ಮಕ್ಕಳಿಗೆ ಸ್ವಲ್ಪಾನಾದ್ರೂ ಇನ್ನೋಸೆನ್ಸ್ ಬೇಕು ಕಣ್ರೀ…

ಚಿನ್ನದಂಬಾರಿಯಲಿ ನಿನ್ನ ಕಳುಹುವರಂತೆ...

ಮೊನ್ನೆ ಪುಣಾಕ್ಕೆ ಹೋದಾಗ ನನ್ನ ಮಿತ್ರನೊಬ್ಬ ಹೇಳಿದ ಘಟನೆಯಿದು.

ಆತನ ಪರಿಚಯದ ಓರ್ವ ಸಾಹಿತಿಯಿದ್ದಾರಂತೆ. ಸಾಹಿತ್ಯದ ಜೊತೆಗೆ ಚಿಕ್ಕಪುಟ್ಟ ಮ್ಯಾಜಿಕ್ ಟ್ರಿಕ್ ಮಾಡುವುದು ಅವರ ಹವ್ಯಾಸ. ಸಾಹಿತ್ಯ ಎಲ್ಲರಿಗೆ ಮೀಸಲಾದರೆ, ಮ್ಯಾಜಿಕ್ ಟ್ರಿಕ್ ಕೇವಲ ಮಕ್ಕಳಿಗಷ್ಟೇ ಮೀಸಲು. ಮದುವೆ, ಶುಭಕಾರ್ಯ, ಗೆಟ್ ಟು ಗೆದರ್ – ಹೀಗೆ ಯಾವುದೇ ಸಂದರ್ಭದಲ್ಲಿ ಮಕ್ಕಳು ಕಂಡರೂ, ಅವರನ್ನು ಒಂದೆಡೆ ಸೇರಿಸಿ ಮ್ಯಾಜಿಕ್ ತೋರಿಸಿ, ಆ ಮಕ್ಕಳು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುವುದು ಇವರಿಗೆ ಅಚ್ಚುಮೆಚ್ಚು. ಮಕ್ಕಳನ್ನು ರಂಜಿಸಿದ ಸಮಾಧಾನ.

ಕೆಲ ದಿನಗಳ ಹಿಂದೆ ಅವರು ಹೀಗೆ ಯಾವುದೋ ಗೆಟ್ ಟು ಗೆದರ್ ನಲ್ಲಿ ಮಕ್ಕಳನ್ನು ಸೇರಿಸಿ ಮ್ಯಾಜಿಕ್ ತೋರಿಸುತ್ತದ್ದರು. ಆದರೆ ಮ್ಯಾಜಿಕ್ ಮುಗಿದ ಬಳಿಕ ಮಕ್ಕಳು ಸಂತೋಷದಿಂದ ಚಪ್ಪಾಳೆ ಹೊಡೆಯುವುದನ್ನು ಬಿಟ್ಟು, ಈ ಆಸಾಮಿ ಆ ಟ್ರಿಕ್ಕನ್ನು ಹೇಗೆ ಮಾಡಿದರು ಎಂದು ವಿಶ್ಲೇಷಣೆ ಮಾಡಲಾರಂಭಿಸಿದರು. ಇವರನ್ನು ಕ್ರಾಸ್ ಕ್ವಶ್ಚನ್ ಮಾಡಿದರು. ಇದು ಒಂದೆರಡಕ್ಕೆ ನಿಲ್ಲಲಿಲ್ಲ. ಪ್ರತಿಯೊಂದು ಮ್ಯಾಜಿಕ್ ಟ್ರಿಕ್ ಪ್ರದರ್ಶಿತವಾದ ಬಳಿಕವೂ ಮಕ್ಕಳ ಈ ಕ್ರಾಸ್ ಕ್ವಶ್ಚನಿಂಗ್, ಅನಲೈಸಿಂಗ್ ನಡೆಯಿತಂತೆ. ಕೊನೆಗೆ ಆ ಮಿತ್ರರು ನೊಂದು, ನನ್ನ ಸ್ನೇಹಿತನ ಬಳಿ ಹೇಳಿಕೊಂಡರಂತೆ, “ಯಾಕೆ ಇಂದಿನ ಮಕ್ಕಳು ಇಷ್ಟು ಯಾಂತ್ರಿಕರಾಗಿದ್ದಾರೆ? ಯಾವುದೋ ಒಂದು ರಂಜನೆಯನ್ನು ರಂಜನೆಗೆ ಮಾತ್ರ ಸೀಮಿತಗೊಳಿಸದೆ, ಪ್ರತಿಯೊಂದನ್ನೂ ಟೆಕ್ನಾಲಾಜಿಯ ಕನ್ನಡಕದದಿಂದ ನೋಡಿ, ಚಿಕ್ಕ ವಯಸ್ಸಿನಲ್ಲಿಯೇ ಟೆಕ್ಕಿಗಳಾಗುತ್ತಿದ್ದಾರೆ? ಕೊಂಚ ದೊಡ್ಡವರು ಹೀಗೆ ಮಾಡಿದರೆ ಅಡ್ಡಿಯಿಲ್ಲ. ಆದರೆ ಇನ್ನೂ ತಮ್ಮ ಮುಗ್ದತೆಯಿಂದ ಅಚ್ಛಾ ಮಾಡಿಸಿಕೊಳ್ಳಬೇಕಾದ ಮಕ್ಕಳು, ತಮ್ಮ ಟೆಕ್ ಸ್ಯಾವಿ ಸ್ವಭಾವದಿಂದ ಬಾಲ್ಯವನ್ನೇ ಕಳೆದುಕೊಳ್ಳುತ್ತಿದ್ದರಲ್ಲ?” ಅಂತ.

ಇದು ನನಗೂ ಎಲ್ಲೋ ನಿಜವೆನಿಸಿತು. ಮುಗ್ಧ ಮಕ್ಕಳು ಕನಿಷ್ಠ ಒಂದು ಹಂತದವರೆಗೆ ಮುಗ್ಧರಾಗಿದ್ದರೇ ಛಲೋ ಅಲ್ವ?

ಸಾಯೊನಾರಾ…ಸಾಯೊನಾರಾ…ವಾದಾ ನಿಭಾವೋಗೆ ಸಾಯೊನಾರಾ

sayonara

ಜಪಾನ್ ನ ಟೋಕಿಯೋ ನಗರದ ಚುಮುಚುಮು ಮುಂಜಾವು. ವರ್ಷದ ಭಾಗಶಃ ಎಲ್ಲದಿನವೂ ಆಗುವಂತೆ ಅಂದೂ ಕೂಡ ಹನಿಹನಿ ಮಳೆ ಬೀಳುತ್ತಿತ್ತು. ಟೋಕಿಯೋಗೆ ಕೆಲಸದ ನಿಮಿತ್ತ ಬಂದಿದ್ದ ಭಾರತೀಯನೊಬ್ಬ ಬಸ್ ಹಿಡಿದು ಹನೇದಾ ಏರ್ ಪೋರ್ಟ್ ಗೆ ಹೋಗಬೇಕಿತ್ತು. ಸುಮಾರು 6.30 ಕ್ಕೆ ಬಸ್ ಸ್ಟಾಪಿಗೆ ಬಂದ. 6.45 ಕ್ಕೆ ಬಸ್ ಬರುವುದಿತ್ತು. ಬಸ್ ಸ್ಟಾಪಿನಲ್ಲಿ ಈತನೇ ಮೊದಲೇ ವ್ಯಕ್ತಿ. ಐದು ನಿಮಿಷ ನಿಂತುಕೊಂಡ. ಅಷ್ಟರಲ್ಲಾಗಲೇ ಐದಾರು ಜನ ಜಪಾನಿಯರು ಬಂದು ಈತನ ಹಿಂದೆ ನೀಟಾಗಿ ಕ್ಯೂನಲ್ಲಿ ನಿಂತುಕೊಂಡರು. ಬಸ್ ಬರಲು ಇನ್ನೂ 10 ನಿಮಿಷ ಇದೆಯಲ್ಲ ಎಂದುಕೊಂಡು ಈತ ಹತ್ತಿರದಲ್ಲಿಯೇ ಇದ್ದ ಅಂಗಡಿಗೆ ಕೋಕ್ ಕೊಳ್ಳಲೆಂದು ಹೋದ. ಅಂಗಡಿಗೆ ಹೊಕ್ಕ ತಕ್ಷಣ ಒಳಗಿನ ಮರ್ಚಂಟೈಸಿಂಗ್ ನೋಡಿ ವಿಸ್ಮಿತನಾದ. ಸಮಯ ಹೋಗಿದ್ದು ತಿಳಿಯಲಿಲ್ಲ. ಹಾಗೆ ನೋಡುತ್ತಿದ್ದಾಗ ತಕ್ಷಣ ತಾನು ಆಫೀಸಿಗೆ ಹೋಗಬೇಕಾಗಿರುವುದು ನೆನಪಾಯಿತು. ಛಕ್ಕನೆ ಗಡಿಯಾರ ನೋಡಿಕೊಂಡ. ಸರಿಯಾಗಿ 6.45 ತೋರಿಸುತ್ತಿತ್ತು. ಬಿಟ್ಟ ಬಾಣದಂತೆ ಅಂಗಡಿಯಿಂದ ಹೊರಬಂದು ಬಸ್ ಸ್ಪಾಪಿಗೆ ಬಂದ. ಅಲ್ಲಾಗಲೇ ಬಸ್ ಬಂದು ನಿಂತಿತ್ತು. ಆದರೆ ಏನಾಶ್ಚರ್ಯ…..ಬಸ್ ಬಾಗಿಲು ತೆರೆದಿದ್ದರೂ ಯಾರೊಬ್ಬರೂ ಬಸ್ ಹತ್ತುತ್ತಿಲ್ಲ. ಎಲ್ಲರೂ ಈತನನ್ನೇ ನೋಡುತ್ತಿದ್ದಾರೆ. ಈತನಿಗೆ ಏಕೆಂದು ತಿಳಿಯಲಿಲ್ಲ. ಹಾಗೇ ಓಡಿ ಬಂದವನೇ ಬಸ್ ಹತ್ತಿದ. ಆತ ಹತ್ತಿದ ತಕ್ಷಣ ಉಳಿದ ಜಪಾನಿಯರು ಲಗುಬಗೆಯಿಂದ ಬಸ್ ಹತ್ತಿದರು.

ನಂತರ ಆಫೀಸಿನಲ್ಲಿ ನಡೆದ ಘಟನೆಯನ್ನು ಜಪಾನಿ ಮಿತ್ರನೊಬ್ಬನಿಗ ವಿವರಿಸಿದ. ಆಗ ಮಿತ್ರ ಹೇಳಿದ, “ಹೌದು ಇಲ್ಲಿ ಹಾಗೆಯೇ. ಕ್ಯೂ ನಲ್ಲಿ ನೀನು ಮೊದಲಿದ್ದೆಯಲ್ಲೇವೆ? ಹೀಗಾಗಿ ನೀನೇ ಮೊದಲು ಬಸ್ ಹತ್ತಬೇಕು. ನೀನು ಹತ್ತುವವರೆಗೂ ಯಾರೂ ಬಸ್ ಹತ್ತುವುದಿಲ್ಲ. ಕ್ಯೂ ಮುರಿಯುವುದು ಇಲ್ಲಿನ ಶಿಷ್ಟಾಚಾರವಲ್ಲ”.

ಎಲ್ಲ ರೀತಿಯ ಯೋಗಾಸನಗಳನ್ನು ಬಲವಂತವಾಗಿ ಮಾಡಿಸುವ ಪುಣೆಯ ಸಿಟಿಬಸ್ ಗಳು ಈತನಿಗೆ ತಕ್ಷಣ ನೆನಪಾದವು.

(ಈ ಘಟನೆ ಹೇಳಿದ್ದು ನನ್ನ ಚಿಕ್ಕಮ್ಮನ ಮಗ ರೋಹನ್ ಫಣಸಳಕರ್. ಇಲ್ಲಿನ ಕಥಾನಾಯಕ ಆತನೇ)