ಇದ್ರ ಇರ್ಬೇಕು ಇಂಥಾ ಹೆಂಡ್ತಿ…

ಕಳಿಸಿಕೊಟ್ಟದ್ದು – ವಿಕಾಸ್ ರಾವ್, ಕೊಪ್ಪ. 

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ...?

ಒಂದು ಎಕ್ಸ್ ಟ್ರಾ ಮರಿಟಲ್ ಅಫೇರ್ ಕವಿತೆ…

ಒಂದೇ ಒಂದ್ಸಲ

ಹೇಳಿ-ಬಿಡಬಹುದಿತ್ತು ಕಣೇ

ಹೇಳಲು ನಾಚಿಕೆಯಾಗುತ್ತಿದ್ದರೆ

ಪಟಪಟನೆ ಕಣ್ಣು ಮಿಟಕಿಸಬಹುದಿತ್ತು

ಕಾಲ ಹೆಬ್ಬೆರಳ ಕೆರೆಯಬಹುದಿತ್ತು

ದುಪಟ್ಟಾದ ಅಂಚನ್ನು ಬೆರಳಲ್ಲಿ ಸುತ್ತಬಹುದಿತ್ತು

ಕಣ್ಣಲ್ಲಿ ಕಣ್ಣಿಟ್ಟು ನಾಚಬಹುದಿತ್ತು.

ನೀವು ಹುಡುಗಿಯರು

ಹೇಳಿಕೊಡಬೇಕೆ?

ಒಂದಿನ ಮನೆಗೆ ಕರ್ದಿದ್ದೆ

ಊಟ ಹಾಕಿದ್ದೆ

ಹಿಡಿಕಡ್ಡಿ ಹಾಗಾಗಿದ್ದ ನನಗೆ

ಮೊಸರನ್ನ ಮಿಡಿ ಉಪ್ಪಿನಕಾಯಿ ಬಡಿಸಿದ್ದೆ.

ನೆನಪಾಯ್ತಾ?

ಅವತ್ತೇ ಹೇಳ್ತಿಯೇನೋ ಅಂದ್ಕೋಂಡಿದ್ದೆ

ಹೇಳ್ಳಿಲ್ಲ.

ಅವಳಿದ್ದಾಳಲ್ಲ ನಿನ್ನ ಗೆಳತಿ

ಹೌದಮ್ಮ ಅವಳೇ……ಇಂದಿಗೂ ಮದುವೆಯಾಗಿಲ್ಲ ನೋಡು.

ಎಷ್ಟು ಚೆನ್ನಾಗಿ ಕಮ್ಯುನಿಕೇಟ್ ಮಾಡ್ತಾಳೆ….

ಗೊತ್ತಾ? (ನನ್ನ ಕಂಡ್ರೆ)

ಪ್ರೀತಿ, ಕಾಮ, ಆಸೆ, ಇಚ್ಛೆ

ಎಲ್ಲವನ್ನೂ ಕಣ್ಣು, ಭಾಷೆ, ತುಟಿಯಿಂದ್ಲೇ

ಹೇಳಿಬಿಡ್ತಾಳೆ.

ನೀನೋಬ್ಳಿದೀಯಾ ಗೂಬೆ.

ಒಂದೇ ಒಂದ್ಸಲ ಹೇಳ್ತಿಯಾ ಅಂದ್ರೆ….

ಈಗ ಮಾತ್ರ ಒಂಥರಾ ಆಡ್ತೀಯಾ

ಆಗ ಮಾಡಬೇಕಾಗಿದ್ದೆಲ್ಲ ಈಗ ಮಾಡ್ತಿದೀಯಾ

ಏನ್ ಬಂತು ಹೇಳು?

ತುಂಬಾ ಲೇಟಾಯ್ತು ಅಷ್ಟೇ.

ಅಂದ ಹಾಗೆ ನಿನ್ ಗಂಡ ಸಾಫ್ಟ್ ವೇರಿ ಅಂತೆ

ಆರಂಕಿ ಸಂಬ್ಳ, ಆರ್ ತಿಂಗ್ಳು ಫಾರೆನ್ ಅಂತೆ

ನಾನ್ ಮಾತಾಡ್ದಾಗ ಮಾತ್ರ

ಪ್ಯೂರ್ ಗೂಬೆ ಅನ್ನಿಸ್ದ ಕಣೇ.

“ನಮ್ ಮಿಸೆಸ್ ಹ್ಯಾಂಡ್ ರೈಟಿಂಗ್ ತುಂಬಾ ಚೆನ್ನಾಗಿದೆ.

ಅದ್ಕೆ ಕವನ ಬರೀ ಅಂತ ಹೇಳಿದಿನಿ”

ಅಂದ.

ಹೂಂ…..ಅದ್ಹೇಗ್ ಬಾಳತೀಯೋ

ಇರ್ಲಿಬಿಡೆ.

ನಿಂಗೆ ‘ಜೆ’ ಆಗೋ ವಿಷಯ ಅಂದ್ರೆ

ನನ್ ಹೆಂಗಸ್ರು ನಿನ್ ಗಂಡಸ್ರ ಥರ ಇಲ್ಲ

ಸಾಹಿತ್ಯ-ಪಾಯಿತ್ಯ ಇಲ್ದೆ ಇದ್ರೂ

ಪೇಂಟಿಂಗ್ ಇದೆ. ಸೆನ್ಸ್ ಆಫ್ ಹ್ಯೂಮರ್ ಇದೆ.

ಆದ್ರೂ ಒಂದೇ ಒಂದ್ಸಲ

ನೀನು ಹೇಳಿ-ಬಿಡಬಹುದಿತ್ತು ಕಣೇ.

ಈಗ ಪ್ರಯಾರಿಟಿಗಳು ಬದಲಾಗಿವೆ

kemmu

ತುಮಕೂರಿನಲ್ಲಿ ಮುಕ್ತ ಮುಕ್ತ ಸಂವಾದ ಮುಗಿಸಿದ ನಂತರ ಖಾಸಗಿ ಕೆಲಸದ ನಿಮಿತ್ತ ಒಂದು ದಿನ ಅಲ್ಲೇ ತಂಗಿದ್ದು, ಮಾರನೆ ದಿನ ಬೆಂಗಳೂರಿಗೆ ಮರಳಿದೆ. ಅಷ್ಟರಲ್ಲಿ ತುಮಕೂರಿನ ಹತ್ತು ಹಲವು ಕಡೆಗಳಲ್ಲಿ ನೀರು ಕುಡಿದೆ. ನೀರು ಬದಲಾಗಿದ್ದೇ ಬದಲಾಗಿದ್ದು ಬೆಂಗಳೂರಿಗೆ ಬಂದ ತಕ್ಷಣ ಜ್ವರ, ನೆಗಡಿ, ಕೆಮ್ಮು. ಆರತಿ ತಗೊಂಡರೆ ಜ್ವರ, ತೀರ್ಥ ಸೇವಿಸಿದರೆ ಶೀತ ಎಂಬಂತಹ ಪ್ರಕೃತಿ ನನ್ನದಲ್ಲ. ಆದರೂ ತುಮಕೂರಿನಲ್ಲಿ ಮಳೆಯಲ್ಲಿ ನೆನೆದದ್ದು, ಬೆಂಗಳೂರಿನಲ್ಲಿ ಹವಾಮಾನ ವೈಪರೀತ್ಯ ಎಲ್ಲ ಸೇರಿಕೊಂಡು ಇಂದೂ ಕೂಡ ಕೆಮ್ಮುತ್ತಿದ್ದೇನೆ.

ಮೊನ್ನೆ ರಾತ್ರಿಯಿಂದ ನನ್ನ ಅರ್ಧಾಂಗಿಯದು ನಿರಂತರ ಹಟ. ಜೇನುತುಪ್ಪ ನೆಕ್ಕುತ್ತಿರಿ, ಕಷಾಯ ಕುಡಿಯಿರಿ, ಬಿಸಿ ನೀರೆ ಕುಡಿಯಿರಿ ಕೆಮ್ಮು ಕಡಿಮೆಯಾಗುತ್ತದೆ ಎಂದು ಒಂದೇ ಸಮನೆ ಸಲಹೆ. ಆಕೆಯ ಕಾಟಕ್ಕೆ ನಾನು ಆಗಾಗ ಆಕೆ ಹೇಳುತ್ತಿದ್ದುದನ್ನು ಪಾಲಿಸುತ್ತಿದ್ದೆನಾದರೂ ಸೀರಿಯಸ್ಸಾಗಿ ಏನೂ ಮಾಡುತ್ತಿರಲಿಲ್ಲ. ಎರಡು ದಿನ ಕಳೆದರೂ ನನ್ನ ಕೆಮ್ಮು ಮುಂದುವರೆದಿತ್ತು. ನಿನ್ನೆ ರಾತ್ರಿಯಿಂದ ಮಾತ್ರ ಸೀರಿಯಸ್ಸಾಗಿ ಜೇನುತುಪ್ಪ ನೆಕ್ಕಲು ಆರಂಭಿಸಿದ್ದೇನೆ. ಕಾರಣ ನನ್ನಾಕೆಯ ಒಂದೇ ಒಂದು ಹೇಳಿಕೆ.

ಸುಗು….ನೀನು ತುಮಕೂರಿನಿಂದ ಬಂದಾಗಿನಿಂದ ನಿನ್ನ ಕೆಮ್ಮು ಹಾಗೇ ಇದೆ. ನೀನು ಪ್ರತಿಬಾರಿ ಕೆಮ್ಮಿದಾಗಲೂ ಪುಟ್ಟ ನಿದ್ದೆಯಿಂದ ಬೆಚ್ಚಿ ಬೀಳುತ್ತಾನೆ. ಆತನ ನಿದ್ದೆ ಮುರಿಯುತ್ತಿದೆ. ಬೇಗ ಕೆಮ್ಮು ವಾಸಿ ಮಾಡಿಕೊ

ಹೌದು ಈಗ ಪ್ರಯಾರಿಟಿಗಳು ಬದಲಾಗುತ್ತಿವೆ.

ಟೇಕನ್ ಫಾರ್ ಗ್ರಾಂಟೇಡ್

111

ಲಂಬೋದರ ಸಹೋದ್ಯೋಗಿಗಳೊಂದಿಗೆ ಉತ್ತರ ಕರ್ನಾಟಕದ ಟೂರ್ ಗೆ ಹೋಗಿದ್ದ. ಬೆಳಗಾವ್ ಕುಂದಾ, ಧಾರವಾಡ ಪೇಡಾ, ಗೋಕಾರ್ ಕರದಂಟು ಹೀಗೆ ಹೋದ ಕಡೆಯಲ್ಲೆಲ್ಲ ಏನಾದರೊಂದು ಖರೀದಿಸುತ್ತಿದ್ದ. ಇಳಕಲ್ ಗೆ ಬಂದಾಗ ಅಲ್ಲಿಯ ಸೀರೆ ಫೇಮಸ್ ಎಂದು ಗೊತ್ತಾಯಿತು. ಹೆಂಡತಿಗೆ ಸೀರೆ ಖರೀದಿಸೋಣ ಎಂದುಕೊಂಡ ಲಂಬೋದರ, ಆದರೆ ತನ್ನ ಹೆಂಡತಿ ಸೀರೆ ಉಡುವುದನ್ನು ಬಿಟ್ಟು ವರ್ಷಗಳೇ ಕಳೆದಿವೆ. ಸೀರೆ ಎಂದರೆ ಆಕೆಗೆ ಅಷ್ಟಕಷ್ಟೇ ಎಂಬ ಸತ್ಯ ಹೊಳೆದು ಸೀರೆ ಕೊಳ್ಳಲಿಲ್ಲ.

ಟೂರ್ ಮುಗಿಸಿ ಮನೆಗೆ ಬಂದವನೇ ತಾನು ಕೊಂಡು ತಂದ ಸಾಮಾನುಗಳನ್ನೆಲ್ಲ ಮನೆಯವರೆದುರು ಪ್ರದರ್ಶಿಸಿದ.

“ಬೇಡ ಬೇಡ ಅಂತ ಹೇಳಿದ್ರೂ ಯಾಕೆ ಇಷ್ಟೆಲ್ಲಾ ಸಾಮಾನು ತರಕ್ಕೊದ್ರಿ….” ಅಂತ ಮಿಸೆಸ್ ಲಂಬೋದರ ಸಿಡಿಮಿಡಿಗೊಂಡಳು.

ಆಗಷ್ಟೇ ದೇವಸ್ಥಾನದಿಂದ ಮರಳಿದ ಲಂಬೋದರನ ತಾಯಿ, “ಲಂಬೋದರ, ಇಳಕಲ್ ಸೀರೆ ತರಲು ಹೇಳಿದ್ದನೆಲ್ಲ….. ತಂದಿದ್ದೀಯಾ?” ಎಂದು ಕೇಳಿದಳು.