ಅಂತೂ ನನ್ನ ಮೊಬೈಲ್ ‘Rain’ ತೋರಿಸಿತು…

ಧನ್ಯವಾದ ವರುಣದೇವ….

ಬೆಂಗಳೂರಿಗರ ವೀಕೆಂಡ್ ಹಾಳಾಗುತ್ತದೆ ಎಂದು ಬರದೇ ಇರಬೇಡ…ನಮಗೂ ಮಳೆ ಬೇಕು

ಸುಡುಗಾಡು ಮಳೆ, ದರಿದ್ರ ಮಳೆ ಎಂಬ ಕೆಲವರ ಮಾತುಗಳಿಗೆ ಕಿವಿಗೊಡಬೇಡ ನಮಗೂ ಮಳೆ ಬೇಕು

‘Rain ruins week end’ ಎಂಬ ಪೇಪರುಗಳ ಹೆಡ್ ಲೈನುಗಳಿಗೆ ಮನಸ್ಸು ನೋಯಿಸಿಕೊಳ್ಳಬೇಡ

ನಮಗೂ ಮಳೆ ಬೇಕು

ಮಳೆಯಿಂದ ಮರ ಉರುಳಿತು, ಮಳೆಯಿಂದ ರಸ್ತೆಯಲ್ಲಿ ಗುಂಡಿ, ಮಳೆಯಿಂದ ಮನೆಗಳಿಗೆ ನುಗ್ಗಿದ ನೀರು, ಮಳೆಯಿಂದ ಬಿದ್ದ ಕಂಪೌಂಡ್ ಗೋಡೆ….ಈ ಎಲ್ಲವೂ ನಿನ್ನಿಂದ ಅಲ್ಲ ಮಳೆರಾಯ

ಇವೆಲ್ಲವೂ ತಲೆಯಿಲ್ಲದ, ದುರಾಸೆಯ, ನಗರೀಕರಣದ ಪರಿಣಾಮ

ಕೆರೆಯಲ್ಲಿ ಅಪಾರ್ಟ್ ಮೆಂಟ್ ಕಟ್ಟಿದರೆ, ರಾಜಕಾಲುವೆಯ ಮೇಲೆ ಅಂಗಡಿ ನಿಲ್ಲಿಸಿದರೆ, ಕಮಿಷನ್ ಹೊಡೆದು ರಸ್ತೆ ನಿರ್ಮಿಸಿದರೆ

ಅದಕ್ಕೆಲ್ಲ ಮಳೆರಾಯ ಹೇಗೆ ಕಾರಣನಾದಾನು….

ಇವುಗಳಿಗೆ ನೀನು ಹೊಣೆಯಲ್ಲ…

ನಮಗೂ ಮಳೆ ಬೇಕು….

ಬಾ, ಇನ್ನೂ ಬಾ, ಮತ್ತೂ ಬಾ….ಮಳೆರಾಯ…..

Screenshot_20160625-222829 (2)

ಕಾಷಿಯಸ್ ಮೈಂಡ್ ಗೆ 8 ನೇ ಹುಟ್ಟುಹಬ್ಬ

Untitled (2)

“Cautious Mind – ನನ್ನ ಕಿತಾಪತಿಗಳ ಜಗತ್ತು” ಆರಂಭ ಮಾಡಿ ನಿನ್ನೆ ಮಧ್ಯರಾತ್ರಿ 12 ಗಂಟೆಗೆ ಏಳು ವರ್ಷ ತುಂಬಿದೆ. ಇದೀಗ 8 ನೇ ವರ್ಷವನ್ನು ಸ್ವಾಗತಿಸುತ್ತಿದ್ದೇನೆ. ಬ್ಲಾಗ್ ಆರಂಭ ಮಾಡಿದಾಗ ನನಗಿದ್ದ ಉತ್ಸಾಹದಲ್ಲಿ ಒಂದು ಗುಲಗಂಜಿಯಷ್ಟೂ ಉತ್ಸಾಹ ಕಡಿಮೆಯಾಗಿಲ್ಲ. ಹಿಟ್ಸ್ ಗಳು ಹೆಚ್ಚಿದಾಗ ಉಬ್ಬಿದ್ದೇನೆ, ಇಲ್ಲದೇ ಇದ್ದಾಗ ತಲೆ ಕೆಡಿಸಿಕೊಂಡಿದ್ದೇನೆ. (ಎಷ್ಟೆಂದರೂ ಉಪ್ಪು ಖಾರ ಹುಳಿ ತಿಂದು ಬೆಳೆಯುತ್ತಿರುವ ಶರೀರ ಅಲ್ಲವೆ? ನಾನು ಸ್ಥಿತಪ್ರಜ್ಞ ಖಂಡಿತ ಅಲ್ಲ ಎಂದು ಕೃಷ್ಣನನ್ನು ಪ್ರಮಾಣ ಮಾಡಿ ಹೇಳುತ್ತೇನೆ 🙂 ).

ಈ ಏಳು ವರ್ಷಗಳಲ್ಲಿ ನಾನು ನನ್ನ ಬರವಣಿಗೆಯನ್ನು ತಿದ್ದಿಕೊಳ್ಳಲು, ಅಭಿಪ್ರಾಯ ಹಂಚಿಕೊಳ್ಳಲು, ಹೊಸ ಗೆಳೆಯ-ಗೆಳತಿಯರನ್ನು ಸಂಪಾದಿಸಲು, ಕಿತಾಪತಿ ಮಾಡಲು, ಬೆಂಕಿ ಹಚ್ಚಲು, ಹಚ್ಚಿದ ಬೆಂಕಿಯನ್ನು ನಂದಿಸಲು, ನನ್ನ ಪ್ರೀತಿಯ ಕಾಷಿಯಸ್ ಮೈಂಡ್ ನನಗೆ ಸಹಾಯ ಮಾಡಿದೆ.

ಒಂದು ಕಾಲಘಟ್ಟದಲ್ಲಿ ಬ್ಲಾಗ್ ಗಳ ಪ್ರವಾಹವೇ ಬಂದಿತ್ತು. ನೂರಾರು ಬ್ಲಾಗ್ ಗಳು ದಿಢೀರ್ ಎಂದು ಆರಂಭಗೊಂಡಿದ್ದವು. ಆದರೆ ಅಂತಹ ನೂರಾರು ಬ್ಲಾಗ್ ಗಳಲ್ಲಿ  ಇಂದು ಕೆಲವೇ ಕೆಲವು ಉಳಿದುಕೊಂಡಿವೆ. ಅದಕ್ಕೆ ಕಾರಣಗಳು ಏನೇ ಇರಲಿ. ನನಗೆ ನನ್ನ ಬ್ಲಾಗ್ ಒಂದು ಹಂತಕ್ಕೆ ಬಂದಿರುವುದು ಹಾಗೂ ಬೆಳೆಯುತ್ತಿರುವುದು ಸಮಾಧಾನ ತಂದಿದೆ. ಉತ್ಸಾಹ ಹೆಚ್ಚಿಸಿದೆ.

Cautious Mind ತನ್ನ 8 ನೇ ಹುಟ್ಟುಹಬ್ಬ ಆಚರಿಸುತ್ತಿರುವುದಕ್ಕೆ ಕಾರಣ, ತಾವು ಹಾಗೂ ತಮ್ಮ ಪ್ರೀತಿ ಮತ್ತು ಕಾಳಜಿ ಎಂದು ವಿನಮ್ರವಾಗಿ ಹೇಳಬಯಸುತ್ತೇನೆ. ತಾವು ಬೆನ್ನುತಟ್ಟಿದ್ದು, ಓದಿದ್ದು, ಕಿವಿ ಹಿಂಡಿದ್ದು ಎಲ್ಲವೂ ನನಗೆ ನೆರವಾಗಿದೆ. ತಮ್ಮ ಪ್ರೀತಿ ಮತ್ತು ಕಾಳಜಿ ಹೀಗೆ ಮುಂದುವರೆಯಲಿದೆ ಎಂಬ ವಿಶ್ವಾಸ ನನ್ನದು.

ತಮಗೆ ಧನ್ಯವಾದ ಹೇಳಿದರೆ ಅದು ಕೇವಲ ಸಣ್ಣ ಪದವಾದೀತು ಹಾಗೂ ವಾಚ್ಯವಾದೀತು. ಹೀಗಿದ್ದರೂ ನಿಮಗೆ ನನ್ನ ಮನಃಪೂರ್ವಕ ಧನ್ಯವಾದ.

ತಮ್ಮ ವಿಶ್ವಾಸಿ

ಸುಘೋಷ ಎಸ್. ನಿಗಳೆ

ನೀನೇನ್ ಆಫೀಸ್ ನಲ್ಲಿ ಗುಡ್ಡೆ ಹಾಕ್ತಿಯಾ ಅಂತ ಗೊತ್ತು

 

 

ಮಗನನ್ನು ಸ್ಕೂಲ್ ಗೆ ರೆಡಿ ಮಾಡುತ್ತಿದ್ದೆ. ತಮಾಷೆ ಮಾಡೋಣವೆಂದು, “ಏ ಇವತ್ತು ನಾನು ಅಮ್ಮ ನಿನ್ನೆ ಶಾಲೆಗೆ ಹೋಗ್ತೀವಿ, ನೀನು ನಮ್ಮ ಆಫೀಸಿಗೆ ಹೋಗು” ಅಂದೆ.

“ನಮ್ಮ ಸ್ಕೂಲಲ್ಲಿ ಟೆಸ್ಟ್ ಇರತ್ತೆ ಏನ್ ಮಾಡ್ತೀಯಾ?” ಅಂದ.

“ನಾನು ಟೆಸ್ಟ್ ಕೊಡ್ತೀನಿ. ಆದರೆ ನೀನು ನಮ್ಮ ಆಫೀಸಿಗೆ ಹೋಗಿ ಹೇಗೆ ಕೆಲಸ ಮಾಡ್ತೀಯಾ” ಅಂತ ಕೇಳಿದೆ.

“ಕೆಲಸಾನಾ? ನಿಮ್ಮ ಆಫೀಸಲ್ಲಿ ನೀವು ಬರೇ ಫೂಸ್ ಬಾಲ್ ಆಡೋದಲ್ವಾ?” ಅಂತ ಕೇಳಿದ. ನಾನು ಬಾಯಿ ಮುಚ್ಚಿಕೊಂಡೆ.

(ಹಿಂದೆ ಒಮ್ಮೆ ಆಫೀಸಿಗೆ ಮಗನನ್ನು ಆಫೀಸಿಗೆ ಕರೆದುಕೊಂಡು ಬಂದಿದ್ದಾಗ, ನಾನು ಫೂಸ್ ಬಾಲ್ ಆಡುವುದನ್ನು ನೋಡಿದ್ದ. ಹೀಗಾಗಿ ನಾವೆಲ್ಲರೂ ಆಫೀಸಿನಲ್ಲಿ ಬರೀ ಫೂಸ್ ಬಾಲ್ ಆಡುತ್ತೀವಿ ಅಂದುಕೊಂಡಿದ್ದ. ಹಾಗೆ ಇದ್ದರೆ ಎಷ್ಟು ಚೆನ್ನಾಗಿರತ್ತೆ ಅಲ್ವ? 🙂 )

ಈಗ ನನ್ನಷ್ಟು ಸುಖಿ ಇಲ್ಲ…

13043460_998271403553478_5942757725833364981_n

ವಾಣಿ ಶ್ರೀಹರ್ಷ, ಕೊಪ್ಪ. 

ಇದು ನನ್ನ ಸುಂದರ ಬದುಕಿನ ಸಂಕ್ಷಿಪ್ತ ಲೇಖನ. ನಮ್ಮ ಮನೆಯಲ್ಲಿ ಹೈನುಗಾರಿಕೆಯ ಸಂಪೂರ್ಣ ಜವಾಬ್ದಾರಿ ನನ್ನದು. ಬೆಳಗ್ಗೆ 6 ಕ್ಕೆ ಕೊಟ್ಟಿಗೆ ಸ್ವಚ್ಛಗೊಳಿಸಿ, ಹಿಂಡಿ ಹಾಕಿ, ಹಾಲು ಕರೆದು, ನೀರು ಕೊಟ್ಟು ಹಾಲು ಪ್ಯಾಕೇಟ್ ಮಾಡಿ ಕೊಟ್ಟರೆ ಹರ್ಷ ಅದನ್ನು ಶಿವಣ್ಣ ಅನ್ನುವವರಿಗೆ ತಲುಪಿಸಿ ಬರುತ್ತಾರೆ. ಅವರು ಅವರ ಹಾಲು ಹಾಕಲು ಹೋದಾಗ ಇದನ್ನೂ ಹಾಕುತ್ತಾರೆ.ನಾವು ಮನೆಮನೆಗಳಿಗೆ ಹಾಲು ಹಾಕುತ್ತೇವೆ ಡೈರಿಗೆ ಅಲ್ಲ. ನಂತರ ಮಕ್ಕಳನ್ನು ಶಾಲೆಗೆ ತಯಾರು ಮಾಡಿ ಕಳಿಸಿ ಮತ್ತೆ 9 ಕ್ಕೆ ಮತ್ತೊಂದು ಸಲ ಸಗಣಿ ತೆಗೆದು ಹುಲ್ಲು ಹಾಕುವ ಕೆಲಸ. ನಾವು ದನಗಳ ಆರೋಗ್ಯಕ್ಕೆ ತುಂಬ ಗಮನ ಕೊಡುತ್ತೇವೆ. ಕೊ3 ಮತ್ತು ಬಿಎಚ್18 ತಳಿಯ ಹಸಿ ಹುಲ್ಲು ಬೆಳೆಸುತ್ತೇವೆ. ಪಶುವೈದ್ಯ ಇಲಾಖೆಯವರು ಕೊಟ್ಟ ಜೋಳ ಬೆಳೆಸುತ್ತೇವೆ. ಇದರ ಜೊತೆ ತೋಟದಲ್ಲಿ ಸಿಗುವ ಹಸಿಹುಲ್ಲು ಹಾಕುತ್ತೇವೆ.ಬಾಳೆದಿಂಡು ಹಾಕುತ್ತೇವೆ. 12 ಗಂಟೆಯ ತನಕ 3-4 ಸಲ ಕೊಟ್ಟಿಗೆಗೆ ಹೋಗಿ ಹುಲ್ಲು ಹಾಕುತ್ತೇನೆ.ನೀರು ಕೊಡುತ್ತೇನೆ. ಆಗ ದನಗಳ ಜೊತೆ ಮಾತನಾಡುತ್ತಾ ಇರುತ್ತೇನೆ.
1-4 ಅವುಗಳು ಮೆಲುಕು ಹಾಕುತ್ತಾ ಮಲಗುವ ಸಮಯ. ಸಂಜೆ 4 ಆಗುತ್ತಿದ್ದಂತೆ ” ಬಾರಮ್ಮಾ ಹಿಂಡಿ ಹಾಕಮ್ಮಾ ” ಅಂತ ಕರೆಯುತ್ತವೆ. ಮತ್ತೆ ಬೆಳಗಿನಂತೆ ಕೊಟ್ಟಿಗೆ ತೊಳೆದು , ಹಿಂಡಿ ಹಾಕಿ , ಹಾಲು ಕರೆದು , ನೀರು ಕೊಟ್ಟು , ಹಾಲು ಪ್ಯಾಕೇಟ್ ಮಾಡಿ ಶಿವಣ್ಣ ಅವರಿಗೆ ತಲುಪಿಸಿ ಬರುವುದು. ಮತ್ತೆ 6-8 ಹುಲ್ಲು ಹಾಕುವ ಸಮಯ.
ಸಿದ್ಧಹಿಂಡಿಯನ್ನು ತರುವುದಿಲ್ಲ. ಉತ್ತಮ ಜೋಳ, ರಾಗಿ, ಶೇಂಗಾಹಿಂಡಿ, ಗೋದಿಬೂಸ, ಉಪ್ಪು, ಖನಿಜಮಿಶ್ರಣಗಳನ್ನು 1ಪ್ರಮಾಣದಲ್ಲಿ ಮಿಶ್ರಮಾಡಿ ದನದ ದೇಹಪೋಷಣೆಗೆ 2 ಕಿಲೋ ಮತ್ತು 1 ಲೀ ಹಾಲಿಗೆ 400 ಗ್ರಾಂ ನಂತೆ ಹಾಕುತ್ತೇವೆ. ಸಧ್ಯಕ್ಕೆ 20 ಲೀ ಅಷ್ಟೇ ಹಾಲು ಇದೆ .2 ದನಗಳು 2 ತಿಂಗಳಲ್ಲಿ ಕರು ಹಾಕುತ್ತವೆ. ಆಗ 20 ಲೀಹಾಲು ಜಾಸ್ತಿ ಆಗುತ್ತದೆ.
ಇವುಗಳ ಜೊತೆಗೆ ಅಡುಗೆ ತಿಂಡಿ ಕೆಲಸ,ಮನೆಗೆಲಸ,ತರಕಾರಿ ಬೆಳೆಯುವುದು, ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ,ಈ ಪ್ರಾಣಿಗಳ ಹೆರಿಗೆ ಬಾಣಂತನದ ಕೆಲಸ ಇವೆಲ್ಲವೂ ನನ್ನ ಬದುಕನ್ನು ತುಂಬಾ ಸುಂದರ ಗೊಳಿಸಿವೆ. 2 ನಾಯಿಗಳು 5 ಬೆಕ್ಕುಗಳು ಮನೆಯ ಒಳಗೆ ಮನೆಯ ಹೊರಗೆ ಪ್ರಾಣಿಗಳೇ ಪ್ರಾಣಿಗಳು…. 🙂 ಎಷ್ಟೋ ಸಲ ಕೊಟ್ಟಿಗೆಯೊಳಗೆ ದನ ಕರುವಿನೊಡನೆ ಇರುತ್ತೆ, ಅಲ್ಲೇ ಮೂಲೆಯಲ್ಲಿ ನಾಯಿ ಮರಿಗಳೊಡನೆ ಇರುತ್ತೆ, ಒಳಗೆ ಬಂದರೆ ಬೆಕ್ಕು ಮರಿಗಳೊಡನೆ ಇರುತ್ತೆ. ಆಗೆಲ್ಲಾ ಈ ಬದುಕು ಎಷ್ಟು ಸುಂದರ ಅನಿಸುತ್ತದೆ. ಬಹುಷಃ ನಾನು ಎಷ್ಟೇ ಬರೆದರೂ ನನ್ನ ಮನಸ್ತಿತಿಯನ್ನು ಅಕ್ಷರಗಳಲ್ಲಿ ಮೂಡಿಸಲಾರೆ.
ಕೆಲಸ ಎಷ್ಟೇ ಆದರೂ ನೆಮ್ಮದಿ ಅಪಾರ. ಈ ಪ್ರಾಣಿಗಳು ನನಗೆ ತುಂಬಾ ತಾಳ್ಮೆ ಕಲಿಸಿವೆ. ಮನಸಿಗೆ ಬದುಕಿಗೆ ಸಂತೋಷ ,ನೆಮ್ಮದಿ ಕೊಟ್ಟಿವೆ. ಉತ್ತಮ ಸಕಾರಾತ್ಮಕ ಮನೋಭಾವವನ್ನೂ ಸ್ಥಿತಪ್ರಜ್ಞೆಯನ್ನೂ ಬೆಳೆಸಿವೆ. ಈ ಬದುಕಿಗೆ ಬಂದು 15 ವರ್ಷಗಳಾದವು. ಇವರನ್ನು ಪ್ರೀತಿಸಿ ಮನೆಯವರ ವಿರೋಧ ಕಟ್ಟಿಕೂಂಡು ಇಲ್ಲಗೆ ಬಂದಾಗ ಇಷ್ಟು ಚಂದದ ಬದುಕಿನ ಕಲ್ಪನೆಯೂ ಇರಲಿಲ್ಲ. ಈಗ ನನ್ನಷ್ಟು ಸುಖಿ ಇಲ್ಲ.
ಕೃಷಿ ಬದುಕಿನಲ್ಲಿ ಹಣ ಸ್ವಲ್ಪ ಕಷ್ಟ. ಆದರೆ ನೆಮ್ಮದಿ ಮಾತ್ರ ಅಪಾರ. ಅಗಣಿತ. ನನಗೆ ಸಂಪೂರ್ಣ ಸ್ವಾತಂತ್ರ್ಯ ಕೊಡುವ ಗಂಡ, ಚಿನ್ನದಂತಹ ಇಬ್ಬರು ಮಕ್ಕಳ ಜೊತೆ ಸಂತೃಪ್ತ ಬದುಕು ನನ್ನದು.