ಕ್ಷಮಿಸಿ….

“ಬೇರೆಯವರ ಮುಂದೆ ಬತ್ತಲಾಗಿ ಮಲಗುವುದಿದೆಯಲ್ಲ” ಲೇಖನ ಇಂದು ಹಾಕಬೇಕಾಗಿತ್ತು. ಅನಿವಾರ್ಯ ಕಾರಣಗಳಿಂದಾಗಿ ಪೋಸ್ಟ್ ಮಾಡಲಾಗುತ್ತಿಲ್ಲ. ಕ್ಷಮೆಯಿರಲಿ. ಈ ಲೇಖನ ನಾಳೆ ಪ್ರಕಟವಾಗಲಿದೆ.

ಪ್ರಿತಿಯಿರಲಿ

ಸುಘೋಷ್ ಎಸ್. ನಿಗಳೆ.

ಹಿತ್ತಲ ಗಿಡ ಮದ್ದಲ್ಲ….

ಅಷ್ಟರಲ್ಲಿ ಮತ್ತೊಮ್ಮೆ ನನ್ನ ಅಭಿಮಾನಿ ಡಾಕ್ಟರ್ ನಾಗರಾಜ್ ಬಂದು, “ನೋಡಿ, ಸಿಸ್ಟೋಸ್ಕಾಪಿ ಮಾಡಿಸಿಕೊಂಡರೆ ಒಳ್ಳೆಯದು. ನೀವು ಈಗ ಒಂದು ಅವರ್ ನಲ್ಲಿ ನಿಮ್ಮ ನಿರ್ಧಾರ ತಿಳಿಸಿದರೆ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಮಾಡಬಹುದು” ಎಂದು ಡೆಡ್ ಲೈನ್ ನೀಡಿ ಮಾಯವಾದರು.

ನಾಟಿ ಔಷಧಿ ಹಾಗೂ ಸಿಸ್ಟೋಸ್ಕಾಪಿ ಈ ಎರಡರ ಮಧ್ಯೆ ಒಂದನ್ನು ಆಯ್ಕೆ ಮಾಡಿಕೊಳ್ಳಲು ನನ್ನ ಬಳಿ ಟೈಮ್ ತುಂಬಾ ಕಡಿಮೆ ಇತ್ತು. ನಿರ್ಧಾರವಂತೂ ಮಾಡಲೇಬೇಕಿತ್ತು. ಈ ಎರಡರಲ್ಲಿ ಒಂದಂತೂ ಅನಿವಾರ್ಯವಾಗಿತ್ತು. ಎರಡಕ್ಕೂ ಅದರದೇ ಆದ ಮೆರಿಟ್ಸ್ ಹಾಗೂ ಡಿಮೆರಿಟ್ಸ್ ಇದ್ದವು.

ನಾಟಿ ಔಷಧದ ಮೆರಿಟ್ಸ್ ಹೀಗಿದ್ದವು

# ದೇಹಕ್ಕೆ ಯಾವುದೇ ತೊಂದರೆಯಿಲ್ಲ.

# ದೇಹಕ್ಕೆ ಅನಸ್ತೇಷಿಯಾ ಚುಚ್ಚುವ ಅಗತ್ಯವಿಲ್ಲ.

# ಪೈಪ್ ಸೇರಿಸುವ ಅಗತ್ಯವಿಲ್ಲ.

# ನಾಲ್ಕೈದು ದಿನ ಆಡ್ಮಿಟ್ ಆಗುವುದು ಬೇಡ.

# ಚಿಕಿತ್ಸೆ ತೀರ ಸುಲಭ. ಬೆಳಿಗ್ಗೆ ಆರು ಗಂಟೆಗೆ ಖಾಲಿ ಹೊಟ್ಟೆಯಲ್ಲಿ ವೈದ್ಯರು ನೀಡುವ ಔಷಧ ತೆಗೆದುಕೊಂಡರಾಯಿತು. ಸಂಜೆ ಆರು ಗಂಟೆಯೊಳಗೆ ಕಲ್ಲು ಮೂತ್ರದೊಂದಿದೆ ಹೊರಬಿದ್ದುಬಿಡುತ್ತದೆ. ಇಟ್ ಈಸ್ ಆಸ್ ಸಿಂಪಲ್ ಆಸ್ ದೆಟ್.

ಡಿಮೆರಿಟ್ಸ್

# ಔಷಧಿ ತೆಗೆದುಕೊಳ್ಳಲು ನಾನು 370 ಕಿಮಿ. ಪ್ರಯಾಣ ಮಾಡಿ ಕೊಪ್ಪಕ್ಕೆ ಹೋಗಬೇಕು.

# ಈ ಪ್ರಯಾಣದ ಅವಧಿಯಲ್ಲಿ ನೋವು ಸಹಿಸಿಕೊಳ್ಳಬೇಕು ಅಥವಾ ಸ್ಟ್ರಾಂಗ್ ಪೇನ್ ಕಿಲ್ಲರ್ಸ್ ತೆಗೆದುಕೊಳ್ಳಬೇಕು.

# ಮಾರ್ಗ ಮಧ್ಯೆ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡರೆ ಬೊಬ್ಬೆ ಹೊಡೆಯುವುದೊಂದೇ ಪರಿಹಾರ.

# ಒಂದು ವೇಳೆ, ಒಂದು ವೇಳೆ, ಒಂದು ವೇಳೆ ನಾಟಿ ಔಷಧಿ ಫೇಲ್ ಆದರೆ………

ಅತೀ ಹತ್ತಿರದ ಆಸ್ಪತ್ರೆ ಎಂದರೆ ಮಂಗಳೂರಿನ ಕಿಡ್ನಿ ಫೌಂಡೇಷನ್ ಗೆ ನನ್ನನ್ನು ಸಾಗಿಸಬೇಕು.

# ಇದೆಲ್ಲಕ್ಕೂ ದೊಡ್ಡ ತೊಂದರೆ ಎಂದರೆ ನಾನು ಎಡ್ಮಿಟ್ ಆಗಿದ್ದು ಬುಧವಾರ. ನಾಟಿ ವೈದ್ಯರು ಔಷಧಿ ಕೊಡುತ್ತಿದ್ದುದ್ದು ಗುರುವಾರ ಮತ್ತು ಭಾನುವಾರ ಮಾತ್ರ. ಮಾರನೇ ದಿನವೇ ಗುರುವಾರ. ರಾತ್ರಿಯೇ ಕೊಪ್ಪಕ್ಕೆ ಹೊರಡುವುದು ಅಸಾಧ್ಯದ ಮಾತು. ಇನ್ನು ಭಾನುವಾರದವರೆಗೆ ಕಾಯಬೇಕು. ಅಲ್ಲಿಯವರೆಗೆ ಪೇನ್ ಸಹಿಸಿಕೊಂಡಿರಬೇಕು.

ಇಷ್ಟೆಲ್ಲ ಇದ್ದರೂ ನನಗೆ ಮನಸ್ಸಿದ್ದುದು ಮಾತ್ರ ನಾಟಿ ಔಷಧಿಯ ಮೇಲೆಯೇ. ಮೊದಲಿನಿಂದಲೂ ಅದರ ಮೇಲೆ ಏನೋ ಒಂದು ಹೇಳಿಕೊಳ್ಳಲಾಗದ ವಿಶ್ವಾಸ. ಬೆಳಗಾವಿಯ ಸಮೀಪ ಈ ನಾಟಿ ವೈದ್ಯರ ಚಮತ್ಕಾರಗಳನ್ನು ಬಾಲ್ಯದಲ್ಲಿ ನಾನು ಕಂಡಿದ್ದು ಬಹುಶಃ ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿರಬಹುದು.

ಒಂದು ಹಂತದಲ್ಲಿ ಸಿಸ್ಟೋಸ್ಕಾಪಿ ಬೇಡವೆಂದು ನಿರ್ಧರಿಸಿ, ಕೊಪ್ಪಕ್ಕೆ ಹೋಗುವುದೆಂದು ಹೇಳಿಬಿಟ್ಟೆ. ಆದರೆ ಮತ್ತೆ ಫೋನುಗಳು, ಮತ್ತೆ ಚರ್ಚೆ, ಮತ್ತೆ ಮಾತುಕತೆ ಎಲ್ಲವೂ ನಡೆದವು. ನನ್ನ ಹಲವು ವೈದ್ಯ ಮಿತ್ರರ ಸಲಹೆ ಪಡೆದೆ. ಈ ವೈದ್ಯ ಮಿತ್ರರಲ್ಲಿ ಆಯುರ್ವೇದ ಹಾಗೂ ಅಲೋಪತಿ ಎರಡೂ ವಿಧದ ವೈದ್ಯರಿದ್ದರು. ಇಬ್ಬರೂ ಹೇಳಿದ್ದು ಒಂದೇ. “ಎರಡೂ ಆಪ್ಟ್ ಮಾಡಿಕೊಳ್ಳುವಂತಹವೇ. ಆದರೆ ಈಗ ನೀನಿರುವ ಸ್ಥಿತಿಯಲ್ಲಿ ನಾಟಿ ಆಪ್ಟ್ ಮಾಡಿಕೊಳ್ಳುವುದು ಕಷ್ಟ. ಸಿಸ್ಟೋಸ್ಕಾಪಿ ಮಾಡಿಸಿಕೊಂಡು ಬಿಡು. ನಿನಗೂ ಒಂದು ರೀತಿಯ ಮಾನಸಿಕ ಸಮಾಧನ ಇರುತ್ತದೆ” ಅಂತ.

ಸರಿ ಅಂತ ಡಾಕ್ಟರ್ ನಾಗರಾಜ್ ರನ್ನು ಕರೆದು, ಸಿಸ್ಕೋಸ್ಕಾಪಿ ಮಾಡಿ ಎಂದೆ. ಆದರೆ ನಾನು ನನ್ನ ನಿರ್ಧಾರ ಹೇಳಲು ಸುಮಾರು ಮೂರು ಗಂಟೆ ಖರ್ಚು ಮಾಡಿಯಾಗಿತ್ತು. ಹೀಗಾಗಿ ರಾತ್ರಿ ಹನ್ನೊಂದು ಗಂಟೆಗೆ ಚಿಕಿತ್ಸೆ ನೀಡುವುದು ಸಾಧ್ಯವಿರಲಿಲ್ಲ. ಬೆಳಿಗ್ಗೆ ಆರು ಗಂಟೆಗೆ ಮಾಡಲಾಗುವುದು ಎಂದು ಹೇಳಿದರು. ನಾನು ಆದಷ್ಟು ಬೇಗ ಸಿಸ್ಟೋಸ್ಕಾಪಿ ಮಾಡಿಸಿಕೊಳ್ಳಲು ಸಿದ್ಧನಾಗಿದ್ದೆ. ಕಷ್ಟ ಆದಷ್ಟು ಬೇಗ ಸರಿದರೆ ಸುಖವಲ್ಲವೆ?

ಆದರೆ ಒಂದು ರೀತಿಯಿಂದ ಬೆಳಿಗ್ಗೆ ಆರುಗಂಟೆಗೇ ಸಿಸ್ಟೋಸ್ಕಾಪಿ ಮಾಡಿದ್ದು ಒಳ್ಳೆಯದೇ ಆಯಿತು. ರಾತ್ರಿಯಾಗಿತ್ತು. ಮಾತಾಡಿ ಆಡಿ ಸುಸ್ತಾಗಿದ್ದೆ. ಇನ್ನೇನು ಮಲಗಿಕೊಳ್ಳಬೇಕೆಂದು ಕಣ್ಣು ಮುಚ್ಚಿದೆ. ಅಷ್ಟರಲ್ಲಿ ಇಬ್ಬರು ವಾರ್ಡ್ ಬಾಯ್ ಗಳು ಕೈಯಲ್ಲಿ ಸೋಪು ಮತ್ತು ರೇಜರ್ ಹಿಡಿದು ಬಂದು “ಸಾರ್ ನಿಮ್ಮನ್ನು ಆಪರೇಷನ್ ಗೆ ರೆಡಿ ಮಾಡಬೇಕು” ಎಂದರು.

ನಿಧಾನವಾಗಿ ಕಣ್ಣುಬಿಟ್ಟೆ. ವಾರ್ಡ್ ಬಾಯ್ ಪುಟ್ಟರಾಜು ಮತ್ತು ವಾರ್ಡ್ ಬಾಯ್ ರಮೇಶ್ ನನ್ನನ್ನು ಅತ್ಯಂತ ನಿರ್ಭಾವುಕರಾಗಿ ನೋಡುತ್ತ ನಿಂತಿದ್ದರು.

(ನಾಳೆ : ಬೇರೆಯವರ ಮುಂದೆ ಬತ್ತಲಾಗಿ ಮಲಗಿಕೊಳ್ಳುವುದಿದೆಯಲ್ಲ….)

ನಾಟಿ ವೈದ್ಯವೋ, ಸಿಸ್ಟೋಸ್ಕಾಪಿಯೋ…

(ಫೋಟೋ ಕೃಪೆ – ಲೈಫ್)

ನಿದ್ದೆಯಿಂದ ಎದ್ದಾಗ ಬೆಳಗಾಗಿತ್ತು. ರಾತ್ರಿಯ ಡ್ಯೂಟಿ ಡಾಕ್ಟರ್ ಬಂದು ಬ್ಲಡ್ ಟೆಸ್ಟ್ ನ ರಿಪೋರ್ಟ್ ಹೇಳಿದರು. “ಡಬ್ಲೂಬಿಸಿ ಕೌಂಟ್ 12600 ಆಗಿದೆ. ಅಂದರೆ ಬ್ಲಡ್ ಇನ್ಫೆಕ್ಷನ್ ಆಗಿದೆ. ಹೀಗಾಗಿ ಇದು ಅಪೆಂಡಿಸೈಟಿಸ್ ಆಗಿರುವ ಸಾಧ್ಯತೆ ಹೆಚ್ಚಾಗಿದೆ. ಏನಕ್ಕೂ ಮಧ್ಯಾಹ್ನ ಸ್ಕಾನ್ ಇದೆ. ನಂತರ ಸ್ಪಷ್ಟವಾಗಿ ಗೊತ್ತಾಗುತ್ತದೆ” ಎಂದು ಹೇಳಿಹೋದರು.

ನಿರಂತರವಾಗಿ ಸಲೈನ್ ಹಚ್ಚಿದ್ದರಿಂದ ಏನನ್ನೂ ತಿನ್ನದಂತೆ ಸೂಜಿಮೆಣಸಿನಕಾಯಿ ಸಿಸ್ಟರ್ ಬಂದು ಬೆದರಿಕೆ ಹಾಕಿ ಹೋಗಿದ್ದಳು. ನೀರಡಿಕೆ ತಡೆಯಲಿಕ್ಕೆ ಆಗುತ್ತಿರಲಿಲ್ಲ. ಆದರೆ ಮಧ್ಯಾಹ್ನ ಸ್ಕಾನ್ ಇದೆ ಎಂದು ವೈದ್ಯರು ಹೇಳಿದ ತಕ್ಷಣ, “ಹೆಚ್ಚು ಹೆಚ್ಚು ನೀರು ಕುಡಿಯಿರಿ. ಬ್ಲಾಡರ್ ಫುಲ್ ಇರ್ಬೇಕು. ಆಗಷ್ಟೇ ಸ್ಕಾನಿಂಗ್” ಎಂದು ಮತ್ತೊಮ್ಮೆ ಸಿಸ್ಟರ್ ಹೇಳಿದಾಗ ಅವಳಿಗೆ ಬ್ಲಾಡರ್-ಪೂರ್ವಕ…..ಓಹ್ ಸಾರಿ…..ಹೃದಯ ಪೂರ್ವಕ ಥ್ಯಾಂಕ್ಸ್ ಹೇಳಿದೆ. ಅಷ್ಟರಲ್ಲಾಗಲೇ ‘ಸುಘೋಷ ಆಸ್ಪತ್ರೆಗೆ ಆಡ್ಮಿಟ್ ಅಂತೆ, ಸಿಕ್ಕಾಪಟ್ಟೆ ಹೊಟ್ಟೆ ನೋವಂತೆ, ಇನ್ನೊದು ಅಂತೆ ಮತ್ತೊಂದು ಅಂತೆ,’ ಎಂಬ ಸುದ್ದಿ ಬೆಂಗಳೂರಿನ ನನ್ನ ಬಂಧುಗಳಿಗೆ ತಲುಪಿಯಾಗಿತ್ತು. ಫೋನ್ ಗಳು ಆರಂಭವಾದವು. ಆದರೆ ಸುದ್ದಿ ಹರಡದಂತೆ ಸಾಕಷ್ಟು ಎಚ್ಚರಿಕೆ ವಹಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿತು.

ಎಳನೀರು ಕುಡಿಕುಡಿದು ಬ್ಲಾಡರ್ ಫುಲ್ ಮಾಡಿಕೊಂಡೆ. ಸ್ಕಾನಿಂಗ್ ಸೆಂಟರ್ ನತ್ತ ‘ಮೇರಾ ನಾಮ್ ಜೋಕರ್’ ಪಿಚ್ಚರ್ ನಲ್ಲಿ ರಾಜ್ ಕಪೂರ್ ನಡೆಯುವ ಹಾಗೆ ನಡೆದುಕೊಂಡೇ ಹೋದೆ. ಮಧ್ಯಾಹ್ನ ಎರಡೂವರೆಗೆ ಅಬ್ಡಾಮಿನ್ ಸ್ಕಾನ್ ಆಯಿತು. ಅಲ್ಲೇ ಡಾ. ರಮೇಶ್ ತೋರಿಸಿಬಿಟ್ಟರು. ಅಪೆಂಡಿಸೈಟಿಸ್ ಅಲ್ಲವೇ ಅಲ್ಲ. ಮೂರು ಕಿಡ್ನಿ ಸ್ಟೋನ್ಸ್ ಫಾರ್ಮ್ ಆಗಿದೆ.

“ಹಾಗಾದರೆ ಇಂಜೆಕ್ಷನ್ ತೆಗೆದುಕೊಂಡು ಅವುಗಳನ್ನು ತೆಗೆಯಬಹುದಲ್ಲವೆ?” ಅತ್ಯುತ್ಸಾಹಾನಂದತುಂದಿತನಾಗಿ ಕೇಳಿದೆ. “ಸ್ಕಾನ್ ಮಾಡುವುದು ಅಷ್ಟೇ ನನ್ನ ಕೆಲಸ. ಹೆಚ್ಚಿನ ಮಾಹಿತಿಗಾಗಿ ಸರ್ಜನ್ ಸಂಪರ್ಕಿಸಿ” ಎಂದುಬಿಟ್ಟರು ಡಾ. ರಮೇಶ್. ಏನೇ ಆದರೂ ಒಂದು ರೀಲಿಫ್ ಇತ್ತು. ಸಧ್ಯ ಅಪೆಂಡಿಸೈಟಿಸ್ ಅಲ್ಲ. ಹೀಗಾಗಿ ಆಪರೇಷನ್ ಭಯವಿಲ್ಲ. ಕಿಡ್ನಿ ಸ್ಟೋನ್ ತೀರಾ ಕಾಮನ್ ಎಂಬೆಲ್ಲ ವಿಚಾರಗಳು ನುಗ್ಗಿ ಬಂದು ಆ ಮಟ್ಟಿಗೆ ಮನಸ್ಸು ಶಾಂತವಾಯಿತು.

ಸಂಜೆ ನಾಲ್ಕೂವರೆ ಸುಮಾರಿಗೆ ಸರ್ಜನ್ ಡಾ. ಮಧುಸೂದನ್ ವಾರ್ಡ್ ಗೆ ಬಂದರು. ತಮ್ಮ ನೀಲಿ ನೀಲಿ ಬಣ್ಣದ ಜೆಲ್ ಪೆನ್ ನಲ್ಲಿ ಡಯಗ್ರಾಮ್ ಬಿಡಿಸಿಕೊಂಡು ಬಂದಿದ್ದರು. “ಹುಂ….ನೋಡಿ ಈಗ ಮೂರು ಕಿಡ್ನಿ ಸ್ಟೋನ್ ಗಳು ಕಂಡುಬಂದಿವೆ. ಮೊದಲನೆಯದು ಕಿಡ್ನಿಯಿಂದ ಹೊರಬಿದ್ದು ಯುರೇಟರ್ ನಲ್ಲಿ ಬಂದು ಕುಳಿತಿದೆ. ಅದರ ಗಾತ್ರ 13*8 ಎಂಎಂ. ಉಳಿದವೆರಡು ಕಿಡ್ನಿಯಲ್ಲಿವೆ. ಒಂದು 8 ಎಂಎಂ ನದು ಮತ್ತೊಂದು 3 ಎಂಎಂ ನದು. ಈ 3 ಎಂಎಂ ಕಲ್ಲಿನ ಬಗ್ಗೆ ಚಿಂತೆಯಿಲ್ಲ. ಅದನ್ನು ಟ್ಯಾಬ್ಲೆಟ್ ಗಳ ಮೂಲಕ ತೆಗೆದುಬಿಡಬಹುದು. ಆದರೆ ಉಳಿದೆರಡು ಕಲ್ಲುಗಳನ್ನು ತೆಗೆಯಲು ಸಿಸ್ಟೋಸ್ಕಾಪಿ ಮಾಡಬೇಕಾಗತ್ತದೆ” ಎಂದರು ಮಧುಸೂದನ್ ಡಾಕ್ಟ್ರು. ಮೊಟ್ಟಮೊದಲಬಾರಿಗೆ ಈ ಶಬ್ದ ಕೇಳಿದ್ದೆ.

“ಸಿಸ್ಟೋಸ್ಕಾಪಿ ಅಂದ್ರೆ?” ಎಂದೆ. “ಏನಿಲ್ಲ ಒಂದು ಪೈಪನ್ನು ಪೆನಿಸ್ ಮುಖಾಂತರ ಪಾಸ್ ಮಾಡುತ್ತೇವೆ. ನಂತರ ಯುರೇಟರ್ ಹಾಗೂ ಕಿಡ್ನಿಯಲ್ಲಿರುವ ಎರಡು ಕಲ್ಲುಗಳನ್ನು ಒಡೆದು ಹೊರತೆಗೆಯುತ್ತೇವೆ”.

ಒಂದು ಕ್ಷಣ ಏನು ಹೇಳಬೇಕೆಂದು ತಿಳಿಯಲಿಲ್ಲ. ಡಾಕ್ಟರ್ ಹೇಳಿದ ವರ್ಣನೆ ನಾನು ಡಿಹೈಡ್ರೇಟ್ ಆಗುವಂತೆ ಮಾಡಿತು. “ಡಾಕ್ ಇಸ್ ದೇರ್ ನೋ ಅಲ್ಟರ್ನೇಟಿವ್?” ದೈನ್ಯದಿಂದಲೇ ಕೇಳಿದೆ. ವೆಲ್…. ಅನ್ ಫಾರ್ಚುನೇಟ್ಲಿ ನಾಟ್ ಎಂದರು.

“ಐ ಆಮ್ ಓಕೆ ವಿತ್ ಇಟ್. ಬಟ್ ವರಿಡ್ ಅಬೌಟ್ ದಿ ಪೇನ್ ದಟ್ ಐ ನೀಡ್ ಟು ಅಂಡರ್ ಗೋ” ಎಂದೆ.

“ಇಲ್ಲ ಇಲ್ಲ. ಪೇನ್ ಇರುವುದಿಲ್ಲ. ನಿಮಗೆ ಲೋಕಲ್ ಅನಸ್ತೇಷಿಯಾ ಕೊಟ್ಟಿರ್ತೀವಿ. ಹೀಗಾಗಿ ಪೇನ್ ಗೊತ್ತಾಗುವುದಿಲ್ಲ. ಯೂ ವೋಂಟ್ ಫೀಲ್ ಎನಿಥಿಂಗ್” ಎಂದು ಭರವಸೆ ನೀಡಿದರು ಡಾ. ಮಧುಸೂದನ್. “ನೀವು ಸಿಸ್ಟೋಸ್ಕಾಪಿಗೆ ರೆಡಿ ಇದ್ದರೆ ಹೇಳಿ. ಅಷ್ಟರಲ್ಲಿ ನಾನು ರೌಂಡ್ ಮುಗಿಸಿ ಬರುತ್ತೇನೆ. ಗುಡ್ ಲಕ್” ಎಂದವರೇ ತಮ್ಮ ಹಿಂದೆ ತಂದಿದ್ದ ಹಿಂಡುಹಿಂಡು ಸಿಸ್ಟರ್ ಗಳೊಂದಿಗೆ ಮೆರವಣಿಗೆ ಮುಂದುವರೆಸಿದರು.

ಜೂನಿಯರ್ ಡಾಕ್ಟರ್ ನಾಗರಾಜ್ ಗೆ, “ಸಿಸ್ಟೋಸ್ಕಾಪಿಗೆ ಎಷ್ಟು ಖರ್ಚಾಗಬಹುದು?” ಎಂದು ಕೇಳಿದೆ. ಡಾ. ನಾಗರಾಜ್, ನನ್ನ ಅಭಿಮಾನಿ. “ಒಂದು ನಿಮಿಷ ಚೆಕ್ ಮಾಡಿ ಹೇಳುತ್ತೇನೆ. ಹೇಗೂ ನಿಮಗೆ ಇನ್ಶೂರೆನ್ಸ್ ಇದೆಯಲ್ವ…ಮತ್ಯಾಕೆ ಚಿಂತೆ?” ಎಂದು ಪುಕ್ಕಟ್ಟೆ ಸಲಹೆ ನೀಡಿ ಸೀನಿಯರ್ ಗಳ ಬಳಿಗೆ ತೆರಳಿದರು. ಅರ್ಧಗಂಟೆಯಲ್ಲ ಮರಳಿದ ಅವರು, ಸುಮಾರು 30 ಸಾವಿರ ಖರ್ಚಾಗಬಹುದು. ನಾನ್ ಮೆಡಿಕಲ್ ಎಕ್ಸಪೆಂಡಿಚರ್ ಸುಮಾರು 10 ಸಾವಿರ ಇಟ್ಟುಕೊಂಡರೂ 40 ಸಾವಿರದ ಒಳಗೆ ಎಲ್ಲ ಮುಗೀಬಹುದು ಅಂತ ರೇಟ್ ಕಾರ್ಡ್ ಮುಂದೆ ಹಿಡಿದರು. ಅವರು ಹಾಗೆ ಹೇಳುವುದಕ್ಕೂ ಕೊಪ್ಪದ ನನ್ನ ಮನೆಯಿಂದ ಅಣ್ಣನ ಫೋನ್ ಬರುವುದಕ್ಕೂ ಸರಿಹೋಯಿತು. ಅಲ್ಲಾಗಲೇ ವಿಷಯ ತಿಳಿಸಿಯಾಗಿತ್ತು. ಅಣ್ಣ ಹೇಳಿದ, “ಸುಘೋಷಾ, ಇಲ್ಲೊಬ್ರು ನಾಟಿ ವೈದ್ಯರಿದ್ದಾರೆ. ಅವ್ರು ಒಳ್ಳೇ ಔಷಧಿ ಕೊಡ್ತಾರೆ. 28 ಎಂಎಂ ವರೆಗೂ ನಾವ್ ತಗದೀದಿವಿ ಅಂತ ಹೇಳ್ತಿದಾರೆ. ನೀ ಒಂದ್ ಕೆಲಸಾ ಮಾಡಿದ್ರೆ ಆಯ್ತೆನಾ ಅಂತ. ಕಾರ್ ಮಾಡ್ಕೊಂಡು ಇಲ್ಲೇ ಕೊಪ್ಪಕ್ ಬಂದ್ ಬಿಡು. ಅವರು ಬೆಳಿಗ್ಗೆ ಆರು ಗಂಟೆಗೆ ಔಷಧಿ ಕೊಟ್ರೆ ಸಂಜೆ ಆರು ಗಂಟೆ ವಳಗೆ ಕಲ್ಲು ಹೊರಗೆ ಬಿದ್ಬಿಡತ್ತಂತೆ”. ಅಂದ ಹಾಗೆ ಆ ನಾಟಿ ವೈದ್ಯರು 200 ರೂಪಾಯಿ ಚಾರ್ಜ್ ಮಾಡುತ್ತಾರೆ ಎಂದು ಹೇಳಲು ಅಣ್ಣ ಮರೆಯಲಿಲ್ಲ.

ದ್ವಂದ್ವದ ಉಗಮವಾಗಿತ್ತು.

(ನಾಳೆ: ಹಿತ್ತಲ ಗಿಡ ಮದ್ದಲ್ಲ….)

ಮೊದಲ ದಿನ ಮೌನ…ಹೊಟ್ಟೆನೋವಿನಿಂದಾಗಿ ಅಳುವೇ ತುಟಿಗೆ ಬಂದಂತೆ….

ಪ್ರತಿನಿತ್ಯ ಗುಡ್ ಬಾಯ್ ಹಾಗೆ ಐದೂವರೆ ಆರುಗಂಟೆಗೆಲ್ಲ ಎದ್ದುಬಿಡುತ್ತೇನೆ. ಆದರೆ ಸನ್ ದೋ ಹಜಾರ್ ದಸ್ ಜನೆವರಿ ಮಾಹೆಯ 20 ನೇ ದಿನದಂದು ತಾನಾಗಿಯೇ ಎಚ್ಚರವಾದಾಗ ಈಟಿವಿಯಲ್ಲಿ ಮುಂಜಾನೆ ಕನ್ನಡಿ ನಾಡಿಯ ಮಾಂಟೇಜ್ ಗುಡುಗುಡು ಉರುಳುತ್ತಿತ್ತು. ಹೊಟ್ಟೆಯಲ್ಲಿ ಏನೋ ಒಂದು ರೀತಿಯ ನೋವು. ಸರಿಯಾಗಿ ಹೇಳಿಕೊಳ್ಳಲಾಗದ ಚಡಪಡಿಕೆ. ಹಾಸಿಗೆಯಲ್ಲಿ ಎದ್ದುಕುಳಿತೆ, ಮತ್ತೆ ಮಲಗಿದೆ, ಮಗ್ಗಲು ಬದಲಾಯಿಸಿದೆ, ಅಂಗಾತ-ಕವುಚಿ ಮಲಗಿ ನೋಡಿದೆ. ಊಹುಂ….ಏನೇ ಆದರೂ ನೋವು ನಿಲ್ಲುತ್ತಿಲ್ಲ. ಇನ್ನು ಮಲಗಿ ಪ್ರಯೋಜನವಿಲ್ಲವೆಂದುಕೊಂಡು ಎದ್ದುಹೋಗಿ ನಿತ್ಯದ ಅಭ್ಯಾಸದಂತೆ ಒಂದು ಲೋಟ ಭರ್ತಿ ನೀರು ಕುಡಿದೆ.

ನೋವು ಹೆಚ್ಚಾಯಿತು.

ಶೌಚಕ್ಕೆ ಹೋದರೆ ಯಾವುದೇ ಸಮಸ್ಯೆಯಿಲ್ಲದೆ ಸಾಂಗವಾಗಿ ನೆರವೇರಿತು. ಬೆಳಿಗ್ಗಿನ ತಿಂಡಿ ತಿನ್ನಲು ಆಗಲಿಲ್ಲ. ಬ್ಲಾಗ್ ಮೀಟರ್ ಒಳ್ಳೆಯ ಟಿ ಆರ್ ಪಿ ತೋರಿಸುತ್ತಿದ್ದರೂ, ಕಂಪ್ಯೂಟರ್ ಮುಂದೆ 15 ನಿಮಿಷಕ್ಕೂ ಹೆಚ್ಚು ಕೂರಲಾಗಲಿಲ್ಲ. ಒಂಬತ್ತುವರೆ ಸುಮಾರಿಗೆ ಮತ್ತೆ ಮಲಗಿಬಿಟ್ಟೆ.

ಆಗಿನಿಂದ ಶುರವಾಯಿತು ನೋಡಿ ಹೋಯ್ಕೋ ಬಡ್ಕೋ. ಏನೇ ಮಾಡಿದರೂ ಹೊಟ್ಟೆ ಶಾಂತವಾಗುವ ಬದಲು ನೋವು ಹೆಚ್ಚುತ್ತಿತ್ತು. ಹನ್ನೊಂದು ಗಂಟೆಯವರೆಗೆ ಕೇವಲ ನರಳುತ್ತಿದ್ದವನು, ನೋವು ಸಹಿಸಲಾರದೆ ಅಳಲಾರಂಭಿಸಿದೆ. ಐ ಹ್ಯಾಡ್ ನೋ ಅಲ್ಟರ್ ನೇಟಿವ್. ಆದರೆ ಪಾದರಸದಂತೆ ಓಡಾಡಿಕೊಂಡಿದ್ದ ನಾನು ಈ ರೀತಿಯ ನೋವಿಗೆಲ್ಲ ಜಗ್ಗುವವನಲ್ಲ ಎಂಬುದು ನನ್ನ ಬಾಳ ಸಂಗಾತಿಯ ಆತ್ಮವಿಶ್ವಾಸ. ಹೀಗಾಗಿ ತಕ್ಷಣ ಪ್ಯಾರಾಸಿಟಮಾಲ್ ಕೊಟ್ಟಳು. ಕಾವಲಿ ಕಾಯಿಸಿಕೊಂಡು ಬಂದು ಅದರ ಮೇಲೆ ಬಟ್ಟೆ ಬಿಸಿ ಮಾಡಿ ಹೊಟ್ಟೆಗೆ ಶಾಖ ನೀಡಲಾರಂಭಿಸಿದಳು. ಸುಮಾರು ಒಂದು ಗಂಟೆಯ ನರಳಾಟದ ಬಳಿಕ ನೋವು ಕಂಟ್ರೋಲ್ ಗೆ ಬಂತು. ಆದರೆ ಸಂಪೂರ್ಣ ನಿಂತಿರಲಿಲ್ಲ. ಹೊಟ್ಟೆಗೆ ನೀಡಿದ ಶಾಖದ ಪ್ರಭಾವವೋ, ಪ್ಯಾರಾಸಿಟಮಾಲ್ ಮ್ಯಾಜಿಕ್ಕೋ, ಅಂತೂ ನಿದ್ದೆಗೆ ಜಾರಿಬಿಟ್ಟೆ, ನೋವಿನಲ್ಲೇ.

ಆದರೆ ಮತ್ತೆ ಸಂಜೆ ನಾಲ್ಕು ಗಂಟೆ ಸುಮಾರಿಗೆ ನೋವು ಒತ್ತಿಕೊಂಡು ಬಂತು. ಈ ಬಾರಿ ಬಂದ ನೋವು ಮಾತ್ರ ಪ್ಯಾರಾಸಿಟಮಾಲ್ ಹೊಟ್ಟೆಗೆ ಕಳುಹಿಸುದದರ ಬಗ್ಗೆ ತೀರ ಕೋಪಮಾಡಿಕೊಂಡಂತಿತ್ತು. ಹೀಗಾಗಿ ಎರಡು ಪಟ್ಟು ಜೋರಾಗಿ ಹೊಟ್ಟೆ ನೋಯಲಾರಂಭಿಸಿತು. ಸುಮಾರು 35 ವರ್ಷಗಳ ಕಾಲ ಏರ್ ಫೋರ್ಸ್ ನ ಮೆಡಿಕಲ್ ಟ್ರೇಡ್ ನಲ್ಲಿದ್ದು, ಚೀನಾ, ಬಾಂಗ್ಲಾ, ಪಾಕಿಸ್ತಾನ ವಾರ್ ಗಳಲ್ಲಿ ಭಾರತೀಯ ಸೈನಿಕರಿಗೆ ಚಿಕಿತ್ಸೆ ನೀಡಿರುವ ನನ್ನ ಮಾವ, ನನ್ನ ಸ್ಥಿತಿ ನೋಡಿ ಮೊದಲ ಬಾರಿ ಚಿಂತಿತರಾದರು. ತಕ್ಷಣ ಮೆಡಿಕಲ್ ಶಾಪ್ ಗೆ ಹೋದವರೆ ಬರಾಲ್ಗನ್ ಹಾಗೂ ಮತ್ತೊಂದು ಮಾತ್ರೆ ತಂದು ಕೊಟ್ಟರು. ಯಾವುದೇ ಪರಿಣಾಮ ಕಂಡುಬರಲಿಲ್ಲ. ಸಂಜೆ ಆರುಗಂಟೆ ವೇಳೆಗೆ ನಮ್ಮ ಕುಟುಂಬ ವೈದ್ಯರಾದ ಡಾ. ಸತೀಶ್ ಬಂದವರೇ ನನ್ನ ಸ್ಥಿತಿ ಪರಿಕ್ಷೀಸಿದರು. ಆಗ ಅವರು ಗೆಸ್ ಮಾಡಿದ್ದು ಅಕ್ಯೂಟ್ ಅಪೆಂಡಿಸೈಟಿಸ್.

ಆಂಟಿಬಯೋಟಿಕ್ ಹಾಗೂ ಪೇನ್ ಕಿಲ್ಲರ್ ಮಾತ್ರೆಗಳನ್ನು ಕೊಟ್ಟು ನಾಳೆಯವರೆಗೆ ನೋಡಿ, ನಂತರ ಸರ್ಜನ್ ರನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು. ಆದರೆ ಡಾ. ಸತೀಶ್ ಅವರು ಪ್ರಿಸ್ರ್ಕೈಪ್ ಮಾಡಿದ ಗುಳಿಗೆಳನ್ನು ನುಂಗಲು ಆಹಾರ ಸೇವಿಸುವುದು ಅನಿವಾರ್ಯವಾಗಿತ್ತು. ನನಗೆ ಇಂದಿಗೂ ನನ್ನ ಬಗ್ಗೆಯೇ ಖುಷಿ ಕೊಡುವ ನನ್ನ ಗುಣವೆಂದರೆ, ಯಾವುದಾದರೂ ಒಂದು ಕೆಲಸ ನನಗೆ ಸವಾಲಿನದು ಎನಿಸಿದರೆ ಅದನ್ನು ಹಟಕ್ಕೆ ಬಿದ್ದು ಸಾಧಿಸುವುದು. ಹೀಗಾಗಿ ಬಾಯಿ ರುಚಿ ಕೆಟ್ಟು, ಹೊಟ್ಟೆ ನೋವು ತಾರಕಕ್ಕೇರಿದ್ದರೂ ಅನಾಮತ್ತಾಗಿ ಗಬಗಬನೆ ಊಟ ಮಾಡಿ “ಹೆಂಗೆ ಮಗನೆ?” ಎಂದೆ ಹೊಟ್ಟಗೆ.

ಗುಳಿಗೆ ನುಂಗಿದೆ.

ದುರಾದೃಷ್ಟ ಊಟಮಾಡಿದ ಹತ್ತುನಿಮಿಷದ ಒಳಗೆ ಗುಳಿಗೆಯ ಸಮೇತ ವಾಂತಿಯಾಯಿತು.

ಎರಡುಗಂಟೆ ಬಿಟ್ಟು ಮತ್ತೆ ಆಹಾರ ಸೇವಿಸಿ ಗುಳಿಗೆ ನುಂಗಿದರೆ ಮತ್ತೆ ವಾಂತಿ. ರಾತ್ರಿ ಹತ್ತೂವರೆ ಸುಮಾರಿಗೆ ಹೊಟ್ಟೆನೋವು, ವಾಂತಿ, ಪೇನ್ ಕಿಲ್ಲರ್, ನಿರಂತರ ಅಳುವಿನಿಂದಾಗಿ ಬೆಂಡಾಗಿಬಿಟ್ಟಿದ್ದೆ. ಆಸ್ಪತ್ರೆಗೆ ಅಡ್ಮಿಟ್ ಮಾಡದೇ ಬೇರೆ ವಿಧಿಯೇ ಇರಲಿಲ್ಲ. ರಾತ್ರಿ ಹನ್ನೊಂದೂ ಕಾಲರ ಸುಮಾರಿಗೆ ನನ್ನ ಮಾಮ ಶ್ರಿನಿವಾಸ್ ಹಾಗೂ ಅವರ ಮಗ ಅಭಿಜಿತ್ ಕಾರು ತೆಗೆದುಕೊಂಡು ಬಂದರು. ನನ್ನನ್ನು ಕೂರಿಸಿಕೊಂಡು ಕಾರ್ ನೇರವಾಗಿ ಹೋಗಿದ್ದು, ಗಿರಿನಗರದ ರಾಧಾಕೃಷ್ಣ ಆಸ್ಪತ್ರೆಗೆ. ನನ್ನ ಮಗ ಅಲ್ಲೇ ಹುಟ್ಟಿದವನಾದ್ದರಿಂದ ಎಲ್ಲ ವೈದ್ಯರ, ಸಿಸ್ಟರ್ ಗಳ ಪರಿಚಯ ಚೆನ್ನಾಗಿತ್ತು. ಮೇಲಾಗಿ ಮುಖ್ಯಮಂತ್ರಿಗಳ ಮಗ ಬೇರೆ. ವೈದ್ಯರು ಮೊದಲ ಮಾಡಿದ ಕೆಲಸ ನನಗೆ ಪೇನ್ ಕಿಲ್ಲರ್ ನ ಸ್ಟ್ರಾಂಗ್ ಇಂಜೆಕ್ಷನ್ ನೀಡಿ, ಅಡ್ಮಿಟ್ ಮಾಡಲು ಹೇಳಿದ್ದು. ಆಗ ಗಡಿಯಾರ ರಾತ್ರಿ ಒಂದು ಗಂಟೆ ತೋರಿಸುತ್ತಿತ್ತು. ಬ್ಲಡ್ ಟೆಸ್ಟ್ ಗೆಂದು ಸಿಸ್ಟರ್ ಬಂದು ಬ್ಲಡ್ ತೆಗೆದುಕೊಂಡು ಹೋದಳು. ಎಡಗೈಗೆ ಸಲೈನ್ ಚುಚ್ಚಿದಳು.

ನಾನು ನಿಧಾನವಾಗಿ ನಿದ್ದೆಗೆ ಜಾರಿದೆ…..

(ನಾಳೆ : ನಾಟಿ ವೈದ್ಯವೋ, ಸಿಸ್ಟೋಸ್ಕಾಪಿಯೋ…)

ನಾಳೆಯಿಂದ ನನ್ನ ಆಸ್ಪತ್ರೆಯ ದಿನಗಳ ನೆನಪು ಮಾಲಿಕೆ ಆರಂಭ

ಇಪ್ಪತ್ತೊಂಬತ್ತು ವರ್ಷಗಳಲ್ಲಿ ಈ ರೀತಿಯದ್ದನ್ನು ಅನುಭವಿಸಿರಲಿಲ್ಲ. ಆಸ್ಪತ್ರೆ, ಅಡ್ಮಿಟ್, ಮಾತ್ರೆ, ಇಂಜೆಕ್ಷನ್ ಎಂಬುದನ್ನು ಅರಿಯದವನಾಗಿದ್ದೆ. ಆದರೆ ಮೊನ್ನೆ ಉಂಟಾದ ಹೊಟ್ಟೆ ನೋವು, ಇಡೀ ದಿನ ಹಾಸಿಗೆಯ ಮೇಲೆ ಮಲಗಿ ಬಿಕ್ಕಿಬಿಕ್ಕಿ ಅಳುವ ಹಾಗೆ ಮಾಡಿ ಬಿಟ್ಟಿತು. ಸಿಸ್ಟೋಸ್ಕಾಪಿ ಮಾಡಿಸಿಕೊಳ್ಳುವ ಹಾಗೆ ಮಾಡಿತು. ಅಂದಿನಿಂದ ಹಿಡಿದು ಮತ್ತೆ ಆರಾಮಾಗುವನತನಕದ ಅನುಭವಗಳನ್ನು ನಾಳೆಯಿಂದ ಹಂಚಿಕೊಳ್ಳಲಿದ್ದೇನೆ.

ನಿರೀಕ್ಷಿಸಿ….

ಪ್ರೀತಿಯಿರಲಿ,

ಸುಘೋಷ್ ಎಸ್. ನಿಗಳೆ

ನಾನು ಸುಘೋಷ್ ನಿಗಳೆಯೂ ಅಲ್ಲ, ದೇವಾನಂದಸ್ವಾಮಿಯೂ ಅಲ್ಲ, 202

ಸುಮಾರು ಕಳೆದ ಒಂದು ವಾರದಿಂದ ಬ್ಲಾಗ್ ಅಪ್ ಡೇಟ್ ಮಾಡಲು ಆಗಿಲ್ಲ. ಕಾರಣ ನನ್ನ ಕಿಡ್ನಿಯಲ್ಲಿ ಕಾಣಿಸಿಕೊಂಡು ಕಲ್ಲಗಳು. ಒಂದು ದಿನ ಇದ್ದಕ್ಕಿದ್ದಂತೆ ಬೆಳಿಗ್ಗೆ ಸಿಕ್ಕಾಪಟ್ಟೆ ಹೊಟ್ಟೆ ನೋವು ಬಂದು ನರಳಾಡಿಬಿಟ್ಟೆ. ರಾತ್ರಿಯ ಹೊತ್ತಿಗೆ ಆಸ್ಪತ್ರೆಗೆ ಹೋದಾಗ, ಅಬ್ಡಾಮಿನ್ ಸ್ಕಾನಿಂಗ್ ಮಾಡಿಸಿದಾಗ ಕಂಡಿದ್ದು ಮೂರು ಕಲ್ಲುಗಳು. ಅದಾದ ಬಳಿಕ ಆಗಿದ್ದು ಸಿಸ್ಟೋಸ್ಕಾಪಿ. ನಾನಿದ್ದ ರೂಂ ನಂ. 202. ಹೀಗಾಗಿ ನನಗೆ ಅಲ್ಲಿ ಚಿಕಿತ್ಸೆ ದೊರೆತಿದ್ದು 202 ಆಗಿ. ಸುಘೋಷ್ ನಿಗಳೆಯಾಗಿ ಅಥವಾ ದೇವಾನಂದ ಸ್ವಾಮಿಯಾಗಿ ಅಲ್ಲ. ಇದೀಗ ಚೇತರಿಸಿಕೊಳ್ಳುತ್ತಿದ್ದೇನೆ. ಶೀಘ್ರದಲ್ಲಿಯೇ ಮತ್ತೆ ಬ್ಲಾಗ್ ಅಪ್ಡೇಟ್ ಆರಂಭಿಸುತ್ತೇನೆ. ನೆಟ್ಟಗೆ ಕೂತಿರಬಾರದು, ಕೇವಲ ಮಲಗಿರಬೇಕು ಎಂದು ಡಾಕ್ಟರ್ ಹೇಳಿರುವುದರಿಂದ ಈ ಶಿಕ್ಷೆ.

ಶೀಘ್ರದಲ್ಲೇ ಕಾಣುವೆ,

ಸುಘೋಷ್ ಎಸ್. ನಿಗಳೆ.

ಟ್ರಾಫಿಕ್ ಪೋಲಿಸರು ಹೀಗೂ ಇರುತ್ತಾರೆ ಭಾಗ 3

ಇದು ನಾನು ನೋಡಿದ ಘಟನೆ. ಸ್ಥಳ ಕತ್ರಿಗುಪ್ಪೆ ಸಮೀಪದ ರಿಂಗ್ ರೋಡಿನಲ್ಲಿ ಐಸಿಐಸಿಐ ಬ್ಯಾಂಕ್  ಎದುರು. ಅದರ ಮುಂದೆ ಗಿಡಗಳಿಗವೆ. ಅಲ್ಲಿ ತಿಂಗಳಿನಲ್ಲಿ ಇಪ್ಪತ್ತೈದು ದಿನ ಒಬ್ಬ ನಿರ್ದಿಷ್ಟ ಟ್ರಾಫಿಕ್ ಎಸ್ಐ ಹಾಗೂ ಇಬ್ಬರು ನಿರ್ದಿಷ್ಟ ಪೋಲಿಸ್ ಪೇದೆಗಳು ಇರುತ್ತಾರೆ.

ಐಸಿಐಸಿಐ ಎಟಿಎಂ ನಲ್ಲಿ ಹಣ ಡ್ರಾ ಮಾಡಿಕೊಂಡು ಹೊರಬಂದಾಗ ಮಹಿಂದ್ರಾ ಗೂಡ್ಸ್ ಜೀಪ್ ಒಂದನ್ನು ಪೋಲಿಸ್ ಪ್ಯಾದೆ ಹಿಡಿದಿದ್ದ. ಯೂ ಟರ್ನ್ ನಿಷೇಧದ ತಿರುವಿನಲ್ಲಿ ಯೂ ಟರ್ನ್ ತೆಗೆದುಕೊಂಡಿರುವೆ ಎಂದು ಪ್ಯಾದೆ. ಇಲ್ಲ, ಇನ್ನೂ ಸ್ವಲ್ಪ ಮುಂದೆ ಹೋದರೆ ಡಿವೈಡರ್ ಬರುತ್ತದೆ.ಅಲ್ಲಿ ಯೂ ಟರ್ನ್ ತೆಗೆದುಕೊಂಡಿದ್ದೇನೆ ಎಂದು ಡ್ರೈವರ್. ವಾದವಿವಾದ ಸಾಗಿತ್ತು. ಪ್ಯಾದೆ ಆತನನ್ನು ಕರೆದುಕೊಂಡು ಹೋಗಿ ಎಸ್ಐ ಎದುರು ನಿಲ್ಲಿಸಿದ. ಡ್ರೈವರ್ ದೊಡ್ಡ ದನಿ ತೆಗೆದು ಮಾತನಾಡುತ್ತ, ತಾನು ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ ಎಂದು ಸಾಬೀತು ಮಾಡುವಲ್ಲಿ ಅಂತೂ ಸಫಲನಾದ. ಎಸ್ಐ ಆತನಿಗೆ ಹೋಗಲು ಹೇಳಿದ. ಪ್ರಕರಣ ಬೇಗ ಮುಗಿದಿದ್ದಕ್ಕೆ ಅಲ್ಲಿ ನಿಂತು ತಮಾಷೆ ನೋಡುತ್ತಿದ್ದ ಜನರಿಗೆ ಬೇಜಾರಾಯಿತು. ನನಗೆ ಬ್ಯಾಂಕಿನಲ್ಲಿ ಕೆಲಸವಿತ್ತಾದ್ದರಿಂದ ನಾನು ಬ್ಯಾಂಕ್ ಪ್ರವೇಶಿಸಿದೆ. ಐಸಿಐಸಿಐನ ಎಟಿಎಂ ಬ್ಯಾಲೆನ್ಸ್ ಸ್ಲಿಪ್ ಕೊಡುವಾಗ ಒಂದು ಟ್ರಾನ್ಸಾಕ್ಷನ್ ಸ್ಲಿಪ್ ಕೊಡುವ ಬದಲು ಮೂರು ಟ್ರಾನ್ಸಾಕ್ಷನ್ ಸ್ಲಿಪ್ ಕೊಡುತ್ತಿತ್ತು. ಅದನ್ನು ಮೂರನೇ ಬಾರಿ ಬ್ಯಾಂಕ್ ನ ಗಮನಕ್ಕೆ ತರಲು ಹೋಗಿದ್ದೆ. ನನ್ನ ಕೆಲಸ ಮುಗಿಯಿತು. ಹೊರಗೆ ಬಂದು ನೋಡಿದರೆ ಅಬ್ಬಾ ಅದೇನು ದೃಶ್ಯ. ಅದೇ ಡ್ರೈವರ್, ಪೋಲಿಸ್ ಪ್ಯಾದೆಯನ್ನು ವಾಚಾಮಗೋಚರ ಬೈಯುತ್ತಿದ್ದಾನೆ. “ಏನು ಮೊಬೈಲ್ ನಂಬರ್ ಕೇಳ್ತೀಯಾ? ನನ್ನ ನಂಬರ್ ತೆಗೆದುಕೊಳ್ಳೋದಾದರೆ ನಿನ್ನ ನಂಬರ್ ಕೂಡ ಕೊಡು. ಅದ್ಯಾರಿಗೆ ರಿಪೋರ್ಟ್ ಮಾಡುತ್ತೀಯೋ ನಾನೂ ನೋಡುತ್ತೇನೆ. ರೂಲ್ಸ್ ಏನು ಅಂತ ಪಬ್ಲಿಕ್ ಗೆ ಹೇಳಿಕೊಡುವ ಮೊದಲು ನೀನು ಮೊದಲು ರೂಲ್ಸ್ ತಿಳ್ಕೊ. ನೀನು ಪಬ್ಲಿಕ್ ಗೆ ಗೌರವ ಕೊಟ್ರೆ ಪಬ್ಲಿಕ್ಕೂ ನಿನಗೆ ಗೌರವ ಕೊಡುತ್ತೆ. ಬೆಳಿಗ್ಗೆಯಿಂದ ಹಿಂಗೆ ಅಂಗಡಿ ತೆರೆದುಕೊಂಡು ಕೂತರೆ ಗೌರವ ಹೇಗೆ ಬರುತ್ತೆ? ನಿನ್ನಂಥವರ ಎದುರು ನಾಯಿಗೆ ಬಿಸಾಕಿದ ಹಾಗೆ 100 ರೂಪಾಯಿ ಬಿಸಾಕಿದರೆ ಸುಮ್ಮನಾಗ್ತೀರ….”ಹೀಗೆ ಸಾಗಿತ್ತು ಡ್ರೈವರ್ ನ ಮಾತಿತ ಓಘ. ಡ್ರೈವರ್ ಕಡಿಮೆಯೆಂದರೂ 100 ಡೆಸಿಬಲ್ ಪರಿಮಾಣದಲ್ಲಿ ಮಾತನಾಡುತ್ತಿದ್ದರೆ, ಪೋಲಿಸ್ ಪ್ಯಾದೆ ಥರಗುಟ್ಟಿ ಹೋಗಿದ್ದ. ಎಸ್ಐ ಪೇದೆಯನ್ನು ವಾಪಸ್ ಬರುವಂತೆ ಹೇಳಿ ಹೇಳಿ ಸಾಕಾಗಿ ಹೋಗಿದ್ದ. ಪೋಲಿಸರ ಮಾನ ಎರಡೂಮುಕ್ಕಾಲು ಕಾಸಿಗೆ ಹರಾಜಾಗಿ ಹೋಗಿತ್ತು. ಜನ ಎಲ್ಲ ನಿಂತು ತಮಾಷೆ ನೋಡಿದ್ದರು. ಅಂತೂ ಡ್ರೈವರ್ ಶಾಂತನಾಗಿ ವಾಪಸ್ ಹೋಗಿ ತನ್ನ ಜೀಪಿನಲ್ಲಿ ಕುಳಿತ. ನಾನು ತಕ್ಷಣ ಹೋದವನೆ “ತುಂಬಾ ಚೆನ್ನಾಗಿ ಮಾತನಾಡಿದಿರಿ. ನಿಮ್ಮಂಥವರು ಬೇಕು” ಎಂದೆ. “ಸಾರ್, ನಾಲ್ಕು ಜನ ಪಬ್ಲಿಕ್ ನನ್ನ ಜೊತೆ ನಿಲ್ಲಲಿ ಸಾರ್ ಈ ಪೋಲಿಸರ ………….ಬಿಡುತ್ತೆನೆ” ಎಂದು ನಗುತ್ತ ಗಾಡಿ ಸ್ಟಾರ್ಟ್ ಮಾಡಿ ಹೊರಟು ಹೋದ.

ನನಗೆ ಅನಿಸಿದ್ದು.

ಭಾರತದಲ್ಲಿ ಇಂದಿಗೂ ಈ ರೀತಿಯ ಸಣ್ಣ ಸಣ್ಣ ವಿಶಲ್ ಬ್ಲೋವರ್ಸ್ ಇದ್ದಾರೆ. ಇಂತಹವರಿಂದಾಗಿಯೇ ಭ್ರಷ್ಟಾಚಾರ ನಿಯಂತ್ರಣದಲ್ಲಿದೆ. ಆದರೆ ಪ್ರತಿ ತಿಂಗಳೂ ಮಂತ್ಲಿ ಫಿಕ್ಸ್ ಮಾಡಿರುವ ಇನ್ಸ್ ಪೆಕ್ಟರ್, ಎಸಿಪಿ, ಡಿಸಿಪಿ, ಅವರಪ್ಪ, ಅವರಜ್ಜ ಬಡಪಾಯಿ ಪೋಲಿಸ್ ಪೇದೆಗಳ ಮೇಲೆ ಪ್ರೆಶರ್ ಹಾಕುತ್ತಿದ್ದರೆ, ಪಾಪ ಪೇದೆಗಳಾದರೂ ಬೆಳಿಗ್ಗೆ ಬೆಳಿಗ್ಗೆ ಅಂಗಡಿ ತೆರೆಯದೆ ಇನ್ನೇನು ಮಾಡುತ್ತಾರೆ. ವಿಕ್ಟಿಮ್ ಈಸ್ ದಿ ವೀಕೆಸ್ಟ್….