ನಾನು ಸಿಗರೇಟು ಬಿಟ್ಟು ಒಂದು ವರ್ಷ

ಸಿಗರೇಟು ಸತ್ತಿದೆ

ಕನಸಾ? ನಂಬಲಾಗುತ್ತಿಲ್ಲ. ಆದರೂ ನಿಜ. ನಾನು ಸಿಗರೇಟು ಸೇದುವುದನ್ನು ಬಿಟ್ಟು ಜನವರಿ 20, 2011 ಕ್ಕೆ ಸರಿಯಾಗಿ ಒಂದು ವರ್ಷ. ಹೋದವರ್ಷ ಜನವರಿ 20 ರಂದು ಸಿಕ್ಕಾಪಟ್ಟೆ ಹೊಟ್ಟೆ ನೋವು ಬಂದು, ಮೂತ್ರಪಿಂಡದಲ್ಲಿ ಕಲ್ಲುಕಂಡು ಬಂದು, ಸಿಸ್ಟೋಸ್ಕೋಪಿಯಾಗಿದ್ದು ಎಲ್ಲವೂ ಹಸಿರಾಗಿದೆ. ಸಿಸ್ಟೋಸ್ಕೋಪಿ ಬಳಿಕ ನನ್ನ ದೇಹದ ಬಗ್ಗೆ ನನಗೆ ಅತೀವ ಪ್ರೀತಿ, ಅಭಿಮಾನ, ಗೌರವ ಬೆಳೆದು ಸಿಗರೇಟು ಸೇದುವುದನ್ನು ಬಿಟ್ಟುಬಿಟ್ಟೆ.

1999 ರಿಂದ 2009 ರ ನಡುವಿನ ಅವಧಿಯಲ್ಲಿ ನಾನು ಸೇದಿದ ಸಿಗರೇಟುಗಳ ಸಂಖ್ಯೆ ಸುಮಾರು ಆರು ಸಾವಿರ ಹಾಗೂ ಬೀಡಿಗಳ ಸಂಖ್ಯೆ ನಾಲ್ಕು. ವಿಲ್ಸ್ ನೇವಿಕಟ್, ಗೋಲ್ಡ್ ಫ್ಲೇಕ್ ಕಿಂಗ್, ಸ್ಮಾಲ್, ವಿಲ್ಸ್ ಕ್ಲಾಸಿಕ್, ಮೆಂಥಾಲ್, ಗುಡಂಗ್ ಗರಂ, ಮೋರ್, ಬ್ಲಾಕ್ ಹೀಗೆ ಹಲವು ಬ್ರಾಂಡ್ ಗಳನ್ನು ಸೇದಿದೆ. ತುಂಬಾ ಹೆಚ್ಚು ಸೇದಿದ ಬ್ರಾಂಡ್ ಗೋಲ್ಡ್ ಫ್ಲೇಕ್ ಕಿಂಗ್. ತುಂಬಾ ಇಷ್ಟಪಟ್ಟ ಬ್ರಾಂಡ್ ಬ್ಲಾಕ್. ತುಂಬಾ ಕಿಕ್ ಕೊಟ್ಟ ಬ್ರಾಂಡ್ ಯಾವುದೇ ಸಿಗರೇಟಲ್ಲ, ಅದು ಬೀಡಿ. ಬಹುಶಃ 30 ನಂಬರ್ ಬ್ರಾಂಡ್ ಇರಬೇಕು.  ಬ್ಲಾಕ್ ಹಾಗೂ ಗುಡಂಗ್ ಗರಂ ಸಿಗರೇಟುಗಳಲ್ಲಿ ಲವಂಗ ಹಾಗೂ ಇನ್ನು ಕೆಲವು ಮಸಾಲೆ ಪದಾರ್ಥ ತುಂಬಿರುತ್ತಾರೆ. ಸಿಗರೇಟು ಎಳೆದಾಗ ಚರ್ ಚರ್ ಚಟ್ ಎಂದು ಸದ್ದು ಬರುತ್ತಿತ್ತು.

ಆದರೆ ಇದೀಗ ಎಲ್ಲವನ್ನೂ ಮರೆತಿದ್ದೇನೆ. ಇನ್ನು ಮುಂದೆ ಸಿಗರೇಟು ಸೇದುವುದಿಲ್ಲ ಎಂದು ನಾನೆಂದಿಗೂ ಪ್ರತಿಜ್ಞೆ ಮಾಡಿಲ್ಲ. ಮುಂದೆ ಮತ್ತೆ ಸಿಗರೇಟು ಅಂಟಿಸಿಕೊಳ್ಳುತ್ತೇನೆಯೇ ಗೊತ್ತಿಲ್ಲ. ಇಂದು ಮಾತ್ರ ಸಿಗರೇಟು ಬೇಡವೆನಿಸುತ್ತದೆ. ಸಿಗರೇಟು ಬಿಟ್ಟು ಒಂದು ವರ್ಷದ ಬಳಿಕ ನನಗೆ ನನ್ನ ಬಗ್ಗೆಯೇ ಹೆಮ್ಮೆಯಿದೆ. ಸಿಗರೇಟು ಹೊಗೆಯಿಂದ ವಾತಾವಾರಣವನ್ನು ಕಾಪಾಡಿದ್ದಕ್ಕೆ, ನನ್ನ ಮುದ್ದಿನ ದೇಹವನ್ನು ಶೋಷಿಸದಿದ್ದಕ್ಕೆ, ಹಣ ಹಾಗೂ ಸಮಯ ಉಳಿಸಿಕೊಂಡಿದ್ದಕ್ಕೆ.

ಆದರೆ ಸಿಗಾರ್ ಸೇದುವ ಕನಸು ಮಾತ್ರ ಇನ್ನೂ ಹಾಗೆಯೇ ಉಳಿದುಕೊಂಡಿದೆ. ಬಹುಶಃ ಇನ್ನೆಂದಿಗೂ ಆ ಕನಸು ನನಸಾಗಲಾರದು ಎನಿಸುತ್ತದೆ. ಕೆಲವು ಕನಸುಗಳು ನನಸಾಗದಿದ್ದರೇ ಚೆನ್ನ.

ಎನಿ ವೇ, ವಿಶ್ ಮಿ…..

ನಿನ್ನೆಯಿಂದ ಡಿಸೈಡ್ ಮಾಡಿದ್ದೀನಿ, ಸಿಗರೇಟು ಸೇದಲ್ಲ ಅಂತ.

ಅಂದು ಜನವರಿ 2, 2010. ರಂಗಶಂಕರದಲ್ಲಿ ಊರ್ಮಿಳೆ ನಾಟಕ ನೋಡಲು ಹೋಗಿದ್ದೆ. ರಂಗಶಂಕರಕ್ಕೆ ಹೋದಮೇಲೆ ಸಿಗರೇಟು ಸೇದದಿದ್ದರೆ ಪಾಪ ಸುತ್ತಿಕೊಳ್ಳುತ್ತದೆ. ಹೀಗಾಗಿ ಪುಣ್ಯ ಸಂಪಾದಿಸಲೇಬೇಕೆಂಬ ಹಟದಿಂದ ನಾನು ಮತ್ತು ನನ್ನ ಗೆಳೆಯ ಹತ್ತಿರದ ಕಾಂಡಿಮೆಂಟ್ಸ್ ಅಂಗಡಿಗೆ ಹೋದೆವು. (ರಂಗಶಂಕರದಲ್ಲಿ 10 ರೂಪಾಯಿಯ ಟೀ ಕುಡಿದರೂ ಪಾಪ ಸುತ್ತಿಕೊಳ್ಳುತ್ತದೆ. ಅದಕ್ಕೆ ಹತ್ತಿರದ ಕಾಂಡಿಮೆಂಟ್ಸ್ ಅಂಗಡಿಗೆ ಹೋಗಿದ್ದು).

“ಬೈಟ್ ಟೂ ಟೀ, ಎರಡು ಕಿಂಗ್” ನಾನು ಆರ್ಡರ್ ಮಾಡಿದೆ.

ಗೆಳೆಯ ಹೇಳಿದ “ಒಂದೇ ಕಿಂಗ್ ಸಾಕು”.

“ಯಾಕೆ?”

“ನನಗೆ ಬೇಡ”.

ಠಯಾಕಪ್ಪಾ?”

“ನಾನು ಸ್ಮೋಕಿಂಗ್ ಬಿಟ್ಟುಬಿಟ್ಟೆ”.

“ಯಾವಾಗಿಂದಪ್ಪ?”

“ನಿನ್ನೆಯಿಂದ. ಡಿಸೈಡ್ ಮಾಡಿದ್ದೀನಿ, ಸಿಗರೇಟು ಸೇದಲ್ಲ ಅಂತ. ಎರಡು ದಿನ ಆಯ್ತು. ಫುಲ್ ಕಂಟ್ರೋಲ್ ಮಾಡ್ತಾ ಇದೀನಿ”.

“ಹ್ಹೆ..ಹ್ಹೆ…ನಾನು ನೋಡು. ನನಗೆ ಕಂಟ್ರೋಲ್ ಮಾಡಕ್ಕೆ ಬರೋದೇ ಇಲ್ಲ. ಹೀಗಾಗಿ ಡಿಸೈಡೇ ಮಾಡ್ಲಿಲ್ಲ…”

ಎಂದು ಲೈಟರ್ ತಲೆ ಮೊಟಕಿದೆ.

ಒಂದು ಕಿಂಗ್ ಸಿಗರೇಟ್ ಹಾಗೂ ಅಣ್ಣ ಬಸವಣ್ಣ….

ವಗಕಾ

ಆತ ಹಾಗೆ ನೋಡಿದರೆ ಚೈನ್ ಸ್ಮೋಕರ್ ಏನೂ ಅಲ್ಲ. ಆದರೆ ದಿನಕ್ಕೆ ಹೆಚ್ಚೆಂದರೆ ಒಂದು ಸಿಗರೇಟು ಸೇದುತ್ತಿದ್ದ. ತೀವ್ರ ಕೆಲಸದ ಒತ್ತಡದಿಂದಾಗಿ ಕಳೆದ ಒಂದು ವಾರದಿಂದ ಒಂದೂ ಸಿಗರೇಟು ಸೇದಿರಲಿಲ್ಲ. ಸಿಗರೇಟು ಸೇದಬೇಕೆಂಬ ಹಪಹಪಿ ತೀವ್ರವಾಗಿತ್ತು. ರಸ್ತೆ ಬದಿಯ ದೊಡ್ಡ ಮರದ ಪುಟ್ಟ ಗೂಡಂಡಗಡಿಯಲ್ಲಿ ಹಾಫ್ ಟೀ ಹಾಗೂ ಒಂದು ಕಿಂಗ್ ಸಿಗರೇಟು ಸೇದುತ್ತ ಹೊಗೆ ಬಿಡುತ್ತಿದ್ದರೆ ವ್ಯಗ್ರವಾಗಿರುತ್ತಿದ್ದ ಮನಸ್ಸು ನಿಧಾನವಾಗಿ ಶಾಂತವಾಗುತ್ತಿತ್ತು.

ಎಂದಿನಂತೆ ಗೂಡಂಗಡಿ ಎದುರು ತನ್ನ ನೆಚ್ಚಿನ ಸ್ಪ್ಲೆಂಡರ್ ಬೈಕ್ ನಿಲ್ಲಿಸಿದ. ಸಿಂಗಲ್ ಸ್ಟಾಂಡ್ ಹಾಕುವುದು ಸೋಮಾರಿತನ ಎಂದು ತಿಳಿದಿದ್ದ ಆತ ಎಂದಿಗೂ ಡಬಲ್ ಸ್ಟಾಂಡ್ ಹಾಕುವುದನ್ನೇ ಅಭ್ಯಾಸ ಮಾಡಿಕೊಂಡಿದ್ದ. ಅಂದೂ ಹಾಗೆಯೇ ಡಬಲ್ ಸ್ಟಾಂಡ್ ಹಾಕಿದ. ಕಿಂಗ್ ಸಿಗರೇಟ್ ಗೆ ನಾಲ್ಕೂವರೆ ರೂಪಾಯಿ. ಐದು ರೂಪಾಯಿಯ ಕಾಯಿನ್ ಹೊರ ತೆಗೆದ. ಹೊಳೆಹೊಳೆಯುವ ಐದು ರೂಪಾಯಿಯ ಒಂದು ಕಡೆ, ತುಂಬ ಮುದ್ದಾಗಿ 5 ಎಂದು ಬರೆದಿತ್ತು. ಕಾಯಿನ್ ತಿರುಗಿಸಿ ನೋಡಿದ. ಅಣ್ಣ ಬಸವಣ್ಣನ ಚಿತ್ರ ಸುಂದರವಾಗಿ ಮೂಡಿಬಂದಿತ್ತು. ತಕ್ಷಣ ಈತನಿಗೆ ನೆನಪಾಯಿತು. ಇದೇ ಅಂತರಂಗ ಶುದ್ಧಿ….ಇದೇ ಬಹಿರಂಗ ಶುದ್ದಿ…ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ.…ಛೆ…ಬಸವಣ್ಣ ಇರುವ ಕಾಯಿನ್ ನಿಂದ ಸಿಗರೇಟು ಕೊಳ್ಳುವುದೇ? ಇನ್ನೇನು ಆ ಕಾಯಿನ್ ಅಂಗಡಿಯವನಿಗೆ ಕೊಡಬೇಕು. ಅಷ್ಟರಲ್ಲಿ ಅದನ್ನು ಜೇಬಿಗಿಳಿಸಿ ವಾಪಸ್ ಬೈಕ್ ಏರಿದ…….