ಆ ಎತ್ತನ್ನು ಬ್ಯಾಕ್ ಗ್ರೌಂಡ್ ನಲ್ಲಿಟ್ಟು ಪಿಟಿಸಿ ಮಾಡುವುದೇ ಹೆಮ್ಮೆಯ ವಿಷಯ

ನಿಜವಾದ ಸಾಮ್ರಾಟ

2007 ನೇ ಇಸವಿ. ರಾಮಚಂದ್ರಾಪುರ ಮಠದಲ್ಲಿ ಪ್ರಪ್ರಥಮ ವಿಶ್ವ ಗೋ ಸಮ್ಮೇಳನ ಆಯೋಜಿಸಲಾಗಿತ್ತು. ಕವರೇಜ್ ಗೆಂದು ಬೆಂಗಳೂರಿನಿಂದ ನಾನು ಹಾಗೂ ಕ್ಯಾಮರಾಮನ್ ಕೊಂಡಯ್ಯ ಹೋಗಿದ್ದೆವು. ಹೋಗುವುದಕ್ಕಿಂತ ಮೊದಲು ಸಮ್ಮೇಳನದ ಬ್ರೌಷರ್, ಮಠದಲ್ಲಿರುವ ಆಕಳುಗಳ ವಿವಿಧ ತಳಿಗಳ ವಿವರಣೆ ಇತ್ಯಾದಿಗಳ ಬಗ್ಗೆ ಅಧ್ಯಯನ ಮಾಡಿದ್ದೆ. ಅದರಲ್ಲಿ ಸಾಮ್ರಾಟ ಹೆಸರಿನ ಎತ್ತು ನನ್ನ ಗಮನ ಸೆಳೆದಿತ್ತು. ಕಾರಣ ಅದರ ದೈತ್ಯ ದೇಹ ಹಾಗೂ ಅದಕ್ಕಿಂತ ದೈತ್ಯ ಕೋಡುಗಳು. ಚಿತ್ರದಲ್ಲಿ ನೋಡಿಯೇ ರೋಮಾಂಚಿತಗೊಂಡಿದ್ದೆ.

ಮೂಲತಃ ನಮ್ಮದು ಕೃಷಿ ಕುಟುಂಬ. ಅಣ್ಣ ಶ್ರೀಹರ್ಷ ಸಾವಯವ ಕೃಷಿಕ. ಮನೆಯಲ್ಲೇ 10 ರಾಸುಗಳಿವೆ. ನಾನು ಚಿಕ್ಕವನಿದ್ದಾಗ ಅಪ್ಪ ಕೂಡ ರಂಜನಿ ಎಂಬ ಆಕಳನ್ನು ಸಾಕಿದ್ದರು. ಎಚ್ ಎಫ್, ಜರ್ಸಿ, ಮಲೆನಾಡು ಗಿಡ್ಡ ಜಾತಿಯ ದನಗಳನ್ನಷ್ಟೇ ನೋಡಿದ್ದ ನನಗೆ, ಮಠದಲ್ಲಿ ಮಾತ್ರ ಅಚ್ಚರಿ ಕಾದಿತ್ತು. ಪ್ರತಿಯೊಂದೂ ಆಕಳೂ ಪ್ರತಿಯೊಂದೂ ಎತ್ತೂ ಅಬ್ಬಾ…ಅದೇನು ಆಕಾರ, ಅವುಗಳ ಗಂಗೆದೊಗಲು, ಮೂತಿ, ಕೋಡು, ಮೂಗು, ಹುಬ್ಬು, ಬೆನ್ನಿನ ಆಕಾರ, ಬಣ್ಣ ಪ್ರತಿಯೊಂದರಲ್ಲಿಯೂ ವೈವಿಧ್ಯತೆ. ಆಂಧ್ರಪ್ರದೇಶ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರದ ದನಗಳನ್ನು ನೋಡುವುದಂತೂ ಕಣ್ಣಿಗೆ ಹಬ್ಬ. ಕೆಲವು ಆಕಳುಗಳು ತಮ್ಮ ಗಾತ್ರದಿಂದಲೇ ಹತ್ತಿರ ಬಂದು ಮೈದಡವುವಂತೆ ಮಾಡುತ್ತಿದ್ದರೆ, ಇನ್ನೂ ಕೆಲವು ಎತ್ತುಗಳ ಆಕಾರ ಹಾಗೂ ಕೋಡುಗಳು ಒಂದು ಮಾರು ದೂರದಿಂದಲೇ ಹೋಗುವಂತೆ ಮಾಡುತ್ತಿದ್ದವು.

ರಾಮಚಂದ್ರಾಪುರ ಮಠಕ್ಕೆ ಹೋದಮೇಲೆ ಬಿರುಬಿಸಿನಿಲಿನಲ್ಲಿ ಕ್ಯಾಮರಾ, ಟ್ರೈಪಾಡ್ ಹೊತ್ತುಕೊಂಡು ಎಲ್ಲವನ್ನೂ ಶೂಟ್ ಮಾಡಿ ಸ್ಟೋರಿ ಮಾಡಿದ್ದಾಯಿತು. ಸಾಮ್ರಾಟನ ಬಗ್ಗೆ ಪ್ರತ್ಯೇಕ ಸ್ಟೋರಿ ಮಾಡಬೇಕು ಎಂದುಕೊಂಡಿದ್ದೆ. ಎರಡನೇ ದಿನವೇ ಸಂಘಟಕರಿಗೆ ಹೇಳಿ ಸಾಮ್ರಾಟನನ್ನು ಕರೆತರುವಂತೆ ಹೇಳಿದೆ. ಬಯಲೊಂದರಲ್ಲಿ ಹಲವಾರು ದನಗಳು ನಿಂತುಕೊಂಡು ಮೇಯುತ್ತಿದ್ದವು. ಅಲ್ಲಿಗೆ ಸಾಮ್ರಾಟನನ್ನು ಕರೆತರಲಾಯಿತು.

ಅಬ್ಬಾ…..ಆ ಎತ್ತನ್ನು ನೋಡಿಯೇ ಒಂದು ಕ್ಷಣ ದಂಗಾದೆ. ನಾನು ಎಣಿಸದ್ದಕ್ಕಿಂತ ಎತ್ತರವಾಗಿತ್ತು, ಭವ್ಯವಾಗಿತ್ತು. ಕೋಡಗಳು ವಿಶ್ವವನ್ನೇ ವ್ಯಾಪಿಸುವಷ್ಟು ಅಗಲವಾಗಿ ಚಾಚಿಕೊಂಡಿದ್ದವು. ಆತ್ಮವಿಶ್ವಾಸ, ಧೈರ್ಯ, ಸಾಹಸ, ಬಲ, ಸ್ಟೆಮಿನಾಕ್ಕೆ ಸಾಮ್ರಾಟ ಕಳಶ ಪ್ರಾಯನಂತಿದ್ದ. ಎತ್ತೊಂದು ಇಷ್ಟು ಎತ್ತರ ಇರಲು ಸಾಧ್ಯವೇ ಎನ್ನಿಸಿತು. ಸಾಮ್ರಾಟ ದನದ ಹಿಂಡಿನಲ್ಲಿ ನಡೆದು ಬರಬೇಕಾದರೆ ಉಳಿದ ದನಗಳು ಹೆದರಿಕೆಯಿಂದ ಅದರತ್ತ ನೋಡುತ್ತ ದಾರಿ ಮಾಡಿಕೊಟ್ಟವು. ಆ ದೃಶ್ಯವಂತೂ ನನಗೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

ಹಲವು ಆಂಗಲ್ ಗಳಲ್ಲಿ ಸಾಮ್ರಾಟನನ್ನು ಕ್ಯಾಮೆರಾದಲ್ಲಿ ಸೆರೆಹಿಡಿದೆ. ನಂತರ ಪಿಟಿಸಿ ಮಾಡಬೇಕಾದಾಗ, ಸಾಮ್ರಾಟನ ಪಕ್ಕ ನಿಂತು ಮಾಡೋಣ ಎಂದುಕೊಂಡೆ. ಆದರೆ ದುರಾದೃಷ್ಣ ಅಂದು ಸಾಮ್ರಾಟನಿಗೆ ಆರಾಮಿರಲಿಲ್ಲ. ಹೀಗಾಗಿ ಸ್ವಲ್ಪ ರೆಸ್ಟ್ ಲೆಸ್ ಆಗಿದ್ದ ಆತ ಕಿರಿಕಿರಿ ಮಾಡುತ್ತಿದ್ದ. ಹೀಗಾಗಿ ಹತ್ತಿರ ಹೋಗುವುದು ಬೇಡ ಎಂದರು ಅದನ್ನು ನೋಡಿಕೊಳ್ಳುತ್ತಿದ್ದವರು. ಕೊನೆಗೆ ಸಾಮ್ರಾಟ ಬ್ಯಾಕ್ ಗ್ರೌಂಡ್ ನಲ್ಲಿರುವಂತೆ ಮಾಡಿ ಪಿಟಿಸಿ ಮಾಡಿದೆ. ಇಂದಿಗೂ ನನ್ನ ಫೆವರಿಟ್ ಪಿಟಿಸಿಗಳಲ್ಲಿ ಅದೂ ಒಂದು.

ಆದರೆ ಇನ್ನು ಸಾಮ್ರಾಟ ನೆನಪಷ್ಟೇ..ಛೆ….

(ನಿನ್ನೆ ಪ್ರಕಟವಾಗಿಬೇಕಿದ್ದ ಈ ಲೇಖನ ಕಾರಣಾಂತರಗಳಿಂದ ಇಂದು ಪ್ರಕಟವಾಗುತ್ತಿದೆ. ತಡವಾದುದಕ್ಕೆ ಕ್ಷಮೆಯಿರಲಿ)

Advertisements

ನನ್ನ “ಸಾಮ್ರಾಟ” ಇನ್ನಿಲ್ಲ

ನನ್ನ ಹಾಗೂ ಸಾಮ್ರಾಟನ ಭೇಟಿಯ ಕುರಿತ ಲೇಖನ ನಾಳೆ….

ಸುದ್ದಿ ಕೃಪೆ - ವಿಕ

ಐಶ್ವರ್ಯಾ ರೈ ಮದುವೆ ಅಟೆಂಡ್ ಮಾಡುತ್ತೀರಾ ಎಂದು ವಿವೇಕ್ ಓಬೇರಾಯ್ ಗೆ ಕೇಳಿದ್ದು…..

ಪ್ರೆಸೆನ್ಸ್ ಆಫ್ ಮೈಂಡ್ ಹಾಗೂ ಧೈರ್ಯ ಇವೆರಡೂ ಪತ್ರಕರ್ತನಿಗಿರಬೇಕಾದ ಅತ್ಯಗತ್ಯ ಗುಣಗಳಲ್ಲಿ ಪ್ರಮುಖವಾದವು. ಇವೆರಡರಲ್ಲಿ ಒಂದು ಕೈಕೊಟ್ಟರೂ ಎಡವಟ್ಟುಭಟ್ಟನಾಗುವುದು ಖಚಿತ. ಯಾಕೆಂದರೆ ಪ್ರೆಸೆನ್ಸ್ ಆಫ್ ಮೈಂಡ್ ಯಾವಾಗಲೂ ಧೈರ್ಯವನ್ನು ಬಯಸುತ್ತದೆ. ಧೈರ್ಯ ರಹಿತ ಪ್ರೆಸೆನ್ಸ್ ಆಫ್ ಮೈಂಡ್ ಮೊಬೈಲ್ ಇಲ್ಲದ ಸಿಮ್ ಹಾಗೆ ( ಹ್ಹೆ..ಹ್ಹೆ….ವಾಕ್ಯ ಕ್ಲಿಷೆ ಎನಿಸಿತೆ?)

ರಾಮಚಂದ್ರಾಪುರಮಠದಲ್ಲಿ ಪ್ರಪ್ರಥಮ ವಿಶ್ವಗೋಸಮ್ಮೇಳನದ ಸಂದರ್ಭ. ಬೆಂಗಳೂರಿನಿಂದ ನಾನು ಹಾಗೂ ಕ್ಯಾಮರಾಮನ್ ಕೊಂಡಯ್ಯ ಸಮ್ಮೇಳನದ ಕವರೇಜ್ ಗೆ ಹೋಗಿದ್ದವು. ಹಲವು ವಿಶಿಷ್ಟ ಭಾರತೀಯ ಗೋತಳಿಗಳು, ಅವುಗಳನ್ನು ವರ್ಣಿಸಲು ಬರುವವರಿದ್ದ ವಿದೇಶಿ ಗೋತಜ್ಞರು, ಗೋವಿನಂತೆ ಕಾಣುವ ಆದರೆ ಒಂದಿಷ್ಟೂ ಅದರ ಗುಣವನ್ನು ಹೊಂದಿರದ ರಾಜ್ಯದ ರಾಜಕಾರಣಿಗಳು, ಹಿರಿ,ಕಿರಿ, ಕಿರಿಕಿರಿ, ಪಿರಿಪಿರಿ ಮಠಾಧೀಶರು, ಲಕ್ಷಾಂತರ ಭಕ್ತರು ಹೀಗೆ ಹಲವರು ಪಾಲ್ಗೊಳ್ಳಲಿದ್ದ ಸಮ್ಮೇಳನವಾಗಿತ್ತು ಅದು. ನಾನು ಹಾಗೂ ಕೊಂಡಯ್ಯ ಒಂದು ದಿನ ಮುಂಚಿತವಾಗಿಯೇ ಮಠ ಸೇರಿಕೊಂಡಿದ್ದೆವು. ಸಮ್ಮೇಳನದ ಪ್ರಿಪರೇಷನ್ ಎಂದು, ನಾನಾಗಲೇ ಭಾರತೀಯ ಗೋತಳಿಗಳ ಹೆಸರುಗಳು, ಯಾವ ತಳಿ ಯಾವ  ರಾಜ್ಯಕ್ಕೆ ಸೇರಿದ್ದು, ಯಾವ ತಳಿ ಎಷ್ಟು ಹಾಲು ಕೊಡುತ್ತದೆ ಇತ್ಯಾದಿ ಎಲ್ಲವನ್ನೂ ಕಂಠಪಾಠ ಮಾಡಿಕೊಂಡು ಫುಲ್ ಆತ್ಮವಿಶ್ವಾಸದಿಂದ ಸಮ್ಮೇಳನವನ್ನು ಕವರ್ ಮಾಡಲು ಸಿದ್ಧನಾಗಿದ್ದೆ.

ಆದರೆ ಇದೇನಿದು, ಗೋ ಸಮ್ಮೇಳನದ ಮಧ್ಯದಲ್ಲಿ ‘ಹೋರಿ’ಯೊಂದು ಬಂದುಬಿಟ್ಟಿತ್ತು. ಹೋರಿಯಷ್ಟೇ ಅಲ್ಲ ಅದರ ಅಪ್ಪ ಕೂಡ ಬಂದಿದ್ದರು. ಖ್ಯಾತ ಬಾಲಿವುಡ್ ನಟ ವಿವೇಕ್ ಓಬೇರಾಯ್, ಆತನ ತಂದೆ ಸುರೇಶ್ ಓಬೇರಾಯ್ ಗೋಸಮ್ಮೇಳನಕ್ಕಾಗಿ ಬಂದಿದ್ದರು. ವಿವೇಕ್ ಓಬೇರಾಯ್ ಹಾಗೂ ಗೋವಿನ ಮಧ್ಯೆ ನನಗೆ ಯಾವ ಸಂಬಂಧವೂ ಕಾಣಿಸಲಿಲ್ಲ. ನಾನು ಚಕಿತನಾಗಿಬಿಟ್ಟೆ. ಆದರೆ ಸುರೇಶ್ ಓಬೇರಾಯ್ ರಾಮಚಂದ್ರಾಪುರಮಠದ ಸ್ವಾಮಿ ರಾಘವೇಶ್ವರರ ಭಕ್ತರು, ಹೀಗಾಗಿ ಕುಟುಂಬ ಸಮೇತ ಬಂದಿದ್ದಾರೆ ಎಂದು ತಿಳಿಯಿತು.

ಮಠದ ವಿವಿಧೆಡೆಗಳಲ್ಲಿ ಪೂಜೆಗಳು ನಡೆಯುತ್ತಿದ್ದವು. ಸ್ವಾಮಿಗಳ ಜೊತೆ, ಸುರೇಶ್ ಹಾಗೂ ವಿವೇಕ್ ಮತ್ತು ಆತನ ತಾಯಿ ಕೂಡ ಹೋಗುತ್ತಿದ್ದರು. ನಾನೂ ಸಹ ಕ್ಯಾಮೆರಾದೊಡನೆ ಹಿಂಬಾಲಿಸುತ್ತಿದ್ದೆ. ಸರಿಯಾದ ಟೈಮ್ ಗೆ ಬೈಟ್ ತೆಗೆದುಕೊಳ್ಳಲು ಅವಕಾಶ ಹುಡುಕುತ್ತಿದ್ದೆ. ವಿವೇಕ್ ಓಬೆರಾಯ್ ಆಕಳ ಮೈಸವರುವುದು, ಎತ್ತಿನಗಾಡಿ ಹೊಡೆಯುವುದು ಹೀಗೆ ಎಲ್ಲ ಶಾಟ್ಸ್ ಗಳನ್ನು ಆಗಲೇ ಕೊಂಡಯ್ಯ ತೆಗೆದುಕೊಂಡಿದ್ದರು.

ಇನ್ನೇನು ಮಂದಿರವೊಂದರಿಂದ ವಿವೇಕ್ ಹೊರಬರಲು ಕೆಲವೇ ಕ್ಷಣಗಳು ಬಾಕಿಯಿದ್ದವು. ನಾನು ಯಾವ ಯಾವ ಪ್ರಶ್ನೆಗಳನ್ನು ಕೇಳಬೇಕು ಎಂದು ಮನಸ್ಸಿನಲ್ಲಿ ಯೋಚಿಸುತ್ತಿದ್ದೆ. ಆಗಲೇ ಹೊಳೆದಿದ್ದು, ಅಂದು ಐಶ್ವರ್ಯಾ ರೈ ಹಾಗೂ ಅಭಿಷೇಕ್ ವಿವಾಹ ಕೂಡ ನಡೆಯುವುದಿತ್ತು. ನಿಮಗೆ ಗೊತ್ತಿರುವಂತೆ ‘ಆಜ್ ತಕ್’ ನ ‘ಸೀಧಿ ಬಾತ್’ ನಲ್ಲಿ ಪ್ರಭು ಚಾವ್ಲಾ ಜೊತೆ ಮಾತನಾಡುವಾಗ ತಾನು ಐಶ್ವರ್ಯಳನ್ನು ಮದುವೆಯಾಗುವುದಾಗಿ ವಿವೇಕ್ ಹೇಳಿ, ಬಾಲಿವುಡ್ ನಲ್ಲಿ ಭಾರೀ ಗದ್ದಲವೆಬ್ಬಿಸಿದ್ದ.

ಅಷ್ಟರಲ್ಲಿ ನನಗೆ ದ್ವಂದ್ವಕಿಟ್ಟುಕೊಂಡಿತು. ಐಶ್ವರ್ಯ ಕುರಿತಾದ ಪ್ರಶ್ನೆ ಕೇಳಲೋ ಬೇಡವೋ, ಕಾರ್ಯಕ್ರಮ ಗೋವಿಗೆ ಸಂಬಂಧಿಸಿದ್ದು, ಅಲ್ಲಿ ಯಾಕೆ ವೈಯುಕ್ತಿಕ ವಿಚಾರಗಳನ್ನು ಕೇಳುವುದು, ಇಲ್ಲ ಇಲ್ಲ ನಾನು ಪತ್ರಕರ್ತ ಕೇಳಲೇಬೇಕು, ಬೇಡ ಬೇಡ ಆತ ಸಿಟ್ಟುಗೊಂಡರೆ ಏನು ಮಾಡವುದು, ಅಥವಾ ಆತ ನನ್ನ ಪ್ರಶ್ನೆಗೆ ಬೇಸರಗೊಂಡು, ಮಠದ ಭಕ್ತರು ನನ್ನ ಮೇಲೆ ಬೇಸರಗೊಂಡರೆ, ಮುಂದಿನ ನಾಲ್ಕು ದಿನಗಳ ಕಾಲ ನನ್ನ ಕಥೆ ಅಷ್ಟೇ, ಬೇರೆ ಚ್ಯಾನಲ್ ನವರು ಯಾರೂ ಇಲ್ಲ, ಆತ ಮಾತನಾಡಿದರೂ ಸುದ್ದಿ, ಸುಮ್ಮನಿದ್ದರೂ ಸುದ್ದಿ,..,,ಹೀಗೆ ಐಶ್ವರ್ಯ ರೈ ವಿಷಯ ಕೇಳುವುದೋ ಬೇಡವೋ ಎಂಬ ಭಯಂಕರ ದ್ವಂದ್ವಕ್ಕೆ ಸಿಕ್ಕಿಬಿಟ್ಟೆ. ನಾನು ನಿರ್ಧರಿಸುವಷ್ಟರಲ್ಲಿ ವಿವೇಕ್ ತನ್ನಪ್ಪನೊಡನೆ ಹೊರಗೆ ಬಂದೇ ಬಿಟ್ಟ.

ತಕ್ಷಣ ಮೈಕ್ ಹಿಡಿದು, “ವಿವೇಕ್, ಆಪ್ ಗೋ ಸಮ್ಮೇಲನ್ ಆಯೆ ಹುವೆ ಹೈ. ವಜಹ್ ಕ್ಯಾ ಹೈ?” ಎಂದು ಮೊದಲು ವಾರ್ಮ್ ಅಪ್ ಪ್ರಶ್ನೆ ತೂರಿದೆ. ವಿವೇಕ್ ನಗುನಗುತ್ತಲೇ ತುಂಬ ಸಂತೋಷದಿಂದ ಉತ್ತರ ನೀಡಿದ. ಗೋವಿಗೆ ಸಂಬಂಧಿಸಿದ ಎರಡು ಮೂರು ಪ್ರಶ್ನೆಗಳಾದವು. ಆತ ಏನು ಉತ್ತರ ಕೊಡುತ್ತಿದ್ದಾನೆ ಎಂಬುದರತ್ತ ನನ್ನ ಗಮನ ಒಂಚೂರು ಇರಲಿಲ್ಲ…..ನನ್ನ ತಲೆಯಲ್ಲಿ ಏನಿದ್ದರೂ ಐಶ್ವರ್ಯಳೇ ಸುತ್ತುತ್ತಿದ್ದಳು.

ಅಷ್ಟರಲ್ಲಿ ರಾಘವೇಶ್ವರರು ಹೊರಬಂದು ಮತ್ತೊಂದು ದೇವಸ್ಥಾನಕ್ಕೆ ತೆರಳಿದರು. ವಿವೇಕ್ ಕೂಡ ಹೊರಡುವಂತೆ ಆತನ ಅಪ್ಪ ಆಗಿನಿಂದಲೂ ಆತನ ಹಿಂದೆ ನಿಂತು ಆಗ್ರಹಪಡಿಸುತ್ತಲೇ ಇದ್ದರು. ಬಹುಶಃ ಮಗನನ್ನು ಮೀಡಿಯಾದಿಂದ ದೂರವಿರಿಸುವುದು ಸುರೇಶ್ ಉದ್ದೇಶವಾಗಿತ್ತು. ಇನ್ನೇನು ವಿವೇಕ್ ಅಲ್ಲಿಂದ ತೆರಳಬೇಕು ಅಷ್ಟರಲ್ಲಿ ನಾನು,

“ವಿವೇಕ್, ಐಶ್ವರ್ಯಾ ಕಿ ಶಾದೀ ಮೇ ನಹೀಂ ಜಾಯೆಂಗೆ?” ಅಂತ ಕೇಳಿಯೇ ಬಿಟ್ಟೆ.

ವಿವೇಕ್ ನನ್ನು ತಳ್ಳಿದ ಅವರಪ್ಪ ಸುರೇಶ್ ಮುಂದೆ ಬಂದವರೇ “ದೇಖೋ ಐಸೆ ಫಾಲ್ತು ಸವಾಲೊಂಕೆ ಲಿಯೆ ಹಮಾರೆ ಪಾಸ್ ಟೈಮ್ ನಹೀಂ ಹೈ….ಜೋ ಕುಛ್ ಭೀ ಪೂಛನಾ ಹೈ ವೋ ಗೋಮಾತಾ ಕೆ ಬಾರೇ ಮೇಂ ಪೂಛೋ….ಢಂ…ಢಂ….ಢುಸ್..ಢುಸ್…”ಎನ್ನುತ್ತ ಹೋಗಿಬಿಟ್ಟರು. ಅಷ್ಟೇ ಸಾಕಾಗಿತ್ತು ನನಗೆ. ಸೀದಾ ಹೈದ್ರಾಬಾದಿಗೆ ಫೋನಾಯಿಸಿ ಹಿಂಗಿಂಗೆ ಹಿಂಗಿಂಗೆ, ಕ್ಯಾಸೆಟ್ ಇಷ್ಟು ಗಂಟೆಗೆ ಶಿವಮೊಗ್ಗ, ನಿಮಗೆ ವಿಶುವಲ್ ಇಷ್ಟೊತ್ತಿಗೆ ಸಿಗುತ್ತೆ ಅಂತ ಫೋನ್ ಮಾಡಿದೆ.

ಅಷ್ಟರಲ್ಲಿ ಮೋಹನ್ ಸರ್ ಫೋನ್ ಬಂತು. “ಏನು ಹೇಳಿದ ವಿವೇಕ್ ಓಬೇರಾಯ್?” ಸರ್ ಕೇಳಿದರು.

ನಾನು ಗೋವಿನ ಬಗ್ಗೆ ಹೇಳಲು ಶುರುಮಾಡುತ್ತಿದ್ದಂತೆ “ಅದಲ್ಲ ಸುಘೋಷ್, ಐಶ್ವರ್ಯ ಬಗ್ಗೆ ಏನು ಹೇಳಿದ?” ಎಂದು ಕೇಳಿದರು. ನಾನು ನೆಡೆದುದೆಲ್ಲವನ್ನೂ ಹೇಳಿದೆ. “ಸರಿ” ಎಂದು ಫೋನ್ ಕಟ್ ಮಾಡಿದರು. ಮರುಕ್ಷಣ ನನ್ನ ಮೊಬೈಲ್ ನಲ್ಲಿ ‘ಗುಡ್’ ಎಂಬ ಅವರ ಎಸ್ ಎಂ ಎಸ್ ನನ್ನನ್ನು ಉಬ್ಬುವಂತೆ ಮಾಡಿತ್ತು.

ಈ ಟಿವಿ ಕನ್ನಡದ ರಾತ್ರಿಯ 08.30 ರ ಪ್ರೈಮ್ ಬುಲೆಟಿನ್ ಹಾಗೂ ನಮ್ಮ ಇತರ 12 ನೆಟ್ ವರ್ಕ್ ಚ್ಯಾನಲ್ ಗಳಲ್ಲಿ ನಮ್ಮದು ಎಕ್ಸ್ ಕ್ಲೂಸಿವ್ ನ್ಯೂಸ್ ಟೆಲಿಕಾಸ್ಟ್ ಆಗುತ್ತಿದ್ದರೆ, ಉಳಿದ ಚ್ಯಾನಲ್ ಗಳಲ್ಲಿ ಅದೇ ಐಶ್ವರ್ಯ-ಅಭಿ ಮದುವೆ ನಡೆದ ಕಟ್ಟಡದ ಎಸ್ಟಾಬ್ಲಿಶ್ಮೆಂಟ್ ಶಾಟ್ ಬರುತ್ತಿತ್ತು.

ಇಂದಿಗೂ ನನಗೆ ಅನಿಸುತ್ತದೆ. ಒಂದು ವೇಳೆ ಆ ಪ್ರಶ್ನೆಯನ್ನು ನಾನು ಕೇಳದೆ ಹೋಗಿದ್ದರೆ ನಾನೆಂತಹ ತಪ್ಪು ಮಾಡಿಬಿಡುತ್ತಿದ್ದೆ ಎಂದು. ಏನೇ ಆಗಲಿ ಧೈರ್ಯಂ ಸರ್ವತ್ರ ಸಾಧನಂ….