ಮೈಮೇಲೆ ಮಲ ಸುರಿದುಕೊಂಡು ದಲಿತರ ಪ್ರತಿಭಟನೆ

ಕೃಪೆ – ಪ್ರಜಾವಾಣಿ (12/02/2013)

...

‘ಡಬ್ಬಿ’ ಎಂಬ ಡಿಸಿಪಿಯ ಖಾಕಿ ದರ್ಬಾರು.

369

ಆಗ ಬೆಂಗಳೂರು ಸೆಂಟ್ರಲ್ ವಿಭಾಗದ ಡಿಸಿಪಿ ಆಗಿದ್ದವರು ಶ್ರೀಮಾನ್ ಡಬ್ಬಿ ಎಂಬ ವ್ಯಕ್ತಿ. ‘ಡಬ್ಬಿ’ ಹೊರಗಿನಿಂದ ಚೆನ್ನಾಗಿಯೇ ಇದ್ದರೂ ಪತ್ರಕರ್ತರು ಹಾಗೂ ವಕೀಲರು ಎಂದರೆ ಅವರಿಗೆ ಕಿಂಚಿತ್ತೂ ಆಗಿಬರುತ್ತಿರಲಿಲ್ಲ. ಗಣರಾಜ್ಯೋತ್ಸವ, ಸ್ವಾತಂತ್ರ್ಯದಿನಾಚರಣೆ, ಯಾವುದೋ ವಿವಿಐಪಿಯ ಕಾರ್ಯಕ್ರಮ ಹೀಗೆ ಪತ್ರಕರ್ತರು ಎದುರಾಗುವ ಭಾಗಶಃ ಎಲ್ಲ ಕಾರ್ಯಕ್ರಮಗಳಲ್ಲಿ ಪತ್ರಕರ್ತರ ಜೊತೆ ಅನವಶ್ಯಕವಾಗಿ ಕಾಲು ಕೆರೆದು ಜಗಳ ಮಾಡುತ್ತಿದ್ದರು. ಖಾಕಿ ದರ್ಪ ತೋರಿಸಲು ಮುಂದಾಗಿ ಪತ್ರಕರ್ತರ ಪ್ರತಿಭಟನೆಯನ್ನೂ ಎದುರಿಸುತ್ತಿದ್ದರು. ಆದರೆ ಎಷ್ಟೇ ಪ್ರತಿಭಟನೆ ಎದುರಿಸಿದರೂ ತಾವಿರುವುದೇ ಹೀಗೆ ಎಂದು ಆಗಾಗ ಪತ್ರಕರ್ತರ ಜೊತೆ ಅವರ ಹಾಕ್ಯಾಟ ನಡೆಯುತ್ತಲೇ ಇತ್ತು.

369

ಇಂತಿಪ್ಪ ಸನ್ನಿವೇಶದಲ್ಲಿ, ಬಿಡದಿ ಬಳಿಯ ಟೋಯೋಟಾ ಕಾರ್ಖಾನೆಯ ಕಾರ್ಮಿಕರು ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಬೆಂಗಳೂರಿನ ಬಹುಮಹಡಿ ಕಟ್ಟಡದ ಆವರಣದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಬೆಳಿಗ್ಗೆ ಸುಮಾರು ಏಳು ಗಂಟೆಯ ಸಮಯ. ಮಾರ್ನಿಂಗ್ ಶಿಫ್ಟ್ ನಲ್ಲಿದ್ದೆನಾದ್ದರಿಂದ ಬೇಗಬೇಗನೆ ಕ್ಯಾಮೆರಾಮ್ಯಾನ್ ಜೊತೆ ಬಹುಮಹಡಿ ಕಟ್ಟಡದ ಆವರಣ ಹೊಕ್ಕೆ. ಸುಮಾರು ಮೂನ್ನೂರಕ್ಕೂ ಹೆಚ್ಚು ಕಾರ್ಮಿಕರು, ಮೀನಾಕ್ಷಿ ಸುಂದರಂ ನೇತೃತ್ವದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದರು. ಬೈಟ್ ತೆಗೆದುಕೊಳ್ಳುವ ಮೊದಲು ಮಾಹಿತಿ ಸಂಗ್ರಹಿಸಿ, ಅಲ್ಲಿಯವರೆಗೆ ಕ್ಯಾಮೆರಾಮನ್ ಗೆ ಕಟ್ ಇನ್ಸ್ ಹಾಗೂ ಕಟ್ ಅವೇಸ್ ತೆಗೆದುಕೊಳ್ಳಲು ಹೇಳಿ ಕಾರ್ಮಿಕರ ಬಳಿ ಮಾತನಾಡುತ್ತಿದ್ದೆ. ಕೆಲ ಹೊತ್ತು ಕಳೆಯುವಷ್ಟರಲ್ಲಿ ಸ್ಥಳಕ್ಕೆ ಕೆಎಸ್ಆರ್ಪಿಯ ಎರಡು ಬಸ್ ಗಳು ಬಂದು ನಿಂತವು. ಅವುಗಳಿಂದ ದುಬುದುಬು ಪೋಲಿಸರು ಇಳಿದು ಕಾರ್ಮಿಕರನ್ನು ಸುತ್ತವರೆದು ನಿಂತರು. ನಾನು ಇನ್ನೇನು ಬೈಟ್ ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಡಿಸಿಪಿ ‘ಡಬ್ಬಿ’ ಯವರ ಆಗಮನವಾಯಿತು. ಆಸಾಮಿ ಕಾರಿನಿಂದ ಕೆಳಗೆ ಇಳಿದಿದ್ದೇ ತಡ ನೇರವಾಗಿ ಮೀನಾಕ್ಷಿ ಸುಂದರಂ ಬಳಿ ಹೋಗಿ ಕೊರಳ ಪಟ್ಟಿ ಹಿಡಿದು ……..ಮಗನೆ ಹಲ್ಕಟ್, ಪ್ರೋಟೆಸ್ಟ್ ಮಾಡ್ತೀಯಾ?” ಎನ್ನುತ್ತಾ ದರದರನೇ ಎಳೆದುಕೊಂಡು ಜೀಪಿಗೆ ಹತ್ತಿಸಿದರು. ಸಾಹೇಬರ ಅವತಾರ ಕಂಡು ಇನ್ನು ತಮಗೆ ಆರ್ಡರ್ಸ್ ಬೇಕಿಲ್ಲ ಎಂದುಕೊಂಡ ಪೇದೆಗಳು ಕಾರ್ಮಿಕರನ್ನು ಹಿಡಿದು ಬಸ್ ನಲ್ಲಿ ತುಂಬಲಾರಂಭಿಸಿದರು. ಈ ಗಲಾಟೆಯಲ್ಲಿ ನನ್ನ ಹತ್ತಿರ ನಿಂತಿದ್ದ ಕ್ಯಾಮೆರಾಮನ್ ಶಾಟ್ಸ್ ತೆಗೆದುಕೊಳ್ಳಲು ಆಚೀಚೆ ಓಡಲಾರಂಭಿಸಿದ. ನಾನೂ ಕೂಡ ಕಾರ್ಮಿಕ ಕಾಂಟಾಕ್ಟ್ ನಂಬರ್ ತೆಗೆದುಕೊಳ್ಳಲು ಪೋಲಿಸ್ ಬಸ್ ಸುತ್ತ ಸುತ್ತುತ್ತ ಪರದಾಡುತ್ತಿದ್ದೆ.

369

ಬಸ್ ಸುತ್ತಿ ಈ ಕಡೆ ಬಂದಾಗ ಅಲ್ಲಿನ ದೃಶ್ಯ ನೋಡಿ ನಾನು ಶಾಕ್. ನನ್ನ ಕ್ಯಾಮಾರಾಮನ್ ನ್ನು ಹತ್ತು-ಹನ್ನೆರಡು ಪೋಲಿಸರು ಸುತ್ತುವರೆದಿದ್ದಾರೆ. ಮಧ್ಯೆ ಡಿಸಿಪಿ ‘ಡಬ್ಬಿ’ ನಿಂತುಕೊಂಡು ಕ್ಯಾಮಾರಾಮನ್ ಅನ್ನು ‘ವಿಚಾರಿಸಿ’ಕೊಳ್ಳುತ್ತಿದ್ದಾರೆ. ಆತನ ಕ್ಯಾಮಾರಾವನ್ನು ಆಗಲೇ ಕಿತ್ತುಕೊಂಡು ಪೇದೆಯೊಬ್ಬನಿಗೆ ನೀಡಲಾಗಿದೆ. ತಕ್ಷಣ ಡಬ್ಬಿ ಬಳಿ ಹೋದ ನಾನು ಬೂಮ್ ತೋರಿಸಿ ಸರ್, ನಾವು ಈಟಿವಿಯರು ಎಂದೆ. ಡಬ್ಬಿ ಐಡಿಯನ್ನು ಕೇಳಿತು. ನನ್ನ ಐಡಿ ತೋರಿಸಿದೆ. ಕ್ಯಾಮಾರಾಮನ್ ಕೂಡ ತನ್ನ ಐಡಿ ತೋರಿಸಿದ. ಆದರೆ ಆಗಷ್ಟೇ ಈಟಿವಿಯಲ್ಲಿ ಕ್ಯಾಮರಾ ಅಸಿಸ್ಟೆಂಟ್ ಗಳಿಗೆ ಬಡ್ತಿ ನೀಡಿ ಜೂನಿಯರ್ ಕ್ಯಾಮೆರಾಮನ್ ಗಳಾಗಿ ಮಾಡಲಾಗಿತ್ತು. ಹೀಗಾಗಿ ನನ್ನ ಕ್ಯಾಮೆರಾಮನ್ ಐಡಿಯ ಡೆಸಿಗ್ನೇಷನ್ ಜಾಗದಲ್ಲಿ ‘ಕ್ಯಾಮೆರಾ ಅಸಿಸ್ಟೆಂಟ್’ ಎಂದು ಬರೆಯಲಾಗಿತ್ತು. ಹೀಗಾಗಿ ‘ಡಬ್ಬಿ’ ಮತ್ತೆ ಕ್ಯಾತೆ ತೆಗೆಯಿತು. ಕೊನೆಗೆ ನಾನು ಸ್ಪಲ್ಪ ಮುಖಗಂಟಿಕ್ಕಿಕೊಂಡು ಮಾತನಾಡಿದ್ದರಿಂದ ಕ್ಯಾಮೆರಾ ವಾಪಸ್ ನೀಡಿ ಜೀಪ್ ಏರಿ ಹೊರಟಿತು. ಇದನ್ನೆಲ್ಲ ಬಸ್ ನಲ್ಲಿದ್ದ ಕಾರ್ಮಿಕರು ವಿಕ್ಷಿಸುತ್ತಿದ್ದರು.

ಆತನ ಜೀಪನ್ನು ಎರಡೂ ಬಸ್ ಗಳು ಹಿಂಬಾಲಿಸಿದವು. ಆದರೆ ‘ಡಬ್ಬಿ’, ಮೀನಾಕ್ಷಿ ಸುಂದರಂರ ಕೊರಳ ಪಟ್ಟಿ ಹಿಡಿದು ಎಳೆದುಕೊಂಡು ಹೋಗುತ್ತಿದ್ದ ಫೂಟೆಜ್ ಕೇವಲ ನಮಗೆ ಸಿಕ್ಕಿದ್ದರಿಂದ ಕ್ಯಾಸೆಟ್ ಆಫೀಸಿಗೆ ಕೊಡಲು ಆಫೀಸಿನತ್ತ ಗಾಡಿ ತಿರುಗಿಸಿದೆವು. ಹೀಗಾಗಿ ಕಾರ್ಮಿಕರನ್ನು ತುಂಬಿಕೊಂಡಿದ್ದ ಬಸ್ ಗಳು ಎಲ್ಲಿ ಹೋಗಿವೆ ಎಂದು ತಿಳಿಯಲಿಲ್ಲ. ಕೊನೆಗೆ ಅವರನ್ನು ಆಡುಗೋಡಿಯ ಕೆಎಸ್ಆರ್ಪಿ ಗ್ರೌಂಡಿನಲ್ಲಿ ಕೂರಿಸಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಅಲ್ಲಿ ಹೋದೆವು. ನಾನು ಹಾಗೂ ಕ್ಯಾಮೆರಾಮನ್ ಗಾಡಿಯಿಂದ ಇಳಿಯುತ್ತಿದ್ದಂತೆ ಕಾರ್ಮಿಕರೆಲ್ಲರೂ ಭರ್ಜರಿ ಚಪ್ಪಾಳಿ ಬಾರಿಸಿ, ಶಿಳ್ಳೆ ಹೊಡೆದು ನಮ್ಮನ್ನು ಸ್ವಾಗತಿಸಿದರು. ಅಲ್ಲಿಯೇ ನಿಂತಿದ್ದ ಡಬ್ಬಿಯ ಮುಖ ಕಪ್ಪಿಟ್ಟಿತ್ತು. ಕಾರ್ಮಿಕ ಮುಖಂಡರೊಬ್ಬರ ಜೊತೆ ಪೋಲಿಸ್ ಅಧಿಕಾರಿಯ ವರ್ತನೆಯನ್ನು ಶೂಟ್ ಮಾಡಿರುವುದೇ ‘ಡಬ್ಬಿ’ಯ ಪಿತ್ತ ನೆತ್ತಿಗೇರಲು ಕಾರಣವಾಗಿತ್ತು.

369

‘ಡಬ್ಬಿ’ಯ ಸದ್ದು – ಪ್ರತಿಷ್ಠಿತ ಕನ್ನಡ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉತ್ತಮ ಕ್ರೈಮ್ ವರದಿಗಾರರೊಬ್ಬರು ‘ಡಬ್ಬಿ’ಯ ‘ವಿಶೇಷ ಪ್ರಕರಣ’ವೊಂದರ ಬಗ್ಗೆ ಬರೆದರೆಂದು, ಪತ್ರಿಕೆಯ ಮಾಲೀಕರ ಜೊತೆ ಮಾತನಾಡಿ ಆ ವರದಿಗಾರರನ್ನು ‘ಡಬ್ಬಿ’ ಕೆಲಸದಿಂದಲೇ ಕಿತ್ತಿಹಾಕಿಸಿತ್ತು. ಹೇಗಿದೆ ‘ಡಬ್ಬಿ’ಯ ಪ್ರಭಾವ?