ನಾವು ಗೇಯ್ದು ಗಳಸ್ತೀವಿ, ನೀವು ….ಯ್ದು ಗಳಸ್ತೀರಿ.

ಶಿವಪ್ಪ ಕಾಯೋ ತಂದೆ....

(ಸತ್ಯ ಘಟನೆ)

ಅಪ್ಪನಿಗೆ 7 ಏಕರೆ ಫಲವತ್ತಾದ ಜಮೀನಿತ್ತು. ಎದೆಯೆತ್ತರಕ್ಕೆ ಬೆಳೆದಿರುವ ಒಬ್ಬನೇ ಮಗನಿಗೆ ಅದನ್ನು ವಹಿಸಿ ಸುಖವಾಗಿ ಸಾಯಬೇಕೆಂದು ಅಪ್ಪನ ಆಸೆ. ಕೃಷಿಯೆಂದರೆ ಕೆಸರು, ಮಣ್ಣು ಎಂಬ ಭಾವನೆ ಮಗನಿಗಿಲ್ಲವಾದರೂ, ಕೃಷಿಯೆಂದರೆ ಅಷ್ಟಕಷ್ಟೆ. ತಂದೆಯ ಒತ್ತಾಯಕ್ಕೆ ಕೆಲ ದಿನ ದುಡಿದಂತೆ ಮಾಡಿದ ಮಗ ನಂತರ ನಗರ ಸೇರಿಬಿಟ್ಟ. ಅಲ್ಲಲ್ಲಿ ಸಿಕ್ಕಸಿಕ್ಕ ಕೆಲಸ ಮಾಡಿದ. ಮಾಡಿದ. ಮಾಡಿದ. ಮಾಡುತ್ತಲೇ ಹೋದ. ಕೈಯಲ್ಲಿ ಕಾಸು ಓಡಾಡದಿದ್ದರೂ ಶೋಕಿಗೇನೂ ಕೊರತೆಯಿರಲಿಲ್ಲ. ಒಮ್ಮೆ ಹಳ್ಳಿಗೆ ಮರಳಿದಾಗ ಅಪ್ಪನಿಗೆ ಅಂತ ಶಾಲು, ಕೋಲು, ಪಂಚೆ, ಅಂತ ಉಡುಗೊರೆಗಳನ್ನು ತಂದಿದ್ದ. ಇದೆಲ್ಲ ನೋಡಿದವನೇ ಅಪ್ಪ, ಕೋಪಗೊಂಡು “ನಾವೆಲ್ಲ ಇಲ್ಲಿ ಹಳ್ಳಿಯಲ್ಲಿ ಗೇಯ್ದು ಗಳಸ್ತೀವಿ….ನೀವು ಅಲ್ಲಿ ಕೇಯ್ದು ಗಳಸ್ತೀರಿ” ಅಂತ ಅಬ್ಬರಿಸಿ, ಎಲ್ಲ ಉಡುಗೊರೆಗಳನ್ನು ತಿರಸ್ಕರಿಸಿಬಿಟ್ಟ. ಬಂಗಾರಂದತಹ ಜಮೀನನ್ನು ನೋಡಿಕೋಳ್ಳದ ವೃದ್ಧ ತಂದೆಯ ಕೋಪ ಸ್ಫೋಟಿಸಿತ್ತು. ಅದಾದ ಕೆಲ ದಿನಗಳ ನಂತರ ಅಪ್ಪ ಕೊರಗಿನಲ್ಲಿಯೇ ತೀರಿಕೊಂಡ. ಮಗ ಇನ್ನೂ ನಗರದಲ್ಲಿ ಕೆಲಸ ಮಾಡುತ್ತಿದ್ದಾನೆ. ಏಳು ಎಕರೆ ಭೂಮಿ ಪಾಳು ಬೀಳುತ್ತಿದೆ.