ಹರತಾಳು ಹಾಲಪ್ಪ ಕೃತ್ಯಕ್ಕೆ ಧಿಕ್ಕಾರವಿದೆ….

ಥೂ ಥೂ ಥೂ…..ಹಾಲಪ್ಪ. ಹಾಲಪ್ಪನ ಕೃತ್ಯಕ್ಕೆ ಹಾಗೂ ಬಿಜೆಪಿ ಸರ್ಕಾರ ತನ್ನ ಶಾಸಕನನ್ನು ರಕ್ಷಿಸುತ್ತಿರುವ ಪರಿಗೆ ನನ್ನ ಧಿಕ್ಕಾರವಿದೆ….ಚಂದ್ರಾವತಿ ಈ ಶಾಕ್ ನಿಂದ ಹೊರಬರುವಂತಾಗಲಿ, ಹಾಲಪ್ಪನ ವಿರುದ್ಧ ಹೋರಾಡುವ ಶಕ್ತಿ ದೇವರು ಅವರಿಗೆ ಕರುಣಿಸಲಿ.

Advertisements

ಅದನ್ನು ಪುಸ್ತಕ ಬಿಡುಗಡೆ ಕಾರ್ಯಕ್ರಮ ಎನ್ನವುದಕ್ಕಿಂತ….

ಅದನ್ನು ಪುಸ್ತಕ ಬಿಡುಗಡೆ ಕಾರ್ಯಕ್ರಮ ಎನ್ನವುದಕ್ಕಿಂತ ಪತ್ರಕರ್ತರು ಹಾಗೂ ರಾಜಕಾರಣಿಗಳ ಆತ್ಮಾವಲೋಕನ ಕಾರ್ಯಕ್ರಮ ಎಂದರೆ ಹೆಚ್ಚು ಸೂಕ್ತವಾದೀತು. ‘ವಿಜಯ ಕರ್ನಾಟಕ’ದ ಚೀಫ್ ರಿಪೋರ್ಟರ್ ಪಿ. ತ್ಯಾಗರಾಜ್ ಅವರ ಮೂರು ಪುಸ್ತಕಗಳು ಒಳಸುಳಿ, ದಂಡಪಿಂಡಗಳು ಹಾಗೂ ಚಾಟಿಚಟಾಕಿ ನಿನ್ನೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆಗೊಂಡವು. ಪುಸ್ತಕಗಳನ್ನ ಬಿಡುಗಡೆ ಮಾಡಿದವರು, ರಾಜಕೀಯದಲ್ಲಿದ್ದೂ ಇನ್ನೂ ಮಾನ-ಮರ್ಯಾದೆ ಇಟ್ಟುಕೊಂಡಿರುವ ಕಾಂಗ್ರೆಸ್ ನ ಸಿದ್ದರಾಮಯ್ಯ, ಬಿಜೆಪಿಯ ಸುರೇಶ್ ಕುಮಾರ್ ಹಾಗೂ ಜೆಡಿಎಸ್ ನ ನಾಣಯ್ಯ. ಕವಿವರ್ಯ ಸಿದ್ದಲಿಂಗಯ್ಯ ಮಾತನಾಡಿದ ಬಳಿಕ ಅಖಾಡಾಕ್ಕೆ ಇಳಿದ್ದದು ವಿಕ ಸಂಪಾದಕ ವಿಶ್ವೇಶ್ವರ ಭಟ್.

ಸದಾ ನಗುಮೊಗದ, ಸುತ್ತಲಿದ್ದವರನ್ನು ನಕ್ಕುನಗಿಸುವ, ತಮ್ಮ ಮಾತಿನಲ್ಲಿ ಜ್ಞಾನಸುಧೆಯನ್ನೇ ಹರಿಸುವ ವಿಶ್ವೇಶ್ವರ್ ಭಟ್ ಮಾತ್ರ ನಿನ್ನೆ ಮಾಡಿದ ಭಾಷಣದಲ್ಲಿ ಭ್ರಷ್ಟ ರಾಜಕಾರಣಿಗಳ ಹಚಡಾ ತೆಗೆದಿಟ್ಟರು. ಕಳೆದ ಐದು ವರ್ಷಗಳ ರಾಜಕಾರಣ – ಧರ್ಮಸಿಂಗ್-ಸಿದ್ದು ಕಾಂಬಿನೇಷನ್ ಸರ್ಕಾರ – ದಿಂದ ಆರಂಭಿಸಿ ಪ್ರಸಕ್ತ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿರುವ ರಾಜಕೀಯ ಹಾದರವನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಚುನಾವಣೆಯಲ್ಲಿ ಕುಡಗೋಲು ತೆಗೆದುಕೊಂಡು, ಕೋಟಿಗಟ್ಟಲೆ ಸುರಿದು ಹೊಡೆದಾಡಿ, ಚುನಾವಣೆ ಬಳಿಕ ಅಧಿಕಾರಕ್ಕಾಗಿ ಒಂದಾದ ಕಾಂಗ್ರೆಸ್-ಜೆಡಿಎಸ್, ನಂತರ ಬಿಜೆಪಿ-ಜೆಡಿಎಸ್, ಸಂಪಂಗಿ ಪ್ರಹಸನ, ಅರ್ಧ ಕರ್ನಾಟಕ ಅತಿವೃಷ್ಟಿಯಿಂದಾಗಿ ನೀರಿನಲ್ಲಿ ಮುಳುಗಿದ್ದರೆ ಕುರ್ಚಿಗಾಗಿ ರೆಸಾರ್ಟ್ ಗಳಲ್ಲಿ ಈಜುಹೊಡೆಯುತ್ತಿದ್ದ ಶಾಸಕರು, ಬಿಜೆಪಿಯ ನೀತಿಗೆಟ್ಟ ಆಪರೇಷನ್ ಕಮಲ, ರೇಣುಕಾ ಮಹಾತ್ಮೆ ಎಲ್ಲವನ್ನೂ ಭಟ್ ವಿವರಿಸಿದರು. ಇಷ್ಟೆಲ್ಲ ಮಾಡಲು ಈ ರಾಜಕಾರಣಿಗಳಿಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದಾಗ ರವೀಂದ್ರ ಕಲಾಕ್ಷೇತ್ರದಲ್ಲಿ ಫುಲ್ ಕರತಾಡನ.

“ರಾಜ್ಯವೆಂದರೆ ಮನೆಯಿದ್ದಂತೆ. ಕುರ್ಚಿ ಉಳಿಸಿಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಅಯೋಗ್ಯರನ್ನು ಮಂತ್ರಿ ಮಾಡುತ್ತಿದ್ದಾರಲ್ಲ…ಮನೆ ನಡೆಸಬೇಕೆಂದು ನಾವು ಮನೆಮಗಳನ್ನು ಹಾದರಕ್ಕೆ ಕಳಿಸುತ್ತೇವೆಯೆ?” ಎಂದು ಭಟ್ ಕೇಳಿದಾಗ ಪ್ರೇಕ್ಷಕರಿಂದ ಸಂಪೂರ್ಣ ಸಪೋರ್ಟ್. ‘ರೇಣುಕಾ ಮಹಾತ್ಮೆ’ಯನ್ನು ಟೀಕಿಸಲಾರಂಭಿಸಿದ್ದ ಕಾಂಗ್ರೆಸ್, ಎನ್ ಡಿ ತಿವಾರಿ ಪ್ರಕರಣ ಹೊರಬಂದ ಕೂಡಲೇ ಬಾಲ ಮುದುರಿಕೊಂಡದ್ದು, ಸುಭಾಷ್ ಭರಣಿ ಸಾಹೇಬರು ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಒಂದೇ ದಿನ ಮೂರು ಪಾರ್ಟಿಗಳನ್ನು ಬದಲಿಸಿದ್ದು, ನಿನ್ನೆ ಕಾಂಗ್ರೆಸ್-ಜೆಡಿಎಸ್ ನಲ್ಲಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ನಾಲಾಯಕ್ ಎಂದು ಬಣ್ಣಿಸುತ್ತಿದ್ದವರು, ಇಂದು ಅದೇ ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ರಾತ್ರೋರಾತ್ರಿ ಮಂತ್ರಿಗಳಾಗಿ ಮೆರೆದಿದ್ದು – ಹೀಗೆ ಪ್ರತಿಯೊಂದನ್ನು ಕೆದಕುತ್ತ ಹೋದಾಗ ಸುರೇಶ್ ಕುಮಾರ್, ಸಿದ್ದರಾಮಯ್ಯ, ನಾಣಯ್ಯ ‘ಮೌನವೇ ನಮ ತಾಯಿ-ತಂದೆ, ಮೌನವೇ ನಮ ಬಂಧು ಬಳಗ’ ಎಂಬಂತೆ ಕುಳಿತಿದ್ದರು.

ಭಟ್ಟರ ನಂತರ ಬ್ಯಾಟಿಂಗ್ ಗೆ ಇಳಿದದ್ದು ನಾಣಯ್ಯ. ವಿಶ್ವೇಶ್ವರ್ ಭಟ್, ನಾಣಯ್ಯನವರನ್ನು ಬಣ್ಣಿಸಿದ್ದು ಪ್ರಸ್ತುತ ರಾಜಕಾರಣದ ಸಾಕ್ಷಿಪ್ರಜ್ಞೆ ಎಂದು. ಅದು ನಿಜವೂ ಹೌದು. ನಾಣಯ್ಯ ಮಾತನಾಡುತ್ತ ತಾವು ಮುಂದಿನ ಬಾರಿ ಚುನಾವಣೆ ಎದುರಿಸುವುದಿಲ್ಲ. ಕಾರಣ ತಮ್ಮ ಬಳಿ ದುಡ್ಡಿಲ್ಲ. ಅಸೆಂಬ್ಲಿ ಚುನಾವಣೆ ಎದುರಿಸಲು ಕನಿಷ್ಠ 10 ಕೋಟಿ ಬೇಕು. ನಾನೆಲ್ಲಿಂದ ತರಲಿ ಎಂದು ಪ್ರಶ್ನಿಸಿದರು. ರಾಜಕಾರಣಿಗಳಷ್ಟೇ ಅಲ್ಲ ಪತ್ರಕರ್ತರೇನೂ ಸಾಚಾಗಳಾಗಿ ಉಳಿದಿಲ್ಲ. ಅವರಲ್ಲಿ ಕೂಡ ಪ್ರಾಮಾಣಿಕತೆ ಮತ್ತು ನಿಷ್ಠುರತೆ ಕಡಿಮೆಯಾಗುತ್ತಿದೆ. “ರಾಜಕಾರಣಿಗಳಿಂದ ಸೈಟ್ ಗಿಟ್ಟಿಸಿಕೊಂಡರೆ ಟೀಕೆ ಮಾಡುವುದು ಹೇಗೆ?” ಎಂದಾಗ, ವಿಶ್ವೇಶ್ವರ್ ಭಟ್, ವಿಕದ ಯಾವುದೇ ಪತ್ರಕರ್ತ ಸೈಟ್ ಪಡೆದಿಲ್ಲ ಎಂದು ಜವಾಬು ನೀಡಿದರು. ಅಪವಾದಗಳಿದ್ದೇ ಇರುತ್ತವೆ ಎಂದ ನಾಣಯ್ಯ, “ರಾಜಕಾರಣಿಗಳನ್ನು ಆರಿಸುವುದು ಜನರೇ. ಜನರೇ ಆರಿಸಿ, ಇದೀಗ ನೀವು ಭ್ರಷ್ಟರು ಎಂದರೆ ಹೇಗೆ? ಹೀಗಾಗಿ ಚುನಾವಣೆಯಲ್ಲಿ ಸರಿಯಾದವರನ್ನು ಆರಿಸಿ” ಎಂದು ಮನವಿ ಮಾಡಿಕೊಂಡರು.

ನಂತರ ಮಾತನಾಡಿದ್ದು ಸುರೇಶ್ ಕುಮಾರ್. ವಿಶ್ವೇಶ್ವರ್ ಭಟ್, ಸುರೇಶ್ ಕುಮಾರರನ್ನು ಬಣ್ಣಿಸಿದ್ದು ಲಿಟರೇಟ್ ರಾಜಕಾರಣಿ ಎಂದು. ಅದೂ ಕೂಡ ನಿಜ. ಸುರೇಶ್ ಕುಮಾರ್ ಮೊದಲ ಚುನಾವಣೆ ಎದುರಿಸಿದ್ದು 1983 ರಲ್ಲಿ ಅಂತೆ. ಆಗ ಅವರಿಗೆ ಖರ್ಚಾಗಿದ್ದು 2400 ರೂಪಾಯಿ. ಅದನ್ನು ಕೂಡ ನೀಡಿದ್ದು ಅವರ ಮಿತ್ರರು. “ಮುಂದಿನ ಚುನಾವಣೆ ನಾನೂ ಎದುರಿಸುವುದಿಲ್ಲ. ಏಕೆಂದರೆ ಅದಕ್ಕೆ ಬೇಕಾದಷ್ಟು ಹಣ ನನ್ನ ಬಳಿಯೂ ಇಲ್ಲ” ಎಂದು ಅಲವತ್ತುಕೊಂಡದ್ದು ಸಾತ್ವಿಕ ಸುರೇಶ್ ಕುಮಾರ್. ಅವರು ಕೂಡ ರಾಜಕಾರಣದ ಹಲವು ಮೂವ್ ಮೆಂಟ್ ಗಳನ್ನು ಹೇಳಿದರೂ, ತಮಗೆ ಎಲ್ಲ ಮಾತನಾಡಲು ಸ್ವಾತಂತ್ರ್ಯವಿಲ್ಲ. ಹೀಗಾಗಿ ಎಲ್ಲ ಮಾತನಾಡಲು ಬಯಸಿದರೂ, ಎಲ್ಲ ಮಾತನಾಡಲಾಗುವುದಿಲ್ಲ ಎಂದರು.

ಎಂದಿನಂತೆ ಸಿದ್ದರಾಮಯ್ಯ ಮಾತನಾಡಿದ್ದು ಮನಬಿಚ್ಚಿ. ಮಧ್ಯೆ ಮಧ್ಯೆ ಹಾಸ್ಯ ಚಟಾಕಿಯನ್ನು ಹಾರಿಸುತ್ತ, ಪತ್ರಕರ್ತರನ್ನೂ ಪೇಚಿಗೆ ಸಿಲುಕಿಸುತ್ತ, ತಾವು ಸಂಪೂರ್ಣವಾಗಿ ಕೈ, ಬಾಯಿ ಕೆಡಿಸಿಕೊಳ್ಳದೇ ಇರುವುದಕ್ಕೆ ತಾವೇ ಸಮಾಧಾನಪಡುತ್ತ, ಜಾತೀಯತೆ ಎಂಬುದು ಹೇಗೆ ಅನಕ್ಷರಸ್ಥರಿಗಿಂತ ಅಕ್ಷರಸ್ಥರಲ್ಲಿ ವ್ಯಾಪಕವಾಗಿದೆ, ಸೋ ಕಾಲ್ಡ್ ಮೇಲ್ಜಾತಿಯವರ ಮುಂದೆ ಸಿಗರೇಟು ಸೇದಿದಕ್ಕೆ, ಮೇಲ್ಜಾತಿಯವರು ನಿಮಗೆ ಮತ ನೀಡುವುದಿಲ್ಲ ಎಂದು ಮುಖಕ್ಕೆ ಹೊಡೆದ ಹಾಗೆ ಹೇಳಿದ್ದನ್ನ ಜ್ಞಾಪಿಸಿಕೊಳ್ಳುತ್ತ, 15 ರಿಂದ 20 ಶೇಕಡಾ ಮತದಾನವಾಗುವ ಬೆಂಗಳೂರಿನ ಎಕ್ಸಟೆನ್ ಶನ್ ಏರಿಯಾಗಳ ಜನರ ಬಗ್ಗೆ ಆಕ್ರೋಶಪಡುತ್ತಾ, ವಿಕ ದ ಪತ್ರಕರ್ತರು ಸೈಟ್ ಪಡೆದಿಲ್ಲವಾದರೆ ಏನಾಯ್ತು, ಇತರರು ಪಡೆದಿದ್ದಾರಲ್ಲ ಎಂದು ಕೇಳಿ ಭಟ್ಟರನ್ನು ನೋಡುತ್ತ, ಹಳ್ಳಿಗಳಲ್ಲಿ ತಮ್ಮ ಕುರಿಯನ್ನೋ ಕೋಳಿಯನ್ನೋ ಯಾರೋ ಕದ್ದುಕೊಂಡು ಹೋದಾಗ ಮಹಿಳೆಯರು ಮನೆಯ ಮುಂದೆ ಕುಳಿತು ಅವನ್ ಬಾಯ್ ಸೀದ್ ಹೋಗಾ, ಅವನ ಮಕ್ಕ್ಳು ಸಾಯಾ, ಎಂದು ಶಾಪಹಾಕುವಂತೆ, ಅದೇ ಭಾಷೆಯನ್ನು ಇಂದಿನ ರಾಜಕಾರಣಿಗಳು ಬಳಸುತ್ತಿರುವುದರ ಬಗ್ಗೆ ಬೇಸರಿಸುತ್ತ, ಅತ್ಯುತ್ತಮ ಅನ್ನಬಹುದಾದ ಭಾಷಣ ಮಾಡಿದರು ಸಿದ್ದು.

ಕೊನೆ ಡವಡvk…

ಅಂದ ಹಾಗೆ ಇಡೀ ಕಾರ್ಯಕ್ರಮದಲ್ಲಿ ಯಾರೊಬ್ಬರ ಬಾಯಿಂದಲೂ ಎರಡು ಶಬ್ದಗಳು ಮಾತ್ರ ಬರಲೇ ಇಲ್ಲ. ಅವು ‘ಗಣಿ’ ಮತ್ತು ‘ರೆಡ್ಡಿ’.

ಸರ್ವಂ ಶ್ರೀ ವಾಸುದೇವಾರ್ಪಣಮಸ್ತು….

ಗೌಡರ ಗತ್ತೇ ಗಮ್ಮತ್ತಿನ ಚರ್ಚೆ

ಈ ಹಿಂದೆ ನನ್ನ ಬ್ಲಾಗ್ ನಲ್ಲಿ ಗೌಡರ ಗತ್ತೇ ಗಮ್ಮತ್ತು ಎಂಬ ಪೋಸ್ಟ್ ಹಾಕಿದ್ದೆ. ಕೆಲ ದಿನಗಳ ಹಿಂದೆ ಅದೇ ಪೋಸ್ಟನ್ನು ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದೆ. ಅದಕ್ಕೆ ಬಂದ ಆಸಕ್ತಿದಾಯಕ ಪ್ರತಿಕ್ರಿಯೆಗಳು ಇಲ್ಲಿವೆ.

dg

ಅರಕಲಗೂಡು ಜಯರಾಮ್ ಹೇಳುತ್ತಾರೆ….

ಹೌದು ಸರ್ ಪತ್ರಕರ್ತರಿಗೆ ಸುದ್ದಿಯ ಹಪಾಹಪಿ ಇರುತ್ತದೆ ವಿನಹ, ನಾವು ಭೇಟಿ ಮಾಡಲು ತೆರಳುತ್ತಿರುವ ವ್ಯಕ್ತಿಯನ್ನು ಹೇಗೆ ಟ್ರಾಕ್ ಮಾಡಬೇಕು, ಯಾವ ಸಂಧರ್ಭ ಬಳಸಿಕೊಳ್ಳಬೇಕು ಎಂಬುದು ಗೊತ್ತಿರುವುದಿಲ್ಲ. ಗುಂಪಿನೊಳಗೆ ಗೋವಿಂದ ಅಂತ ನುಗ್ಗಿ ಬಲವಂತದ ಬೈಟ್ ತೆಗೆದುಕೊಳ್ಳುವುದು ತಪ್ಪು. ಇಲ್ಲಿ ಪರಸ್ಪರರ ಭಾವನೆಗಳನ್ನು ಗೌರವಿಸುವ ಅವಕಾಶವಿರಬೇಕು. ದೇವೇಗೌಡ ಹುಂಬತನದ ವ್ಯಕ್ತಿತ್ವದವರು ಎನಿಸುವುದು ನಿಜ. ಅದಕ್ಕೆ ಅವರ ಸ್ಥಾನಮಾನಗಳು ಕಾರ… Read Moreಣವಿರಬಹುದು ಹಾಗಾಗಿ ಪತ್ರಕರ್ತನಾದವನಿಗೆ ಹಪಾಹಪಿ ಇದ್ದರೆ ಸಾಲದು ಒಳನೋಟವು ಬೇಕು. ಅದರಲ್ಲೂ ದೃಶ್ಯ ಮಾಧ್ಯಮದ ಪತ್ರಕರ್ತರಿಗೆ ಇಂತಹ ತಿಳುವಳಿಕೆ ಅಗತ್ಯವಾಗಿರಲೇಬೇಕು. (ಯಾರಿಗಾದರೂ ನೋವಾದರೆ ಕ್ಷಮಿಸಿ)

ರಮೇಶ್ ಎಸ್ ಪೆರ್ಲಾ ಹೇಳುತ್ತಾರೆ….

@AJ your right..Devegowda never disappointed me

ಅಶ್ವಿನಿ ಶ್ರೀಪಾದ್ ಹೇಳುತ್ತಾರೆ….

ನಂಗೆ ನಿಮ್ಮ ಕೊನೆ ಲೈನ್ ಇಷ್ಟ ಆಯ್ತು. Its very much true. ನಮ್ಮ ಜನಕ್ಕೆ ಬುದ್ಧಿ ಇಲ್ಲ.

ಪ್ರದೀಪ್ ಪೈ ಹೇಳುತ್ತಾರೆ…..

Media is bit by bite. Mediamen use and abuse politicians. Politicians overuse, abuse and use otherwise the media-men. E-media is bit by this bite syndrome, politicians wound the media men more by using this bite syndrome

ರಮೇಶ್ ಎಸ್. ಪೆರ್ಲಾ ಹೇಳುತ್ತಾರೆ….

ನೀತಿ – ಗೌಡರಿಗೆ ಯಾವ ಪತ್ರಕರ್ತರನ್ನು ಎಲ್ಲಿ, ಹೇಗೆ, ಯಾಕೆ, ಇಡಬೇಕು ಎಂಬ ಸ್ಪಷ್ಟ ಕಲ್ಪನೆ ಇದೆ. ಅದೇ ಪತ್ರಕರ್ತರಿಗೆ ಇಲ್ಲ.. (ಯಾರಿಗಾದರೂ ನೋವಾದರೆ ಏನು ಮಾದುವುದು..)

ಅರಕಲಗೂಡು ಜಯರಾಮ್ ಹೇಳುತ್ತಾರೆ….

yeah i agree with perla… bcoz ಯಾವ ಪತ್ರಕರ್ತರನ್ನು ಹೇಗೆ ಎಲ್ಲಿಡಬೇಕೆಂಬುದು ಗೌಡಪ್ಪನಿಗೆ ಮತ್ತು ಅವರ ಪುತ್ರರಿಗೆ ಚೆನ್ನಾಗಿ ಗೊತ್ತು! ಗೌಡ ಹುಂಬ ವ್ಯಕ್ತಿತ್ವದವರು. ತಮಗೆ ಇಷ್ಟ ಬಂದರೆ ಮಾತು, ಅದೂ ಬೇಕೋ ಬೇಡವೋ ಎಂಬಂತೆ ವರ್ತಿಸುತ್ತಾರೆ. ಕಳೆದ ವಿಧಾನ ಸಭಾ ಚುನಾವಣೆಗಳಲ್ಲಿ ಜೆಡಿಎಸ್ರ ಹೀನಾಯ ಸೋಲು ಕಂಡಾಗ ಟಿವಿ9 ಪತ್ರಕರ್ತರನ್ನು ಬೆಂಗಳೂರಿನಲ್ಲಿ ನಡೆದ ಪಕ್ಷದ ಸಭೆಯಿಂದ ನಿರ್ದಾಕ್ಷ್ಯೀಣ್ಯವಾಗಿ ಹಚಾ ಅಂದಿದ್ದರು. ಆಗ ಸ್ಥಳದಲ್ಲಿದ್ದ ಇತರೆ ಪತ್ರಕರ್ತರು ತೆಪ್ಪಗಾಗಿದ್ದರೆ ವಿನಹ ಯಾರೊಬ್ಬರು ಪ್ರತಿಭಟಿಸಲಿಲ್ಲ. ಒಮ್ಮೆ ಉದಯ ಟಿವಿಯಲ್ಲಿ ದೀಪಕ್ ತಿಮ್ಮಯ್ಯ ಪ್ರಶ್ನೆಗಳ ಮೇಲೆ ಪ್ರಶ್ನೆ ಎಸೆಯುತ್ತ ನೀರಿಳಿಸುವ ಪ್ರಯತ್ನ ಮಾಡಿದರೆ ದೇವೇಗೌಡರು ದೀಪಕ್ ತಿಮ್ಮಯ್ಯನಿಗೂ ತಿರುಗುಬಾಣವಾಗಿ ಆತನನ್ನೆ ಮಂಗ ಮಾಡಿದರೆ ವಿನಹ ತಮ್ಮ ಮೈ ನೀರಿಳಿಸಲು ಬಿಡಲಿಲ್ಲ, ಅಂತಹ ಚಾಣಾಕ್ಷತೆ, ಕುಖ್ಯಾತಿ ಗೌಡರಿಗಿದೆ. ಅಷ್ಟೇ ಅಲ್ಲ ಗೌಡರಿಗೆ ಪತ್ರಕರ್ತರು ಅನುಕೂಲ ಸಿಂದುವಾಗಿ ಬಳಕೆಯಾಗುತ್ತಾರೆಯೇ ವಿನಹ ಬೇರೇ ಏನೂ ಅಲ್ಲ… ಕಿರಿಯ ಪತ್ರಕರ್ತರ ಮುಂದೆ ಘಟಾನುಘಟಿ ಹಿರಿಯ ಪತ್ರಕರ್ತರ ಪರಿಚಯ ಹೇಳಿ ಕಿರಿ ಕಿರಿ ಮಾಡುತ್ತಾರೆ . ನಿಮ್ಮ ನೀತಿಯಿಂದ ಯಾರಿಗಾದರು ನೋವಾಗಿದ್ದರೆ definately he is unfit for the journalism… what u say?

ರಾಜಕಾರಣಿಗಳ ಮನೆ ಆಕ್ಚುಲಿ ಹಿಂಗಿರಬೇಕಲ್ವೆ?

Poli house

ಚಿತ್ರ – ನಾನು

ಸ್ಥಳ – ಗುಡ್ಡದ ಪಾಳ್ಯ ಸಮೀಪ, ಕಿಬ್ಬನಹಳ್ಳಿ ಹೋಬಳಿ, ತಿಪಟೂರು ತಾಲೂಕು.

ಆ ದಿನಗಳು ಭಾಗ – 2

vijay times

ಪತ್ರಿಕೋದ್ಯಮವೆಂಬ ಪತ್ರಿಕೋದ್ಯಮದ ಪಿತ್ತ ನೆತ್ತಿಯಲ್ಲಿನ ಬ್ರಹ್ಮರಂಧ್ರದಲ್ಲಿ ಭವ್ಯ ಬಂಗಲೆ ಕಟ್ಟಿಕೊಂಡಿದ್ದ ಸಮಯ. ಭಾರತ ಮಾತೆಯ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿಗಳಲ್ಲಿರುತ್ತಿದ್ದ ಉತ್ಸಾಹಕ್ಕಿಂತ ಗುಲಗುಂಜಿಯಷ್ಟು ಕಮ್ಮಿ ಉತ್ಸಾಹದೊಂದಿಗೆ ಅಸೈನ್ ಮೆಂಟ್ ಗಳಿಗೆ ಹೋಗುತ್ತಿದ್ದೆ.

ಕೆಪಿಟಿಸಿಎಲ್ ನ ಕಾರ್ಯಕ್ರಮ. ವಿದ್ಯುತ್ ಉತ್ಪಾದನಾ ಘಟಕವೊಂದನ್ನು ಅಂದಿನ ಹೈಟೆಕ್ ಮುಖ್ಯಮಂತ್ರಿ ಎಸ್. ಎಂ. ಕಿಷ್ನ ದೂರದರ್ಶನದಲ್ಲಿದ್ದ ಅಡಿಟೋರಿಯಂನಿಂದ ರೀಮೋಟ್ ಕಂಟ್ರೋಲ್ ಮೂಲಕ ಉದ್ಘಾಟನೆ ಮಾಡುವವರಿದ್ದರು. ನಮ್ಮೂರಿನ ಪಂಚಾಯತಿ ಮೆಂಬರನ್ನೂ ಸರಿಯಾಗಿ ನೋಡಿರದಿದ್ದ ನಾನು ಮುಖ್ಯಮಂತ್ರಿಗಳ ಕಾರ್ಯಕ್ರಮವನ್ನು ಕವರ್ ಮಾಡಲು ಹೊರಟಿದ್ದೆನಾದ್ದರಿಂದ ಭಯ, ಭಕ್ತಿ, ಉತ್ಸಾಹಗಳೆಲ್ಲ ಯದ್ವಾ ತದ್ವಾ ತುಂಬಿಕೊಂಡಿದ್ದವು. ಕಾರ್ಯಕ್ರಮಕ್ಕೆ ಸಾಕಷ್ಟು ಮೊದಲೇ ಹೋಗಿ ಪತ್ರಕರ್ತರ ನಡುವೆ ಆಸೀನನಾದೆ. ಕೆಲವೇ ಹೊತ್ತಿನಲ್ಲಿ ಮುಖ್ಯಮಂತ್ರಿ ಕಿಷ್ನ ಗಂಭೀರವಾಗಿ ಮುಗುಳ್ನಗುತ್ತ ಆಗಮಿಸಿ ಬಟನ್ ಒತ್ತಿ  ವಿದ್ಯುತ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು. ಉದ್ಘಾಟನೆ ಮುಗಿದ ತಕ್ಷಣ ಪತ್ರಕರ್ತರು ಪ್ರಶ್ನೆ ಕೇಳಲು ಆರಂಭಿಸಿದರು. ಆಗ ಕೆಪಿಟಿಸಿಎಲ್ ಅಧಿಕಾರಿಗಳು ಪತ್ರಿಕಾಗೋಷ್ಠಿಗೆ ಮತ್ತೊಂದು ರೂಮಿನಲ್ಲಿ ವ್ಯವಸ್ಥೆ ಮಾಡಿರುವುದಾಗಿ ಹೇಳಿ,  ನಮ್ಮನ್ನು ಕರೆದುಕೊಂಡು ಹೋಗಲು ಅನುವಾದರು. ಇದಕ್ಕಾಗಿಯೇ ಕಾಯುತ್ತಿದ್ದ ಪತ್ರಕರ್ತರು ನೀಹಿಂದು ನಾಮುಂದು ಎಂದು ಭಯಂಕರ ಸ್ಪೀಡಿನೊಡನೆ ರೂಮಿನತ್ತ ಓಡಲು ಆರಂಭಿಸಿದರು. ಇವರೇಕೆ ಹೀಗೆ ಓಡುತ್ತಿದ್ದಾರೆ ಎಂದು ಮೊದಲಿಗೆ ಅರ್ಥವಾಗಲಿಲ್ಲ. ಎಲ್ಲರೂ ಹೋಗುವ ಗಡಿಬಿಡಿಯಲ್ಲಿ ಎಸ್ಎಂಕೆ ನನ್ನ ಸಮೀಪವೇ ಇದ್ದುದರಿಂದ ತೀವ್ರ ಪುಳಕಿತನಾಗಿ ಅವೊರೊಂದಿಗೆ ನಿಧಾನವಾಗಿಯೇ ರೂಮ್ ಪ್ರವೇಶಿಸಿದೆ. ನೋಡಿದರೆ ಏನಿದೆ ಅಲ್ಲಿ….ಇರೋ ಬರೋ ಕುರ್ಚಿ, ಟೇಬಲ್, ಸ್ಟೂಲ್ ಹೀಗೆ ಪತ್ರಕರ್ತರು ಪ್ರಷ್ಠವಿಡಬಹುದಾದಂತಹ ಜಾಗಗಳನ್ನೆಲ್ಲ ಆಕ್ರಮಿಸಿಕೊಂಡಿದ್ದಾರೆ. ಕೊನೆಗೆ ಹೇಗೋ ಮಾಡಿ ಚೂರು ಜಾಗ ಸಂಪಾದಿಸಿಕೊಂಡು ಕುಳಿತುಕೊಂಡೆ.

ಪತ್ರಕರ್ತರ ಪ್ರಶ್ನೆಗಳು ಆರಂಭವಾದವು. ಎಂದಿನಂತೆ ವಿದ್ಯುತ್ ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಹಾಗೂ ಅತೀ ಮೌಲ್ಯಯುತ ಪ್ರಶ್ನೆಗಳನ್ನು ಕೇಳಿದ್ದು ವಿಜಯ ಕರ್ನಾಟಕದ ಶ್ರೀಶ ಸರ್. ಪತ್ರಕರ್ತರು ಪ್ರಶ್ನೆ ಕೇಳಿದ್ದು, ಸಿಎಂ ಕಿಷ್ನ ಉತ್ತರಿಸಿದ್ದು ನನಗೆ ಸಾಧಾರಣ ಅರ್ಥವಾಗಿತ್ತು. ಆದರೆ ಮೆಗಾವ್ಯಾಟ್, ಲೋಡ್ ಶೆಡ್ಡಿಂಗ್, ಎಮ್ಓಯು, ಟ್ರಾನ್ಸಮಿಶನ್ ಲಾಸ್ ಎಂದೆಲ್ಲ ಮಾತನಾಡಿದ್ದು ಸೀದಾ ಬೌನ್ಸ್ ಹೊಡೆದಿತ್ತು.

ಕೊಂಚ ಆತಂಕದಿಂದಲೇ ಆಫೀಸಿಗೆ ಬಂದು ಸ್ಟೋರಿ ಫೈಲ್ ಮಾಡಲು ಕುಳಿತೆ. ನಾನು ಬರೆದುಕೊಂಡಿದ್ದ ನೋಟ್ಸ್ ಗಳನ್ನೆಲ್ಲ ಕಷ್ಟಪಟ್ಟು ಒಂಚೂರು ಬಿಡದೇ ಕಂಪ್ಯೂಟರ್ ಗೆ ತುಂಬಿಸಿದೆ. ಆದರೆ ಫೈಲ್ ಮಾಡಿದ ಸ್ಟೋರಿ ಬಗ್ಗೆ ಕಾನ್ಫಿಡನ್ಸೇ ಇರಲಿಲ್ಲ. ಬರೆದ ಪ್ರತಿ ಸೆಂಟೆನ್ಸೂ ಕೂಡ,” ನಾನು ಹೇಳುತ್ತಿರುವ ಮಾಹಿತಿ ಸರಿಯಾಗಿದೆಯಾ?” ಎಂದು ನನ್ನನ್ನು ಪ್ರಶ್ನಿಸತೊಡಗಿದಂತೆ ಭಾಸವಾಯಿತು. ಅವಿಶ್ವಾಸ ಏರುತ್ತ ಹೋಯಿತು. ಕೊನೆಕೊನೆಗೆ ಎಸ್ ಎಂ ಕೃಷ್ಣ ಸರಿಯೋ ಅಥವಾ ಎಂ ಎಸ್. ಕೃಷ್ಣ ಸರಿಯೋ ಎಂಬಂತಹ ಗೊಂದಲ ಆರಂಭವಾಯಿತು. ಯಾರಾದರೂ ನನ್ನನ್ನು ಈ ಪರಿಸ್ಥಿತಿಯಿಂದ ಪಾರಾಮಾಡಬಾರದೆ ಎನಿಸಿತು. ದೇವರಿಗೆ ಮೊರೆಯಿಟ್ಟೆ. ಮೊರೆ ಕೇಳಿಸಿತು ಅಂತ ಕಾಣುತ್ತದೆ.

ಸುದ್ದಿಯನ್ನು ಚೀಫ್ ಗೆ ನೀಡಬೇಕು ಎನ್ನುವಷ್ಟರಲ್ಲಿ ಆಫೀಸ್ ಬಾಯ್ ಬಿಳಿಹಾಳೆಯ ಮೇಲೆ ಮುದ್ದಾಗಿ ಟೈಪ್ ಮಾಡಿದ್ದ ಕನ್ನಡ ಅಕ್ಷರಗಳನ್ನು ನನ್ನ ಪಕ್ಕದ ಕುರ್ಚಿಯ ಮೇಲೆ ಕುಳಿತಿದ್ದ ನನಗಿಂತ ಹಿರಿಯ ವರದಿಗಾರರಿಗೆ ನೀಡಿ, “ಸಾರ್… ಟ್ರಾನ್ಸಲೆಷನ್ ಅಂತೆ. ವಿಟಿಗೂ ಇಂಪಾರ್ಟಂಟ್ ಸ್ಟೋರಿ ಅಂತ ಹೇಳಿದ್ದಾರೆ” ಅಂದ. ಆ ಹಿರಿಯ ವರದಿಗಾರರು ಹಾಗೂ ನಾನು ಸೇರಿಕೊಂಡು ಅದನ್ನು ಇಂಗ್ಲೀಷಿಗೆ ಟ್ರಾನ್ಸಲೇಟ್ ಮಾಡಿದೆವು. ಎಸ್. ಎಂ. ಕಿಷ್ನ ಕಾರ್ಯಕ್ರಮದ ವರದಿಯನ್ನು ವಿಕ ಗೆ ಬರೆದಿದ್ದ ಶ್ರೀಶ ಸರ್,  ಅದನ್ನು ವಿಟಿಗೂ ಕಳಿಸಿಕೊಟ್ಟಿದ್ದ ಪ್ರತಿ ಅದಾಗಿತ್ತು.

ಹುಡುಕುವ ಸುದ್ದಿ ಹರಿದಾಡಿ ಬಂದು ಕಾಲ ತೊಡರಿದ್ಹಾಂಗ….

010

ಪ್ರೋ. ಬಿ.ಕೆ. ಚಂದ್ರಶೇಖರ್ ವಿಧಾನ ಪರಿಷತ್ ಸಭಾಪತಿಯಾಗಿದ್ದ ಕಾಲ. ಹೌಸ್, ಕೇವಲ ಒಳಗಷ್ಟೇ ಅಲ್ಲ ಅದರ ಹೊರಗೂ ತನ್ನ ಚಟುವಟಿಕೆಯನ್ನು ವಿಸ್ತರಿಸಬೇಕು ಎಂಬ ಅಭಿಲಾಷೆ ಉಳ್ಳವರಾಗಿದ್ದರು ಬಿಕೆಸಿ. ಹೀಗಾಗಿ ಮೇಲಿಂದ ಮೇಲೆ ಎನ್ ಜಿ ಓ,  ಯಾವುದಾದರೂ ಖಾಸಗಿ ಸಂಸ್ಥೆ, ಸರ್ಕಾರಿ ಇಲಾಖೆ – ಹೀಗೆ ಯಾರೋ ಒಬ್ಬರ ಜೊತೆ ಸೇರಿ ಪರಿಷತ್ತಿನ ಸಹಯೋಗದಲ್ಲಿ ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು.

ಅದೊಮ್ಮೆ ಸೆಂಟ್ರಲ್ ಕಾಲೇಜ್ ಆವರಣದಲ್ಲಿ ವಿಚಾರ ಸಂಕಿರಣ. ‘ಕುಸಿಯುತ್ತಿರುವ ಅಂತರ್ಜಲ ಮಟ್ಟ ಹಾಗೂ ಕೈಗೊಳ್ಳಬೇಕಾದ ಕ್ರಮಗಳು’ ಇದು ವಿಷಯ. ರೈತ ಸಂಘಗಳು, ಪರಿಸರ ಸಂಘಟನೆಗಳು ಸೇರಿದಂತೆ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಬಂದ ಅತಿಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಂತೂ “ಅಂತರ್ಜಲ ಮಟ್ಟ ಅಪಾಯಕಾರಿ ಮಟ್ಟ ತಲುಪಿದೆ. ಇದನ್ನು ತಕ್ಷಣ ತಡೆಗಟ್ಟದಿದ್ದರೆ ನಮ್ಮ ಮಕ್ಕಳು ನೀರಿಲ್ಲದೆ ಸಾಯುತ್ತಾರೆ. ಪಾವಗಡದಂತಹ ಪ್ರದೇಶದಲ್ಲಿ ಫ್ಲೋರೈಡ್ ಯುಕ್ತ ನೀರು ಕುಡಿದು ಜನರು ಅಂಗವಿಕಲರಾಗುತ್ತದ್ದಾರೆ. ಬೆಂಗಳೂರಿನಲ್ಲಿ 450 ಅಡಿ ಕೊರೆದರೂ ನೀರು ಬರುತ್ತಿಲ್ಲ. ಕಳೆದ 10 ವರ್ಷಗಳಲ್ಲಿ ರಾಜ್ಯದಲ್ಲಿ ಬೋರ್ ವೆಲ್ ಗಳ ಸಂಖ್ಯೆ ಮಿತಿಮೀರಿದೆ. ಶ್ರೀಪಡ್ರೆಯಂತಹವರ ಸಲಹೆಯನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕು. ಹೊಸದಾಗಿ ಕಟ್ಟಲಾಗುತ್ತಿರುವ ಮನೆಗಳಿಗೆ ಮಳೆಕೊಯ್ಲನ್ನು ಕಡ್ಡಾಯ ಮಾಡಬೇಕು” ಎಂದೆಲ್ಲ ಭಾರೀ ಭಾರೀ ಚರ್ಚೆ ನಡೆಸಿದರು. ಕರೆಗಳನ್ನು ನೀಡಿ ಕೊರೆದರು. ಚರ್ಚೆ ಬಿರುಸಾಗಿ ಮುಂದುವರೆಸಿದರು. ಕಾರ್ಯಕ್ರಮ ಕವರ್ ಮಾಡಲು ಹೋದ ನನಗೆ ಪ್ರೋ. ಬಿಕೆಸಿ ಪ್ರಯತ್ನ ತುಂಬ ಖುಷಿಕೊಟ್ಟಿತು. ಎಲ್ಲ ಸಂಪನ್ಮೂಲ ವ್ಯಕ್ತಿಗಳ ಮಾತೂ ಇಷ್ಟವಾಯಿತು. ಆದರೆ ಅಂದು ರಾತ್ರಿ 8 ಗಂಟೆಯ ಈ ಟಿವಿ ಪ್ರೈಮ್ ಬುಲೆಟಿನ್ ನ ಫೋಕಸ್ ನಲ್ಲಿ ಕಾರ್ಯಕ್ರಮದ ಸುದ್ದಿ ಬೇರೆ ರೀತಿಯೇ ಏರ್ ಆಯಿತು.

“ಕುಡಿಯುವ ನೀರನ್ನು ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬಿ ಮಿನೆರಲ್ ವಾಟರ್ ಹೆಸರಿನಲ್ಲಿ ಮಾರಾಟ ಮಾಡುವ ಕಂಪನಿಗಳ ಹಾವಳಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಪ್ಲಾಸ್ಟಿಕ್ ಬಾಟಲಿಗಳಲ್ಲಿನ ನೀರು ಶುದ್ಧ ಹೌದು ಅಲ್ಲವೋ ಎಂಬುದನ್ನು ಕೂಡ ಪರೀಕ್ಷಿಸದೆ, ಬಾಟಲಿ ನೀರನ್ನು ಅವ್ಯಾಹತವಾಗಿ ಮಾರಾಟ ಮಾಡುವ ದಂಧೆಯೇ ನಡೆದಿದೆ. ಮಿನರಲ್ ವಾಟರ್ ಕಂಪನಿಗಳು ಬೇಕಾಬಿಟ್ಟಿಯಾಗಿ ನೀರನ್ನು ಬಳಸಿ ಮಾರಾಟ ಮಾಡುತ್ತಿರುವುದರಿಂದ ಅಂತರ್ಜಲ ಮಟ್ಟದ ಮೇಲೆ ವಿಪರೀತ ಪರಿಣಾಮವಾಗುತ್ತಿದೆ. ಮಿನರಲ್ ವಾಟರ್ ಬಳಕೆಯನ್ನು ಎಲ್ಲ ಪರಿಸರವಾದಿಗಳು ವಿರೋಧಿಸುತ್ತಾರೆ. ಆದರೆ ಬೆಂಗಳೂರಿನಲ್ಲಿ ‘ಅಂತರ್ಜಲ ಮಟ್ಟ ಕುಸಿತ ತಡೆಗಟ್ಟುವ’ ಕುರಿತು ವಿಚಾರ ಸಂಕಿರಣ ಏರ್ಪಡಿಸಿದ್ದ ಸಂಘಟಕರಿಗೆ ಮಾತ್ರ ಈ ವಿಷಯ ಗೊತ್ತಿದ್ದಂತೆ ಕಾಣಲಿಲ್ಲ. ಇದಕ್ಕೆ ಸಾಕ್ಷಿ, ವಿಚಾರ ಸಂಕಿರಣದ ಸಂದರ್ಭದಲ್ಲಿ ಟೇಬಲ್ ಮೇಲೆ ರಾರಾಜಿಸಿದ ಮಿನಿರಲ್ ವಾಟರ್ ಬಾಟಲಿಗಳು. ಅಂತರ್ಜಲ ಕುಸಿತ ತಡೆಗಟ್ಟಲು ಬಂದವರು ಮಿನಿರಲ್ ವಾಟರ್ ಕುಡಿದುದು ಆಶ್ಚರ್ಯ ಮೂಡಿಸಿತು”.

ಈ ಲೈನ್ಸ್ ಮೇಲೆ ಪ್ಯಾಕೇಜ್ ಏರ್ ಆಯಿತು. ಇದಕ್ಕೆ ಕುರಬೂರು ಶಾಂತಕುಮಾರ್ ಬೈಟ್ ಇತ್ತು. ಅವರು ಬೈಟ್ ನಲ್ಲಿ ಮಿನರಲ್ ವಾಟರ್ ಕಂಪನಿಗಳನ್ನು ಎಗಾದಿಗಾ ಝಾಡಿಸಿದ್ದರು. ಮತ್ತೊಂದು ಬೈಟ್ ಪ್ರೋ. ಬಿಕೆಸಿ ಅವರದು. ಸುದ್ದಿಯ ಲೈನ್ ಗೊತ್ತಿಲ್ಲದ ಬಿಕೆಸಿ, “ಇಲ್ಲಿ ನೀರಿನ ಕೊರತೆ ಆಗಬಾರದಲ್ಲ….ಅದಕ್ಕೆ ಬಳಸಿದ್ದೇವೆ” ಎಂಬ ಹಾರಿಕೆಯ ಉತ್ತರ ನೀಡಿ ಜಾರಿಕೊಂಡಿದ್ದರು.

ಮರುದಿನದ ಪ್ರಿಂಟ್ ನಲ್ಲಿ ಎಂದಿನಂತೆ ‘ನುಡಿದರು, ಹೇಳಿದರು, ತಿಳಿಸಿದರು, ವಿವರಿಸಿದರು, ಕರೆ ನೀಡಿದರು’ ಎಂಬಂತಹ ವರದಿಗಳು ಪ್ರಕಟವಾಗಿದ್ದವು. ಆದರೆ ನನ್ನ ಸ್ಟೋರಿಗೆ ಉಳಿದ ಜರ್ನಲಿಸ್ಟ್ ಗಳು ಹಾಗೂ ನನ್ನ ಚೀಫ್ ರಿಂದ ಉತ್ತಮ ಪ್ರತಿಕ್ರಿಯೆ ಬಂತು. ಕೊಂಚವೇ ಕೊಂಚ ಕಿವಿ, ಕಣ್ಣು ಓಪನ್ ಮಾಡಿ ಕುಳಿತರೆ ಇಂತಹ ಸುದ್ಧಿ ಸುಲಭವಾಗಿ ಸಿಗುತ್ತದೆ.

ಆದರೆ ಸುದ್ದಿಯೇ ಬಂದು ಕಾಲ ಬುಡಕ್ಕೆ ಬಿದ್ದಾಗ, ಕಣ್ಣೆತ್ತಿಯೂ ನೋಡದೆ, ಮತ್ತೆನನ್ನೋ ಲೀಡ್ ಮಾಡುವ ಜರ್ನಲಿಸ್ಟ್ ಗಳೂ ಇದ್ದಾರೆ. ಏನು ಮಾಡುವುದು ಮಾರಾಯ್ರೇ?

ದುಡ್ಡು ತಿನ್ನೋದು ಅಂದ್ರೆ ಸರ್ಕಾರಕ್ಕೆ ತುಂಬಾ ಇಷ್ಟ!

ಇಂದಿನ ‘ಟೈಮ್ಸ್ ಆಫ್ ಇಂಡಿಯಾ’ದ ‘ಸಿಟಿ ಮೇಲ್ ಬಾಕ್ಸ್’ ನಲ್ಲಿ ಪ್ರಕಟವಾಗಿರುವ ನನ್ನ ಪತ್ರ.

toigetimage.dll