ನಾನು ಸಿಗರೇಟು ಬಿಟ್ಟು ಒಂದು ವರ್ಷ

ಸಿಗರೇಟು ಸತ್ತಿದೆ

ಕನಸಾ? ನಂಬಲಾಗುತ್ತಿಲ್ಲ. ಆದರೂ ನಿಜ. ನಾನು ಸಿಗರೇಟು ಸೇದುವುದನ್ನು ಬಿಟ್ಟು ಜನವರಿ 20, 2011 ಕ್ಕೆ ಸರಿಯಾಗಿ ಒಂದು ವರ್ಷ. ಹೋದವರ್ಷ ಜನವರಿ 20 ರಂದು ಸಿಕ್ಕಾಪಟ್ಟೆ ಹೊಟ್ಟೆ ನೋವು ಬಂದು, ಮೂತ್ರಪಿಂಡದಲ್ಲಿ ಕಲ್ಲುಕಂಡು ಬಂದು, ಸಿಸ್ಟೋಸ್ಕೋಪಿಯಾಗಿದ್ದು ಎಲ್ಲವೂ ಹಸಿರಾಗಿದೆ. ಸಿಸ್ಟೋಸ್ಕೋಪಿ ಬಳಿಕ ನನ್ನ ದೇಹದ ಬಗ್ಗೆ ನನಗೆ ಅತೀವ ಪ್ರೀತಿ, ಅಭಿಮಾನ, ಗೌರವ ಬೆಳೆದು ಸಿಗರೇಟು ಸೇದುವುದನ್ನು ಬಿಟ್ಟುಬಿಟ್ಟೆ.

1999 ರಿಂದ 2009 ರ ನಡುವಿನ ಅವಧಿಯಲ್ಲಿ ನಾನು ಸೇದಿದ ಸಿಗರೇಟುಗಳ ಸಂಖ್ಯೆ ಸುಮಾರು ಆರು ಸಾವಿರ ಹಾಗೂ ಬೀಡಿಗಳ ಸಂಖ್ಯೆ ನಾಲ್ಕು. ವಿಲ್ಸ್ ನೇವಿಕಟ್, ಗೋಲ್ಡ್ ಫ್ಲೇಕ್ ಕಿಂಗ್, ಸ್ಮಾಲ್, ವಿಲ್ಸ್ ಕ್ಲಾಸಿಕ್, ಮೆಂಥಾಲ್, ಗುಡಂಗ್ ಗರಂ, ಮೋರ್, ಬ್ಲಾಕ್ ಹೀಗೆ ಹಲವು ಬ್ರಾಂಡ್ ಗಳನ್ನು ಸೇದಿದೆ. ತುಂಬಾ ಹೆಚ್ಚು ಸೇದಿದ ಬ್ರಾಂಡ್ ಗೋಲ್ಡ್ ಫ್ಲೇಕ್ ಕಿಂಗ್. ತುಂಬಾ ಇಷ್ಟಪಟ್ಟ ಬ್ರಾಂಡ್ ಬ್ಲಾಕ್. ತುಂಬಾ ಕಿಕ್ ಕೊಟ್ಟ ಬ್ರಾಂಡ್ ಯಾವುದೇ ಸಿಗರೇಟಲ್ಲ, ಅದು ಬೀಡಿ. ಬಹುಶಃ 30 ನಂಬರ್ ಬ್ರಾಂಡ್ ಇರಬೇಕು.  ಬ್ಲಾಕ್ ಹಾಗೂ ಗುಡಂಗ್ ಗರಂ ಸಿಗರೇಟುಗಳಲ್ಲಿ ಲವಂಗ ಹಾಗೂ ಇನ್ನು ಕೆಲವು ಮಸಾಲೆ ಪದಾರ್ಥ ತುಂಬಿರುತ್ತಾರೆ. ಸಿಗರೇಟು ಎಳೆದಾಗ ಚರ್ ಚರ್ ಚಟ್ ಎಂದು ಸದ್ದು ಬರುತ್ತಿತ್ತು.

ಆದರೆ ಇದೀಗ ಎಲ್ಲವನ್ನೂ ಮರೆತಿದ್ದೇನೆ. ಇನ್ನು ಮುಂದೆ ಸಿಗರೇಟು ಸೇದುವುದಿಲ್ಲ ಎಂದು ನಾನೆಂದಿಗೂ ಪ್ರತಿಜ್ಞೆ ಮಾಡಿಲ್ಲ. ಮುಂದೆ ಮತ್ತೆ ಸಿಗರೇಟು ಅಂಟಿಸಿಕೊಳ್ಳುತ್ತೇನೆಯೇ ಗೊತ್ತಿಲ್ಲ. ಇಂದು ಮಾತ್ರ ಸಿಗರೇಟು ಬೇಡವೆನಿಸುತ್ತದೆ. ಸಿಗರೇಟು ಬಿಟ್ಟು ಒಂದು ವರ್ಷದ ಬಳಿಕ ನನಗೆ ನನ್ನ ಬಗ್ಗೆಯೇ ಹೆಮ್ಮೆಯಿದೆ. ಸಿಗರೇಟು ಹೊಗೆಯಿಂದ ವಾತಾವಾರಣವನ್ನು ಕಾಪಾಡಿದ್ದಕ್ಕೆ, ನನ್ನ ಮುದ್ದಿನ ದೇಹವನ್ನು ಶೋಷಿಸದಿದ್ದಕ್ಕೆ, ಹಣ ಹಾಗೂ ಸಮಯ ಉಳಿಸಿಕೊಂಡಿದ್ದಕ್ಕೆ.

ಆದರೆ ಸಿಗಾರ್ ಸೇದುವ ಕನಸು ಮಾತ್ರ ಇನ್ನೂ ಹಾಗೆಯೇ ಉಳಿದುಕೊಂಡಿದೆ. ಬಹುಶಃ ಇನ್ನೆಂದಿಗೂ ಆ ಕನಸು ನನಸಾಗಲಾರದು ಎನಿಸುತ್ತದೆ. ಕೆಲವು ಕನಸುಗಳು ನನಸಾಗದಿದ್ದರೇ ಚೆನ್ನ.

ಎನಿ ವೇ, ವಿಶ್ ಮಿ…..

10 thoughts on “ನಾನು ಸಿಗರೇಟು ಬಿಟ್ಟು ಒಂದು ವರ್ಷ

  1. ಬಿಡಲಾಗದ್ದು ಯಾವುದೂ ಇಲ್ಲ ಈ ಜಗದಲ್ಲಿ
    ಹೆತ್ತಬ್ಬೆ ಅಪ್ಪನವರನ್ನು ಬಿಟ್ಟು ಬಿಡುವವರಿದ್ದಾರೆ,
    ಕಟ್ಟಿಕೊಂಡವರ ತೊರೆಯುವವರಿದ್ದಾರೆ
    ತಮ್ಮ ಮಕ್ಕಳನು ಹೆರವರೆಂಬವರೂ ಇದ್ದಾರೆ
    ಮನದಿಚ್ಛೆ ಧೃಡವಾಗಿರಬೇಕು
    ತಮ್ಮ ಮೇಲೆ ಭರವಸೆ ಇರಬೇಕು!

    ಹಾರ್ದಿಕ ಅಭಿನಂದನೆಗಳು!
    ಇನ್ನು ದಿನಗಳ ಎಣಿಕೆಯನ್ನು ನಿಲ್ಲಿಸಿಬಿಡಿ
    ಆ ವಿಷಯವನ್ನೇ ಮರೆತುಬಿಡಿ
    ದಿನಗಳ ಗಣನೆಮಾಡುವವರು…
    ಮರಳುವರೆಂಬ ಮಾತನ್ನೂ ಜನ ಆಡುವರು!

    Like

ನಿಮ್ಮ ಟಿಪ್ಪಣಿ ಬರೆಯಿರಿ

This site uses Akismet to reduce spam. Learn how your comment data is processed.