“ನಿಮ್ಮ ಪ್ರಯಾಣ ಸುಖಕರವಾಗಿರಲಿ” – ಮಾಜಿ ಸಚಿವ.

balu

ಒಂದೇ ನಂಬರ್ ಪ್ಲೇಟ್ ನಲ್ಲಿ ಎರಡು ಬಸ್ಸುಗಳು, ಪ್ರಯಾಣಿಕರಿಗಿಂತ ಸರಕಿಗೇ ಪ್ರಾಧಾನ್ಯ, ಟಿಕೆಟ್ ಬುಕ್ ಮಾಡುವಾಗ ರಾಜಮರ್ಯಾದೆ ಪ್ರಯಾಣದ ಸಂದರ್ಭದಲ್ಲಿ ಅವಮರ್ಯಾದೆ ಇತ್ಯಾದಿ ಮಾಜಿ ಸಚಿವರೊಬ್ಬರ ಮಾಲೀಕತ್ವದ ಬಸ್ ನ ವಿಶೇಷತೆಗಳು. ರಾಜಕೀಯ ಹಾಕ್ಯಾಟದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರು ತಮ್ಮ ಬೆಂಬಲಿಗ ಶಾಸಕರನ್ನು ಕರೆದುಕೊಂಡು ರಿಸಾರ್ಟ್ ನಿಂದ ರಾಜಭವನಕ್ಕೂ, ರಾಜಭವನದಿಂದ ರಿಸಾರ್ಟ್ ಗೂ, ಅಲ್ಲಿಂದ ಹೋಟೆಲ್ ಗೂ ಹೀಗೆ ದಿಕ್ಕು ದೆಸೆ ಇಲ್ಲದೆ ತಿರುಗುತ್ತಿದ್ದ ಸಂದರ್ಭದಲ್ಲಿ ಶಾಸಕರಿದ್ದ ಬಸ್ಸಿಗೆ ಚಾಲಕನಾಗಿದ್ದವನೇ ಈ ಮಾಜಿ ಸಚಿವ.

ಇಂತಹ ಶ್ರೇಷ್ಠ ಪರಂಪರೆ, ಸಂಸ್ಕೃತಿ ಹೊಂದಿರುವ ಬಸ್ ನಲ್ಲಿ ಪ್ರಯಾಣಿಸಿದ ಅನುಭವ,ನಾನೆಂದೂ ಮರೆಯಲಾರೆ.

ಹೈದ್ರಾಬಾದ್ ನಿಂದ ಬೆಂಗಳೂರಿಗೆ ಬರುತ್ತಿದ್ದ ಸಂದರ್ಭ. ಎಚ್ ಆರ್ ಡಿಪಾರ್ಟಮೆಂಟಿಗೆ ಟಿಕೆಟ್ ಬುಕ್ ಮಾಡುವಂತೆ ಹೇಳಿದ್ದೇ ಪ್ರಮಾದವಾಯಿತು. ಅವರು ಬುಕ್ ಮಾಡಿದ್ದು ಇದೇ ಮಾಜಿ ಸಚಿವರ ‘ರಾಷ್ಟ್ರೀಯ ಟ್ರಾವೆಲ್ಸ್’ ಬಸ್ಸನ್ನು. ಟ್ರಾವೆಲ್ ಏಜೆಂಟ್ ನ ಆಫೀಸ್ ಗೆ ಹೋದ ಕೆಲವೇ ನಿಮಿಷಗಳಲ್ಲಿ ಹೈದ್ರಾಬಾದಿ ಉರ್ದುವಿನಲ್ಲಿ ಮಾತನಾಡುತ್ತಿದ್ದ ಪರಮ ಕೊಳಕು ಅಂಗಿ ಹಾಗೂ ಜೀನ್ಸ್ ಪ್ಯಾಂಟ್ ಧರಿಸಿ, ತಲೆಗೆ ಅಷ್ಟೇ ಕೊಳಕಾದ ಕರವಸ್ತ್ರವನ್ನು ವಿಚಿತ್ರವಾಗಿ ಕಟ್ಟಿಕೊಂಡಿದ್ದ ಸುಮಾರು 18 – 19 ರ ಹುಡುಗ ಪ್ರಯಾಣಿಕರನ್ನು (ಬಲಿಪಶುಗಳನ್ನು) “ಚಲೋ ಚಲೋ” ಎಂದು ಖಾಸಗಿ ಬಸ್ ನಿಲ್ದಾಣಕ್ಕೆ (ವಧಾ ಸ್ಥಾನಕ್ಕೆ…) ಕರೆದೊಯ್ಯಲು ಲಡಕಾಟಿ ಮೆಟಾಡೋರ್ ಒಂದರಲ್ಲಿ ಹತ್ತಿಸಿದ. ನಾವು ಹತ್ತಿ ಕುಳಿತ ತತಕ್ಷಣ ಮೆಟಾಡೋರ್ ಇಂಜಿನ್ ಮುನಿಸಿಕೊಂಡಿತು. ಲೇಡಿಸ್ ಬಿಟ್ಟು ಉಳಿದವರೆಲ್ಲ ಇಳಿದು ಮೆಟಾಡೋರ್ ನೂಕಿ ಎಂದು ಆ ಹುಡುಗ ಆದೇಶ ಮಾಡಲಾಗಿ, ಪ್ರಯಾಣಿಕರೆಲ್ಲ ಇಳಿದು ಗಾಡಿಯನ್ನು ನೂಕಿ ಇಂಜಿನನ್ನು ಸಂಪ್ರೀತಗೊಳಿಸಿದರು. ಮಾರುತಿ ಓಮ್ನಿಯಲ್ಲಿ ಶಾಲಾಮಕ್ಕಳನ್ನು ತುಂಬಿದ್ದಕ್ಕಿಂತಲೂ ಭಯಂಕರವಾಗಿ ನಮ್ಮನ್ನು ಆ ಮೆಟಾಡೋರ್ ನಲ್ಲಿ ತುಂಬಿಕೊಂಡು ಹೈದ್ರಾಬಾದ್ ನ ಚಿಕ್ಕಗಲ್ಲಿಗಳಲ್ಲಿ ರಭಸದಿಂದ ಕರೆದುಕೊಂಡು ಹೋದ ಹುಡುಗ ಅಂತೂ ಇಂತೂ ಪುರಾತನ ಕಾಲದ ಪಳಿಯುಳಿಕೆಯಂತಿದ್ದ ಬಸ್ ಹತ್ತಿರ ಮೆಟಾಡೋರ್ ನಿಲ್ಲಿಸಿದ. “8.30 ಶಾರ್ಪ್ ಪಿಕ್ ಅಪ್” ಎಂದು ಹೇಳಿದ್ದ ಎಚ್ ಆರ್ ಡಿಪಾರ್ಟಮೆಂಟ್ ನ ಸಿಬ್ಬಂದಿ ಮೇಲೆ ಕೋಪ ಬಂತು. ಕಾರಣ, ರಾಷ್ಟ್ರೀಯ ಟ್ರಾವೆಲ್ಸ್ ಬಸ್ ಬಳಿ ಬಂದಾಗ ಗಂಟೆ 10 ಆಗಿತ್ತು. ಅಷ್ಟೇ ಅಲ್ಲ ಈಗಲೋ ಆಗಲೋ ಎಂದು ಕೊನೆಯುಸಿರೆಳೆಯಲು ಕಾಯುತ್ತಿದ್ದ ಆ ಬಸ್ ಮೇಲೆ ಅಷ್ಟೇ ಎತ್ತರವಾಗಿ ಸಾಮಾನುಗಳನ್ನು ಹಾಕಿ ಕಟ್ಟಲಾಗುತ್ತಿತ್ತು.

ಈ ಮಧ್ಯೆ ಬೆಂಗಳೂರಿಗೆ ಎಂದು ಕರೆದುಕೊಂಡು ಬಂದಿದ್ದು, ಕೇವಲ ನಾಲ್ಕೈದು ಪ್ರಯಾಣಿಕರನ್ನು. ನನಗೋ ಅನುಮಾನ ಆರಂಭವಾಯಿತು. ಆದರೂ ನಮ್ಮನ್ನು  ಕೂರಿಸಿಕೊಂಡು ಬಸ್ ಅಂತೂ ಇಂತೂ ರಾತ್ರಿ 12 ಗಂಟೆಗೆ ಹೈದ್ರಾಬಾದ್ ನಿಂದ ಹೊರಟಾಗ ನಿಟ್ಟುಸಿರುಬಿಟ್ಟೆವು. ಕೇವಲ ನಾಲ್ಕೈದು ಪ್ರಯಾಣಿಕರಿದ್ದರೂ ಕರೆದುಕೊಂಡು ಹೋಗುತ್ತಿದ್ದಾನಲ್ಲ ಎಂದು. ಇನ್ನೇನು ಸವಿನಿದ್ದೆಗೆ ಜಾರಬೇಕು ಎನ್ನುವಷ್ಟರಲ್ಲಿ, ಕೆಲ ಕಿಲೋಮೀಟರ್ ಗಳಷ್ಟು ದೂರ ತೆರಳಿದ್ದ ಬಸ್ ‘ಅಡ್ಡದಾರಿ’ ಹಿಡಿಯಿತು. ಅಡ್ಡದಾರಿಯಲ್ಲಿ ಸುತ್ತಿಸುತ್ತಿ, ನಮ್ಮನ್ನೆಲ್ಲ ಎತ್ತಿಹಾಕಿ, ಭಾರೀ ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದ್ದ ಯಾವುದೋ ಪ್ರದೇಶಕ್ಕೆ ಬಸ್ ಬಂದು ನಿಂತಿತು. ನಿದ್ದಗಣ್ಣಿನಿಂದ ಎಚ್ಚೆತ್ತಾಗ ಗೊತ್ತಾಗಿದ್ದು ಅದು, ಹೈದ್ರಾಬಾದ್ ನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಎಂದು. ಇದೇನಪ್ಪ ನಾವೆಲ್ಲರೂ ಬಸ್ಸಿನಲ್ಲಿ ಬೆಂಗಳೂರು ಹೋಗಲು ಬಯಸಿದ್ದು, ಇವ ಮಾತ್ರ ನಮ್ಮನ್ನು ‘ಏರೋಪ್ಲೇನ್’ ಹತ್ತಿಸಲು ಹೊರಟಹಾಗಿದೆಯಲ್ಲ ಎಂದು ಕೊಳ್ಳುವಷ್ಟರಲ್ಲಿ, ಮಿಕಿಮಿಕಿ ನೋಡುತ್ತ ಕುಳಿತಿದ್ದ ನಮ್ಮನ್ನು ಅದೇ ಮೆಟಾಡೋರ್ ಹುಡುಗ, “ಝರಾ ಉತರೋ ಭಯ್, ಬಸ್ಕು ಲೇಕ್ ಜಾಕ್ ಆರ್ಟಿಓ ಕೆ ಪಾಸ್ ದಿಕ್ಲಾನಾ ಹೈ” ಎಂದವನೇ ನಮ್ಮನ್ನು ಕೆಳಗಿಳಿಸಿದ. ಬಸ್ ನ ಚಕ್ರಧಾರಿ ಬಸ್ ಸಹಿತ ಕತ್ತಲೆಯಲ್ಲಿ ಮಾಯವಾದ. ಅರ್ಧಗಂಟೆಯಾದರೂ ಬಸ್ ಬರದಿದ್ದಾಗ, ನನಗೆ ಆಂತಕವಾಯಿತು. ಲಾಪ್ ಟಾಪ್ ಸೇರಿದೆಂತ ಸಾವಿರಾರೂ ರೂಪಾಯಿ ಮೌಲ್ಯದ ಆಫೀಸಿನ ಇಲೆಕ್ರ್ಟಾನಿಕ್ ಉಪಕರಗಳನ್ನು ನಾನು ಬೆಂಗಳೂರಿಗೆ ತರುತ್ತಿದ್ದೆ. ಅವೆಲ್ಲ ಬಸ್ ನಲ್ಲೇ ಇದ್ದವು. ರಾಷ್ಟ್ರೀಯ ಟ್ರಾವೆಲ್ಸ್ ಹುಡುಗ ಮಾತ್ರ ಸೆಕೆಂಡಿಗೆ ಒಂದರಂತೆ ಗುಟ್ಕಾ ಉಗುಳುತ್ತ ಕುಳಿತಿದ್ದ. ಬಸ್ ಎಲ್ಲಿ ಹೋಗಿದೆ, ಯಾವಾಗ ಬರುತ್ತದೆ ಎಂಬೆಲ್ಲ ನಮ್ಮ ಪ್ರಶ್ನೆಗಳಿಗೆ “ಆತಾಯ್ ಆತಾಯ್” ಎನ್ನುತ್ತಿದ್ದ.  ಅಂತೂ ಇಂದು ಸುಮಾರು ಒಂದು ಗಂಟೆ ಕಾದ ಬಳಿಕ, ಬಸ್ ಬಂದಿತು. ಆಗ ನೋಡಿದ್ದೇನು, ಕೇವಲ ನಾಲ್ಕೈದು ಸೀಟು ಬಿಟ್ಟು, ಉಳಿದ ಎಲ್ಲ ಸೀಟುಗಳಲ್ಲಿ ಇಂಟರ್ ನ್ಯಾಷನಲ್ ಏರಪೋರ್ಟ್ ನಲ್ಲಿನ ಕೂಲಿ ಕಾರ್ಮಿಕರು ತುಂಬಿಕೊಂಡಿದ್ದರು. ಅವರೆಲ್ಲ ಹೈದ್ರಾಬಾದ್ ಏರ್ ಪೋರ್ಟ್ ನ ಕೆಲಸ ಮುಗಿಸಿ ಬೆಂಗಳೂರು ಏರ್ ಪೋರ್ಟ್ ನ ಕೆಲಸಕ್ಕೆ ನಗರಕ್ಕೆ ಬರುತ್ತಿದ್ದರು. ಪಾಪ…ಬಹುಶಃ ಅವರೆಲ್ಲ ಸ್ನಾನ ಮಾಡದೇ ಎಷ್ಟು ದಿನಗಳಾಗಿದ್ದವೋ ಏನೋ, ಮೊದಲೇ ನಾರುತ್ತಿದ್ದ ಬಸ್ ಈಗ ಗಬ್ಬು ನಾತದಿಂದ ತುಂಬಿಹೋಗಿತ್ತು. ಅಂತೂ ಇಂತೂ ನಾತಬ್ರಹ್ಮರನ್ನು ಸಹಿಸಿಕೊಂಡು ನಿದ್ದೆಗೆ ಜಾರಿ ಬೆಳಿಗ್ಗೆ ಎದ್ದಾಗ ಬಸ್ ಹೋಟೆಲ್ ಒಂದರ ಮುಂದೆ ನಿಂತಿತ್ತು. ಬೇರೆ ಬಸ್ ಗಳಲ್ಲಾದರೆ ಮುಂಜಾನೆ ಏಳುವ ಹೊತ್ತಿಗೆ, ಮೊಬೈಲ್ ಕರ್ನಾಟಕದ ಸಿಗ್ನಲ್ ತೋರಿಸುತ್ತಿತ್ತು. ಆದರೆ ಏಕೋ ಏನೋ ಈ ಹೋಟೆಲ್ ಬಳಿ ನಿಂತು ಕರ್ನಾಟಕದ ಗೆಳೆಯನಿಗೆ ಫೋನ್ ಮಾಡಿದರೆ, “ಮೀರು ಪ್ರಯತ್ನಿಂಚಾಲು ನಂಬರ್ ಬಿಝಿ ಉಂದಿ, ದೈಚೇಸಿ…”ಎಂದೇನೋ ನುಲಿಯತೊಡಗಿತು. ಸರಿ ಅರ್ಧಗಂಟೆ ಕಾಫಿ, ಟೀ, ಸಿಗರೇಟ್, ಗುಟ್ಕಾ ಸಮಾರಾಧನೆಯ ಬಳಿಕ ಬಸ್ ಹೊರಟಿತು. ಬೆಳಿಗೆ 11 ಗಂಟೆಯಾಗುತ್ತ ಬಂದಿದ್ದರೂ, ಬೆಂಗಳೂರು ಹೋಗಲಿ ಚಿಕ್ಕಬಳ್ಳಾಪುರ, ದೇವನಹಳ್ಳಿ ಕೂಡ ಹತ್ತಿರ ಸುಳಿಯಲಿಲ್ಲ. 12 ಗಂಟೆಗೆ ಮತ್ತೆ ರಾಷ್ಟ್ರೀಯ ಟ್ರಾವೆಲ್ಸ್ ಊಟಕ್ಕಾಗಿ ನಿಂತಿತು. ಒಳಗಿದ್ದ ಕೂಲಿ ಕಾರ್ಮಿಕರೆಲ್ಲ ಕೆಳಗಿಳಿದು, ಹಲ್ಲು-ಮುಖ-…ಕ ಇತ್ಯಾದಿಗಳೆನ್ನಲ್ಲ ತೊಳೆದುಕೊಂಡು ಊಟಮಾಡಿ, ವಿಶ್ರಾಂತಿ ಪಡೆದರು. ಕೊನೆಗೆ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಂದಾಗ, ಈ ಎಲ್ಲ ಕಾರ್ಮಿಕರು ಬೆಂಗಳೂರು ನೆಲದ ಮೇಲೆ ಪಾದಾರ್ಪಣೆ ಮಾಡಿದರು. ಬಸ್ ಬೆಂಗಳೂರಿಗೆ ಬರುತ್ತಿದ್ದಂತೆ, ಸಾರಥಿಗೆ ರಸ್ತೆಯ ಗೊಂದಲ ಆರಂಭವಾಯಿತು. ಮಲ್ಲೇಶ್ವರಂ ಎರಡು ಮೂರು ಸುತ್ತಿದರೂ ಮೆಜಿಸ್ಟಿಕ್ಕಿನ ರಸ್ತೆ ಕಂಡು ಹಿಡಿಯಲು ಸಾಧ್ಯವಾಗದ ಸಾರಥಿ ಮೇಲೆ ರೇಗಿ ಸಹಸ್ರನಾಮಾರ್ಚನೆ ಮಾಡಿ ನನ್ನ ಸಕಲ ಉಪಕರಣಗೊಂದಿಗೆ ಇಳಿದಾಗ, ಗಂಟೆ ಮೂರಾಗಿತ್ತು. ಹೇಗಿದೆ ಮಾಜಿ ಸಚಿವರ ರಾಷ್ಟ್ರೀಯ ಟ್ರಾವೆಲ್ಸ್….

ಸ್ಟೆಪ್ನಿ – ಬಸ್ ಸಂಸ್ಥೆಯನ್ನೇ ಸರಿಯಾಗಿ ನೋಡಿಕೊಳ್ಳಲು ಬಾರದ ಮಾಜಿ ಸಚಿವರು ತಮ್ಮ ಇಲಾಖೆಯನ್ನು ‘ಕ್ಯಾ ಖಾಕ್’ ನೋಡಿಕೊಂಡಾರೆ…

ನೂರು ಕೋಟಿ ಆಸ್ತಿ ಇದ್ದವಗೆ ಸಂಬಳ ಬೇರೆ ಕೇಡು…

ಇಂದಿನ (ಅಗಸ್ಟ್ 1, 2009) ‘ ದಿ ಟೈಮ್ಸ್ ಆಫ್ ಇಂಡಿಯಾ’ದ ಸಿಟಿ ಮೇಲ್ ಬಾಕ್ಸ್ ನಲ್ಲಿ ಪ್ರಕಟವಾಗಿರುವ ನನ್ನ ಪತ್ರ.

toi12