ಮೆರೆ ಪಾಸ್ ಕಹಾಂ ಹೈ ಪೆನ್ ಡ್ರೈವ್?

ಬಹಳ ದಿನಗಳ ನಂತರ ನ್ಯಾಷನಲ್ ಚಾನೆಲ್ ನ ಗೆಳತಿಯೊಬ್ಬಳು ಸಿಕ್ಕಿದ್ದಳು.

ನನಗೆ ಯಾವುದೋ ಒಂದು ವಿಶುವಲ್ ಬೇಕಾಗಿದ್ದರಿಂದ ಅವಳಿದ್ದ ಆಫೀಸ್ ಗೆ ಹೋಗಿದ್ದೆ.

ಆದರೆ ನನ್ನ ಪೆನ್ ಡ್ರೈವ್ ಇಟ್ಟುಕೊಳ್ಳಲು ಮರೆತುಬಿಟ್ಟಿದ್ದೆ. ಅಲ್ಲಿಗೆ ಹೋದ ನಂತರ ಜ್ಞಾಪಕಕ್ಕೆ ಬಂತು ಪೆನ್ ಡ್ರೈವ್ ತಂದಿಲ್ಲವೆಂದು.

ಕ್ಯಾಮರಾಮನ್ ತನ್ನ ಬಳಿಯೂ ಪೆನ್ ಡ್ರೈವ್ ಇಲ್ಲವೆಂದ.

ಅಲ್ಲಿಯೇ ಇದ್ದ ಮತ್ತೊಬ್ಬ ರಿಪೋರ್ಟರ್ ನನ್ನ ಗೆಳತಿಗೆ “ತುಮ್ಹಾರೆ ಪಾಸ್ ಕೊಯಿ ಪೆನ್ ಡ್ರೈವ್ ಪಡಾ ಹೋಗಾ ದೇಖ್ ಲೋ” ಎಂದ.

ಅದಕ್ಕೆ ಆಕೆ “ಮೆರೆ ಪಾಸ್ ಕಹಾಂ ಹೈ…ಅಭಿ ತೋ ಐಟಿ ವಾಲೋಂನೆ ಪೆನ್ ಡ್ರೈವ್ ಗಿಫ್ಟ್ ದೇನಾ ಭಿ ಬಂದ್ ಕರದಿಯಾ ಹೈ ನಾ…ರಿಸೆಶನ್ ಕಿ ವಜಹ ಸೆ…”ಎಂದಳು.

ಪತ್ರಕರ್ತರನ್ನೇ ಬೇಸ್ತು ಬೀಳಿಸುವ ಮಹಾನುಭಾವರು!!

ಪತ್ರಕರ್ತರು ಸಾಮಾನ್ಯವಾಗಿ ಬುದ್ಧಿವಂತರು. (ಅಥವಾ ಹಾಗೆಂದು ಅವರು ಅಂದುಕೊಂಡಿರುತ್ತಾರೆ). ಆದರೆ ಇಂತಹ ಪತ್ರಕರ್ತರನ್ನೇ ಬೇಸ್ತು ಬೀಳಿಸುವು ಮಹಾನುಭಾವರು ಕೂಡ ಇರುತ್ತಾರೆ.

ನನ್ನ ಪತ್ರಕರ್ತ ಗೆಳತಿಯೊಬ್ಬಳು ತನ್ನ ಸ್ಪೆಷಲ್ ಸ್ಟೋರಿಗಳಿಂದಾಗಿಯೇ ಪ್ರಸಿದ್ಧಳಾಗಿದ್ದಳು. ಅವಳ ಸ್ಟೋರಿಯ ಪ್ರೋಮೋ ಬಂತೆಂದರೆ ಜರ್ನಲಿಸ್ಟುಗಳು ಕೂಡ ಕುತೂಹಲದಿಂದ ರಾತ್ರಿಯ ಬುಲೆಟಿನ್ ಗೆ ಕಾಯುತ್ತಿದ್ದರು. ಒಟ್ಟಿನಲ್ಲಿ ತಲಿಮ್ಯಾಗ್ ಹೋಡಿಯೂವಂತ ಸ್ಟೋರಿ ಮಾಡ್ತಿದ್ಲ ನೋಡ್ರೀ ಆಕಿ….ಹೀಗಿರಬೇಕಾದರೆ ಯಾರೋ ಆಕೆಯ ಮೊಬೈಲ್ ಗೆ ಕರೆ ಮಾಡಿದ್ದಾರೆ. ಆ ಕಡೆಯಿಂದ ಮಾತನಾಡಿದ ಧ್ವನಿ, “ಮೇಡಂ, ನಾವೊಂದು ಪೋಲ್ಯೂಷನ್ ಫ್ರೀ ವಾಹನವನ್ನು ಡಿಸೈನ್ ಮಾಡಿದ್ದೇವೆ. ಇದರ ವಿಶೇಷತೆಯೆಂದರೆ ಈ ಡಿಸೈನ್ ನಿಂದಾಗಿ ಯಾವುದೇ ಪರಿಸರ ಮಾಲಿನ್ಯವಾಗುವುದಿಲ್ಲ. ದೇಶದಲ್ಲಿಯೇ ಪ್ರಥಮ ಎನ್ನಬಹುದಾದ ಪ್ರಯೋಗ ಇದು. ಈ ವಾಹನದ ಬಳಕೆಯಿಂದ ನಮ್ಮ ಸುತ್ತಮುತ್ತಲಿನ ಹವೆ ಶುದ್ಧವಾಗಿದ್ದು, ಜನರ ಆರೋಗ್ಯಕ್ಕೆ ಕೂಡ ಯಾವುದೇ ತೊಂದರೆಯಾಗುವುದಿಲ್ಲ. ನೀವು ಬಂದು ಸ್ಟೋರಿ ಮಾಡಬೇಕು ಮೇಡಂ” ಎಂದಿದೆ. ಈಕೆಗೆ ಖುಷಿ ಹಾಗೂ ಆಶ್ಚರ್ಯ ಒಟ್ಟೊಟ್ಟಿಗಾಗಿ, “ಯಾವ ಇಂಧನವನ್ನು ಬಳಸುತ್ತಿದ್ದೀರಿ?” ಎಂದು ಕೇಳಿದ್ದಾಳೆ. ಆ ಧ್ವನಿ, “ಪೆಟ್ರೋಲ್ ಅಥವಾ ಡೀಸೆಲ್. ಏನಾದರೂ ಬಳಸಬಹುದು ಮೇಡಂ. ಇಂಧನ ಇಲ್ಲಿನ ಸಮಸ್ಯೆಯೇ ಅಲ್ಲ. ನಮ್ಮ ಡಿಸೈನ್ ನದ್ದೇ ವಿಶೇಷತೆ. ತಾವು ಬರಬೇಕು” ಎಂದು ಮತ್ತೊಮ್ಮೆ ರಿಕ್ವೆಸ್ಟ್ ಮಾಡಿದೆ. ಸರಿ ಒಂದೊಳ್ಳೆ ಸ್ಟೋರಿ ಸಿಕ್ಕಿತು ಎಂದು ಹಿಗ್ಗೆ ಹೀರೆಕಾಯಿಯಾದ ನನ್ನ ಗೆಳತಿ ಕ್ಯಾಮೆರಾಮನ್ ನನ್ನು ಎತ್ತಾಕಿಕೊಂಡು ಸೀದಾ ಅವರು ಹೇಳಿದ ಜಾಗಕ್ಕೆ ಹೋಗಿದ್ದಾಳೆ. ಅವಳನ್ನು ಭರಪೂರ ಆದರಿಂದ ಸ್ವಾಗತಿಸಿದ ಮೂರ್ನಾಲ್ಕು ಮಂದಿ ಪುಟ್ಟದಾದ ಆಟಿಕೆಯ ಬಸ್ಸನ್ನು ತೋರಿಸಿದ್ದಾರೆ. ಆ ಬಸ್ ನ ಡಿಸೈನ್ ಹೀಗಿತ್ತು. (ಇದು ನಾನು ಬರೆದಿರುವ ಚಿತ್ರ. ನೀವು ಕಲ್ಪಿಸಿಕೊಳ್ಳಲು ಅನುಕೂಲವಾಗಲಿ ಎಂದು).

Bus

“ನೋಡಿ ಮೇಡಂ ಈ ಬಸ್. ಇದರ ಸೈಲೆನ್ಸರ್ ಹೀಗೆ ಹಿಂದೆ ಬಂದು ಹೀಗೆ ಬಸ್ ಗಿಂತ ಮೇಲಕ್ಕೆ ಹೋಗುತ್ತದೆ. ಹೀಗಾಗಿ ಬಸ್ ಹೊರಹಾಕುವ ಹೊಗೆ ಸೀದಾ ಮೇಲಕ್ಕೆ ಹೋಗುತ್ತದೆ. ಬಸ್ ಹಿಂದೆ ಬರುವ ವಾಹನಗಳಿಗೆ, ಟೂ ವೀಲರ್ ನವರಿಗೆ ಇದರ ಹೊಗೆ ತಾಗುವುದೇ ಇಲ್ಲ. ಇದು ಕೇವಲ ಬಸ್ ನ ಪ್ರೋಟೋಟೈಪ್. ಬೇಕಾದರೆ ಇದೇ ಮೆಥೆಡ್ಡನ್ನು ಎಲ್ಲ ವಾಹನಗಳಿಗೆ ಬಳಸಬಹುದು. ಈ ಡಿಸೈನ್ ನ ಮತ್ತೊಂದು ಅನುಕೂಲ ಎಂದರೆ…..”ಎಂದೆಲ್ಲ ಕೊರೆದಿದ್ದಾರೆ.

ನನ್ನ ಪತ್ರಕರ್ತ ಗೆಳತಿ ಬೇಸ್ತು ಬಿದ್ದಿದ್ದಾಳೆ. ಹೇಗಿದ್ದಾರೆ ಪತ್ರಕರ್ತರನ್ನು ಬೇಸ್ತು ಬೀಳಿಸುವ ಮಹಾನುಭಾವರು?

ಪಾರಿವಾಳಗಳಲ್ಲಿದ್ದುದ್ದು ಪತ್ರಕರ್ತರಲ್ಲಿಲ್ಲ…….

ddddಫೋಟೊ ಕೃಪೆ – ದಿ ಹಿಂದೂ

ವಿವಾದಿತ ಧರ್ಮಪ್ರಚಾರಕ ಬೆನ್ನಿಹಿನ್ ಬೆಂಗಳೂರಿಗೆ ಬಂದ ಸಂದರ್ಭ. ಹಿಂದೂ ಸಂಘಟನೆಗಳು, ಪವಾಡ ಬಯಲು ಗುಂಪಿನವರು, ವಿಚಾರವಾದಿಗಳು ಸೇರಿದಂತೆ ಹತ್ತು ಹಲವು ಸಂಸ್ಥೆಗಳ ವಿರೋಧದ ನಡುವೆಯೂ ಅಲ್ಟ್ರಾ ಸೋಫಿಸ್ಟಿಕೇಟೆಡ್, ಅಲ್ಟ್ರಾ ಮಾಡರ್ನ್  ಸಿಲಿಕಾನ್ ಸಿಟಿಯಲ್ಲಿ ಬೆನ್ನಿಹಿನ್ ಕೇವಲ ಜೀಸಸ್ ನಲ್ಲಿ ಪ್ರಾರ್ಥನೆ ಮಾಡುವ ಮೂಲಕ ಕ್ಯಾನ್ಸರ್ ಗುಣಪಡಿಸುತ್ತಿದ್ದ, ಅಂಗವಿಕಲರ ಕೈಕಾಲುಗಳನ್ನು ಸರಿಪಡಿಸುತ್ತಿದ್ದ, ತೆವಳುತ್ತ ಬಂದವರು ಕುಪ್ಪಳಿಸುತ್ತ ಹೋಗುತ್ತಿದ್ದರು. ಹೀಗೆಲ್ಲ ಹುಚ್ಚಾಟ ನಡೆದಿತ್ತು. ಮಾಧ್ಯಮಗಳಂತೂ ಆತನನ್ನು ಹಿಗ್ಗಾಮುಗ್ಗಾ ಝಾಡಿಸುತ್ತಿದ್ದವು.

ಅಂದು ಮೂರು ದಿನಗಳ ಪ್ರೇ ಫಾರ್ ಇಂಡಿಯಾ ಸಮಾವೇಶದ ಕೊನೆ ದಿನ. ಭಾರೀ ಜನಸ್ತೋಮ. ಸಮಾವೇಶ ಮುಗಿದ ತಕ್ಷಣ ಬೆನ್ನಿಹಿನ್ ತನ್ನ ವಿಶೇಷ ಚಾರ್ಟರ್ಡ್ ಫ್ಲೈಟ್ ನಲ್ಲಿ ಬೌನ್ಸರ್ ಗಳ ಸಹಿತ ವಿಮಾನವೇರುವವನಿದ್ದ. ಆದರೆ ಪತ್ರಕರ್ತರು ತೀರ ಒತ್ತಡ ಹೇರಿದ್ದರಿಂದ ಸುದ್ದಿಗೋಷ್ಟಿ ನಡೆಸಲು ಒಪ್ಪಿಕೊಂಡ. ನಾವೆಲ್ಲ ಒಂದೆಡೆ ಸೇರಿ ಜನರ ಮದ್ಯೆ ನುಜ್ಜುಗೊಜ್ಜಾಗಿ (ನುಜ್ಜುಗುಜ್ಜಾಗಿಯಲ್ಲ) ಅಂತೂ ಸ್ಟೇಜ್ ಹಿಂಭಾಗದಲ್ಲಿ ಆತನಿಗೆಂದು ನಿರ್ಮಿಸಲಾಗಿದ್ದ ತಾತ್ಕಾಲಿಕ ರೂಮ್ ನ ಎದುರು ಕಾಯುತ್ತ ನಿಂತೆವು. ಸುಮಾರು ಒಂದು ಗಂಟೆ ಕಾಯಿಸಿದ ಬಳಿಕ ಪ್ರೇ ಫಾರ್ ಇಂಡಿಯಾದ ಪ್ರತಿನಿಧಿಯೊಬ್ಬ ಬಂದು, “Now I will read out the names of the media. Those can come inside” ಎಂದ. ತಕ್ಷಣ ನಮ್ಮ ಗುಂಪಿನಲ್ಲಿ ಅಸಹನೆಯುಂಟಾಯಿತು. ಇದೆಂತಹ ಪತ್ರಿಕಾಗೋಷ್ಟಿ. ಸಮಾವೇಶಕ್ಕೆ ಬರುವಾಗಲೇ 28 ಬಾರಿ ಸೆಕ್ಯುರಿಟಿ ಚೆಕ್ ಗೆ ಒಳಗಾಗಿ ಬಂದಿದ್ದೇವೆ. ಇದೇನಿದು ಹೊಸ ಆಟ ಎಂದೆಲ್ಲ ಕೇಳಿದೆವು. ತಮಗೆ ಬೇಕಾದ ಮಾಧ್ಯಮಗಳನ್ನಷ್ಟೇ ಒಳಗೆ ಕರೆಯುವುದು ಇದರ ಉದ್ದೇಶ ಎಂದು ತಕ್ಷಣ ಅರ್ಥವಾಯಿತು. ಮೊದಮೊದಲು ಎಲ್ಲರೂ ಇದರ ವಿರುದ್ಧ ಪ್ರತಿಭಟಿಸಿದೆವು. ತಮ್ಮ ಮಾಧ್ಯಮದ ಹೆಸರು ಲಿಸ್ಟ್ ನಲ್ಲಿ ಇರದಿದ್ದರೆ ಎಂಬ ಆತಂಕ ಪ್ರತಿಯೊಬ್ಬರಲ್ಲೂ ಇತ್ತಲ್ಲ. ಆದರೆ ಪ್ರತಿಭಟನೆ ಲೆಕ್ಕಿಸದೆ ಆ ಪ್ರತಿನಿಧಿ ಹೆಸರು ಕೂಗಿದ. Times of India….ಸರಿ ಟೈಮ್ಸ್ ಆಫ್ ಇಂಡಿಯಾ ಹುಡುಗಿ “ಓ ಐಮ್ ರೈಟ್ ದೇರ್” ಎಂದು ನುಲಿಯುತ್ತ ಪತ್ರಕರ್ತರ ಹಿಂಡನ್ನು ಬಿಟ್ಟು ಒಳ ಹೋಗಿಬಿಟ್ಟಳು. ಡೆಕ್ಕನ್ ಹೆರಾಲ್ಡ್….. ಮತ್ತೆ ಕೂಗಲಾಯಿತು. “ಯಾ ಯಾ ಐ ಆಮ್ ಹಿಯರ್” ಎಂದು ಗಂಭೀರ ತಲೆಯೊಂದು ಮತ್ತೆ ಒಳನುಗ್ಗಿತು. ಪ್ರತಿಭಟನೆ ಮಾಡುತ್ತಿದ್ದ ಪತ್ರಕರ್ತರು ಒಬ್ಬೊಬ್ಬರಾಗಿ ತಂಡ ಬಿಟ್ಟು ತಮ್ಮ ಹೆಸರು ಬಂದಂತೆಲ್ಲ ಒಳಹೋಗಿಬಿಟ್ಟರು. ಇದು ಅನ್ಯಾಯ, ಇದು ಸರಿಯಲ್ಲ, ಪಿಕ್ ಅಂಡ್ ಚೂಸ್ ಯಾಕೆ, ಎಲ್ಲರನ್ನೂ ಒಳಗೆ ಕರೆಯಬೇಕು, ಇಲ್ಲದಿದ್ದರೆ ಪತ್ರಿಕಾಗೋಷ್ಷಿಯೇ ಬೇಡ ಎಂದೆಲ್ಲಾ ಹಾರಾಡಿದ್ದವರು ಕೋಲೆ ಬಸವನಂತೆ ಬೆನ್ನಿಹಿನ್ ರೂಮೊಳಗೆ ಹೊರಟುಬಿಟ್ಟಿದ್ದರು.

ಕೊನೆಗೆ ಉಳಿದಿದ್ದು ಕೇವಲ ಇಬ್ಬರು. ಈ ಟಿವಿಯಿಂದ ನಾನು ಹಾಗೂ ಉದಯ ಟಿವಿಯಿಂದ ಮತ್ತೊಬ್ಬ ಪತ್ರಕರ್ತ. ನಮ್ಮನ್ನು ಹೊರಗಿಟ್ಟಿರುವ ಕಾರಣ ಸ್ಪಷ್ಟವಾಗಿ ಹೊಳೆಯಿತು. ಕ್ರೈಮ್ ಡೈರಿ ಹಾಗೂ ಕ್ರೈಮ್ ಸ್ಟೋರಿಗಳಲ್ಲಿ ಬೆನ್ನಿಹಿನ್ನನ್ನು ಹಿಗ್ಗಾಮುಗ್ಗಾ ಝಾಡಿಸಲಾಗುತ್ತಿತ್ತು. ಆತ ಬರುವ ಮೊದಲು ಹಲವು ಕ್ರಿಶ್ಚಿಯನ್ ಮುಖಂಡರ ಬೈಟ್ ತೆಗೆದುಕೊಂಡಿದ್ದೆನಾದ್ದರಿಂದ ಅವೆಲ್ಲವನ್ನೂ ಕ್ರೈಮ್ ಡೈರಿಯಲ್ಲಿ ತೋರಿಸಿ, ಮಂಗಳಾರತಿ ಎತ್ತಲಾಗುತ್ತಿತ್ತು. ಇನ್ನು ಬೆನ್ನಿಹಿನ್ ಬೈಟ್ ಸಿಕ್ಕಿಬಿಟ್ಟರೆ ಮತ್ತಷ್ಟು ಹಿಂಡುತ್ತಾರೆ ಎಂದು ಭಾವಿಸಿದ ಸಂಘಟಕರು ನಮ್ಮನ್ನು ಒಳಬಿಟ್ಟಿರಲಿಲ್ಲ.

ಆಗ ಶುರುಹಚ್ಚಿಕೊಂಡೆ ನೋಡಿ. ಕರಿ ಐದರಲ್ಲಿ ದನಿ ಎತ್ತರಿಸಿ You people are cheat. You are coming in between press freedom. How can you do this? Is this the way you handle press? If you are really true, what is stopping you from allowing us? Jesus won’t forgive you for doing this….” ಎಂದೆಲ್ಲ ಕೂಗಾಡಿಬಿಟ್ಟೆ. ಬಹುಶಃ ನನ್ನ ಕೊನೆಯ ವಾಕ್ಯ ಕೆಲಸ ಮಾಡಿತು ಎನಿಸುತ್ತದೆ. ಅಮೇರಿಕನ್ ಮೂತಿಯೊಂದು ಬಂದು “Hey my friend….It was just a matter of space you know. Actually there is no enough space inside the room. That’s why we decided to bring in few press people. I will make space for you. Come Friend Come” ಎಂದು ಒಳಗೆ ಕರೆದುಕೊಂಡು ಹೋಯಿತು. ನಂತರ ಪತ್ರಿಕಾಗೋಷ್ಟಿ ನಡೆದು, ಬೆನ್ನಿಹಿನ್ನು ನನ್ನ ತಲೆ ಮೇಲೆ ಕೈಯಿಟ್ಟು ಆಶೀರ್ವದಿಸಿದ ಎಂಬುದು ಬೇರೆ ವಿಷಯ.

ಆದರೆ ಪತ್ರಕರ್ತರು ಮಾತ್ರ ಒಟ್ಟಾಗಿ ನಿಲ್ಲುವುದಿಲ್ಲವಲ್ಲ ಎಂಬ ವಿಷಯ ಮಾತ್ರ ನನ್ನನ್ನು ತುಂಬ ಡಿಸ್ಟರ್ಬ್ ಮಾಡಿತು. ತಾವು ಸೇಫಾಗಿದ್ದರೆ ಸಾಕು, ಉಳಿದವರು ಹಾಳು ಬಿದ್ದು ಹೋಗಲಿ ಎಂಬ ಭಾವ ಇನ್ನೂ ಇದೆ. ಪಾರಿವಾಳಗಳಲ್ಲಿದ್ದುದ್ದು ಪತ್ರಕರ್ತರಲ್ಲಿಲ್ಲವಲ್ಲ, ದುರಾದೃಷ್ಟ..