ಟ್ರಾಫಿಕ್ ಪೋಲಿಸರು ಹೀಗೂ ಇರುತ್ತಾರೆ ಭಾಗ 3

ಇದು ನಾನು ನೋಡಿದ ಘಟನೆ. ಸ್ಥಳ ಕತ್ರಿಗುಪ್ಪೆ ಸಮೀಪದ ರಿಂಗ್ ರೋಡಿನಲ್ಲಿ ಐಸಿಐಸಿಐ ಬ್ಯಾಂಕ್  ಎದುರು. ಅದರ ಮುಂದೆ ಗಿಡಗಳಿಗವೆ. ಅಲ್ಲಿ ತಿಂಗಳಿನಲ್ಲಿ ಇಪ್ಪತ್ತೈದು ದಿನ ಒಬ್ಬ ನಿರ್ದಿಷ್ಟ ಟ್ರಾಫಿಕ್ ಎಸ್ಐ ಹಾಗೂ ಇಬ್ಬರು ನಿರ್ದಿಷ್ಟ ಪೋಲಿಸ್ ಪೇದೆಗಳು ಇರುತ್ತಾರೆ.

ಐಸಿಐಸಿಐ ಎಟಿಎಂ ನಲ್ಲಿ ಹಣ ಡ್ರಾ ಮಾಡಿಕೊಂಡು ಹೊರಬಂದಾಗ ಮಹಿಂದ್ರಾ ಗೂಡ್ಸ್ ಜೀಪ್ ಒಂದನ್ನು ಪೋಲಿಸ್ ಪ್ಯಾದೆ ಹಿಡಿದಿದ್ದ. ಯೂ ಟರ್ನ್ ನಿಷೇಧದ ತಿರುವಿನಲ್ಲಿ ಯೂ ಟರ್ನ್ ತೆಗೆದುಕೊಂಡಿರುವೆ ಎಂದು ಪ್ಯಾದೆ. ಇಲ್ಲ, ಇನ್ನೂ ಸ್ವಲ್ಪ ಮುಂದೆ ಹೋದರೆ ಡಿವೈಡರ್ ಬರುತ್ತದೆ.ಅಲ್ಲಿ ಯೂ ಟರ್ನ್ ತೆಗೆದುಕೊಂಡಿದ್ದೇನೆ ಎಂದು ಡ್ರೈವರ್. ವಾದವಿವಾದ ಸಾಗಿತ್ತು. ಪ್ಯಾದೆ ಆತನನ್ನು ಕರೆದುಕೊಂಡು ಹೋಗಿ ಎಸ್ಐ ಎದುರು ನಿಲ್ಲಿಸಿದ. ಡ್ರೈವರ್ ದೊಡ್ಡ ದನಿ ತೆಗೆದು ಮಾತನಾಡುತ್ತ, ತಾನು ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ ಎಂದು ಸಾಬೀತು ಮಾಡುವಲ್ಲಿ ಅಂತೂ ಸಫಲನಾದ. ಎಸ್ಐ ಆತನಿಗೆ ಹೋಗಲು ಹೇಳಿದ. ಪ್ರಕರಣ ಬೇಗ ಮುಗಿದಿದ್ದಕ್ಕೆ ಅಲ್ಲಿ ನಿಂತು ತಮಾಷೆ ನೋಡುತ್ತಿದ್ದ ಜನರಿಗೆ ಬೇಜಾರಾಯಿತು. ನನಗೆ ಬ್ಯಾಂಕಿನಲ್ಲಿ ಕೆಲಸವಿತ್ತಾದ್ದರಿಂದ ನಾನು ಬ್ಯಾಂಕ್ ಪ್ರವೇಶಿಸಿದೆ. ಐಸಿಐಸಿಐನ ಎಟಿಎಂ ಬ್ಯಾಲೆನ್ಸ್ ಸ್ಲಿಪ್ ಕೊಡುವಾಗ ಒಂದು ಟ್ರಾನ್ಸಾಕ್ಷನ್ ಸ್ಲಿಪ್ ಕೊಡುವ ಬದಲು ಮೂರು ಟ್ರಾನ್ಸಾಕ್ಷನ್ ಸ್ಲಿಪ್ ಕೊಡುತ್ತಿತ್ತು. ಅದನ್ನು ಮೂರನೇ ಬಾರಿ ಬ್ಯಾಂಕ್ ನ ಗಮನಕ್ಕೆ ತರಲು ಹೋಗಿದ್ದೆ. ನನ್ನ ಕೆಲಸ ಮುಗಿಯಿತು. ಹೊರಗೆ ಬಂದು ನೋಡಿದರೆ ಅಬ್ಬಾ ಅದೇನು ದೃಶ್ಯ. ಅದೇ ಡ್ರೈವರ್, ಪೋಲಿಸ್ ಪ್ಯಾದೆಯನ್ನು ವಾಚಾಮಗೋಚರ ಬೈಯುತ್ತಿದ್ದಾನೆ. “ಏನು ಮೊಬೈಲ್ ನಂಬರ್ ಕೇಳ್ತೀಯಾ? ನನ್ನ ನಂಬರ್ ತೆಗೆದುಕೊಳ್ಳೋದಾದರೆ ನಿನ್ನ ನಂಬರ್ ಕೂಡ ಕೊಡು. ಅದ್ಯಾರಿಗೆ ರಿಪೋರ್ಟ್ ಮಾಡುತ್ತೀಯೋ ನಾನೂ ನೋಡುತ್ತೇನೆ. ರೂಲ್ಸ್ ಏನು ಅಂತ ಪಬ್ಲಿಕ್ ಗೆ ಹೇಳಿಕೊಡುವ ಮೊದಲು ನೀನು ಮೊದಲು ರೂಲ್ಸ್ ತಿಳ್ಕೊ. ನೀನು ಪಬ್ಲಿಕ್ ಗೆ ಗೌರವ ಕೊಟ್ರೆ ಪಬ್ಲಿಕ್ಕೂ ನಿನಗೆ ಗೌರವ ಕೊಡುತ್ತೆ. ಬೆಳಿಗ್ಗೆಯಿಂದ ಹಿಂಗೆ ಅಂಗಡಿ ತೆರೆದುಕೊಂಡು ಕೂತರೆ ಗೌರವ ಹೇಗೆ ಬರುತ್ತೆ? ನಿನ್ನಂಥವರ ಎದುರು ನಾಯಿಗೆ ಬಿಸಾಕಿದ ಹಾಗೆ 100 ರೂಪಾಯಿ ಬಿಸಾಕಿದರೆ ಸುಮ್ಮನಾಗ್ತೀರ….”ಹೀಗೆ ಸಾಗಿತ್ತು ಡ್ರೈವರ್ ನ ಮಾತಿತ ಓಘ. ಡ್ರೈವರ್ ಕಡಿಮೆಯೆಂದರೂ 100 ಡೆಸಿಬಲ್ ಪರಿಮಾಣದಲ್ಲಿ ಮಾತನಾಡುತ್ತಿದ್ದರೆ, ಪೋಲಿಸ್ ಪ್ಯಾದೆ ಥರಗುಟ್ಟಿ ಹೋಗಿದ್ದ. ಎಸ್ಐ ಪೇದೆಯನ್ನು ವಾಪಸ್ ಬರುವಂತೆ ಹೇಳಿ ಹೇಳಿ ಸಾಕಾಗಿ ಹೋಗಿದ್ದ. ಪೋಲಿಸರ ಮಾನ ಎರಡೂಮುಕ್ಕಾಲು ಕಾಸಿಗೆ ಹರಾಜಾಗಿ ಹೋಗಿತ್ತು. ಜನ ಎಲ್ಲ ನಿಂತು ತಮಾಷೆ ನೋಡಿದ್ದರು. ಅಂತೂ ಡ್ರೈವರ್ ಶಾಂತನಾಗಿ ವಾಪಸ್ ಹೋಗಿ ತನ್ನ ಜೀಪಿನಲ್ಲಿ ಕುಳಿತ. ನಾನು ತಕ್ಷಣ ಹೋದವನೆ “ತುಂಬಾ ಚೆನ್ನಾಗಿ ಮಾತನಾಡಿದಿರಿ. ನಿಮ್ಮಂಥವರು ಬೇಕು” ಎಂದೆ. “ಸಾರ್, ನಾಲ್ಕು ಜನ ಪಬ್ಲಿಕ್ ನನ್ನ ಜೊತೆ ನಿಲ್ಲಲಿ ಸಾರ್ ಈ ಪೋಲಿಸರ ………….ಬಿಡುತ್ತೆನೆ” ಎಂದು ನಗುತ್ತ ಗಾಡಿ ಸ್ಟಾರ್ಟ್ ಮಾಡಿ ಹೊರಟು ಹೋದ.

ನನಗೆ ಅನಿಸಿದ್ದು.

ಭಾರತದಲ್ಲಿ ಇಂದಿಗೂ ಈ ರೀತಿಯ ಸಣ್ಣ ಸಣ್ಣ ವಿಶಲ್ ಬ್ಲೋವರ್ಸ್ ಇದ್ದಾರೆ. ಇಂತಹವರಿಂದಾಗಿಯೇ ಭ್ರಷ್ಟಾಚಾರ ನಿಯಂತ್ರಣದಲ್ಲಿದೆ. ಆದರೆ ಪ್ರತಿ ತಿಂಗಳೂ ಮಂತ್ಲಿ ಫಿಕ್ಸ್ ಮಾಡಿರುವ ಇನ್ಸ್ ಪೆಕ್ಟರ್, ಎಸಿಪಿ, ಡಿಸಿಪಿ, ಅವರಪ್ಪ, ಅವರಜ್ಜ ಬಡಪಾಯಿ ಪೋಲಿಸ್ ಪೇದೆಗಳ ಮೇಲೆ ಪ್ರೆಶರ್ ಹಾಕುತ್ತಿದ್ದರೆ, ಪಾಪ ಪೇದೆಗಳಾದರೂ ಬೆಳಿಗ್ಗೆ ಬೆಳಿಗ್ಗೆ ಅಂಗಡಿ ತೆರೆಯದೆ ಇನ್ನೇನು ಮಾಡುತ್ತಾರೆ. ವಿಕ್ಟಿಮ್ ಈಸ್ ದಿ ವೀಕೆಸ್ಟ್….

ಟ್ರಾಫಿಕ್ ಪೋಲಿಸರೂ ಹೀಗೂ ಇರುತ್ತಾರೆ ಭಾಗ -2

ಇದು ನನ್ನ ಮಿತ್ರನ ಮಿತ್ರನಿಗೆ ಆದ ಅನುಭವ.

ಆತನದ್ದು ಹೊಚ್ಚ ಹೊಸ ನೀಲಿ ಬಣ್ಣದ R15. ತೆಗೆದುಕೊಂಡು ವಾರವಷ್ಟೇ ಕಳೆದಿತ್ತು. ಬಿಸಿಬಿಸಿಬಿಸಿ ರಕ್ತ ಬೇರೆ. ಬೆಂಗಳೂರಿನ ಬಿಝಿಬಿಝಿಬಿಝಿ ರೋಡಿನಲ್ಲಿ R15 ಯದ್ವಾ ತದ್ವಾ ಸಾಗಿತ್ತು. ಬಿಡುತ್ತಾನೆಯೆ ಪೋಲಿಸಣ್ಣ. ಹಿಡಿದ. “ಓವರ್ ಸ್ಪೀಡ್” ಎಂದ. ಈತನ ಬಳಿ ಹಣ ಇಲ್ಲ.

“ಸಾರ್ ದುಡ್ಡಿಲ್ಲ”.

“ನನಗದೆಲ್ಲ ಗೊತ್ತಿಲ್ಲ. ತೆಗೆದುಕೊಂಡು ಬಾ” ಹೇಳಿತು ಪೋಲಿಸಣ್ಣ. ಈತನ ಹತ್ತಿರ ಕಾರ್ಡ್ ಕೂಡ ಇಲ್ಲ. ಪೋಲಿಸಣ್ಣನ ಮುಖ ನೋಡುತ್ತ ನಿಂತೇ ಇದ್ದ. ಐದು ನಿಮಿಷ ಕಳೆಯಿತು. ಹತ್ತು ನಿಮಿಷ ಕಳೆಯಿತು. ಪೋಲಿಸ್ ಬಿಡೆ, ಈತ ಕೊಡೆ.

“ಸರಿ, ಗಾಡಿ ಕೀ ಕೊಡು” ಅಂದಿತು ಪೋಲಿಸ್. ಈತ ಕೊಟ್ಟ. ಪೋಲಿಸಣ್ಣ ಗಾಡಿಯ ಮೇಲೆ ಕುಳಿತು ಸ್ಟಾರ್ಟ್ ಮಾಡಿದವನೇ ಬುರ್ ಎಂದು R15 ತೆಗೆದುಕೊಂಡು ಕ್ಷಣಾರ್ಧದಲ್ಲಿ ಹೋಗಿಬಿಟ್ಟ. ಈತನಿಗೆ ಒಂದು ಕ್ಷಣ ಏನು ಮಾಡಬೇಕೆಂದು ಗೊತ್ತಾಗಲೇ ಇಲ್ಲ. ಅಲ್ಲಿದ್ದ ಇತರ ಪೋಲಿಸರ ಮುಖ ನೋಡಿದ. ತಮಗೂ ಅವನಿಗೂ ಸಂಬಂಧವೇ ಇಲ್ಲದಂತೆ ಅವರು ನಿಂತಿದ್ದರು. ಈತನಿಗೆ ಭಯ ಶುರುವಾಯಿತು. ಆತ ಪೋಲಿಸ್ ಯೂನಿಫಾರ್ಮ್ ಧರಿಸಿದ್ದ ಕಳ್ಳನಾಗಿದ್ದರೆ ಹೋಯಿತು ತನ್ನ ಲಕ್ಷದ ಬೈಕ್ ಎಂದು. ಐದು ನಿಮಿಷದಲ್ಲಿ ಈತನ ದೇಹದಿಂದ ಎರಡು ಲೀಟರ್ ಬೆವರು ಹರಿದುಹೋಗಿತ್ತು. ಇನ್ನೊಂದು ನಿಮಿಷ ಕಳೆದಿದ್ದರೆ ಡಿಹೈಡ್ರೇಷನ್ ನಿಂದ ಸಾಯುವ ಸ್ಥಿತಿ. ಬೈಕ್ ತೆಗೆದುಕೊಂಡು ಹೋಗಿದ್ದ ಪೋಲಿಸಣ್ಣ ರಭಸದಿಂದ ಬಂದು ಗಕ್ಕನೆ ಬ್ರೇಕ್ ಹಾಕಿ ಬೈಕ್ ನಿಲ್ಲಿಸಿದ. ಕೀ ತೆಗೆದು ಈತನಿಗೆ ಕೊಡುತ್ತ, ತುಂಬಾ ದಿನಗಳಿಂದ ಈ ಬೈಕ್ ಹೊಡೆಯಬೇಕೆಂದಿದ್ದೆ. ಸಿಕ್ಕಿರಲಿಲ್ಲ. ಚೆನ್ನಾಗಿದೆ ಬೈಕು. ಆದರೆ ನಿಧಾನವಾಗಿ ಓಡಿಸು ಎಂದು ಈತನನ್ನು ಬೀಳ್ಕೊಟ್ಟ.

ಟ್ರಾಫಿಕ್ ಪೋಲಿಸರು ಹೀಂಗೂ ಇರುತ್ತಾರೆ….

(ಫೋಟೋ ಕೃಪೆ – ದಿ ಹಿಂದು. ಫೋಟೋ ರೆಫೆರೆನ್ಸಿಗೆ ಮಾತ್ರ)

ಕೆಲ ದಿನಗಳ ಹಿಂದೆ ನನ್ನ ಕಸಿನ್ ಅಭಿಜಿತ್ ನಿಗೆ ಆದ ಅನುಭವ.

ಆತ ಇತ್ತೀಚೆಗಷ್ಟೇ ಹಳೆ ಮಾದರಿಯ ಮಿರಿಮಿರಿ ಕಪ್ಪು ಬಣ್ಣದ ಸೆಕೆಂಡ್ ಹ್ಯಾಂಡ್ ಎನ್ಫೀಲ್ಡ್ ಬುಲೆಟ್ ಖರೀದಿಸಿದ್ದಾನೆ. ರಸ್ತೆಯಲ್ಲಿ ಆತ ಹೊರಟರೆ ಜನ ಹಂಗೆ ನಿಂತು ನೋಡಬೇಕು. ಅಂತ ಸೌಂಡು, ಅಂತ ಜೋರು ಬುಲೆಟ್ಟದು.  ಮೊನ್ನೆ ಸಿಗ್ನಲ್ ಜಂಪ್ ಮಾಡಿದ್ದಕ್ಕೆ ಟ್ರಾಫಿಕ್ ಪೋಲಿಸ್ ಅಡ್ಡಗಟ್ಟಿದ್ದ. ಫೈನ್ ಹಾಕುವುದಾಗಿ ಹೇಳಿದ. ಆದರೆ ಫೈನ್ ಹೋಗಲಿ ಅಡ್ಜಸ್ಟ್ ಮಾಡಿಕೊಳ್ಳುವುದಕ್ಕೂ ಈತನ ಬಳಿ ದುಡ್ಡಿಲ್ಲ. “ದುಡ್ಡಿಲ್ಲ ಸಾರ್” ಎಂದಿದ್ದಾನೆ ಟ್ರಾಫಿಕ್ ಪೋಲಿಸ್ ಗೆ. “ನನಗದೆಲ್ಲ ಗೊತ್ತಿಲ್ಲ. ಸುಮ್ನೆ ಫೈನ್ ಕಟ್ಟು” ಎಂದು ಕಡ್ಡಿ ಮುರಿದಂತೆ ಹೇಳಿದೆ ಪೋಲಿಸ್. “ದುಡ್ಡಿಲ್ಲ” ಎಂದು ಜೇಬುಗಳನ್ನು ತೆಗೆದು ತೋರಿಸಿದರೂ ಆತ ನಂಬಿಲ್ಲ. ಪುಣ್ಯಕ್ಕೆ ಅಭಿಜಿತ್ ಬಳಿ ಕಾರ್ಡ್ ಇತ್ತು. ಹೀಗಾಗಿ “ಸಾರ್, ನನ್ನ ಲೈಸೆನ್ಸ್ ನಿಮ್ಮ ಬಳಿಯೇ ಇರಲಿ. ಇಲ್ಲೇ ಹತ್ತಿರದಲ್ಲಿ ಎಟಿಎಂ ಇದೆ. ದುಡ್ಡು ವಿತ್ ಡ್ರಾವ್ ಮಾಡಿಕೊಂಡು ಬಂದು ಫೈನ್ ಕಟ್ಟುತ್ತೇನೆ” ಎಂದು ಬೈಕ್ ಏರಿ ಎಟಿಎಂಗೆ ಹೋಗಿದ್ದಾನೆ. ಈತನ ದುರಾದೃಷ್ಟಕ್ಕೆ ಮೂರ್ನಾಲ್ಕು ಬಾರಿ ಪ್ರಯತ್ನಿಸಿದರೂ ದುಡ್ಡು ಬಂದಿಲ್ಲ. ಮಷಿನ್ ಪ್ರಾಬ್ಲಂ. ಹತ್ತಿರದಲ್ಲಿ ಬೇರೆಲ್ಲೂ ಎಟಿಎಂ ಇಲ್ಲ. ದೂರ ಹೋಗೋಣವೆಂದರೆ ಗಾಡಿಯಲ್ಲಿ ಪೆಟ್ರೋಲ್ ಇಲ್ಲ. ಪೆಟ್ರೋಲ್ ಹಾಕಿಸಿಸೋಣವೆಂದರೆ ದುಡ್ಡೇ ಇಲ್ಲ.

ವಾಪಸ್ ಪೋಲಿಸನ ಬಳಿಗೆ ಬಂದು, “ಸಾರ್ ಎಟಿಎಂ ನಲ್ಲಿ ದುಡ್ಡಿಲ್ಲ” ಎಂದಿದ್ದಾನೆ. ನನಗದೆಲ್ಲ ಗೊತ್ತಿಲ್ಲ. ಫೈನ್ ಕಟ್ಲೇ ಬೇಕು ಎಂದು ಮತ್ತೊಮ್ಮೆ ಕಡ್ಡಿ ಮುರಿದಿದೆ ಪೋಲಿಸ್. ಈತನಿಗೆ ಏನೂ ತೋಚದೆ “ಸರಿ ಸಾರ್ ಮನೆಗೆ ಹೋಗಿ ತರುತ್ತೇನೆ” ಎಂದು ಬೈಕ್ ಏರಿ ಹೊರಡಬೇಕು ಅಷ್ಟರಲ್ಲಿ ಟ್ರಾಫಿಕ್ ಪೋಲಿಸ್ ತಡೆದು,

“ತಗೋ ಲೈಸೆನ್ಸ್ ವಾಪಸ್. ನೋಡು. ನಿನ್ನನ್ನು ಈಗ ಹೋಗಲು ಬಿಡುತ್ತಿದ್ದೇನೆ. ಆದರೆ ನಿನ್ನನ್ನು ನೋಡಿ ಅಲ್ಲ. ನಿನ್ನ ಬೈಕ್ ನೋಡಿ. ಒಂದಾನೊಂದು ಕಾಲದಲ್ಲಿ ನನ್ನ ಇಲಾಖೆಯ ಎನ್ಫೀಲ್ಡ್ ಬುಲೆಟ್ಟನ್ನು ನಾನು ಓಡಿಸುತ್ತಿದ್ದೆ. ಆಹಾ…ಎಂತಹ ಫೀಲ್ ಆ ಗಾಡಿ ಓಡಿಸುವಾಗ. ರಾತ್ರಿಯ ರೌಂಡ್ಸ್ ಗೆ ಹೊರಟೆನೆಂದರೆ ಕಳ್ಳರು, ಖದೀಮರು, ರೌಡಿಗಳು ನನ್ನ ಬುಲೆಟ್ ಸದ್ದಾಗುತ್ತಲೆ ಕುಂಡೆಗೆ ಕಾಲು ಕೊಟ್ಟು ಓಡುತ್ತಿದ್ದರು. ಈಗ ನೋಡು ಸ್ಪ್ಲೆಂಡರ್, ಪಲ್ಸರ್ ಕೊಟ್ಟುಬಿಟ್ಟಿದ್ದಾರೆ. ಒಂಚೂರು ಸುಖವಿಲ್ಲ. ಹೋಗು ಮಜಾ ಮಾಡು” ಎಂದು ಬಿಟ್ಟುಬಿಟ್ಟಿದ್ದಾನೆ. ಈತ ಬೈಕ್ ಏರಲು ಹೋದರೆ, ಮತ್ತೆ ಈತನನ್ನು ನಿಲ್ಲಿಸಿ ಹತ್ತಿರದ ಬೇಕರಿಗೆ ಕರೆದುಕೊಂಡು ಹೋಗಿ ಕೇಕ್ ತಿನ್ನಿಸಿ ಕಳಿಸಿದ್ದಾನೆ. ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಬೆಂಗಳೂರಿನಲ್ಲಿ ಈ ರೀತಿಯ ಪೋಲಿಸರೂ ಇದ್ದಾರೆ.