ನನ್ನ ಫೋಟೋ

ಜಿ. ಎನ್. ಮೋಹನ್ ಅವರ ಪುಸ್ತಕ ಬಿಡುಗಡೆ ಸಮಾರಂಭದ ದಿನ ಯು. ಬಿ. ಪವನಜ ಸರ್ ತೆಗೆದ ಚಿತ್ರ. 

..............

ಮಂತ್ರಾಲಯದಲ್ಲೊಂದು ಪವಾಡ

ಅಂತಾರಾಷ್ಟ್ರೀಯ ಖ್ಯಾತಿಯ ಸಿನಿ ಛಾಯಾಗ್ರಾಹಕ, ಕನ್ನಡಿಗ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ  ವಿ. ಕೆ. ಮೂರ್ತಿಯವರ ಜೀವನ ಕಥನದ ಹೆಸರು ಬಿಸಿಲು ಕೋಲು. ಲೇಖಕಿ ಉಮಾ ರಾವ್. ಇದನ್ನು ಪ್ರಿಸಮ್ ಪ್ರಕಟಿಸಿದೆ. ಮೂರ್ತಿಯವರ ಬದುಕಿನಲ್ಲಿ ನಡೆದ ಘಟನೆಯೊಂದು ಇಲ್ಲಿದೆ. ಬಿಸಿಲು ಕೋಲು ಪುಸ್ತಕದಿಂದ ಇದನ್ನು ಆಯ್ದುಕೊಳ್ಳಲಾಗಿದೆ.

ಓದಲೇ ಬೇಕಾದ ಪುಸ್ತಕ

ಮಂತ್ರಾಲಯದಲ್ಲಿ ಅಂದು ನಡೆದ ಪವಾಡ ಇಂದಿಗೂ ಮೂರ್ತಿ ಮನಸ್ಸಿನಲ್ಲಿ ಅಚ್ಚಳಿಯದೇ ನಿಂತಿದೆ.

ಅವತ್ತು ನಾನು (ಮೂರ್ತಿ) ನನ್ನ ಮೇಷ್ಟ್ರು ಸ್ನಾನಕ್ಕೆ ನದಿಗೆ ಹೋದೆವು. ನಮ್ಮ ಮೇಷ್ಟ್ರು ಕ್ಷೌರ ಮಾಡಿಕೊಳ್ಳುತ್ತಿದ್ದರು. ನಾನು ಸುಮ್ಮನೆ ನದಿ ನೋಡುತ್ತ ನಿಂತಿದ್ದೆ. ಇದ್ದಕ್ಕಿದ್ದಂತೆ ಒಬ್ಬ ಹೆಂಗಸು ಜೋರಾಗಿ ಕೂಗಿಕೊಳ್ಳುತ್ತ, ಅಳುತ್ತಿರುವುದು ಕೇಳಿಸಿತು. ನೋಡಿದರೆ, ಅವಳ ಒಂದರೆಡು ವರ್ಷದ ಮಗು ನದಿಯಲ್ಲಿ ಬಿದ್ದು ಕೊಚ್ಚಿಕೊಂಡು ಹೋಗ್ತಿದೆ. ಹತ್ತಿರದಲ್ಲೇ ಮೂರು ಜನ ಬ್ರಾಹ್ಮಣರು ನೋಡುತ್ತ ನಿಂತಿದ್ದರು. ಮಗು ಮುಳುಗಿ ಹೋಗುತ್ತಿದ್ದರೂ ಅವರು ಅಲ್ಲಿಂದ ಕದಲಲಿಲ್ಲ. ನಾನು ಓಡಿ ಹೋಗಿ ನದಿಗೆ ಧುಮುಕಿದೆ. ನಂಗೆ ಈಜೋಕೆ ಬರ್ತಿತ್ತು. ನದಿನೂ ಅಲ್ಲಿ ಅಂಥಾ ಆಳ ಏನೂ ಇರ್ಲಿಲ್ಲ. ಮಗೂನ್ನ ಎತ್ತಿಕೊಂಡು ಬಂದು, ಬಗ್ಗಿಸಿ ಒತ್ತಿ, ನೀರು ತೆಗೆದೆ. ಮಗು ಬದುಕಿಕೊಂಡಿದ್ದು ಕಂಡು ಎದೆ ತುಂಬಿ ಬಂತು.

ಆ ಮೂರೂ ಬ್ರಾಹ್ಮಣರು ಏಕೆ ಸಹಾಯಕ್ಕೆ ಹೋಗಿರಲಿಲ್ಲವೆಂದರೆ ಅದು ಶೂದ್ರ ಹೆಂಗಸಿನ ಮಗು ಎಂದು. ನಂಗೆ ಅಂಥಾ ಆಘಾತ ಎಂದೂ ಆಗಿರಲಿಲ್ಲ.

ಅಲ್ಲಿಂದ 11 ಗಂಟೆ ಹೊತ್ತಿಗೆ ಮಠಕ್ಕೆ ಹೋದ್ವಿ. ಎಲ್ಲೆಲ್ಲೂ ಗುಜುಗುಜು, ಉತ್ಸಾಹ. ಒಂದು ಮಗು ಮುಳುಗೇ ಹೋಗಿತ್ತಂತೆ, ಸಾಕ್ಷಾತ್ ರಾಘವೇಂದ್ರ ಸ್ವಾಮಿಗಳೇ ಬಂದು ಬದುಕಿಸಿದರಂತೆ…. ಎಂಥಾ ಪವಾಡ! ಈ ಕಥೆಯನ್ನು ಸ್ವಾಮಿಗಳ ಎದುರಿಗೆ ಹೇಳುತ್ತಿದ್ದವರು ಅದೇ ಮೂರು ಜನ ಬ್ರಾಹ್ಮಣರು!

ನಮ್ಮ ಮೇಷ್ಟ್ರಿಗೆ ರೇಗಿ ಹೋಯಿತು. “ಯಾರ್ರೀ ಹೇಳಿದ್ದು? ನನ್ನ ವಿದ್ಯಾರ್ಥಿ ಮಗೂನ್ನ ಉಳಿಸಿದ್ದು. ಮಗು ಮುಳುಗಿ ಹೋಗ್ತಿದ್ರೆ ಇವ್ರೆಲ್ಲ ನೋಡ್ತಾ ನಿಂತಿದ್ರು. ಮನುಷ್ಯರೇನ್ರೀ ಇವರು? ನಾಚಿಕೆಗೇಡು” ಎಂದು ಸ್ವಾಮಿಗಳೇ ಎದುರೇ ಕೂಗಾಡಿದರು.

ಸ್ವಾಮಿಗಳು ಆ ಬ್ರಾಹ್ಮಣರನ್ನೆಲ್ಲ ಕರೆಸಿ ಛೀಮಾರಿ ಹಾಕಿದರು. ನನ್ನನ್ನು ಕರೆದು ಆಶೀರ್ವಾದ ಮಾಡಿ ವಸ್ತ್ರ ಹೊದೆಸಿದರು. ಆ ಘಟನೆ ಎಂದಿಗೂ ಮರೆಯೋಕೇ ಆಗಲ್ಲ.