ಇಂದಿನಿಂದ ನನ್ನ ಬ್ಲಾಗ್ ನಲ್ಲಿ ಬ್ಲಾಗ್, ಬ್ಲಾಗ್, ಬ್ಲಾಗ್….

ಬ್ಲಾಗ್ ಲೋಕದಲ್ಲಿ ಅಚ್ಚರಿಯೆನಿಸುವಷ್ಟು ಅತ್ಯುತ್ತಮ ಬ್ಲಾಗ್ ಗಳಿವೆ. ಕೆಲವು ಬ್ಲಾಗ್ ಗಳು ದಿನಕ್ಕೆ ಮೂರು ಬಾರಿ ಅಪ್ ಡೇಟ್ ಆದರೆ ಮತ್ತೆ ಕೆಲವು ಮೂರು ತಿಂಗಳಿಗೆ ಒಮ್ಮೆ ಅಪ್ ಡೇಟ್ ಆಗುತ್ತವೆ. ಕೆಲವು ಬ್ಲಾಗ್ ಗಳು 2006, 2005, 2004 ಹೀಗೆ ಅಪ್ ಡೇಟ್ ಆದವುಗಳು ಇಲ್ಲೀ ತನಕ ಅಪ್ ಡೇಟ್ ಆಗಿಲ್ಲ. ಏನೇ ಆದರೂ ಈ ಎಲ್ಲ ಬ್ಲಾಗ್ ಗಳ ಗುಣಮಟ್ಟ ಮಾತ್ರ ಚೆನ್ನಾಗಿದೆ. ಇಂದಿನಿಂದ ನನ್ನ ಬ್ಲಾಗ್ ನಲ್ಲಿ ಕೆಲ ಆಯ್ದ ಬ್ಲಾಗ್ ಗಳ ಲಿಂಕ್ ನೀಡುತ್ತಿದ್ದೇನೆ. ( ಈ ಕುರಿತು ಆಯಾ ಬ್ಲಾಗಿಗರ ಅನುಮತಿ ಪಡೆದಿಲ್ಲವಾದರೂ, ಎಲ್ಲರಿಗೂ ಇದು ಒಪ್ಪಿತವೆಂದು ಭಾವಿಸುತ್ತೇನೆ). ಆಯಾ ಬ್ಲಾಗ್ ಗಳಲ್ಲಿ ಬ್ಲಾಗಿಗರು ತಮ್ಮ ಬಗ್ಗೆ ಹೇಳಿಕೊಂಡಿರುವಷ್ಟನ್ನು ಇಲ್ಲಿ ನೀಡುತ್ತೇನೆ. ತದನಂತರ ಈ ಬ್ಲಾಗ್ ನ ಲಿಂಕ್ ಗಳನ್ನು ಶಾಶ್ವತವಾಗಿ ನನ್ನ ಬ್ಲಾಗ್ ನ ಸೈಡ್ ಬಾರ್ ನಲ್ಲಿ ಹಾಕುತ್ತೇನೆ. ಈಗಾಗಲೇ ಅವಧಿ, ಮೀಡಿಯಾ ಮೈಂಡ್, ಚಂಪಕಾವತಿ, ಮನದ ಮಾತು, ತುಂತುರು ಹನಿಗಳು, ಕಡಲತೀರ, ಮೌನಗಾಳ, ಮೋಟುಗೋಡೆ, ಕಬ್ ಕಾಷಿಯಸ್ ಮೈಂಡ್ ಬ್ಲಾಗ್ ಗಳ ಲಿಂಕ್ ನೀಡಲಾಗಿದೆ. ಇಂದಿನಿಂದ ಹೊಸ ಬ್ಲಾಗ್ ಗಳ ಪರಿಚಯ ಆರಂಭವಾಗಲಿದೆ.

ಇಂದಿನ ಮೊದಲ ಬ್ಲಾಗ್ ರಾಘವೇಂದ್ರ ಹೆಗಡೆಯವರ ರಾಗನೌಕೆ http://raganouke.wordpress.com/

ರಾಗನೌಕೆ

ರಾಗನೌಕೆಯ ಬಗ್ಗೆ….

ರಾಘು, ರಾಘವ ಎಂದೆಲ್ಲ ಆತ್ಮೀಯವಾಗಿ ಕರೆಸಿಕೊಳ್ಳುವ ನನ್ನ ಹೆಸರು ರಾಘವೇಂದ್ರ ಹೆಗಡೆ. ಊರು ಕುಮಟಾದ ಅಳಕೋಡು(ಕತಗಾಲ).ಈಗ ಕುಂದಾಪುರದ MITಯ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವಿಧ್ಯಾರ್ಥಿ.ಅದೇನೋ ಹಂಬಲವಾದಂತೆಲ್ಲ ಏನಾದರೊಂದನ್ನು ಗೀಚಿಬಿಡುವುದು ಮೊದಲಿನಿಂದ ಒಂದು ಹವ್ಯಾಸವಾಗಿಬಿಟ್ಟಿದೆ. ಹಾಗೆ ಗೀಚಿದ ಅದೆಷ್ಟೋ ಹಾಳೆಗಳು ಹರಿದು ಕಾಣೆಯಾಗಿಬಿಟ್ಟಿವೆ.

ಒಂದು ಆತಂಕ, ಒಂದು ನೋವು, ಒಂದು ಹರ್ಷ, ಒಲವಿನ ಒಂದು ನಗು,ಒಂದು ಹೂವು, ಒಂದು ಕವಿತೆ, ಒಂದು ದಿಗಿಲು, ಒಂದು ನಿರಾಳ, ತಂಪೆರೆವ ತಂಗಾಳಿ ಎಲ್ಲವೂ ಜೀವನದ ಒಂದೊಂದು ಹನಿ ಎಂದೆಲ್ಲ ಉಸುರುತ ಕಣ್ಣ ತೋಯುವ ಮನದ ಅಲೆಯಿಂದ ಸೋಕಿದ ಅದೆಷ್ಟೋ ಹನಿ ನನ್ನ ಡೈರಿಯಲ್ಲಿ ಮೌನದ ಜೊತೆ ಮೌನವಾಗಿಬಿಟ್ಟಿದೆ. ಅವುಗಳಲ್ಲಿ ಕೆಲವನ್ನಾದರೂ ತಮ್ಮೊಂದಿಗೆ ಹಂಚಿಕೊಳ್ಳಬೇಕು ಎಂಬ ವಿಚಾರದಲ್ಲಿದ್ದಾಗ ಸಿಕ್ಕಿದ್ದೇ ಈ ಬ್ಲಾಗು ಓಲೆ.
***************************************************************
ನನ್ನ ಬರವಣಿಗೆಗೆ ಬೆನ್ನುತಟ್ಟಿ ಪ್ರೋತ್ಸಾಹಿಸಿ, ಉತ್ತೇಜಿಸಿ, ಅಕಾಲದಿ ಚಿರಮೌನತಳೆದ ಆತ್ಮೀಯ ಗೆಳೆಯ ಹಾಗೂ ಗುರುವಾಗಿದ್ದ ತೀರ್ಥರೂಪ ತಂದೆಯವರಿಗೆ ಈ ಬ್ಲಾಗು ಸಮರ್ಪಣೆ.

ನನ್ನ ಬರವಣಿಗೆಗೆ inspiration ಆದ ಎಲ್ಲ ಸ್ನೇಹಿತರಿಗೂ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಕವನಗಳಿಗೆ ಸ್ಪೂರ್ತಿ ನೀಡಿದ ಮಳೆ, ನೀರು, ನೆರಳು, ಬಿಸಿಲು, ಮಬ್ಬು, ಗಾಳಿ, ಧೂಳು ಇವೆಲ್ಲವಕ್ಕೆ ನಾ ಚಿರಋಣಿ.!

***************************************************************