ಗುರುಕುಲ

ಜುಲೈ 30 ರಿಂದ ಬೆಳಿಗ್ಗೆ 10 ಗಂಟೆಗೆ ಉಮಾ ಥೇಟರ್ ನಲ್ಲಿ ಸುನೀಲ್ ಪುರಾಣಿಕ್ ನಿರ್ದೇಶನದ ‘ಗುರುಕುಲ’…

ಗುರುಕುಲ
ಗುರುಕುಲ

ಜನತಾ ದರ್ಶನ

(ಅಗಸ್ಟ್ 20, 2009 ರಂದು ಪ್ರಕಟವಾದ ಲೇಖನ)

ನನ್ನ ಪ್ರೀತಿಯ ಅಭಿಮಾನಿ ದೇವರುಗಳೆ...

ರಸ್ತೆಯಲ್ಲಿ, ಅಂಗಡಿಗಳಲ್ಲಿ, ಹೋಟೆಲ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ನನ್ನನ್ನು ದುರುಗುಟ್ಟಿಕೊಂಡು ನೋಡಿ ಹೋಗುವುದು ಸಾಮಾನ್ಯ. ಪತ್ರಕರ್ತನಾಗಿ ಐದು ವರ್ಷದಲ್ಲಿ ಪಿಟಿಸಿಗಳನ್ನು ನೀಡಿ ಎಷ್ಟು ಜನರಿಗೆ ನನ್ನ ಮುಖ ಪರಿಚಯವಾಗಿದೆಯೋ ಗೊತ್ತಿಲ್ಲ. ಆದರೆ ಮುಕ್ತ ಮುಕ್ತ ದಲ್ಲಿ ಆಕ್ಟಿಂಗ್ ಶುರುವಾದ ಮೇಲಂತೂ ಈ ದುರುಗುಟ್ಟುವಿಕೆ ಸಾಮಾನ್ಯವಾಗಿದೆ. ಇಂತಹ ಜನರಲ್ಲಿ ಎರಡು ವಿಧ. ಒಬ್ಬರು ಕೇವಲ ದುರುಗುಟ್ಟಿಕೊಂಡು ನೋಡಿ ತಮ್ಮ ಪಾಡಿಗೆ ತಾವು ಹೋಗಿಬಿಡುವವರು. ಮತ್ತೊಂದು ಕೆಟೆಗರಿಯ ಜನ, ಫಕ್ಕನೆ ನನ್ನನ್ನು ನಿಲ್ಲಿಸಿ “ಸಾರ್ ನೀವು ಸೀರಿಯಲ್ ನಲ್ಲಿ ಮಾಡ್ತೀರಲ್ಲವಾ?” ಅಥವಾ “ನೀವು ಮುಕ್ತ ಮುಕ್ತದಲ್ಲಿ ಆಕ್ಟ್ ಮಾಡ್ತೀರಲ್ಲವಾ?” ಎಂದು ಆರಂಭಿಸಿ, ಮುಂದಿನ ಕಥೆ ಹೇಳಿ ಎಂದು ಪೀಡಿಸುವವರು. ಈ ಥರದ ಜನ, ಯಾವುದೋ ಪಾತ್ರಕ್ಕೆ ಅನ್ಯಾಯವಾಗುತ್ತಿದೆ ಹಾಗಾಗಬಾರದು, ನೋಡಿಕೊಳ್ಳಿ ಎಂದು ಹುಕುಂ ಜಾರಿ ಮಾಡುತ್ತಾರೆ. ತಮ್ಮ ಪ್ರಕಾರ ಶಾಂಭವಿಗೆ ಮದುವೆಯಾಗಬೇಕು, ಶಂಕರಮೂರ್ತಿಗೆ ಯಾರಾದರೂ ಬಾರಿಸಬೇಕು, ಆನಂದರಾಜ್ ನಂದೀಪುರ್ ಬೈ ಇಲೆಕ್ಷನ್ ನಲ್ಲಿ ಗೆಲ್ಲಬೇಕು, ಮಧುಗೆ ಕಲ್ಯಾಣಿಗಿಂತ ವೈಜಯಂತಿಯೇ ಹೆಚ್ಚು ಸೂಟೆಬಲ್ ಇತ್ಯಾದಿ ಇತ್ಯಾದಿ ಪುಕ್ಕಟೆ ಸಲಹೆ ನೀಡುತ್ತಾರೆ. ನಾನು ಹ್ಹೆ ಹ್ಹೆ ಹ್ಹೆ ಎಂದು ತಲೆಯಲ್ಲಾಡಿಸಿ ಆದಷ್ಟು ಬೇಗ ಅಲ್ಲಿಂದ ಎಸ್ಕೇಪ್ ಆಗುತ್ತೇನೆ. ಮೊದಮೊದಲು ಈ ಅನುಭವಗಳು ವಿಶೇಷ ಎನಿಸುತ್ತಿದ್ದವು. ಇದು ಹೆಚ್ಚಾದಂತೆಲ್ಲ ನನ್ನಲ್ಲಿ ಕೊಂಚ ಮಟ್ಟಿಗಿನ ಅಹಂಕಾರವೂ ಬೆಳೆಯಿತೆನ್ನಿ...ಆದರೆ ಇತ್ತೀಚೆಗೆ ಬೆರೆಯದೇ ಅನುಭವವಾಯಿತು.

ಯಾವುದೋ ಕಾರಣಕ್ಕೆ ಆಸ್ಪತ್ರೆಗೆ ಹೋಗಿದ್ದೆ. ಡಾಕ್ಟರ್ ದಾರಿ ಕಾಯುತ್ತ ಅಲ್ಲೇ ಇದ್ದ ಚೇರಿನಲ್ಲಿ ಕುಳಿತುಕೊಂಡೆ. ನನ್ನ ಪಕ್ಕದಲ್ಲಿದ್ದ ವ್ಯಕ್ತಿ ರಾಗ ಎಳೆಯಿತು. “ಸಾರ್, ನೀವು ಸೀರಿಯಲ್ ನಲ್ಲಿ ಆಕ್ಟ್ ಮಾಡ್ತೀರಲ್ಲವಾ…”

“ಹೌದು” ಎಂದೆ.

ವ್ಯಕ್ತಿ ಸುಮ್ಮನಾಯಿತು. 10 ನಿಮಿಷ ಕಳೆದಿರಬೇಕು “ಸಾರ್, ನಿಮ್ಮ ಊರು ಯಾವುದು” ಎಂದಿತು.

“ಕೊಪ್ಪ” ಎಂದೆ.

ವ್ಯಕ್ತಿ ಸುಮ್ಮನಾಯಿತು.

ನಾನು, “ನಿಮ್ಮ ಊರು ಯಾವುದು” ಎಂದು ಪ್ರಶ್ನಿಸಿದೆ.

“ಬೆಂಗಳೂರೇ” ಎಂದು ಉತ್ತರಿಸಿ ಮತ್ತೆ ಸುಮ್ಮನಾಯಿತು.

“ಏನು ಮಾಡಿಕೊಂಡಿದ್ದೀರಿ?” ಕೇಳಿದೆ.

“ಬಿಸಿನೆಸ್” ಉತ್ತರಿಸಿ ಮತ್ತೆ ಸುಮ್ಮನಾಯಿತು.

ಈ ಬೆಂಗಳೂರಿಗರಿಗೆ ಸ್ಪಲ್ಪ ಕೊಬ್ಬು. ತೀರ ಲೆವೆಲ್ ಮೆಂಟೇನ್ ಮಾಡುತ್ತಾರೆ. ಕಲಾವಿದನೊಬ್ಬ ಪಕ್ಕದಲ್ಲಿ ಬಂದು ಕುಳಿತುಕೊಂಡಿದ್ದರೂ ಸೀರಿಯಲ್ ಬಗ್ಗೆಯಾಗಲಿ, ನನ್ನ ಬಗ್ಗೆಯಾಗಲಿ ಕೇಳುತ್ತಲೇ ಇಲ್ಲವಲ್ಲ ಎಂದು ಅನಿಸಿತು. ಇದಲ್ಲದೆ ನಾನೇ ಮುಂದಾಗಿ ಮಾತನಾಡಿಸುತ್ತಿದ್ದರೂ ಚುಟುಕಾಗಿ ಮಾತನಾಡಿ, ಭಾರೀ ಸ್ಮಾರ್ಟ್ ಆಗಿ ವರ್ತಿಸುತ್ತಿದ್ದಾನೆ, ಸರಿಯಾಗಿ ಮಾತನಾಡಲು ಈ ಮನುಷ್ಯನಿಗೇನು ಧಾಡಿ ಎಂದುಕೊಂಡೆ. ಬೆಂಗಳೂರಿನಂತಹ ಊರಿನಲ್ಲಿ ಹಾದಿಗೊಬ್ಬರು ಬೀದಿಗಿಬ್ಬರು ಟಿವಿ ಕಲಾವಿದರು, ಫಿಲ್ಮ್ ಹಿರೋಗಳು ತಿರುಗಾಡುವುದರಿಂದ ಇಲ್ಲಿನ ಜನರಿಗೆ ಕ್ರೇಜ್ ಸ್ವಲ್ಪ ಕಡಿಮೆಯೇ. ಹಿತ್ತಲ ಗಿಡ ಮದ್ದಲ್ಲವಲ್ಲ. ಅದೂ ಅಲ್ಲದೆ ಬೆಂಗಳೂರಿಗರು ಸೋ ಕಾಲ್ಡ್ ಸೋಫಿಸ್ಟಿಕೇಟೆಡ್ ಜನ. ತಾವೇ ಮುಂದಾಗಿ ಮಾತನಾಡಿಸಿದರೆ ಮರ್ಯಾದೆಗೆ ಕಮ್ಮಿ ಎಂದು ಭಾವಿಸುವವರು. ಈ ವ್ಯಕ್ತಿ ಕೂಡ ಹಾಗೆಯೇ ಹೆಡ್ ವೇಟ್ ನ ವ್ಯಕ್ತಿಯಾಗಿರಬಹುದು ಎಂದೆಲ್ಲ ಯೋಚಿಸತೊಡಗಿದೆ.

ಇತ್ತೀಚೆಗೆ ಬಾಗಲಕೋಟೆಗೆಂದು ಸಂವಾದಕ್ಕೆ ಹೋದಾಗ, ಜನ ನಮ್ಮನ್ನು ಗುರುತಿಸಿದ್ದ ಪರಿ ನೋಡಿ ಬೆಂಗಳೂರಿಗರು ತೀರ ಸಪ್ಪೆ ಎಂದೆನಿಸಿತ್ತು.

ನಾನು ಸುಮ್ಮನಾಗೋಣ ಎಂದುಕೊಂಡರೂ, ನನ್ನಲ್ಲಿದ್ದ ಪತ್ರಕರ್ತ ಸುಮ್ಮನಿರಬೇಕಲ್ಲ. ಮತ್ತೆ ಪಟ್ಟು ಬಿಡದೆ, ವ್ಯಕ್ತಿಯ ಜೊತೆ ಮಾತಿಗಾರಂಭಿಸಿದೆ.

“ಮುಕ್ತ ಮುಕ್ತ ಹೇಗೆನ್ನಿಸುತ್ತಿದೆ?”.

“ಚೆನ್ನಾಗಿ ಬರ್ತಿದೆ ಸಾರ್..” ವ್ಯಕ್ತಿ ಸುಮ್ಮಗಾಯಿತು.

“ನಿಮಗೆ ಯಾವ ಪಾತ್ರ ಇಷ್ಟ?” ಮತ್ತೆ ಪ್ರಶ್ನಿಸಿದೆ.

“ಸಾರ್ ತಪ್ಪು ತಿಳಿಯಬೇಡಿ. ಈಗ ಅರ್ಧ ಗಂಟೆಯ ಮೊದಲಷ್ಟೇ ಹಲ್ಲು ತೆಗೆಸಿಕೊಂಡಿದ್ದೇನೆ. ಹೀಗಾಗಿ ಹೆಚ್ಚು ಮಾತನಾಡಲು ಆಗುತ್ತಿಲ್ಲ” ಎಂದು ಉತ್ತರಿಸಿ ವ್ಯಕ್ತಿ ಸುಮ್ಮನಾಯಿತು.