ಹೌಸ್ ಹೋಲ್ಡ್ ಲೇಖನಗಳನ್ನು ಯಾರು ತೆಗೆದುಕೊಳ್ಳುತ್ತೀರಿ?

ಇಂದಿನ ಕನ್ನಡ ಪತ್ರಿಕೆಯೊಂಂದರಲ್ಲಿ ಪ್ರಕಟವಾದ ಜಾಹೀರಾತು. ತುಂಬಾ ತಲೆಕೆಡಿಸಿಕೊಂಡ ನಂತರ ‘ಲೇಖನ’ ಅರ್ಥವಾಯಿತು.

IMG_20171201_131836931_HDR (3)

ಇತಿ ಮರ್ಕಟ ಪುರಾಣಂ ಸಂಪೂರ್ಣಂ

  • ವಾಣಿ ಶ್ರೀಹರ್ಷ

monkey

ನಮ್ಮ ಪರಿಚಿತರು ಹೇಳಿದ ಘಟನೆ ಇದು.

ಅವರ ತೋಟಕ್ಕೆ ಮಂಗಗಳ ಕಾಟ ವಿಪರೀತವಾಗಿತ್ತಂತೆ. ಅಲ್ಲಿಗೆ ಸಮೀಪದಲ್ಲಿ ಇದ್ದ ಕಾಡು ಜನಾಂಗದ ಜನರು ” 750 ರೂ ಗಳಿಗೆ ಒಂದು ಮಂಗ ಹಿಡಿದು ಕೊಡುತ್ತೇವೆ. ಪ್ರತಿದಿನ 20 ಶೇರು ಶೇಂಗಾ, 10 ಕೆಜಿ ಬಾಳೆಹಣ್ಣು ಕೊಡಬೇಕು” ಎನ್ನುವ ಷರತ್ತನ್ನು ಹೇಳಿದರು.. ಇವರೋ ಮಂಗಗಳ ಕಾಟ ತಡೆಯಲಾರದೇ ಸರಿ ಅಂತ ಒಪ್ಪಿಕೊಂಡರು.

ಮರುದಿನ ಆ ಜನಾಂಗದವರು ತೋಟಕ್ಕೆ ಬಂದರು. ಇವರು ಶೇಂಗಾ ಬಾಳೆಹಣ್ಣು ತರಿಸಿಕೊಟ್ಟರು. ಆ ಜನಾಂಗದವರು 6-8 ಜನ ಇದ್ದರು. ತೋಟದಲ್ಲಿ ಮಂಗಗಳು ಹೆಚ್ಚು ಸುಳಿಯುವ ಜಾಗದಲ್ಲಿ ಗುಂಪಾಗಿ ಕುಳಿತು ಶೇಂಗಾ , ಬಾಳೇಹಣ್ಣನ್ನು ತಿನ್ನತೊಡಗಿದರು.ಇಡೀದಿನ ಅದೇ ಕೆಲಸ ಮಾಡಿದರು. ಮರುದಿನ ಮತ್ತೆ ಬಂದು ಮತ್ತದೇ ಕೆಲಸ ಮಾಡಿದರು. ಇವರಿಗೆ ಸಿಟ್ಟು ಬಂದು ” ಮಂಗ ಹಿಡಿಯೋಕೆ ಅಂತ ಬಂದು , ಶೇಂಗಾ ಬಾಳೆಹಣ್ಣು ತಿಂದು ಹೋಗ್ತಿದೀರಾ” ಅಂತ ಬೈದರು. ಅವರು ” 2 ದಿನ ಕೊಡಿ ಸಾಮೀ… ಹಂಗ ಬಂದು ಹಿಂಗ ಮಂಗ ಹಿಡ್ಕೊಡೋದು ಅಂದ್ರ ಸುಲಭ ಅಂದ್ಕೊಂಡಿದೀರಾ” ಅಂತ ಇವರಲ್ಲಿ ಕೇಳಿದಾಗ ಇವರು ಸುಮ್ಮನಾಗಿ ಮತ್ತೆರಡು ದಿನ ನೋಡೋಣ ಅಂದುಕೊಂಡರು.

ಮತ್ತೆ 4-5 ದಿನದಲ್ಲಿ 18-20 ಮಂಗಗಳನ್ನು ಹಿಡಿದುಕೊಟ್ಟಾಗ ಇವರಿಗೆ ಆಶ್ಚರ್ಯ. ಆಗ ಮಂಗಗಳನ್ನು ಹಿಡಿಯುವ ರೀತಿಯನ್ನು ಅವರು ವಿವರಿಸಿದರಂತೆ. ಮಂಗಗಳು ಹೆಚ್ಚಾಗಿ ಸುಳಿದಾಡುವ ಜಾಗದಲ್ಲಿ ಆ ಜನಾಂಗದವರು ಮೊದಲೆರಡು ದಿನ ಸುಮ್ಮನೆ ಕೂತು ಶೇಂಗಾ, ಬಾಳೆಹಣ್ಣುಗಳನ್ನು ತಿನ್ನುತ್ತಾರೆ. ಸಿಪ್ಪೆ ಅಲ್ಲೇ ಎಸೆಯುತ್ತಾರೆ. ಮಂಗಗಳು ಇದನ್ನೇ ಗಮನಿಸುತ್ತಾ ಇರುತ್ತವೆ. ಅವರು ಆ ಜಾಗ ಬಿಟ್ಟು ಹೋದ ನಂತರ ಅಲ್ಲಿಗೆ ಬಂದು ಅದರಲ್ಲಿ ಉಳಿದ ಶೇಂಗಾಗಳನ್ನು ತಿನ್ನುತ್ತವೆ. ಮೂರನೇ ದಿನ ಒಂದು ಶೇರು ಅಗಲ, 2 ಅಡಿ ಆಳದ ಸಣ್ಣ ಗುಂಡಿ ತೋಡಿ, ಶೇಂಗಾ ತಿಂದು ಸಿಪ್ಪೆಗಳನ್ನು ಅದರೊಳಗೆ ತುಂಬುತ್ತಾರೆ. ನಂತರ ತೆಳುವಾದ ಗಟ್ಟಿ ದಾರ ಅಥವಾ ತಂತಿಯನ್ನು ಉರುಳಿನ ಥರ ಮಾಡಿ ಅದರಲ್ಲಿ ಇಟ್ಟು , ಸ್ವಲ್ಪ ದೂರ ಹೋಗಿ ಕೂತು ಮತ್ತೆ ಇದೇ ಥರ ಶೇಂಗಾ ತಿನ್ನುತ್ತಾರೆ. ಆ ಉರುಳಿನ ಒಂದು ಕೊನೆ ಇವರ ಕೈಯಲ್ಲಿ ಇರುತ್ತದೆ. ಹೀಗೇ 5-6 ಗುಂಡಿಗಳನ್ನು ತೋಡಿ ಇದೇ ಥರ ಮಾಡಿ ಮಧ್ಯದಲ್ಲಿ ಕೂತು ಎಲ್ಲ ಉರುಳುಗಳ ಕೊನೆಯನ್ನು ಹಿಡಿದು ಕಾಯುತ್ತಿದ್ದ ಹಾಗೇ , ಮಂಗಗಳು ಮರದಿಂದ ಕೆಳಗಿಳಿದು ಸಿಪ್ಪೆಗಳಲ್ಲಿ ಉಳಿದ ಶೇಂಗಾಗಳನ್ನು ಆರಿಸಿ ತಿನ್ನಲು ಬರುತ್ತವೆ.ಆಗ ಶೇಂಗಾ ಹುಡುಕುತ್ತಾ ಕೈಯನ್ನು ಗುಂಡಿಯ ಒಳಗೆ ಹಾಕಿದಾಗ ಆ ಜನಾಂಗದವರು ಕೊನೆಯನ್ನು ಎಳೆದುಬಿಡುತ್ತಾರೆ. ಆಗ ಮಂಗಗಳು ಸಿಕ್ಕಿಕೊಳ್ಳುತ್ತವೆ.

ಮಂಗಗಳನ್ನು ದೂರದ ಕಾಡಿಗೆ ಬಿಟ್ಟು ಬನ್ನಿ ಅಂದರೆ ಅವರು ಕೇಳಲೇ ಇಲ್ಲವಂತೆ. ” ನೀವು 750 ಅಲ್ಲ, ಏಳೂವರೆ ಸಾವಿರ ಕೊಡ್ತೇನೆ ಅಂದ್ರೂ ಈ ಕೆಲಸ ನಾವು ಮಾಡಾಕಿಲ್ಲ ಸಾಮೀ…. ಪಾರೆಸ್ಟ್ ನವರು ನಮ್ಮನ್ನು ಹಿಡಿದ್ರು ಅಂದ್ರೆ ಜೇಲೇ ಗತಿ.. ನಾವು ಹಿಡ್ದುಕೊಡ್ತೀವಿ ಅಂದ್ವಿ. ಹಿಡ್ದುಕೊಟ್ವಿ. ನಮ್ಮ ಹಣ ಕೊಡಿ.ನಾವು ಹೋಗ್ತೀವಿ” ಅಂತ ಹಣ ತೆಗೆದುಕೊಂಡು ಹೋದರಂತೆ. ನಂತರ ಇವರೇ ಒದ್ದಾಡಿಕೊಂಡು ದೂರದ ಕಾಡಿಗೆ ಬಿಟ್ಟು ಬಂದಿದ್ದಾರಂತೆ. 2 ತಿಂಗಳಾಗಿದೆ. ಮುಂದೇನು ಅಂತ ನೋಡಬೇಕು.ಸಧ್ಯಕ್ಕೆ ಮಂಗಗಳು ಖಾಲಿಯಾಗಿವೆ ಅಂತ ಸಮಾಧಾನದ ನಿಟ್ಟುಸಿರುಬಿಟ್ಟರು.🙂