We have made it!!

ನೊಣವೇ…..ಐ ಆಮ್ ಸಾರಿ…..

ನಾವು ಚಿಕ್ಕಂದಿನಲ್ಲಿರಬೇಕಾದರೆ ಹಲವು ವಿಚಿತ್ರ ಕೆಲಸಗಳನ್ನು ಮಾಡುತ್ತೇವೆ. ಅವುಗಳಿಗೆ ಸೈಕಾಟ್ರಿಸ್ಟಗಳು ವಿವಿಧ ಕಾಯಿಲೆಗಳ ಕಾರಣ ಕೊಡುತ್ತಾರೆ ಎಂಬುದು ಬೇರೆ ವಿಚಾರ. ಆದರೆ ಎಲ್ಲರೂ ಒಂದಿಲ್ಲ ಒಂದು ಬಾರಿ, ಈ ರೀತಿಯ ಕೆಲಸಗಳನ್ನು ಮಾಡಿರುತ್ತಾರೆ. ಪಾತರಗಿತ್ತಿಯ ರೆಕ್ಕೆಗಳನ್ನು ಕತ್ತರಿಸುವುದು, ‘ಹೆಲಿಕಾಪ್ಟರ್’ ಎಂದು ಮಕ್ಕಳು ಕರೆಯುವ ಹೆಲಿಕಾಪ್ಟರ್ ನಂತೆ ಕಾಣುವ ಕೀಟವನ್ನು ಹಿಡಿದು ಅದಕ್ಕೆ ದಾರ ಕಟ್ಟಿ ಎಳೆಯುವುದು ಇತ್ಯಾದಿ ಈ ಕೆಟೆಗರಿಯಲ್ಲಿ ಬರುತ್ತವೆ.

ನಾನಾಗ ಎಂಟನೇ ಕ್ಲಾಸಿನಲ್ಲಿದ್ದೆ. ವಿದ್ಯುತ್ ಬಗ್ಗೆ ಆಗಷ್ಟೇ ಪಾಠಗಳು ಆರಂಭವಾಗಿದ್ದವು. ತೀರ ಸಣ್ಣವನಿದ್ದಾಗ ಒಮ್ಮೆ ಶಾಕ್ ಹೊಡೆಸಿಕೊಂಡಿದ್ದು ಬಿಟ್ಟರೆ, ವಿದ್ಯುತ್ ತೀವ್ರತೆ ಅಷ್ಟೊಂದು ಅರ್ಥವಾಗಿರಲಿಲ್ಲ. ಹೀಗಾಗಿ ಆ ವಿದ್ಯುತ್ ಬಗ್ಗೆ ತೀವ್ರವಾದ ಆಸಕ್ತಿ ಹುಟ್ಟಿಕೊಂಡುಬಿಟ್ಟಿತ್ತು. ಇಂತಿಪ್ಪ ಸಂದರ್ಭದಲ್ಲಿ, ಆಗಷ್ಟೇ ನೊಣಗಳನ್ನು ಕೈಯಲ್ಲಿ ಛಕ್ ಎಂದು ಹಿಡಿಯುವ ಅನಗತ್ಯ, ಬೇಡವಾದ ಕಲೆಯನ್ನು ಸಿದ್ಧಿಸಿಕೊಂಡಿದ್ದೆ.

ಆಗ ಹೊಳೆದ ಐಡಿಯಾನೇ ನೊಣಕ್ಕೆ ಶಾಕ್ ಹೊಡೆಸಿ ಕೊಲ್ಲುವುದು.

ನಾನು ಮಾಡುತ್ತಿದ್ದುದ್ದು ಇಷ್ಟೆ. ಮೊದಲು ನೊಣವನ್ನು ಹಿಡಿಯುತ್ತಿದ್ದೆ. ನಂತರ ಅದನ್ನು ಎರಡೂ ಬೆರಳುಗಳಲ್ಲಿ ಹಿಡಿದು ಸಾಕೆಟ್ ನೊಳಗೆ ತೂರಿಸುತ್ತಿದ್ದೆ. ಸ್ವಿಚ್ ಆನ್ ಮಾಡುತ್ತಿದ್ದೆ. ಕ್ಷಣಾರ್ಧದಲ್ಲಿ ಅದರ ಪ್ರಾಣನೊಣ ಹಾರಿಹೋಗುತ್ತಿತ್ತು. ಇಟ್ ವಾಸ್ ಆಸ್ ಸಿಂಪಲ್ ಆಸ್ ದಾಟ್. ಇಷ್ಟರಲ್ಲಿ ಒಂದು ಅಚಾತುರ್ಯ ನಡೆದು ಹೋಯಿತು. ಉಳಿದ ನೊಣಗಳು ನಾನು ಹೀಗೆ ಮಾಡುವುದನ್ನು ನೋಡಿ ಬಿಟ್ಟವು. ಈ ಬಾರಿ ನಾನು ನೊಣವನ್ನು ಸಾಕೆಟ್ ನಲ್ಲಿ ತೂರಿಸಿ, ಇನ್ನೇನು ಸ್ವಿಚ್ ಅದುಮಬೇಕು ಅನ್ನುವಷ್ಟರಲ್ಲಿ ತೂತಿನೊಳಗಿನಿಂದ ಹೊರಬಂದು ಹಾರಿಹೋಗತೊಡಗಿದವು.

ನಾನು ಸೋಲೊಪ್ಪಿಕೊಳ್ಳುವ ಮಾತೇ ಇರಲಿಲ್ಲ. ಯಕಶ್ಚಿತ್ ನೊಣದ ಎದುರಿಗೆ ಸೋಲುವುದುಂಟೆ? ಸಾಧ್ಯವಿಲ್ಲ, ಸಾಧ್ಯವಿಲ್ಲ. ಅದಕ್ಕೆ ಉಪಾಯ ಮಾಡಿದೆ. ನೊಣವನ್ನು ಸಾಕೆಟ್ ನಲ್ಲಿ ತೂರಿಸಿ, ಅದು ಹೊರ ಬರುವಾಗ ಬೆಂಕಿಕಡ್ಡಿಯಿಂದ ಒಳಗೇ ಒತ್ತಿ ಹಿಡಿಯುತ್ತಿದ್ದೆ. ಆಮೇಲೆ ಸ್ವಿಚ್ ಅದುಮಿದರೆ ನೊಣ ಸತ್ತುಹೋಗುತ್ತಿತ್ತು. ಹೀಗೆ ಸಾಗಿತ್ತು ನನ್ನ ಆಟ. ಆಮೇಲೆ ಏನೋ ಆಗಿ ಆ ಬೆಂಕಿಕಡ್ಡಿ ಮುರಿದು ಹೋಗಿಬಿಟ್ಟಿತು.

ಆಗ ನಾನು ಮತ್ತೊಂದು ಬೆಂಕಿಕಡ್ಡಿ ತೆಗೆದುಕೊಳ್ಳಲು ಅಡಿಗೆ ಮನೆಗೆ ಹೋದೆ. ಬೆಂಕಿಪೊಟ್ಟಣ ಖಾಲಿಯಾಗಿತ್ತು. ಹೀಗಾಗಿ ಮತ್ತೆ ರೂಮಿಗೆ ಬಂದು ಗುಂಡುಸೂಜಿಯೊಂದನ್ನು ತೆಗೆದುಕೊಂಡೆ. ನೊಣ ಹಿಡಿದೆ. ಸಾಕೆಟ್ ನೊಳಗೆ ತೂರಿಸಿದೆ. ಅದು ಹೊರಬರಲು ನೋಡಿತು. ಗುಂಡುಸೂಜಿಯಿಂದ ಒಳಗೆ ಒತ್ತಿ ಹಿಡಿದೆ. ಸ್ವಿಚ್ ಅದುಮಿದೆ. ಅಷ್ಟೇ….ಭಡ್…..ಎಂದು ಹೊಡೆಯಿತು ನೋಡಿ ಶಾಕ್. ನಾನೆಲ್ಲೊ, ನೊಣವೆಲ್ಲೋ, ಗುಂಡುಸೂಜಿಯೆಲ್ಲೋ……..ಒಂದು ಕ್ಷಣ ಏನಾಯಿತೆಂದು ಗೊತ್ತಾಗಲಿಲ್ಲ. ಕೈಗೆ ಸರಿಯಾಗಿ ಶಾಕ್ ಹೊಡೆದಿತ್ತು. ನಾನು ಮಾಡಿದ ಪಾಪಕ್ಕೆ ಸರಿಯಾಗಿ ಪ್ರಾಯಶ್ಚಿತ್ತವಾಗಿತ್ತು. ವಿದ್ಯುತ್ ಅವಾಹಕವಾದ ಬೆಂಕಿಕಡ್ಡಿಯ ಮುಖಾಂತರ ವಿದ್ಯುತ್ ಹರಿದಿರಲಿಲ್ಲ. ಆದರೆ ಕಬ್ಬಿಣದ ಗುಂಡುಸೂಜಿಯಿಂದ ವಿದ್ಯುತ್ ಸಡನ್ ಆಗಿ ಹರಿದಿತ್ತು.

ಇಂದಿಗೂ ಅಂತಹ ಆಟ ಆಡಿದ್ದಕ್ಕೆ ನನಗೆ ಖೇದವಿದೆ. ಆದರೆ ಹುಡುಗ ಮನಸ್ಸಿಗೆ ಅದ್ಯಾವುದೂ ಗೊತ್ತಾಗುತ್ತಿರಲಿಲ್ಲ. ದೇವರು ಮಾತ್ರ ಸರಿಯಾಗಿ ಶಿಕ್ಷೆ ನೀಡಿದ್ದ. ಇಂದು ಮಾತ್ರ ನಾನು ಭಾರೀ ಪ್ರಾಣಿಪ್ರಿಯನಾಗಿದ್ದೇನೆ. ನಾನು ಮನೆಯಿಂದ ಹೊರಬಿದ್ದ ತಕ್ಷಣ ಬೀದಿನಾಯಿಗಳು ಬಂದು ಬಾಲವಲ್ಲಾಡಿಸುತ್ತ ನಿಲ್ಲುತ್ತವೆ. ಯಾರ ಬಳಿಯೂ ಹೋಗದ ಇತರರ ಮನೆಯ ಬೆಕ್ಕುಗಳು ನನ್ನ ತೊಡೆಯ ಮೇಲೆ ಬಂದು ಕೂರುತ್ತವೆ. ನಾನು ಇಂದಿಗೂ ಕೂಡ ಸೊಳ್ಳೆಯನ್ನು ಅನಿವಾರ್ಯವಾಗಿಲ್ಲವಾದರೆ ಹೊಡೆಯುವುದಿಲ್ಲ. ಹಾಗೇ…..ನೊಣಕ್ಕೆ ಒಂದೇ ಮಾತು ಹೇಳುತ್ತೇನೆ…..

ನೊಣವೇ…ಐ ಆಮ್ ಸಾರಿ……

ಹೆಂಗಸರು ಏನು, ಹೇಗೆ, ಎಷ್ಟು ವಿಚಾರ ಮಾಡುತ್ತಾರೆ?

ಶಶಿ ಜೋಯಿಸ್ ಅವರ ಕೃಪೆಯಿಂದ…..

The following diagram demonstrates the THOUGHTS in male and female brain during the simple question, “Shall we go for a party?”

ಟರ್ನಿಂಗ್ ಪಾಯಿಂಟ್ ಸ್ಟೋರಿ, ಟೋಪಿ ಹಾಕುವ ಹೊಸ ಪರಿ

ಚಿತ್ರರಂಗದಲ್ಲಿ ಆಗುವ ತರಲೆ, ತಾಪತ್ರಯ, ಟೋಪಿ ಹಾಕುವ ಹೊಸ ಹೊಸ ಪದ್ಧತಿಗಳ ಆವಿಷ್ಕಾರಗಳು ಒಂದೆರಡಲ್ಲ. ನನಗೆನಿಸುವ ಮಟ್ಟಿಗೆ ರಾಜಕಾರಣಕ್ಕಿಂತ ಒಂದು ಗುಲಗುಂಜಿ ಹೆಚ್ಚು ದಗಲಬಾಜಿಗಳು ಚಿತ್ರರಂಗದಲ್ಲಿದ್ದಾರೆಂದು. ಸಹಕಲಾವಿದರೊಬ್ಬರು ಮೊನ್ನೆ ನನಗೆ ಹೇಳಿದ ಘಟನೆ ಇದು.

ಪಾಪ ಆ ಹುಡುಗ ಹಿರೋ ಆಗಬೇಕೆಂದು ಬೆಂಗಳೂರಿಗೆ ಬಂದವನು. ಹೇಗ್ಹೇಗೋ ಮಾಡಿ ಒಬ್ಬ ನಿರ್ದೇಶಕನ ಕಣ್ಣಿಗೆ ಬಿದ್ದ. ಸ್ಕ್ರೀನ್ ಟೆಸ್ಟ್ ನೀಡಿದ ಬಳಿಕ ನಿರ್ದೇಶಕ ಹೇಳಿದ್ದಿಷ್ಟು, “ನೀನು ತುಂಬಾ ಚೆನ್ನಾಗಿ ಆಕ್ಟ್ ಮಾಡ್ತೀಯಾ. ನಿನ್ನಂಥವರನ್ನೇ ಗಾಂಧಿ ನಗರ ಆರಿಸಿಕೊಳ್ಳುತ್ತದೆ. ನೀನು ಸರಿಯಾದ ಟೈಮ್ ಗೆ ಬಂದಿದೀಯಾ. ನಾನೊಂದು ಹೊಸ ಚಿತ್ರ ನಿರ್ದೇಶನ ಮಾಡ್ತಾ ಇದ್ದೇನೆ. ಅದರಲ್ಲಿ ಒಂದು ಅದ್ಭುತ ಪಾತ್ರವಿದೆ. ಅದು ಟರ್ನಿಂಗ್ ಪಾಯಿಂಟ್ ನಲ್ಲಿ ಬರುವ ಪಾತ್ರ. ಆದರೆ ಅದಕ್ಕಾಗಿ ನೀನು ಸ್ವಲ್ಪ ಖರ್ಚು ಮಾಡಬೇಕಾಗುತ್ತೆ”  ಎಂದು ಹೇಳಿ ಹುಡಗನಿಂದ ಸಾಕಷ್ಟು ಹಣ ಕಕ್ಕಿಸಿಕೊಂಡಿದ್ದಾನೆ. ಹುಡುಗ ಫೋನ್ ಮಾಡಿದಾಗಲೆಲ್ಲ ಅಂದು ಶೂಟಿಂಗ್ ಇಂದು ಶೂಟಿಂಗ್ ಎಂದು ಹೇಳಿ ಮುಂದೆ ಹಾಕಿದ್ದಾನೆ ನಿರ್ದೇಶಕ ಮಹಾಶಯ. ಅಂತೂ ಕೊನೆಗೊಂದು ದಿನ ಶೂಟಿಂಗ್ ಆರಂಭವಾಗಿದೆ. ಹುಡಗನಿಗೋ ಖುಷಿಯೋ ಖುಷಿ.

ಮೊದಲ ದಿನ ತೀರ ಉತ್ಸಾಹದಿಂದಲೇ ಹೊಸ ಡ್ರೆಸ್ ಹಾಕಿಕೊಂಡು ಶೂಟಿಂಗ್ ಗೆ ಹೋಗಿದ್ದಾನೆ. ಅಂದು ಭೇಟಿಯಾದ ನಿರ್ದೇಶಕ, “ಆಕ್ಟರ್ ಗಳು ಹೇಗೆ ಪಾತ್ರ ಮಾಡುತ್ತಾರೆ ಗಮನಿಸು. ನೀನು ತುಂಬಾ ಕಲಿಯಬೇಕು. ನಿನ್ನದು ಟರ್ನಿಂಗ್ ಪಾಯಿಂಟ್ ನಲ್ಲಿ ಬರುವ ಪಾತ್ರ ಹೀಗಾಗಿ ಚೆನ್ನಾಗಿ ಬರಬೇಕು” ಎಂದಿದ್ದಾನೆ. ಗೋಣು ಆಡಿಸಿದ ಹುಡುಗ ಬೆಳಿಗ್ಗೆಯಿಂದ ಸಂಜೆಯವರೆಗೆ ಗಮನಿಸುವ ಕೆಲಸ ಮಾಡಿದ್ದಾನೆ. ಹೀಗೆ ಹತ್ತು ದಿನ ಶೂಟಿಂಗ್ ನಡೆದಿದೆ. ಹುಡುಗ ಪ್ರತಿದಿನ ಬೆಳಿಗ್ಗೆ ಸೆಟ್ ಗೆ ಬರುವುದು, ತಿಂಡಿ ತಿನ್ನವುದು, ಗಮನಿಸುವುದು, ಕಾಫಿ ಕುಡಿಯುವುದು, ಗಮನಿಸುವುದು, ಮಧ್ಯಾಹ್ನದ ಊಟ ಮಾಡುವುದು ಗಮನಿಸುವುದು, ಸಂಜೆ ತಿಂಡಿ ತಿನ್ನುವುದು ಗಮನಿಸುವುದು ಇದೇ ಕೆಲಸ ಮಾಡಿದ್ದಾನೆ. ಆದರೂ ತಾಳ್ಮೆ ಕಳೆದುಕೊಂಡಿಲ್ಲ. ಟರ್ನಿಂಗ್ ಪಾಯಿಂಟ್ ನಲ್ಲಿ ಬರುವ ಪಾತ್ರ ತಾನೆ?

ಅಂತೂ ಇಂತೂ ಹಲವು ದಿನಗಳ ಶೂಟಿಂಗ್ ಬಳಿಕ ಈತನ ಪಾತ್ರ ಬಂದಿದೆ. ಅಂದು ವಿಶೇಷವಾಗಿ ಸಿದ್ಧವಾಗಿ ಹೋಗಿದ್ದಾನೆ ಹುಡುಗ. ಶೂಟಿಂಗ್ ಲೋಕೆಷನ್ ಫೈನಲೈಸ್ ಆಗಿದ್ದು ನಾಲ್ಕು ರಸ್ತೆ ಕೂಡುವ ಸರ್ಕಲ್ ನಲ್ಲಿ. ಸರ್ಕಲ್ ಮಧ್ಯದಲ್ಲಿ ಹುಡಗನನ್ನು ನಿಲ್ಲಿಸಿದ್ದಾರೆ. ಆ ಕಡೆಯಿಂದ ಹಿರೋ ಬಂದು ಒಂದು ಅಡ್ರೆಸ್ ಕೇಳುತ್ತಾನೆ. ಈತ ಕೈ ತೋರಿಸಿ ಯಾವುದೋ ಒಂದು ರಸ್ತೆಯನ್ನು ತೋರಿಸುತ್ತಾನೆ. ಹುಡುಗ ತೋರಿಸಿದ ರಸ್ತೆಯಲ್ಲಿ ಹಿರೋ ಹೋಗುತ್ತಾನೆ. ಇಷ್ಟೇ ಶೂಟ್ ಆಗಿದ್ದು. ಅದೂ ಲಾಂಗ್ ಶಾಟ್ ನಲ್ಲಿ. ಅಲ್ಲಿಗೆ ಆ ದಿನದ ಶೂಟಿಂಗ್ ಪ್ಯಾಕ್ ಅಪ್ ಆಗಿದೆ. ಹುಡುಗನಿಗೆ ತಲೆ ಬುಡ ಅರ್ಥ ಆಗಿಲ್ಲ. ಸ್ವಲ್ಪ ಬೇಸರಿಸಿಕೊಂಡು “ಇದೇನ್ ಸಾರ್ ಮುಗೀತಾ?” ಅಂತ ನಿರ್ದೇಶಕನನ್ನು ಕೇಳಿದ್ದಾನೆ. ಅದಕ್ಕೆ ನಿರ್ದೇಶಕ “ಹುಂ…ಹೌದು ಮತ್ತೆ. ನಾನು ಹೇಳಿರ್ಲಿಲ್ವಾ ನಿನ್ನದು ಟರ್ನಿಂಗ್ ಪಾಯಿಂಟ್ ನಲ್ಲಿ ಬರುವ ಪಾತ್ರ ಅಂತ. ನೋಡು ಸರ್ಕಲ್ ನಲ್ಲಿ ನೀನು ಹಿರೋಗೆ ರಸ್ತೆ ತೋರಿಸಿದೆಯಲ್ಲ, ಅದು ಕರೆಕ್ಟಾದ ರಸ್ತೆ. ಆತ ಮುಂದೆ ಅದೇ ರಸ್ತೆಯಲ್ಲಿ ಹೋಗಿ ಹಿರೋಯಿನ್ ಳನ್ನು ಮೀಟ್ ಮಾಡುತ್ತಾನೆ. ನೀನು ಅಪ್ಪಿತಪ್ಪಿ ಏನಾದರೂ ಬೇರೆ ರಸ್ತೆ ತೋರಿಸಿದ್ದರೆ ಹಿರೋ ಅಲ್ಲಿಗೇ ಹೋಗಿಬಿಡುತ್ತಿದ್ದ. ಕಥೆ ಬೇರೆ ರೀತಿಯಲ್ಲೇ ಟರ್ನ್ ಪಡೆದುಕೊಳ್ಳುತ್ತಿತ್ತು. ನಾನು ಹೇಳಿದ್ನಲ್ವ ನಿನ್ನದು ಟರ್ನಿಂಗ್ ಪಾಯಿಂಟ್ ಪಾತ್ರ ಅಂತ….”

ನಿರ್ದೇಶಕ ಇನ್ನೂ ಏನೇನೋ ಮುಂದುವರೆಸಿದ್ದಾನೆ. ಹುಡಗನಿಗೆ ತಲೆ ತಿರುಗಿ, ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಈಗ ಹೇಳಿ ಸೈಜ್ ತೆಗೆದುಕೊಂಡು ಟೊಪ್ಪಿ ಹೊಲೆದು, ಟೊಪ್ಪಿ ಹಾಕುವುದೆಂದರೆ ಇದೇ ತಾನೆ?

ಉಪಸಂಹಾರ -2- ನನ್ನ ಅವಸ್ಥೆಗೆ ಮರುಗಿದವರ ಮಾತುಗಳು

*ಬೇಗ ಚೇತರಿಸಿಕೊಳ್ಳಿ ಸುಘೋಷ್

– ಸಂದೀಪ್ ಕಾಮತ್.

…………………………………………

*Very good narration. keep it up

– ಅವಧಿ

…………………………………………

*ಛೆ ಛೆ ಪಾಪ ಮುಖ್ಯ ಮಂತ್ರಿ ಮಗನಿಗೆ ಹೀಗಾಗಬಾರದಿತ್ತು !!

– ಶಶಿ ಜೋಯಿಸ್

……………………………………………..

*ಸಕತ್ತಾಗಿ End ಮಾಡಿದಿರಾ

– ಗುರುಮೂರ್ತಿ

……………………………………………….

*ಅಬ್ಬಾ..

– ದಿವ್ಯಾ

…………………………………………………

*ತುಂಬಾ ಚೆನ್ನಾಗಿದೆ ಬರಹ. ನಿಮ್ಮ ಅನುಭವ ಮಾಲಿಕೆಯೂ ತುಂಬಾ ಕುತೂಹಲಕಾರಿಯಾಗಿ ಬರ್ತಿದೆ. ಅದೂ ಸಿಸ್ಟರ್ಸ್ ಗಳ ಬಗ್ಗೆ ನಿಮ್ಮ ಮಾತು ಅಕ್ಷರಶಃ ನಿಜ.

ಒಂದು (ಬಿಟ್ಟಿ) ಸಲಹೆ : ನಿಮ್ಮ ಬರಹಗಳಲ್ಲಿ ಇತ್ತೀಚೆಗಂತೂ ತುಂಬಾ ಇಂಗ್ಲೀಷ್ ಪದಗಳು ನುಸುಳಿಕೊಳ್ತಾ ಇದಾವೆ. ಹೆಚ್ಚು ಇಂಗ್ಲೀಷ್ ಪುಸ್ತಕವೇನಾದ್ರೂ ಓದ್ತಿದೀರಾ?:)

– ರಂಜಿತ್

…………………………………………………..

*ಸುಘೋಷ್, ನಿನ್ನೆ ನಿಮ್ಮಿಂದ ಹುಶಾರಿದ್ದಿಲ್ಲ ಎನ್ನುವುದರ ಬಗ್ಗೆ ತಿಳಿದಾಗಿನಿಂದಲೂ ಒಂಥರಾ ಗಿಲ್ಟ್ ಫೀಲ್ ಕಾಡ್ತಾ ಇದೆ. ಒಬ್ಬ ಸಹ ಕಲಾವಿದೆಯಾಗಿ ಜೊತೆಯವರ ಆಗು ಹೋಗುಗಳ ವಿಚಾರವಾಗಿ ಏನೂ ತಿಳಿಯದವಳಾಗಿ ಹೇಗಿದ್ದೇನಲ್ಲಾ ಅಂತ.. ಇತ್ತೀಚಿಗೆ ಬ್ಲಾಗುಗಳಿಗೂ ತುಂಬಾ ಕಡಿಮೆ ಭೇಟಿ ಕೊಡುತ್ತೇನಾದ್ದರಿಂದ ನಿಮ್ ಬ್ಲಾಗಿಗೆ ಬಂದೇ ಇಲ್ಲ, ಹೀಗಾಗಿ ಈ ಮುಖಾಂತರವೂ ವಿಷಯ ಗೊತ್ತಾಗುವ ಚಾನ್ಸ್ ತಪ್ಪಿತು.
ತುಂಬಾ ವಿಷದವಾಗಿ ವಿಷಯ ನಿರೂಪಣೆ ಮಾಡಿದ್ದೀರಿ. ನೀವು ಹೇಳುವ ಪರಿ ಚೆಂದ. ಆದರೆ ಅನುಭವಿಸಿದ ನೋವು… ಉಫ್! ಅಂತೂ ಚೇತರಿಸಿಕೊಳ್ಳುತ್ತಿದ್ದೀರಲ್ಲ ಗುಡ್. ಬೇಗ ಮೊದಲಿನ ಹಾಗೆ ದುಂಡಗಾಗಿ ಬೇಗ.:-)

– ಜಯಲಕ್ಷ್ಮಿ ಪಾಟೀಲ್, (ಜಿಪಿ)

……………………………………………………….

*ಬಹುಶ “ಕಲ್ಲು ಕರಗುವ ಸಮಯ” ಶೀರ್ಷಿಕೆ ಸರಿಯಾಗಬಹುದೇನೋ … ಸುಮ್ನೆ ಹೇಳಿದೆ ಬೇಗ ಚೆತರಿಸಿಕೊಳ್ಳಿ ಎಂಬುದು ನಮ್ಮ ಹಾರೈಕೆ

– ಅವಿನಾಶ್ ತೀರ್ಥಹಳ್ಳಿ

…………………………………………………..

*Very Good

– ಶೆಟ್ಟರು

……………………………………………………

*ನಿಜಕ್ಕೆ ತುಂಬಾ ಹತ್ತಿರವಾದ ಬರಹ . ನಿಮ್ಮ ಬರಹ ನೋಡಿ ಅರ್ಥವಾಗುತ್ತೆ ಒಬ್ಬರನೊಬ್ಬರು ಎಷ್ಟು ಪ್ರೀತಿಸ್ತಿರಾ ಅಂತ . ಮಗುಗೆ ಮಾಡೋದು ತಾಯಿಗೆ ಸಹಜವಾದ ಬಂದ ಗುಣ , ಆದರೆ ನಿಜವಾದ ಅರ್ಥದಲ್ಲಿ ಹೆಂಡತಿ, ಗೆಳತಿ ಆಗೋದು , ಸಿಗೋದು ಎಲ್ಲರಿಗೂ ಸಾಧ್ಯ ಇಲ್ಲ ಬಿಡಿ .
ನಿಜ ಹೇಳಬೇಕಂದರೆ ನಮ್ಮಿಬ್ಬರಲ್ಲಿಯೂ ಯಾರು ಮೊದಲು ಪ್ರಪೋಸ್ ಮಾಡಿದರು ಎಂಬ ಭಿನ್ನಾಭಿಪ್ರಾಯ ಇಂದಿಗೂ ಇದೆ .
ನಿಮಗೆ ಬೇಗ ಗುಣಮುಖ ಅಗಲಿ ಎಂದು ಹಾರೈಸುವ

-ಮನಸಾರೆ

………………………………………………..

*ಜನ್ಮಜನ್ಮಾಂತರಕ್ಕೂ ನೀವಿಬ್ಬರೂ ಜೀವನ ಸಂಗಾತಿಗಳಾಗಿರಿ, ಆದರೆ ಹೀಗೆ ಆಸ್ಪತ್ರೆ ಸೇರುವ ಅನಿವಾರ್ಯತೆ ಬರದಿರಲಿ, ಆಗಾಗ ಪ್ರೀತಿ ವ್ಯಕ್ತಪಡಿಸುವ ಮತ್ತು ಅನುಭವಿಸುವ ಅವಕಾಶಗಳು ಹೇರಳವಾಗಲಿ(ಈ ಜನ್ಮಕ್ಕೂ)..:-)

– ಜಯಲಕ್ಷ್ಮಿ ಪಾಟೀಲ (ಜೆಪಿ)

……………………………………………..