ನಾನು ಮೊನ್ನೆ 8 ಜೇನ್ನೋಣಗಳನ್ನು ಹಿಟ್ ಸಿಂಪಡಿಸಿ ಕೊಂದೆ….

oh my honey bee!!!

ಆಗ ನಾನಿನ್ನೂ ಈಟಿವಿ ಸೇರಿದ್ದ ಪರ್ವಕಾಲ. ನಾಲ್ಕು ತಿಂಗಳು ಹೈದ್ರಾಬಾದ್ ನಲ್ಲಿದ್ದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಆಫೀಸು. ಟ್ರೇನಿಂಗು, ಕೋಚಿಂಗು, ಮೀಟಿಂಗು ಎಂದು ಬರುತ್ತಿದ್ದ ಸ್ಟಾಫ್ ಗೆ ಉಳಿದುಕೊಳ್ಳಲಿಕ್ಕೆ ಯೂ.ಕೆ. ಗುಡಾ ಎಂಬಲ್ಲಿ ಗೆಸ್ಟ್ ಹೌಸ್ ಇತ್ತು. ಅಲ್ಲೇ ನನ್ನ ವಾಸ್ತವ್ಯ. ಒಂದು ಮನೆಯಲ್ಲಿ ನಾಲ್ಕು ಜನರು ಆರಾಮವಾಗಿ ಇರಬಹುದಾದ ಎಂಟು ಮನೆಗಳಿರುತ್ತಿದ್ದ ನಾಲ್ಕಂತಸ್ತಿನ ಕಟ್ಟಡಗಳು ಅವು. ನಾನು ಹಾಗೂ ಪಣೀಂದ್ರ ಎರಡನೇ ಮಹಡಿಯ ಮನೆಯ ಒಂದು ರೂಂ ನಲ್ಲಿದ್ದರೆ, ಮತ್ತೊಂದು ರೂಂನಲ್ಲಿ ಈಟಿವಿ ಉತ್ತರಪ್ರದೇಶ ಚ್ಯಾನಲ್ ನ ಟ್ರೇನಿ ಆಂಕರ್ ಇರುತ್ತಿದ್ದ. ಹೇಳಿ ಕೇಳಿ ಟ್ರೇನಿ ಆಂಕರ್ ಆತ. ಪ್ರತಿನಿತ್ಯ ನೀಟ್ ಶೇವ್, ಗರಿ ಗರಿ ಇಸ್ತ್ರಿ ಮಾಡಿರುತ್ತಿದ್ದ ಶರ್ಟ್, ಮುಖಕ್ಕೆ ಕ್ರೀಮು, ಮೈಗೆ ಪರ್ಫ್ಯೂಮು ಹೊಡೆದುಕೊಂಡು ಠಾಕುಠೀಕಾಗಿ ಆಫೀಸ್ ಗೆ ಹೋಗುತ್ತಿದ್ದ.

ಇಂತಿಪ್ಪ ಸಂದರ್ಭದಲ್ಲಿ ಅದೊಮ್ಮೆ ನಾವಿರುತ್ತಿದ್ದ ಮನೆಯ ಕಿಟಕಿಗೆ ಜೇನ್ನೋಣಗಳು ಗೂಡು ಕಟ್ಟಲಾರಂಭಿಸಿದವು. ಎರಡು ಮೂರು ದಿನ ಕಳೆಯುತ್ತಿದ್ದಂತೆ ದೊಡ್ಡ ಗೂಡೇ ರೆಡಿಯಾಗಿಬಿಟ್ಟಿತು. ಅವುಗಳಿಂದ ನನಗೆ ಹಾಗೂ ಪಣಿಗೆ ಏನೂ ತೊಂದರೆ ಇರಲಿಲ್ಲವಾದ್ದರಿಂದ, ನಮ್ಮ ಪಾಡಿಗೆ ನಾವು, ಅವುಗಳ ಪಾಡಿಗೆ ಅವು ವಾಸಿಸಲಾರಂಭಿಸಿದೆವು.

ಆದರೆ ನಾಲ್ಕನೆ ದಿನ ರಾತ್ರಿ ಡ್ಯೂಟಿ ಮುಗಿಸಿ ಬರುತ್ತಿದ್ದಂತೆ ನೋಡಿದ್ದೇನು, ನೂರಾರು ಜೇನ್ನೋಣಗಳು ರೂಂನಲ್ಲಿ ಸತ್ತು ಬಿದ್ದಿದ್ದವು. ತಕ್ಷಣ ಕಿಟಕಿ ಬಳಿ ಹೋಗಿ ನೋಡಿದರೆ ಗೂಡಿನ ಅವಶೇಷ ಕಂಡುಬಂತು. ಕೆಳಗೆ ಮತ್ತೆ ನೂರಾರು ಜೆನ್ನೋಣಗಳು ಸತ್ತುಬಿದ್ದಿದ್ದವು. ಯಾಕಂತ ಗೊತ್ತಾಗಲಿಲ್ಲ….ತಕ್ಷಣ ರಿಸೆಪ್ಶನ್ಗೆ ಫೋನ್ ಮಾಡಿದವನೆ “ಕ್ಯಾ ಹುವಾ ಭೈಯ್ಯಾ? ಜೆನ್ನೋಣಗಳು ಲೇದು….” ಎಂದು ಕನ್ನಡ, ಹಿಂದಿ, ಆತಂಕ ವ್ಯಕ್ತಪಡಿಸಿದೆ. ಅದಕ್ಕೆ ರಿಸೆಪ್ಶನಿಸ್ಟ್ ರಾಜು, “ವೋ ತುಮ್ಹಾರಾ ರೂಂ ಮೆ ಹೈನಾ, ಯೂಪಿವಾಲಾ ಹೈನಾ, ವೋ ಕಂಪ್ಲೇಂಟ್ ಕಿಯಾ. ತೋ ಹಮ್ನೆ ಪೆಸ್ಟಿಸೈಡ್ ಮಾರ್ಕೆ ಖತಮ್ ಕಿಯಾ” ( ಅವನಿದ್ದಾನಲ್ಲ ನಿಮ್ಮ ರೂಂ ನಲ್ಲಿ, ಯೂಪಿಯವ. ಅವ ಕಂಪ್ಲೇಂಟ್ ಮಾಡಿದ. ಹೀಗಾಗಿ ಪೆಸ್ಟಿಸೈಡ್ ಹೊಡೆದು ಕೊಂದಿದ್ದೇವೆ) ಎಂದ. ಹೈದ್ರಾಬಾದ್ ನಲ್ಲಿ ಜೇನ್ನೋಣಗಳು ಗೂಡು ಕಟ್ಟಿದರೆ, ಉತ್ತರಪ್ರದೇಶದ ಆಂಕರ್ ಏಕೆ ಕಂಪ್ಲೇಂಟ್ ಮಾಡಬೇಕು ಗೊತ್ತಾಗಲಿಲ್ಲ. ಜೇನ್ನೋಣಗಳ ಶವಗಳನ್ನು ನೋಡುತ್ತ ನಿದ್ದೆ ಹೋದೆ, ನಾಳೆ ಈ ಬಗ್ಗೆ ವಿಚಾರಿಸಬೇಕು ಎಂದುಕೊಂಡು.

ಮಾರನೇ ದಿನ ಯೂಪಿ ಆಂಕರ್ ನನಗೆ ಸಿಗಲಿಲ್ಲ. ಆದರೆ ಪಣಿಗೆ ಸಿಕ್ಕಿದ್ದನಂತೆ. ಪಣಿ ವಿಚಾರಿಸಿದ್ದಕ್ಕೆ, ತಾನು ಟ್ರೇನಿ ಆಂಕರ್. ತನಗೆ ಎಲ್ಲಾದರೂ ಮುಖಕ್ಕೆ ಜೇನ್ನೋಣ ಕಚ್ಚಿದರೆ ತನ್ನ ಜಾಬ್ ಕಥೆ ಮುಗಿಯಿತು. ಅದಕ್ಕೆ ಕಂಪ್ಲೇಂಟ್ ಮಾಡಿದೆ ಎಂದನಂತೆ. ಅಂದು ಆ ಟ್ರೇನಿ ಆಂಕರ್ ಮೇಲೆ ತೀರ ಕೋಪ ಬಂದಿತ್ತು.

ಆದರೆ ವಿಷಯ ನಮ್ಮ ಬುಡಕ್ಕೆ ಬಂದಾಗ ಏನು ಮಾಡುತ್ತೇವೆ ನೋಡಿ. ಈ ಘಟನೆ ಆಗಿದ್ದು 2004 ರಲ್ಲಿ. ಅದಾಗಿ ಆರು ವರ್ಷಗಳ ನಂತರ ಅಂದರೆ 2010 ರ ಮಾರ್ಚ್ ನಲ್ಲಿ ನನ್ನ ಮನೆಗೆ ರಾತ್ರಿ ಅಚಾನಕ್ಕಾಗಿ ಎರಡು ಜೇನ್ನೋಣಗಳು ನುಗ್ಗಿದವು. ಮನೆಯವರೆಲ್ಲ ನೋಡುತ್ತಿರುವಂತೆಯೇ ಎರಡಕ್ಕೆ ಮತ್ತೆರಡು ಬಂದು ಸೇರಿಕೊಂಡವು. ಆ ನಾಲ್ಕಕ್ಕೆ ಮತ್ತೆ ನಾಲ್ಕು ಬಂದು ಸೇರಿಕೊಂಡವು. ಒಟ್ಟು ಎಂಟು ಜೇನ್ನೋಣಗಳು ಮನೆಯ ಡ್ರಾಯಿಂಗ್ ರೂಂನಲ್ಲಿ ಗಿರಕಿ ಹೊಡೆಯತೊಡಗಿದವು. ಮನೆಯಲ್ಲಿ ಆತಂಕ. ಎರಡು ಪುಟ್ಟ ಮಕ್ಕಳಿದ್ದಾವೆ. ಅಕಸ್ಮಾತ್ ಕಚ್ಚಿದರೆ ಏನು ಗತಿ ಎಂದು. ಆ ಜೇನ್ನೋಣಗಳ ಪರ್ಸಾನಾಲಿಟಿ ನೋಡಿಯೇ ಭಯವಾಗುತ್ತಿತ್ತು. ಮಕ್ಕಳಿಗೆ ಹೋಗಲಿ ನನಗೆ ಕಚ್ಚಿದರೆ ಗತಿ ಏನು? ಮುಂದಿನ ಒಂದು ವಾರಕ್ಕೆ ಡೇಟ್ ಕೊಟ್ಟಿದ್ದೇನೆ. ಮುಖ ಊದಿಸಿಕೊಂಡು ಕ್ಯಾಮೆರಾ ಎದುರು ನಿಲ್ಲಲಾದೀತೆ ಎಂಬ ಯೋಚನೆ ನನ್ನ ಮನಸ್ಸಿನಲ್ಲಿ ಸಾಗಿತ್ತು. ನಾನು ಅವುಗಳನ್ನು ಓಡಿಸುವ ಉಪಾಯ ಯೋಚಿಸುತ್ತಿರುವಂತೆ ಅವುಗಳನ್ನು ಕೊಲ್ಲುವ ಹುಕುಂ ಮನೆಯ ಉಳಿದ ಸದಸ್ಯರಿಂದ ಜಾರಿಯಾಯಿತು. ಆದರೆ ಕೊಲ್ಲಲು ನನಗೆ ಮನಸ್ಸಾಗಲಿಲ್ಲ. ಹೀಗಾಗಿ ಅವುಗಳನ್ನು ರೂಂನಿಂದ ಗಡಿಪಾರು ಮಾಡುವ ಪ್ರಯತ್ನ ಶುರುಮಾಡಿದೆ. ಪೇಪರ್ ನಿಂದ ಹೊರಹಾಕುವುದು, ಲೈಟ್ ಆಫ್ ಮಾಡಿ ಹೊರಗಿನ ಲೈಟ್ ಹಾಕಿ ಅಲ್ಲಿ ಹೋಗುವಂತೆ ಮಾಡುವುದು, ಎಲ್ಲವನ್ನೂ ಮಾಡಿದೆ. ಆದರೆ ನನ್ನ ಪ್ರಯತ್ನಕ್ಕೆ ನಿರೀಕ್ಷಿತ ಫಲ ಸಿಗಲಿಲ್ಲ. ಫಲ ಸಿಗುವುದು ಹೋಗಲಿ ನನ್ನ ಪ್ರಯತ್ನದಿಂದ ಜೇನ್ನೋಣಗಳು ಸ್ವಲ್ಪ ರಾಂಗ್ ಆದಂತೆ ಬಿಹೇವ್ ಮಾಡತೊಡಗಿದವು.

ಕೊನೆಗೆ ನನ್ನ ಬಳಿ ಯಾವುದೇ ಉಪಾಯವಿರಲಿಲ್ಲ. ಸೀದಾ ಹೋಗಿ ಕಸಬರಿಗೆ ಹಾಗೂ ಹಿಟ್ ತಂದೆ. ಕಸಬರಿಗೆಯಿಂದ ಒಂದೊಂದನ್ನೇ ಹಿಡಿದು, ಹೊಡೆದು, ಹಿಟ್ ಸಿಂಪಡಿಸಿ ಎಂಟೂ ಜೇನ್ನೋಣಗಳನ್ನು ಕೊಂದು ಹಾಕಿದೆ. ಅಂದು ಯಾಕೋ ಯೂಪಿ ಆಂಕರ್ ನೆನಪಾದ…..ಅದಾದ ನಂತರ ಜೇನುತುಪ್ಪವನ್ನು ನೆಕ್ಕುವ ಧೈರ್ಯ ನನಗೆ ಇದುವರೆಗೂ ಆಗಿಲ್ಲ……

Advertisements

ನಂಬಲರಿಯರೀ ಲೋಕದ ರಿಪೋರ್ಟರ್ ಗಳು….

ಇಲೆಕ್ಟ್ರಾನಿಕ್ ಮೀಡಿಯಾ ಎನ್ನುವುದು ಟೀಮ್ ವರ್ಕ್. ಇಲ್ಲಿ ಪರಸ್ಪರ ಸಹಕಾರ, ಸಹಾಯ, ಬೆಂಬಲ ಇಲ್ಲದಿದ್ದರೆ ಸ್ಟೋರಿ ಮಾಡುವುದು ಸಾಧ್ಯವಿಲ್ಲ. ಇವೆಲ್ಲಕ್ಕಿಂತ ಹೆಚ್ಚಾಗಿ ರಿಪೋರ್ಟರ್ – ಕ್ಯಾಮರಾಮನ್, ರಿಪೋರ್ಟರ್ – ಡ್ರೈವರ್, ಕ್ಯಾಮರಾಮನ್-ಡ್ರೈವರ್ ಹೀಗೆ ಯಾರ್ಯಾರು ಸ್ಟೋರಿ ಮಾಡಲು ಫೀಲ್ಡ್ ಗೆ ಹೋಗುತ್ತಾರೋ ಅವರಲ್ಲಿ ಪರಸ್ಪರ ನಂಬುಗೆ ಎಂಬುದು ಇಲ್ಲದಿದ್ದರೆ ಉತ್ತಮ ಸ್ಟೋರಿ ಮಾಡುವುದು ಸಾಧ್ಯವೇ ಇಲ್ಲ. ಸಾಫ್ಟ್ ಸ್ಟೋರಿ ಮಾಡುವಾಗ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ ಬ್ರೇಕಿಂಗ್ ನ್ಯೂಸ್, ಎಕ್ಸಕ್ಲೂಸಿವ್ ನ್ಯೂಸ್ ಕವರ್ ಮಾಡಲು ಹೋಗುವ ಸಂದರ್ಭದಲ್ಲಿ ಮಾತ್ರ ನಂಬುಗೆ, ವಿಶ್ವಾಸಕ್ಕೆ ಸಂಬಂಧಿಸಿದಂತೆ ಯಡವಟ್ಟುಗಳಾಗುತ್ತವೆ. ರಿಪೋರ್ಟರ್ ಹೇಳುವ ಲೋಕೆಷನ್ ಆಧರಿಸಿ ಡ್ರೈವರ್ ಅಥವಾ ಕ್ಯಾಮರಾಮನ್, ರೈವಲ್ ಚ್ಯಾನಲ್ ಗೆ ಸುದ್ದಿ ಲೀಕ್ ಮಾಡಿರುವ ಘಟನೆಗಳು ಸಾಕಷ್ಟು ನಡೆದಿವೆ. (ರಿಪೋರ್ಟರ್ ಗಳೂ ಸುದ್ದಿ ಲೀಕ್ ಮಾಡುವುದು ಹೊಸದಲ್ಲ ಬಿಡಿ…:-)) ಹೀಗಾಗಿ ಈ ರಿಪೋರ್ಟರ್ ತಲುಪುವ ಮೊದಲೇ ಅಲ್ಲಿ ರೈವಲ್ ಚ್ಯಾನಲ್ ನ ಟೀಮ್ ಸ್ವಾಗತಿಸಲು ನಿಂತಿರುತ್ತದೆ. ಇದೆಲ್ಲವೂ ರಿಪೋರ್ಟರ್, ಕ್ಯಾಮರಾಮನ್ ಹಾಗೂ ಡ್ರೈವರ್  ಪರಸ್ಪರ ಯಾವ ರೀತಿಯ ರಾಪೋ ಇಟ್ಟುಕೊಳ್ಳುತ್ತಾರೆ ಎಂಬುದರ ಮೇಲೂ ಅವಲಂಬಿತವಾಗಿರುತ್ತದೆ.

ಈಟಿವಿಯಲ್ಲಿ ಒಂದಾನೊಂದು ಕಾಲದಲ್ಲಿ ನಡೆದ ಘಟನೆ…..

ಬ್ರೇಕಿಂಗ್ ನ್ಯೂಸ್ ಸಲುವಾಗಿ ವಿಶ್ವಾಸ ಬ್ರೇಕ್ ಮಾಡಬೇಕೆ?

ಆಗಷ್ಟೇ ಒಂದು ಬ್ರೇಕಿಂಗ್ ನ್ಯೂಸ್ ಕ್ರೈಮ್ ರಿಪೋರ್ಟರ್ ನ ಕಿವಿಗೆ ಬಿದ್ದಿತ್ತು. ಆತ ಓಡೋಡಿ ಕ್ಯಾಮೆರಾ ಸೆಕ್ಷನ್ ಗೆ ಬಂದವನೇ ಕ್ಯಾಮರಾಮನ್ ನನ್ನು ಕರೆದುಕೊಂಡು ಗಾಡಿಯೇರಿದ. ಕ್ಯಾಮರಾ ಎಲ್ಲಿಗೇ ಹೋಗಲಿ, ಅದು ಆಫೀಸ್ ನಿಂದ ಹೊರಹೋಗುವ ಮೊದಲು ಕ್ಯಾಮರಾ ಮೂವ್ ಮೆಂಟ್ ಪುಸ್ತಕದಲ್ಲಿ ಕ್ಯಾಮೆರಾ ಎಲ್ಲಿ ಹೋಗುತ್ತಿದೆ, ಯಾವ ಸ್ಟೋರಿಗೆ ಹೋಗುತ್ತಿದೆ, ರಿಪೋರ್ಟರ್ ಯಾರು ಮುಂತಾದ ವಿವರಗಳು ದಾಖಲಾಗಬೇಕು. ಆದರೆ ರಿಪೋರ್ಟರ್ ಆಸಾಮಿ ಭಯಂಕರ ಜೋಷ್ ನಲ್ಲಿದ್ದ. ಬ್ರೇಕಿಂಗ್ ನ್ಯೂಸ್ ತಾನೆ?  ಎಲ್ಲಿ ಹೋಗುತ್ತಿರುವುದಾಗಿ ಆತ ಬಾಯಿಬಿಡಲಿಲ್ಲ. ರಿಪೋರ್ಟರ್ ಗೆ ಕ್ಯಾಮರಾಮನ್ ಮೇಲಾಗಲಿ, ಡ್ರೈವರ್ ಮೇಲಾಗಲಿ ವಿಶ್ವಾಸವಿರಲಿಲ್ಲ. ಹೀಗಾಗಿ ಕ್ಯಾಮರಾಮನ್ ಗೆ ಸ್ಟೋರಿ ಬ್ರೀಫ್ ಮಾಡಲಿಲ್ಲ, ಡ್ರೈವರ್ ಗೆ ಲೊಕೆಷನ್ ಹೇಳಲಿಲ್ಲ. ಬದಲಾಗಿ, “ಹಂ….ರೈಟ್ ಹೋಗು, ಹಂ..ಲೆಫ್ಟ್ ಹೋಗು, ಇಲ್ಲಿ ರೈಟ್ ತಗೋ, ಅಲ್ಲಿ ಯೂ ಟರ್ನ್ ಮಾಡು, ಈ ಗೆಟ್ ಒಳಗೆ ಹೋಗು” ಅಂತೆಲ್ಲ ಡ್ರೈವರ್ ಗೆ ಲೈವ್ ಸೂಚನೆಗಳನ್ನು ನೀಡಿದ. ಕ್ಯಾಮರಾಮನ್ ಗೆ ಉರಿದು ಹೋಯಿತು. ಡ್ರೈವರ್ ಗೆ ಕೂಡ. ‘ರಿಪೋರ್ಟರ್ ಗೆ ತಮ್ಮ ಮೇಲೆ ಗುಮಾನಿ. ರೈವಲ್ ಚ್ಯಾನಲ್ ಗೆ ಸುದ್ದಿ ಕೊಡುತ್ತೇವೆ ಅಂತ, ಅದಕ್ಕೇ ಈ ನಾಟಕ’ ಎಂದು ಇಬ್ಬರೂ ಅಂದುಕೊಂಡರು. ಅದ್ಯಾವ ಘನಂದಾರಿ ಬ್ರೇಕಿಂಗ್ ನ್ಯೂಸ್ ನೋಡಿಯೇ ಬಿಡುವ ಎಂದುಕೊಳ್ಳುತ್ತಿರುವಾಗಲೇ ಗಾಡಿ ಸೀದಾ ಬಂದು ನಿಂತಿದ್ದು ಹೈಕೋರ್ಟ್  ಆವರಣದಲ್ಲಿ. ಡ್ರೈವರ್ ಖ್ಖೆಖ್ಖೆಖ್ಖೆ ಎಂದು ರಿಪೋರ್ಟರ್ ಮುಖದ ಮೇಲೆಯೇ ನಕ್ಕುಬಿಟ್ಟ. ಕ್ಯಾಮರಾಮನ್ ಒಳಗೊಳಗೇ ನಕ್ಕ. ಈ ರಿಪೋರ್ಟರ್ ಆಸಾಮಿ ಅಷ್ಟು ಸೀಕ್ರೆಟ್ ಆಗಿ ಹೈಕೋರ್ಟ್ ಗೆ ಬಂದರೆ ಅದಾಗಲೇ ಅಲ್ಲಿ ಹಿಂದಿ ಮತ್ತು ಇಂಗ್ಲೀಷ್ ಮೀಡಿಯಾದ ರಿಪೋರ್ಟರ್ ಗಳು ಬೈಟ್ ತೆಗೆದುಕೊಂಡು ಸುದ್ದಿಕೊಡುತ್ತಿದ್ದರು…….

ನಂಬಲರಿಯರೀ ಲೋಕದ ಮನುಜರು……

ಇಳೇಖಾನ್ ಇನ್ನಿಲ್ಲ…

ಈಟಿವಿಯಲ್ಲಿದ್ದಾಗ ನನ್ನ ಹಿರಿಯ ಸಹೋದ್ಯೋಗಿ ಹಾಗೂ ಮಂಡ್ಯದ ವರದಿಗಾರರಾಗಿದ್ದ ಇಳೇಖಾನ್ ಶ್ರೀಕಂಠ ಇನ್ನಿಲ್ಲ. ಐ ವಿಲ್ ಮಿಸ್ ಯೂ ಸರ್….

ನಿಮ್ಮನ್ನು ಕಳೆದುಕೊಂಡ ಪತ್ರಿಕೋದ್ಯಮ ಬಡವಾಗಿದೆ.....(ಫೋಟೋ - ಅವಧಿ)

ಸಧ್ಯದಲ್ಲಿಯೇ ಈಟಿವಿಯ ಹುಟ್ಟುಹಬ್ಬ…

ನನಗೆ ಇಲೆಕ್ಟ್ರಾನಿಕ್ ಮೀಡಿಯಾದ ಒಳಹೊರಗನ್ನು ಕಲಿಸಿಕೊಟ್ಟ ಈಟಿವಿ ಕನ್ನಡ, ಸಧ್ಯದಲ್ಲೇ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದೆ.  Advanced wishes ETV!!

ಅಯ್ಯಾ ಎಂದರೆ ಸ್ವರ್ಗ…ಎಲವೋ ಎಂದರೆ ನರಕ….

behaviour

ಈ ಪ್ರಸಿದ್ಧ ವ್ಯಕ್ತಿಗಳು ಅಂತ ಇರ್ತಾರೆ. ನಿಮಗೂ ಗೊತ್ತಿರಬಹುದು. ಅವರ ಕುರಿತು ಎರಡು ಘಟನೆಗಳು –

ಘಟನೆ – 1

ಸಾಹಿತ್ಯಕ್ಕೆ ಸಂಬಂಧಿಸಿದ ಸ್ಟೋರಿ ಮಾಡುತ್ತಿದ್ದೆ. ಬೈಟ್ ಸಲುವಾಗಿ ಸಾಹಿತಿಗಳನ್ನು ಹುಡುಕುತ್ತಿದ್ದಾಗ ಹೊಳೆದ ಹೆಸರು ಓರ್ವ ಪ್ರಸಿದ್ಧ ಲೇಖಕರದ್ದು. ಫೋನ್ ನಂಬರ್ ಸಂಪಾದಿಸಿದವನೇ ನಂಬರ್ ಡಯಲ್ ಮಾಡಿದೆ. ಪರಿಚಯ ಮಾಡಿಕೊಂಡೆ. ಸ್ಟೋರಿ ಲೈನ್ ತಿಳಿಸಿ ಬೈಟ್ ಬೇಕೆಂದೆ. ತುಂಬ ಸಂತೋಷಗೊಂಡರು. ಬೈಟ್ ತೆಗೆದುಕೊಳ್ಳಲು ಮನೆಗೇ ಕರೆದರು. ಅಡ್ರೆಸ್ ಕೇಳಿದೆ. ತುಂಬ ವಿವರವಾಗಿ ತಿಳಿಸಿದರು. ಅವರು ಅಡ್ರೆಸ್ ಹೇಳಿದ ರೀತಿ ಹೇಗಿತ್ತೆಂದರೆ ಯಾವುದೇ ಸಂದೇಹವಿಲ್ಲದೆ, ಯಾರನ್ನೂ ಕೇಳದೇ ನಮ್ಮ ಕಾರ್ ಹೋಗಿ ನಿಂತಿದ್ದು ಅವರ ಮನೆ ಮುಂದೆಯೇ. ಕಾರಿನಿಂದ ನಾನು ಮತ್ತು ಕ್ಯಾಮೆರಾಮನ್ ಇಳಿದ ತಕ್ಷಣ, ಹೊರಗೆ ಬಂದವರೇ ಸ್ವಾಗತಿಸಿದರು. ಮಗನ ಪರಿಚಯ ಮಾಡಿಸಿ ಒಳ ಕೋಣೆಗೆ ಕರೆದುಕೊಂಡು ಹೋದರು. ಬೈಟ್ ಕೊಡುವುದಕ್ಕಿಂತ ಮೊದಲು ಕಾಫಿ ಕೊಟ್ಟರು. ಉಭಯಕುಶಲೋಪರಿ ವಿಚಾರಿಸಿದರು. ನನ್ನ ಬಗ್ಗೆ, ಕ್ಯಾಮೆರಾಮನ್ ಬಗ್ಗೆ ಕೇಳಿದರು. ಬೈಟ್ ಬ್ಯಾಕ್ ಗ್ರೌಂಡ್ ಗಾಗಿ ಏನಾದರೂ ಬೇಕಾದರೆ ತೆಗೆದುಕೊಳ್ಳಿ ಎಂದು ಹಲವು ವಸ್ತುಗಳನ್ನು ತೋರಿಸಿದರು.  ನಂತರ ನನಗೆ ಬೇಕಾದಂತೆ ಅಗತ್ಯಕ್ಕೆ ತಕ್ಕ ಹಾಗೆ ಬೈಟ್ ನೀಡಿ “ಸಾಕಾ?” ಎಂದು ಕೇಳಿದರು. ಹೊರಗಡೆ ಹೋಗಿದ್ದ ಅವರ ಪತ್ನಿ ಅಷ್ಟರಲ್ಲಿ ಮನೆಗೆ ಬಂದರು. ಅವರೂ ಕೂಡ ಪ್ರಸಿದ್ಧ ಲೇಖಕಿಯೇ. ಬಂದವರೇ ಸೀದಾ ಅಡಿಗೆ ಮನೆಗೆ ಹೋಗಿ, ತಟ್ಟೆ ತುಂಬ ಉಪ್ಪಿಟ್ಟು ತುಂಬಿಕೊಂಡು ಬಂದು ಉಪಚರಿಸಿದರು. ಆತ್ಮೀಯವಾಗಿ ಬೀಳ್ಕೊಟ್ಟರು. ಅದಾದ ನಂತರ, ಬೈಟ್ ಬೇಕೆಂದಾಗಲೆಲ್ಲ ಅವರನ್ನು ಸಂಪರ್ಕಿಸಿದ್ದೇನೆ. ಮನೆಗೆ ಹೋಗಿದ್ದೇನೆ. ಕನಿಷ್ಠ, ಕಾಫಿಯಿಲ್ಲದೆ ವಾಪಸ್ ಬಂದ ನೆನಪಂತೂ ನನಗಾಗಲಿ, ನನ್ನ ಸಹೋದ್ಯೋಗಿ ವರದಿಗಾರರಿಗಾಗಲಿ ಇಲ್ಲ.

ಘಟನೆ – 2

ಈಟಿವಿಯ ಬುಕ್ ಟಾಕ್ ಕಾರ್ಯಕ್ರಮಕ್ಕೆ ಕವಿಯೊಬ್ಬರ ಬೈಟ್ ಬೇಕಾಗಿತ್ತು. ಫೋನ್ ಮಾಡಿದೆ. ಗತ್ತಿನಿಂದಲೇ ಮಾತನಾಡಿದರು. ಕವಿಗಳಲ್ವಾ ಎಂದುಕೊಂಡು ಸುಮ್ಮನಾದೆ. ಮನೆಗೆ ಹೋದೆವು. ನಮ್ಮ ಕಾರ್ ಬಂದ ತಕ್ಷಣ ಇವರೂ ಸಹ ಹೊರಗೆ ಬಂದರು. ಆದರೆ ನಮ್ಮನ್ನು ಬರಮಾಡಿಕೊಳ್ಳಲಲ್ಲ. ಮನೆಯಲ್ಲಿ ಬೇಡ. ಇಲ್ಲಿ ಬನ್ನಿ ನನ್ನ ಪ್ರತ್ಯೇಕ ರೂಮ್ ಟೆರೇಸ್ ಮೇಲಿದೆ. ಅಲ್ಲಿ ಹೋಗೋಣ ಎಂದು ಕರೆದುಕೊಂಡು ಹೋದರು. ಫೋನ್ ನಲ್ಲೇ ಬುಕ್ ಟಾಕ್ ನ ಥೀಮ್ ಹೇಳಿದ್ದೆ. ಆಯಿತು ಬನ್ನಿ ಎಂದಿದ್ದ ಕವಿ ಮಹಾಶಯರು ನಾನು ಹೋದ ಮೇಲೆ “ಹೇಳಿ ಏನು ಸ್ಟೋರಿ?” ಎಂದರು. ಮತ್ತೆ ಎಲ್ಲ ವಿವರಿಸಿದೆ. “ಸರಿ” ಎಂದು ತಮ್ಮ ಪುಸ್ತಕ ಸಂಗ್ರಹದಿಂದ ಯಾವುದೋ ಪುಸ್ತಕ ತೆಗೆದು. ಓದಲಾರಂಭಿಸಿದರು. ಹದಿನೈದು ನಿಮಿಷ ಕಳೆಯಿತು. ಅಷ್ಟರಲ್ಲಿ ನಾನು ಮತ್ತು ಕ್ಯಾಮರಾಮನ್, ಕುರ್ಚಿಗಳನ್ನು ಜೋಡಿಸಿ ಬ್ಯಾಕ್ ಗ್ರೌಂಡ್ ಸಿದ್ಧಮಾಡಿದೆವು. “ಸರ್ ಇಲ್ಲಿ ಕುಳಿತುಕೊಳ್ಳಬಹುದು” ಎಂದೆ. ಇರ್ರೀ ಸ್ವಲ್ಪ….ಪ್ರೀಪೇರ್ ಆಗ್ಬೇಡ್ವಾ…ಎಂದು ಧಿಮಾಕಿನಿಂದಲೇ ನುಡಿದರು. ನಂತರ ಪುಸ್ತಕದಲ್ಲಿಯೇ ಕಣ್ಣು ನಾಟಿಸಿ “ಯಾವ ಡ್ರೆಸ್ ಹಾಕ್ಕೊಳ್ಳಿ?” ಎಂದು ವಿಚಾರಿಸಿದರು. ನನ್ನ ಉತ್ತಕ್ಕೂ ಕಾಯದೇ, “ಜುಬ್ಬಾ ಹಾಕಿಕೊಳ್ಳುತ್ತೇನೆ. ನಮ್ಮ ಸಾಹಿತಿಗಳ ಯೂನಿಫಾರ್ಮ್ ಅಲ್ವೆ ಅದು” ಎಂದೆನ್ನುತ್ತಾ ಮತ್ತೆ ಕೆಳಗಿಳಿದು ಹೋದರು. ಹೋಗುವಾಗ “ಬರೇ ನನ್ನ ಮೇಲಿನ ಭಾಗವಷ್ಟೇ ಕ್ಯಾಮೆರಾದಲ್ಲಿ ಬರುತ್ತೆ ತಾನೆ?” ಎಂದರು. ಹೌದೆಂದೆ. ಆಸಾಮಿ ಮೇಲೆ ಬಂದಾಗ ಚೌಕುಳಿ ಚೌಕುಳಿ ಲುಂಗಿಯ ಮೇಲೆ ಗರಿಗರಿಯಾದ ಜುಬ್ಬಾ ಹಾಕಿಕೊಂಡು ಪ್ರತ್ಯಕ್ಷರಾದರು. ಶೂಟಿಂಗ್ ಪೂರ್ತಿ ಗತ್ತಿನಿಂದಲೇ ನಡೆದುಕೊಂಡರು. ಬಂದ ಕೆಲಸ ಮುಗಿಸಿ ಹೊರನಡೆದೆ.

ಇದೇ ಕವಿಗಳ ಮನೆಗೆ ನನ್ನ ಸಹೋದ್ಯೋಗಿಯೊಬ್ಬಾಕೆ ಹೋದಾಗ ಕವಿಪತ್ನಿ ಹೊರಗೆ ಬಂದು “ಏನು ಬೇಕು ಏನು ಬೇಕು” ಎಂದು ಆವೇಶದಿಂದ ಕೋಪದಿಂದ ಕೇಳಿದರಂತೆ. ಆಕೆಯ ಅವತಾರ ನೋಡಿ ನನ್ನ ಸಹೋದ್ಯೋಗಿ ಸ್ಪಲ್ಪ ಖಾರವಾಗಿಯೇ ಉತ್ತರಿಸಿದಳಂತೆ. ನಂತರ ಕ್ಯಾಮರಾಮನ್ ಬಳಿ ಹೇಳಿದಳಂತೆ, ಹೇಗೆ ಮಾತಾಡಿದ್ಲು ನೋಡಿ. ನಾನೇನೋ ಅವಳ ಗಂಡನ್ನ ಹಾರಿಸ್ಕೊಂಡು ಹೋಗೋಕೆ ಬಂದಂತೆ ಆಡ್ತಾಳೆ…

ಘಟನೆ – 1 ರ ಸಾಹಿತಿ ದಂಪತಿಯ ಹೆಸರು ಹಂಪನಾ ಎಂದು. ಘಟನೆ – 2 ರ ಕವಿಗಳ ಹೆಸರು…….