ್ಯವನ್ನು ನಿರ್ವಹಿಸಿದ್ದರೂ ಕೂಡ ನನ್ನಿಂದ ಫೋನ್ ದ್ವಾರಾ ಖಡಕ್ ಮಾತುಗಳನ್ನು ಕೇಳಬೇಕಾಯಿತು! ನನ್ನ ತೀಕ್ಷ್ಣನುಡಿಗಳನ್ನು ಅವರು ಸಮಾಧಾನದಿಂದ ಸಹಿಸಿಕೊಂಡರು.

ಚಡಗರ ಅಂತ್ಯಕ್ರಿಯೆ ಪೂರೈಸುತ್ತಲೇ ನಾನು ’ಈ ಟಿವಿ’ಯ ಕಚೇರಿಗೆ ಧಾವಿಸಿದೆ. ಅಲ್ಲಿ ಸುದ್ದಿ ವಿಭಾಗ ನೋಡಿಕೊಳ್ಳುತ್ತಿದ್ದವರ ಬಳಿ ಹೋಗಿ ಆವೇಶದಿಂದ ಅಬ್ಬರಿಸಿದೆ. ಕೊನೆಗೆ ಸುದ್ದಿಯನ್ನು ಬರೆದುಕೊಟ್ಟು ವಾರ್ತೆಯಲ್ಲಿ ಬಿತ್ತರಿಸುವಂತೆ ಕೇಳಿಕೊಂಡೆ. ಆ ರಾತ್ರಿಯ ವಾರ್ತೆಯಲ್ಲಿ ಚಡಗರ ನಿಧನದ ಸುದ್ದಿ ಪ್ರಸಾರವಾಯಿತು, ದೋಷಭರಿತ ವಾಕ್ಯವೊಂದನ್ನು ತೋರಿಸುವ ಮೂಲಕ!

ಈ ಮಧ್ಯೆ ಚಡಗರ ಬಗ್ಗೆ ಕಿರುಲೇಖನವೊಂದನ್ನು ಸಿದ್ಧಪಡಿಸಿ ಅದನ್ನು ’ವಿಜಯ ಕರ್ನಾಟಕ’ದ ಕಚೇರಿಗೆ ಕೊಂಡೊಯ್ದು ಸುದ್ದಿ ಸಂಪಾದಕ ವಸಂತ ನಾಡಿಗೇರ ಅವರಿಗೆ ಕೊಟ್ಟುಬಂದಿದ್ದೆ. ಜೊತೆಗೆ ಚಡಗರ ಅಭಿನಂದನ ಗ್ರಂಥವನ್ನೂ ಕೊಟ್ಟು ಅದರ ಬರಹವೊಂದನ್ನೂ ಬಳಸಿಕೊಳ್ಳುವಂತೆ ನಾಡಿಗೇರರನ್ನು ವಿನಂತಿಸಿಕೊಂಡಿದ್ದೆ. ಮರುದಿನವೇ ’ವಿಜಯ ಕರ್ನಾಟಕ’ದಲ್ಲಿ ಚಡಗರ ನಿಧನದ ಸುದ್ದಿಯೊಡನೆ ನನ್ನ ಲೇಖನ ಮತ್ತು ಅಭಿನಂದನ ಗ್ರಂಥದಲ್ಲಿನ ವ್ಯಾಸರಾಯ ಬಲ್ಲಾಳರ ಲೇಖನ ಇವಿಷ್ಟೂ ಪ್ರಕಟವಾದವು. ಬೇರೆ ಪತ್ರಿಕೆಗಳ ಬಗ್ಗೆ ಹೇಳದಿರುವುದೊಳ್ಳೆಯದು.

ಕಾದಂಬರಿಯಾದಿಯಾಗಿ ವಿವಿಧ ಪ್ರಕಾರಗಳಲ್ಲಿ ಅನೇಕ ಕೃತಿಗಳನ್ನು ರಚಿಸಿದ, ಸಂಪಾದಿಸಿದ ಮತ್ತು ಕನ್ನಡ ನಾಡು ನುಡಿಗಾಗಿ ತಮ್ಮ ಆಯುಷ್ಯವನ್ನೆಲ್ಲ ಸವೆಸಿದ ಹಿರಿಯ ಚೇತನವೊಂದನ್ನು ನಮ್ಮ ಮಾಧ್ಯಮಗಳು (’ವಿಜಯ ಕರ್ನಾಟಕ’ ಹೊರತುಪಡಿಸಿ) ಎಷ್ಟರಮಟ್ಟಿಗೆ ಗುರುತಿಸಿದವು ಎಂಬುದನ್ನು ನೆನೆದಾಗ ಬಲು ಬೇಸರವಾಗುತ್ತದೆ.