ಎಡಿಟಿಂಗ್ ನ ಅವಘಡಗಳು

ಆಡಿಸುವಾತನ ಕೈಚಳಕದಲಿ...

ಆಗ ಈಟಿವಿ ಹಾಗೂ ಉದಯ ಎರಡೇ ಚ್ಯಾನಲ್ ಗಳಿದ್ದ ಕಾಲ. ರಿಪೋರ್ಟರ್ ಗಳು ಪಿಟಿಸಿ ಕೊಡುವುದೆಂದರೆ ಶಿಕ್ಷೆಯೆಂದೇ ಭಾವಿಸಿದ್ದರು. ( ಪಿಟಿಸಿ – ಪೀಸ್ ಟು ಕ್ಯಾಮರಾ – ಪತ್ರಕರ್ತ ತಾನು ಮಾಡುವ ಸ್ಟೋರಿ ಬಗ್ಗೆ ಆರಂಭದಲ್ಲಿ, ಮಧ್ಯದಲ್ಲಿ, ಕೊನೆಯಲ್ಲಿ ವಿವರಣೆ ನೀಡುವುದು. ಪಿಟಿಸಿಯ ಬೇರೆ ಫಾರ್ಮಾಟ್ ಗಳೂ ಇವೆ). ನಾಲ್ಕೇ ಸಾಲುಗಳನ್ನು ಹೇಳಲು ಕೆಲ ಪತ್ರಕರ್ತರು ಇಡೀ ಟೇಪನ್ನು (ಒಂದು ಟೇಪ್ 60 ನಿಮಿಷ ಇರುತ್ತದೆ) ಬಳಸುತ್ತಿದ್ದರು. ಅಂದರೆ ಅಷ್ಟು ಬಾರಿ ತಪ್ಪುತ್ತಿದ್ದರು ಹಾಗೂ ರಿಟೇಕ್ ತೆಗೆದುಕೊಳ್ಳುತ್ತಿದ್ದರು. ಕೆಲ ಪತ್ರಕರ್ತರಂತೂ ತಾವು ಹೇಳಬೇಕಾಗಿದ್ದ ಸಾಲುಗಳನ್ನು ಒಂದು ದೊಡ್ಡ ಹಾಳೆಯಲ್ಲಿ ಬರೆದುಕೊಂಡು ಕ್ಯಾಮೆರಾ ಲೆನ್ಸ್ ನ ಕೆಳಗಿಟ್ಟು ಪಿಟಿಸಿ ಮುಗಿಸುತ್ತಿದ್ದರು. ಇವನು ಪಿಟಿಸಿ ಓದುತ್ತಿದ್ದಾನೆ ಎಂದು ಎಳೆಯ ಕೂಸು ಸಹ ಹೇಳುವಷ್ಟು ರಿಪೋರ್ಟರ್ ನ ಲುಕ್ ಕೆಳಗಿರುತ್ತಿತ್ತು. ಇಂತರ ಪತ್ರಕರ್ತರ ಪಿಟಿಸಿ ಮಾಡುವುದೆಂದರೆ ಕ್ಯಾಮರಾಮನ್ ಗಳಿಗೂ ತಲೆನೋವು.

ಇಂತಿಪ್ಪ ಸಂದರ್ಭದಲ್ಲಿ ರಿಪೋರ್ಟರ್ ಒಬ್ಬರು ಎಂದಿನಂತೆ ಟೇಕ್ ಮೇಲೆ ಟೇಕ್ ತೆಗೆದುಕೊಂಡು ಪಿಟಿಸಿ ಮಾಡಿದ್ದಾರೆ. ರಿಟೇಕ್ ಹೇಳಿ ಹೇಳಿ ಕ್ಯಾಮರಾಮನ್ ಗೂ ಸಾಕಾಗಿದೆ. ಅಂತೂ ಕೊನೆಗೊಮ್ಮೆ ಪಿಟಿಸಿ ಮುಗಿದಿದೆ. ಪಿಟಿಸಿಯ ಕೊನೆಯಲ್ಲಿ ರಿಪೋರ್ಟರ್ ಸೈನ್ ಆಫ್ ಕೊಡುತ್ತಾರೆ. ಉದಾ – ನವೀನ್, ಈಟಿವಿ ನ್ಯೂಸ್, ಮಂಡ್ಯ, ಗಿರೀಶ್, ಈಟಿವಿ ನ್ಯೂಸ್, ಬೆಂಗಳೂರು. ಹೀಗೆ. ಈ ರಿಪೋರ್ಟರ್ ಸೈನ್ ಆಫ್ ಕೊಟ್ಟ ತಕ್ಷಣ ಕ್ಯಾಮರಾಮನ್ ಗೆ ‘ಸಾಕಾ ಇದು?’ ಎಂದು ಕೇಳಿದ್ದಾರೆ. ಕ್ಯಾಮರಾಮನ್ ಓಕೆ ಅಂದಿದ್ದಾನೆ. ಆಫೀಸಿಗೆ ಬಂದವರೇ ಪಿಟಿಸಿಯನ್ನು ಹೈದ್ರಾಬಾದ್ ಗೆ ಕಳಿಸಿದ್ದಾರೆ. ಸ್ಟೋರಿಯ ಜೊತೆ ಪಿಟಿಸಿ ಟೆಲಿಕಾಸ್ಟ್ ಆದಾಗ ಮಾತ್ರ ಎಲ್ಲರಿಗೂ ಶಾಕ್. ಕಾರಣ ಪಿಟಿಸಿಯಲ್ಲಿ “ರಿಪೋರ್ಟರ್ ಹೆಸರು, ಈಟಿವಿ ನ್ಯೂಸ್, ಬೆಂಗಳೂರು, ಸಾಕಾ ಇದು?” ಎಂದು ಬಂದು ಬಿಟ್ಟಿದೆ. ಎಡಿಟಿಂಗ್ ಮಾಡಿದವನು ಹೊಸ ಹುಡುಗನೋ ಅಥವಾ ಯಾರಾದರೂ ಹಳಬ ಬೇಕೆಂದೆ ಮಾಡಿದನೋ ಗೊತ್ತಿಲ್ಲ. ಆ ಪಿಟಿಸಿಯನ್ನು ನೋಡಿ ಉಳಿದವರು ಮಾತ್ರ ಭಾರೀ ನಕ್ಕಿದ್ದೇ ನಕ್ಕಿದ್ದು.